ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ನಂತರ ಬಿಹಾರದಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ತಮ್ಮ 71 ದಿನಗಳ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೊನೆಗೊಳಿಸಿದ್ದು, ಶನಿವಾರದಿಂದ (ಡಿಸೆಂಬರ್ 9) ಕೆಲಸಕ್ಕೆ ಮರಳಲಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ರಾಜ್ಯ ಸರ್ಕಾರವು ತಮ್ಮ ಐದು ಅಂಶಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಳೆದ ಸೆಪ್ಟೆಂಬರ್‌ನಿಂದ ಮುಷ್ಕರ ನಡೆಸುತ್ತಿದ್ದರು. ಅಂಗನವಾಡಿ ನೌಕರರು
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಲ್ಲಿ ಅವರ ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ, ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು, ಕಾರ್ಮಿಕರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದು, ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಕ್ರಮವಾಗಿ 5 ಮತ್ತು 3 ಲಕ್ಷ ರೂ. ಗಳ ಇಡುಗಂಟು ನೀಡಬೇಕು ಎಂದು ಆಗ್ರಹಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಮಹಾಘಟಬಂಧನ್ ಸರ್ಕಾರವು ಈಡೇರಿಸಲಿದೆ ಎಂದು ಭರವಸೆ ನೀಡಿದ ನಂತರ ಶುಕ್ರವಾರ ಮುಷ್ಕರವನ್ನು ಕೊನೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ರಾಜ್ಯ ಅಂಗನವಾಡಿ ಸಂಯುಕ್ತ ಸಂಘರ್ಷ ಸಮಿತಿಯ ಸಂಚಾಲಕ ಕುಮಾರ್ ವಿಂದೇಶ್ವರ್ ಸಿಂಗ್ ಅವರು ಹೇಳಿದ್ದಾರೆ. ಅಂಗನವಾಡಿ ನೌಕರರು
ಇದನ್ನೂ ಓದಿ: ಭಾರತೀಯ ನೌಕಾಪಡೆಯಲ್ಲಿ 10,896 ಸಿಬ್ಬಂದಿ ಕೊರತೆ: ಕೇಂದ್ರ ಸರ್ಕಾರ ಮಾಹಿತಿ
ಇದೇ ವೇಳೆ ಸಮಿತಿಯು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ತಕ್ಷಣವೇ ತಮ್ಮ ಕೆಲಸಕ್ಕೆ ಮರಳುವಂತೆ ವಿನಂತಿಸಿದೆ. ಸಿಪಿಐ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಶಾಸಕಾಂಗ ಪಕ್ಷದ ನಾಯಕ ಸೂರ್ಯಕಾಂತ್ ಪಾಸ್ವಾನ್ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ ನಂತರ ಮುಷ್ಕರವನ್ನು ಕೊನೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿಂದೇಶ್ವರ್ ಸಿಂಗ್ ಹೇಳಿದ್ದಾರೆ.
ನವೆಂಬರ್ ಆರಂಭದಲ್ಲಿ ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದ ವೇಳೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಪಾಟ್ನಾದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯ ಭಾಗವಾಗಿ ಬಿಹಾರ ವಿಧಾನಸಭೆಗೆ ಘೇರಾವ್ ಮಾಡಲು ಪ್ರಯತ್ನಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಹಾಗೂ ಲಾಠಿ ಚಾರ್ಜ್ ನಡೆಸಿದ್ದರು. ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ವಿಫಲವಾದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 9 ರಂದು ಪಾಟ್ನಾದ ಆಡಳಿತಾರೂಢ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನ ರಾಜ್ಯ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನಾಕಾರರು ಜಮಾಯಿಸಿ ತಮ್ಮ ಬೇಡಿಕೆಗಳನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದರು. ಆದರೆ ಅವರನ್ನು ಚದುರಿಸಲು ಪೊಲೀಸರು ಮತ್ತೆ ಜಲಫಿರಂಗಿ ಪ್ರಯೋಗಿಸಿದ್ದರು. ಪೊಲೀಸರ ಈ ಕ್ರಮವನ್ನು ಎಡಪಕ್ಷಗಳು ತೀವ್ರವಾಗಿ ಖಂಡಿಸಿತ್ತು. ಅಲ್ಲದೆ ಎಡಪಕ್ಷಗಳಾದ ಸಿಪಿಐ, ಸಿಪಿಐ(ಎಂ) ಮತ್ತು ಸಿಪಿಐ(ಎಂಎಲ್) ಶಾಸಕರು ಅಂಗನವಾಡಿ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮದ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ಅಂಗನವಾಡಿ ನೌಕರರು
ಇದನ್ನೂ ಓದಿ: ನಮ್ಮ ರಸ್ತೆ ಕಾರ್ಯಾಗಾರಕ್ಕೆ ಬಿಬಿಎಂಪಿ ಚಾಲನೆ | ಸಲಹೆ ನೀಡುವಂತೆ ಸಾರ್ವಜನಿಕರಿಗೆ ಆಹ್ವಾನ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಸರ್ಕಾರ ತಮಗೆ ನೀಡುತ್ತಿರುವ ಮಾಸಿಕ ಗೌರವಧನ ಕಡಿಮೆಯಾಗಿದ್ದು ಅದನ್ನು ದ್ವಿಗುಣಗೊಳಿಸುವಂತೆ ಪದೇ ಪದೇ ಒತ್ತಾಯಿಸಿದ್ದರು. ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆರ್‌ಜೆಡಿ ನಾಯಕ ಮತ್ತು ಈಗ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಅಧಿಕಾರಕ್ಕೆ ಬಂದರೆ ತಮ್ಮ ಮಾಸಿಕ ಗೌರವಧನವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು ಎಂದು ಅವರು ರಾಜ್ಯ ಸರ್ಕಾರಕ್ಕೆ ನೆನಪಿಸಿದ್ದಾರೆ.
ಬಿಹಾರ ಸರ್ಕಾರ ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 6,500 ರೂ. ಮತ್ತು ಸಹಾಯಕಿಯರಿಗೆ 5,900 ರೂ. ಗೌರವಧನ ನೀಡುತ್ತಿದೆ. ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಗುತ್ತಿಗೆ ನೌಕರರಾದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಕಳೆದ ಎರಡು ವರ್ಷಗಳಿಂದ ಪದೇ ಪದೇ ಪ್ರತಿಭಟನೆ ನಡೆಸಿದ್ದಾರೆ. ಬಿಹಾರದಲ್ಲಿ, ಸುಮಾರು 1.14 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ 2.15 ಲಕ್ಷ ಕಾರ್ಯಕರ್ತೆಯರು ಮತ್ತು ಸಹಾಯಕರಿದ್ದಾರೆ. ಅಂಗನವಾಡಿ ನೌಕರರು
ಹಲವಾರು ಹೋರಾಟದ ನಂತರ 2023ರ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರವು ಸಾವಿರಾರು ಮಾನ್ಯತೆ ಪಡೆದ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ಹೆಚ್ಚಿಸಿತ್ತು. ಗೌರವಧನವನ್ನು ಮಾಸಿಕವಾಗಿ 1,000 ರೂ.ನಿಂದ 2,500/ ಹೆಚ್ಚಿಸಲಾಗಿದೆ. ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ ಅವರ ಗೌರವಧನವನ್ನು ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರವು ಒತ್ತಾಯಿಸಿತ್ತು.
ವಿಡಿಯೊ ನೋಡಿ: ಕೊಡಗು : ಹಾಡಿ ಜನರಿಗೆ ಬದುಕಿನ ಗ್ಯಾರಂಟಿ ಬೇಕಿದೆ Janashakthi Media