ವರ್ಗಾವಣೆ ಹಗರಣದಲ್ಲಿ ಬಿಜೆಪಿ ಸಚಿವರು 100 ಕೋಟಿ ಹಣ ಗಳಿಸಿರುವ ಸಾಧ್ಯತೆ: ಸ್ವಪಕ್ಷೀಯ ಶಾಸಕ ಆರೋಪ

ಪಾಟ್ನಾ: ಬಿಹಾರ ರಾಜ್ಯದಲ್ಲಿ ವರ್ಗಾವಣೆ ಮತ್ತು ನೇಮಕಾತಿ ವಿಚಾರಗಳಿಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಸಚಿವರೇ ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಸಿದ್ದಾರೆ ಎಂದು ಆಡಳಿತಾರೂಢ ಜೆಡಿಯು-ಬಿಜೆಪಿ ಮೈತ್ರಿಕೂಟ ಸರಕಾರದ ಬಿಜೆಪಿ ಶಾಸಕ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿರುವ ಶೇಕಡಾ 80ರಷ್ಟು ಬಿಜೆಪಿ ಸಚಿವರು ಹಗರಣದಲ್ಲಿ ಭಾಗಿಯಾಗಿದ್ದು ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಬಿಜೆಪಿ ಶಾಸಕ ಗ್ಯಾನೇಂದ್ರ ಕುಮಾರ್‌ ಸಿಂಗ್ ಆರೋಪಿಸಿದ್ದಾರೆ.

ಇದನ್ನು ಓದಿ: ಬಿಜೆಪಿ ಪಕ್ಷದಲ್ಲಿ ಮತ್ತೆ ಎದುರಾದ ನಾಯಕತ್ವ ಬಿಕ್ಕಟ್ಟು: ಉತ್ತರಾಖಂಡ ಮುಖ್ಯಮಂತ್ರಿ ರಾಜೀನಾಮೆ

ʻʻರಾಜ್ಯದ ವಿವಿಧ ಇಲಾಖೆಯ ಸುಮಾರು 15000 ಉದ್ಯೋಗಿಗಳು ಜೂನ್ 30ರ ಒಳಗೆ ವರ್ಗಾವಣೆಗೊಂಡಿದ್ದಾರೆ.  ವರ್ಗಾವಣೆಗೊಂಡ ಅಧಿಕಾರಿಗಳಿಂದ ನಾನು ಈ ಮಾಹಿತಿಯನ್ನು ನಡೆದುಕೊಂಡಿರುವೆ. ವಿಪರೀತವಾದ ಹಣ ಪಡೆದಿರುವ ಬಿಜೆಪಿ ಸಚಿವರು ಭಾಗಿರುವ ಬಗ್ಗೆ ಅವರುಗಳು ತಿಳಿಸಿದ್ದಾರೆ. ಮೈತ್ರಿ ಪಕ್ಷದ ಜೆಡಿಯು ಪಕ್ಷದವರು ಈ ರೀತಿ ಭ್ರಷ್ಟಾಚಾರ ನಡೆಸುವುದಿಲ್ಲ. ಏಕೆಂದರೆ ಅದರ ನಾಯಕ ಮುಖ್ಯಮಂತ್ರಿ ನಿತಿಶ್‌ ಕುಮಾರ್‌ ಅವರು ತನಿಖೆ ನಡೆಸುವರು ಮತ್ತು ತಾವು ಅಕ್ರಮ ಎಸಗಿದರೆ ಅಷ್ಟು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದುʼʼ ಎಂದು ಗ್ಯಾನೇಂದ್ರ ಕುಮಾರ್‌ ಸಿಂಗ್‌ ಆರೋಪಿಸಿದ್ದಾರೆ.

ವರ್ಗಾವಣೆ ಮತ್ತು ನೇಮಕಾತಿ ಹಗರಣದಲ್ಲಿ ಬಿಜೆಪಿ ಸಚಿವರು ಸುಮಾರು 100 ಕೋಟಿಗೆ ಹೆಚ್ಚಿನ ಹಣ ಗಳಿಸಿದ್ದರೆ, ಜೆಡಿಯು ಸಚಿವರೂ ಕೆಲವು ಕೋಟಿ ಗಳಿಸಿರುತ್ತಾರೆ. 4 ಲಕ್ಷದಿಂದ 50 ಲಕ್ಷದವರೆಗೆ ವಸೂಲು ಮಾಡಲಾಗಿದ್ದು ಇಲಾಖೆಗೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನೂ ಗಾಳಿಗೆ ತೂರಲಾಗಿದೆ. ಇದಕ್ಕೆ ಮುಖ್ಯಮಂತ್ರಿ ತಡೆಯಾಜ್ಞೆ ನೀಡಬೇಕು ಎಂದು ಬಿಜೆಪಿ ಶಾಸಕ ಗ್ಯಾನೇಂದ್ರ ಸಿಂಗ್ ಗ್ಯಾನು ಹೇಳಿದ್ದಾರೆ.

ಇದನ್ನು ಓದಿ: ಟ್ಯಾಪಿಂಗ್‌ ಪ್ರಕರಣ : ತಪ್ಪು ನಂಬರ್‌ನಿಂದ ನಾಯಕತ್ವ ಬದಲಾವಣೆಯ ಗುಟ್ಟು ರಟ್ಟಾಯ್ತು!?

ಇವುಗಳ ನಡುವೆ ಸಾಮಾಜಿಕ ನ್ಯಾಯ ಇಲಾಖೆಯ ಸಚಿವ ಮದನ್ ಸಾಹ್ನಿ(ಜೆಡಿಯು) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಇಲಾಖೆಯ ಅಧಿಕಾರಿಯನ್ನು ವರ್ಗಾಯಿಸುವುದಕ್ಕೆ ಸರಕಾರದ ಪ್ರಧಾನ ಕಾರ್ಯದರ್ಶಿ ಅತುಲ್ ಪ್ರಸಾದ್ ಅಡ್ಡಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಅವರು ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಪಕ್ಷದ ಸಚಿವರ ತಪ್ಪೇನೂ ಇಲ್ಲ ಎನ್ನುವಂತೆ  ʻʻಲಂಚ ನೀಡಿದವರನ್ನು ಮಾತ್ರ ವರ್ಗಾವಣೆಗೆ ಪರಿಗಣಿಸಲಾಗಿದೆ. ತಮಗೆ ಇಷ್ಟ ಬಂದ ಹುದ್ದೆಗೆ ಸೇರಿಕೊಳ್ಳಲು ಅಥವಾ ತಮ್ಮಿಷ್ಟದ ಊರಿಗೆ ವರ್ಗಾವಣೆಗೊಳ್ಳಲು ಲಂಚ ನೀಡುವ ಅಧಿಕಾರಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯʼʼ ಎಂದು ಅಧಿಕಾರಗಳ ಮೇಲೆಯೇ ಆರೋಪ ಮಾಡಿದ್ದಾರೆ.

ರಾಜ್ಯದ ಮೈತ್ರಿ ಸರಕಾರವು ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆಯಲ್ಲಿ ತೊಡಗಿದ್ದಾರೆ. ಅಕ್ರಮ ಸಂಪತ್ತಿನ ಸೃಷ್ಠಿಕರ್ತರಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿದೆ ವಿರೋಧ ಪಕ್ಷವಾದ ಆರ್‌ಜೆಡಿಯು ಟೀಕಿ ಮಾಡಿದೆ. ಪಕ್ಷದ ಮುಖಂಡ ತೇಜಸ್ವಿ ಯಾದವ್‌ ಅವರು ʻʻಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೇ ಭ್ರಷ್ಟಾಚಾರದ ಪಿತಾಮಹಾʼʼ ಎಂದು ಆರೋಪಿಸಿದ್ದಾರೆ.

ಈ ಮಧ್ಯೆ, ಅಧಿಕಾರಿಗಳ ವರ್ಗಾವಣೆ ಕುರಿತು ಅಧಿಸೂಚನೆ ಹೊರಬಿದ್ದ 24 ಗಂಟೆಯೊಳಗೆ, ಇದನ್ನು ತಡೆಹಿಡಿದಿರುವುದಾಗಿ ರಾಜ್ಯ ಸರಕಾರ ಪ್ರಕಟಿಸಿದೆ.

Donate Janashakthi Media

Leave a Reply

Your email address will not be published. Required fields are marked *