ಹೈದರಾಬಾದ್: ತೆಲಂಗಾಣ ರಾಜ್ಯದ ಆಡಳಿತ ಪಕ್ಷದ ಶಾಸಕರ ಖರೀದಿಗೆ ಭಾರೀ ಹುನ್ನಾರ ನಡೆದಿದ್ದು, ಈ ಹಗರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಪಕ್ಷವು ಶಾಸಕರಿಗೆ ಸುಮಾರು ರೂ.100 ಕೋಟಿಗೂ ಅಧಿಕ ಮೊತ್ತದ ಆಮಿಷವೊಡ್ಡಿ ಪಕ್ಷಕ್ಕೆ ಸೇರಿಸಿಕೊಳ್ಳಲು ಯತ್ನಿಸಿರುವುದು ನಡೆದಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ಪಕ್ಷದ ಶಾಸಕರ ಕುದುರೆ ವ್ಯಾಪಾರದ ಯತ್ನ ನಡೆದಿದೆ. ಸೈಬರಾಬಾದ್ ಪೊಲೀಸರು ರಂಗಾ ರೆಡ್ಡಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ವ್ಯಕ್ತಿಗಳು ಹಣ, ಗುತ್ತಿಗೆ ಹಾಗೂ ಪದವಿಯನ್ನು ನೀಡುವುದಾಗಿ ಆಮಿಷವೊಡ್ಡುತ್ತಿದ್ದಾರೆ ಎಂಬ ಮಾಹಿತಿ ಟಿಆರ್‌ಎಸ್ ಶಾಸಕರಿಂದ ಲಭ್ಯವಾಗಿತ್ತು.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಶಾಸಕರಾದ ಪಿ.ರೋಹಿತ್ ರೆಡ್ಡಿ, ಭೀಮ್ ಹರ್ಷವರ್ಧನ್ ರೆಡ್ಡಿ, ಪಿ.ರೇಗಾ ಕಾಂತ ರಾವ್, ಗುವ್ವಾಲ ಬಾಲರಾಜು ಅವರು ಸೈಬರಾಬಾದ್‌ನ ಅಜೀಜ್ ನಗರ ಪ್ರದೇಶದ ಫಾರ್ಮ್‌ಹೌಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಟಿಆರ್‌ಎಸ್ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ಪಕ್ಷಾಂತರ ಮಾಡುವುದಕ್ಕಾಗಿ ದೆಹಲಿಯ ಒಂದಷ್ಟು ಮಂದಿ ಹಲವು ಆಮಿಷಗಳನ್ನೊಡ್ಡಿದ್ದರು. ಇದರ ಭಾಗವಾಗಿ ಫಾರ್ಮ್ ಹೌಸ್ ನಲ್ಲಿ ನೋಟುಗಳ ಕಂತೆಗಳ ಸಮೇತ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
The ‘Three Agents’ of Amit shah who came to bribe TRS MLAs are now decoded & bursted.
Here are evidences of their links with BJP & RSS 👇#TelanganaNotForSale pic.twitter.com/NiHtjbAD8k
— YSR (@ysathishreddy) October 26, 2022
ಬಿಜೆಪಿ ಸೇರುವಂತೆ ಆಮಿಷ ಒಡ್ಡಲಾಗುತ್ತಿದೆ ಎಂದು ಶಾಸಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸ್ಟೀಫನ್ ರವೀಂದ್ರ ತಿಳಿಸಿದ್ದಾರೆ. “ಅವರ ದೂರಿನ ಆಧಾರದ ಮೇಲೆ, ನಾವು ಫಾರ್ಮ್‌ಹೌಸ್‌ಗೆ ತಲುಪಿದ್ದೇವೆ. ಹಿಮಾಚಲ ಪ್ರದೇಶದ ಹಿಂದೂ ಪೂಜಾರಿ ಮತ್ತು ತಿರುಪತಿಯ ಅವರ ಶಿಷ್ಯ ಮತ್ತು ಸ್ಥಳೀಯ ಹೈದರಾಬಾದ್ ಮೂಲದ ಉದ್ಯಮಿ ಸೇರಿದಂತೆ ಮೂವರು ವ್ಯಕ್ತಿಗಳನ್ನು ಇದ್ದರು” ಎಂದು ಹೇಳಿದ್ದಾರೆ.
100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಡೀಲ್ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ 100 ಕೋಟಿ ಜೊತೆಗೆ 50 ಕೋಟಿ ನೀಡುವುದಾಗಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಸೇರುವಂತೆ ಶಾಸಕರಿಗೆ ಹಣ, ಗುತ್ತಿಗೆ, ಹುದ್ದೆಗಳ ಆಮಿಷ ಒಡ್ಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮಗುರು ಡಿ ಸಿಂಹಯಾಜಿ, ಅವರ ಶಿಷ್ಯ ಸತೀಶ್ ಶರ್ಮಾ ಮತ್ತು ಉದ್ಯಮಿ ನಂದಕುಮಾರ್ ಎಂಬ ಮೂವರನ್ನು ಬಂಧಿಸಲಾಗಿದೆ.
ಈ ಘಟನೆಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸರ್ಕಾರದ ವಿಪ್ ಬಲ್ಕಾ ಸುಮನ್, ಟಿಆರ್‌ಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆಯವರ ಬಿಜೆಪಿ ಬೆಂಬಲಿತ ಬಂಡಾಯವು ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ ಘಟನೆಯೂ ನಡೆದಿತ್ತು. ಇತ್ತೀಚಿನ ಕೆಲ ದಿನಗಳ ಹಿಂದೆ ಟಿಆರ್‌ಎಸ್‌ನ ಸುಮಾರು 18 ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿಕೆ ನೀಡಿದ್ದರು.
ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ(ಎಎಪಿ)ದ ಶಾಸಕರನ್ನು ಬಿಜೆಪಿಯು ತನ್ನತ್ತ ಸೆಳೆದುಕೊಳ್ಳಲು ಯತ್ನಿಸಿದ ಘಟನೆಯೂ ನಡೆದಿತ್ತು. ಪಕ್ಷವು ಎರಡು ರಾಜ್ಯಗಳ ಅಸೆಂಬ್ಲಿಗಳಲ್ಲಿ ವಿಶ್ವಾಸ ಮತಗಳನ್ನು ಪ್ರಸ್ತಾಪಿಸಿತು ಮತ್ತು ಅವುಗಳನ್ನು ಗೆದ್ದಿತು.