ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಎಡ ಪಕ್ಷಗಳ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರ ಭಾಗಿಯಾದರು.
ಖಮ್ಮಂ ಪಟ್ಟಣದಲ್ಲಿ ನಡೆದ ಬಿಆರ್‌ಎಸ್ ಬಹಿರಂಗ ಸಭೆಯಲ್ಲಿ ಸಿಪಿಐ(ಎಂ) ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರು ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಸಿಪಿಐ ಪಕ್ಷದ ಡಿ.ರಾಜಾ ಸೇರಿದಂತೆ ಹಲವು ರಾಷ್ಟ್ರೀಯ ಮುಖಂಡರು ಹಾಜರಿದ್ದರು.
2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಭಾರತ ರಾಷ್ಟ್ರ ಸಮಿತಿಯು, ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ತೃತೀಯ ರಂಗ ರಚನೆಯಲ್ಲಿವೆ.
ಸಮಾವೇಶಕ್ಕೆ ತೆರಳುವ ಮುನ್ನ ಸರ್ಕಾರದಿಂದ ಬೃಹತ್ ಪ್ರಮಾಣದಲ್ಲಿ ನವೀಕರಿಸಲ್ಪಟ್ಟ ಹೈದರಾಬಾದ್ ಬಳಿಯ ಯಾದಾದ್ರಿಯಲ್ಲಿರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಕೆಂಪು ಕೋಟೆಯ ಮೇಲೆ ಒಂದು ದಿನ ಗುಲಾಬಿ ಧ್ವಜ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ರೈತರ ಸರ್ಕಾರ ಘೋಷಣೆ ಕೂಗಿದ ಅವರು, ಹೊಸ ಆರ್ಥಿಕ, ಪರಿಸರ, ನೀರು, ವಿದ್ಯುತ್ ಮತ್ತು ಮಹಿಳಾ ಸಬಲೀಕರಣ ನೀತಿಗಳು ದೇಶದಲ್ಲಿ ಅಗತ್ಯವಿದೆ ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ರಾಜಕೀಯ ವಲಯದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
‘ನಾವು ಇದನ್ನು ಆರಂಭಿಕ ಸಾಧನೆ ಎಂದು ಕರೆಯಬಹುದು. ಭಾರತ ರಾಷ್ಟ್ರ ಸಮಿತಿಯ ಕಾರ್ಯಕ್ಷೇತ್ರ ಮತ್ತು ಭದ್ರಕೋಟೆ ತೆಲಂಗಾಣ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಪಕ್ಷದ ಪ್ರಮುಖ ಗುರಿಯಾಗಿದೆ. ಇತರ ಪಕ್ಷಗಳ ಈ ಬೆಂಬಲ ಸಹಾಯಕ್ಕೆ ಬರಲಿದೆ’ ಬಿಆರ್‌ಎಸ್ ಪಕ್ಷದ ರಾಜಕೀಯ ವಿಶ್ಲೇಷಕ ತೆಲಕಪಲ್ಲಿ ಎಂದು ರವಿ ತಿಳಿಸಿದರು.