ಬಿಡೆನ್ ಪ್ಯಾಕೇಜ್ ಉದ್ದೇಶ ಒಳ್ಳೆಯದೇ, ಆದರೆ…

ಜೋ ಬಿಡೆನ್ ಅವರು ಕಲ್ಪಿಸಿಕೊಂಡ ಒಂದು ಅಸಾಧಾರಣ ಮಹತ್ವಾಕಾಂಕ್ಷೆಯ ವಿತ್ತೀಯ ಉತ್ತೇಜಕವು ಭಾರತದಂತಹ ಅರ್ಥವ್ಯವಸ್ಥೆಗಳಿಗೆ ರಫ್ತು ಅವಕಾಶಗಳನ್ನು ಹೆಚ್ಚಿಸುತ್ತದೆ, ನಿಜ. ಆದರೆ, ಅದರ ಜೊತೆಯಲ್ಲಿ ಒಟ್ಟಾರೆ ಚಟುವಟಿಕೆಗಳು ಮತ್ತು ಆರ್ಥಿಕ ಅಭಿವೃದ್ದಿ ಸಂಕುಚಿತಗೊಳ್ಳುತ್ತವೆ. ವಾಸ್ತವವಾಗಿ ಇದು ಜಾಗತಿಕ ವಿಭಜನೆಯನ್ನು ಹೆಚ್ಚಿಸುತ್ತದೆ. ಮುಂದುವರಿದ ದೇಶಗಳು ಬೆಳವಣಿಗೆಯೊಂದಿಗೆ ಮುನ್ನುಗ್ಗುವಾಗ ಮೂರನೇ ಜಗತ್ತಿನ ದೇಶಗಳು ತೀವ್ರ ನಿರುದ್ಯೋಗದ ಮತ್ತು ವಿತ್ತೀಯ ಮಿತವ್ಯಯದ ಸಮಸ್ಯೆಗಳಲ್ಲಿ ಮುಳುಗುತ್ತವೆ. ಬಿಡೆನ್ ಅವರ ಪ್ಯಾಕೇಜ್ ಉದ್ದೇಶ ಒಳ್ಳೆಯದು ಹೌದು ಮತ್ತು ಅದನ್ನು ಮುಂದುವರಿದ ದೇಶಗಳ ಎಡಪಂಥೀಯರು ಬೆಂಬಲಿಸುತ್ತಾರೆ, ನಿಜ. ಆದರೆ, ಈ ಎಡಪಂಥೀಯರು ಮೂರನೇ ಜಗತ್ತಿನ ದೇಶಗಳ ವಿಪತ್ತುಗಳ ಬಗ್ಗೆಯೂ ಸಹ ಸಂವೇದನೆಯನ್ನು ಹೊಂದಿರಬೇಕಾಗುತ್ತದೆ ಎಂದು ಆರ್ಥಿಕ ತಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಅವರ ಮಾತ

ಅಮೇರಿಕಾದ ಮತ್ತು ವಿಶ್ವದ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು 1.9 ಟ್ರಿಲಿಯನ್ ಮೊತ್ತದ ಒಂದು ಮಹತ್ವಾಕಾಂಕ್ಷೆಯ ರಕ್ಷಣಾ ಪ್ಯಾಕೇಜ್‌ ಅನ್ನು ಅನಾವರಣಗೊಳಿಸಿದ್ದಾರೆ. ಈ ಸಂಬಂಧವಾಗಿಯೇ ಹಿಂದಿನ ಅಧ್ಯಕ್ಷ ಟ್ರಂಪ್ ಕೂಡ ಮೊದಲು ಬಿಡುಗಡೆ ಮಾಡಿದ $2 ಟ್ರಿಲಿಯನ್ ಮೊತ್ತದ ಪ್ಯಾಕೇಜ್ ಜೊತೆಗೆ ಇನ್ನೂ $900 ಬಿಲಿಯನ್ ಮೊತ್ತವನ್ನೂ ಡಿಸೆಂಬರ್ 2020 ರಲ್ಲಿ ಘೋಷಿಸಿದ್ದರು. ಈ ಒಟ್ಟು ಪ್ಯಾಕೇಜ್‌ಗಳು, ಕೊರೊನಾ ಸಾಂಕ್ರಾಮಿಕದಿಂದ ಉಂಟಾದ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಜೊತೆಗೆ ಅಮೆರಿಕದ ಅರ್ಥವ್ಯವಸ್ಥೆಗೆ ಕಾಯಕಲ್ಪ ನೀಡುವ ಉದ್ದೇಶವನ್ನೂ ಹೊಂದಿವೆ. ಈ ಪ್ಯಾಕೇಜ್‌ಗಳಿಗೆ ಬೇಕಾಗುವ ಹಣವನ್ನು ಸಾಲದ ಮೂಲಕ ಒದಗಿಸಿಕೊಂಡಾಗ ಅಮೇರಿಕಾದ ಜಿಡಿಪಿ-ವಿತ್ತೀಯ ಕೊರತೆಯ ಅನುಪಾತವು ಮಹಾ ಯುದ್ಧಾನಂತರದ ಇತಿಹಾಸದಲ್ಲೇ ಅಭೂತಪೂರ್ವ ಮಟ್ಟಕ್ಕೆ ಏರುತ್ತದೆ. ಪುನಶ್ಚೇತನದ ಈ ಕ್ರಮಗಳನ್ನು ಅನುಷ್ಠಾನಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತದ ಅಡಿಯಲ್ಲಿ ಆಮದುಗಳನ್ನು ತಡೆಗಟ್ಟಲು ಅಮೆರಿಕಾ ಕೈಗೊಂಡ ರಕ್ಷಣಾತ್ಮಕ ಕ್ರಮಗಳ ಹೊರತಾಗಿಯೂ, ಉಳಿದ ದೇಶಗಳಿಗೂ ಸ್ವಲ್ಪ ಮಟ್ಟಿನ ಪ್ರಯೋಜನ ಲಭಿಸುತ್ತದೆ.

ಇದನ್ನು ಓದಿ: ಬಡವರ ಬಗ್ಗೆ ಕಾಳಜಿಯೇ ಇಲ್ಲದ ಮೋದಿ ಸರ್ಕಾರ

ಎರಡನೆಯ ಮಹಾಯುದ್ಧಾನಂತರದ ಅವಧಿಯಲ್ಲಿ, ಬಂಡವಾಳಶಾಹಿ ಜಗತ್ತಿನಲ್ಲಿ, ಪ್ರಭುತ್ವದ ಸಕ್ರಿಯ ಮಧ್ಯಪ್ರವೇಶದ ಮೂಲಕ ಆರ್ಥಿಕ ಚಟುವಟಿಕೆಗಳು ಉತ್ಕೃಷ್ಟವಾಗಿ ಬೆಳೆಯುವಂತೆಯೂ ಮತ್ತು ಈ ಬೆಳವಣಿಗೆಯು ಬಹಳ ಕಾಲ ಬಾಳುವಂತೆಯೂ ನೋಡಿಕೊಳ್ಳಲಾಯಿತು. ಆದರೆ, ಹಣಕಾಸು ಬಂಡವಾಳವು  ಜಗತ್ತಿನ ಉದ್ದಗಲಕ್ಕೂ ಹರಿದಾಡಿ ವ್ಯಾಪಿಸಿಕೊಳ್ಳಲು ಆರಂಭಿಸುತ್ತಿದ್ದಂತಯೇ, ಆರ್ಥಿಕ ಚಟುವಟಿಕೆಗಳ ಉತ್ಕರ್ಷದ ಮುಂದುವರಿಕೆ ಅಸಾಧ್ಯವಾಯಿತು: ರಾಷ್ಟ್ರೀಯ ಸರ್ಕಾರಗಳು ತಮ್ಮ ತಮ್ಮ ಅಭಿವೃದ್ಧಿ ಕಾರ್ಯಗಳಿಗೆ ಬೇಕಾಗುವ ಹಣ ಹೊಂದಿಸಿಕೊಳ್ಳುವ ಸಲುವಾಗಿ ಶ್ರೀಮಂತರ ಮೇಲೆ ತೆರಿಗೆ ಹಾಕುವ ಮತ್ತು ವಿತ್ತೀಯ ಕೊರತೆಯ ಬಜೆಟ್ ಕ್ರಮಗಳಿಗೆ ಹಣಕಾಸು ಬಂಡವಾಳದ ಎಂದಿನ ವಿರೋಧವು ಒಂದು ನಿರ್ಣಾಯಕ ಅಂಶವಾಗಿ ಪರಿಣಮಿಸಿತು. ಹೇಗೆಂದರೆ, ಜಾಗತೀಕರಣಗೊಂಡ ಹಣಕಾಸು ಬಂಡವಾಳವು ತಾನು ಹೂಡಿಕೆ ಮಾಡಿದ ದೇಶವು ತನ್ನ ಇಚ್ಛೆಗೆ ವಿರೋಧವಾಗಿ ನಡೆದುಕೊಂಡರೆ, ತನ್ನ ಹೂಡಿಕೆಯನ್ನು ಹಿಂತೆಗೆದುಕೊಂಡು ಆ ದೇಶದಿಂದ ಹೊರ ಹೋಗುವುದಾಗಿ ಬೆದರಿಕೆ ಹಾಕುತ್ತಿತ್ತು. ಆದ್ದರಿಂದ, ಬಂಡವಾಳವು ಹೊರ ಹೋಗುವ ಭೀತಿಗೆ ಒಳಗಾದ ರಾಷ್ಟ್ರ-ಪ್ರಭುತ್ವಗಳು ಹಣಕಾಸು ಬಂಡವಾಳದೊಂದಿಗೆ ದೈನ್ಯತೆಯಿಂದ ವರ್ತಿಸಲಾರಂಭಿಸಿದವು. ಈ ಅಂಶವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾವುದೇ ದೇಶದ ಪ್ರಭುತ್ವವು ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಅಥವಾ ಶ್ರೀಮಂತರ ಮೇಲೆ ತೆರಿಗೆ ಹಾಕಿದರೆ ಅಥವಾ ಮಿತಿ-ಮೀರಿದ ಬಜೆಟ್ ಕೊರತೆಯಲ್ಲಿದ್ದರೆ ಅಥವಾ ಆರ್ಥಿಕ ಚಟುವಟಿಕೆಗಳಲ್ಲಿ ತಲೆ ತೂರಿಸಿದರೆ, ಆಗ ಹಣಕಾಸು ಬಂಡವಾಳವು ಆ ದೇಶವನ್ನು ತೊರೆದು ಬೇರೆಡೆಗೆ ಹೋಗುತ್ತದೆ.

ಆದರೆ, ಹಣಕಾಸು ಬಂಡವಾಳದ ಇಂತಹ ಒತ್ತಡಗಳಿಂದ ಅಮೇರಿಕಾ ಬಹುತೇಕ ಮುಕ್ತವಾಗಿತ್ತು, ಏಕೆಂದರೆ, ಅದರ ಡಾಲರ್ ಕರೆನ್ಸಿಯು “ಚಿನ್ನಕ್ಕೆ ಸಮಾನ” ಎಂದೇ ಪರಿಗಣಿಸಲ್ಪಟ್ಟಿತ್ತು ಮತ್ತು ಆಸ್ತಿ-ಸಂಪತ್ತನ್ನು ಹಿಡಿದಿಟ್ಟುಕೊಳ್ಳುವ ಒಂದು ಸುರಕ್ಷಿತ ಮಾಧ್ಯಮವಾಗಿತ್ತು. ಹಾಗಾಗಿ, ಅಮೇರಿಕಾದಿಂದ ಬಂಡವಾಳವು ದೊಡ್ಡ ಪ್ರಮಾಣದಲ್ಲಿ ಹೊರ ಹೋಗುವ ಸಾಧ್ಯತೆಗಳೇ ಇರಲಿಲ್ಲ. ಆದರೆ, ಅಮೇರಿಕಾದಲ್ಲಿ ಸರ್ಕಾರವು ಹೆಚ್ಚಿನ ಮಟ್ಟದ ವೆಚ್ಚಗಳನ್ನು ಕೈಗೊಂಡ ಕಾರಣದಿಂದಾಗಿ, ಸ್ವಲ್ಪ ಮಟ್ಟಿನ ಬೇಡಿಕೆಯು ವಿದೇಶಗಳಿಗೆ “ಸೋರಿಕೆ”ಯಾಯ್ತು ಮತ್ತು ಹೊರ ದೇಶಗಳಿಗೆ ಅಮೇರಿಕಾ ಸಾಲಗಾರನಾಯ್ತು ಮಾತ್ರವಲ್ಲ, ಸ್ವದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಬದಲು ವಿದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿತು. ವಿದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ ಈ ಸಂಗತಿಯು, ಆರ್ಥಿಕ ಚಟುವಟಿಕೆಗಳಲ್ಲಿ ಪ್ರಭುತ್ವದ ಮಧ್ಯಪ್ರವೇಶಗಳಿಗೆ ಅಡ್ಡಿಯಾಗಿ ಪರಿಣಮಿಸಿತು. ಈ ಕಾರಣದಿಂದಾಗಿ, ಟ್ರಂಪ್, ಆಮದುಗಳನ್ನು ತಡೆಯುವ ರಕ್ಷಣಾತ್ಮಕ ಕ್ರಮಗಳ ಮೂಲಕ ಮತ್ತು ಅಮೇರಿಕಾದ ಅರ್ಥವ್ಯವಸ್ಥೆಗೆ ಉತ್ತೇಜನ ಒದಗಿಸುವ ಮೂಲಕ ಅಲ್ಲಿಯೇ ಉದ್ಯೋಗ ಸೃಷ್ಟಿಸಲು ಉದ್ದೇಶಿಸಿದ್ದರು. ಆದರೆ, ಅರ್ಥವ್ಯವಸ್ಥೆಗೆ ಒದಗಿಸಿದ ಬೃಹತ್ ಉತ್ತೇಜನ ಮತ್ತು ಆಮದುಗಳನ್ನು ತಡೆಯುವ ರಕ್ಷಣಾತ್ಮಕ ಕ್ರಮಗಳ ಹೊರತಾಗಿಯೂ, ಗಮನಾರ್ಹವಾಗಿ ಬೆಳೆದ ಅಮೇರಿಕಾದ ವಿದೇಶ ವ್ಯಾಪಾರ ಕೊರತೆಯು, ವಿದೇಶಗಳಿಗೆ “ಸೋರಿಕೆ”ಯಾಗುತ್ತಿರುವ ಬೇಡಿಕೆಯ ಗಾತ್ರವು ಇನ್ನೂ ಗಮನಾರ್ಹ ಪ್ರಮಾಣದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಆದಾಗ್ಯೂ, ಬಿಡೆನ್, ಸದ್ಯದ ಮಟ್ಟಿಗೆ, ರಕ್ಷಣಾತ್ಮಕ ಕ್ರಮಗಳನ್ನು ಬಿಗಿಗೊಳಿಸದೆ, ಅರ್ಥವ್ಯವಸ್ಥೆಗೆ ಉತ್ತೇಜನ ಒದಗಿಸುವ ಆಯ್ಕೆಯನ್ನು ಮಾತ್ರ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಆಹಾರ ಭದ್ರತೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕು

ಅಮೇರಿಕಾದ ಅರ್ಥವ್ಯವಸ್ಥೆಗೆ ದೊರೆತ ಉತ್ತೇಜಕದ ಸ್ವಲ್ಪಮಟ್ಟಿನ ಲಾಭ ಭಾರತಕ್ಕೂ ಲಭಿಸುತ್ತದೆ ಎಂಬುದು ಅನೇಕ ವೀಕ್ಷಕರ ಅಭಿಪ್ರಾಯ. ಏಕೆಂದರೆ, ಅಮೇರಿಕಾ ಮತ್ತು ವಿಶ್ವದ ಅನೇಕ ದೇಶಗಳಲ್ಲಿ ಬೇಡಿಕೆಯು ಯಥಾ ಸ್ಥಿತಿಗೆ ಮರಳುವುದರಿಂದ ಭಾರತದ ರಫ್ತುಗಳು ಬೆಳೆಯುತ್ತವೆ. ಆದರೆ, ಯುದ್ಧಾನಂತರದ ಸನ್ನಿವೇಶಗಳಿಗೆ ಹೋಲಿಸಿದರೆ, ಪ್ರಸಕ್ತ ಸನ್ನಿವೇಶದಲ್ಲಿ ಒಂದು ಮೂಲಭೂತ ವ್ಯತ್ಯಾಸವಿರುವುದನ್ನು ಗಮನಿಸಬಹುದು. ವ್ಯತ್ಯಾಸವೆಂದರೆ, ಆಗ, ಪ್ರಭುತ್ವ-ಉತ್ತೇಜಿತ ಉತ್ಕರ್ಷವು ಭಾರತದ ಅರ್ಥವ್ಯವಸ್ಥೆಯ ಮೇಲೆ ಗುಣಕ ಪರಿಣಾಮಗಳನ್ನು ಬೀರುತ್ತಿತ್ತು ಮತ್ತು ಆ ಸಮಯದಲ್ಲಿ ಹಣಕಾಸು ಬಂಡವಾಳವು ಜಾಗತೀಕರಣಗೊಂಡಿರಲಿಲ್ಲ. ಆದರೆ, ಇಂದು ಹಣಕಾಸು ಬಂಡವಾಳವು ಜಾಗತೀಕರಣಗೊಂಡಿದೆ.

ಹಣಕಾಸು ಬಂಡವಾಳವು ಜಾಗತೀಕರಣ ಗೊಂಡಿದ್ದರಿಂದ ಉಂಟಾದ ಒಂದು ಪರಿಣಾಮವೆಂದರೆ, ಪ್ರತಿಯೊಂದು ದೇಶವೂ ತನ್ನ ಬಡ್ಡಿ ದರವನ್ನು ಅಮೇರಿಕಾದ ಬಡ್ಡಿ ದರದೊಂದಿಗೆ ಹೊಂದಿಸಿ ಕೊಳ್ಳಬೇಕಾಯಿತು. ಉದಾಹರಣೆಗೆ, ಒಬ್ಬ ವಿದೇಶಿ ಹೂಡಿಕೆದಾರನಿಗೆ ಭಾರತದಲ್ಲಿ ಸಿಗುವ ಬಡ್ಡಿ ದರವು ಅಮೇರಿಕಾದಲ್ಲಿರುವುದಕ್ಕಿಂತ ಹೆಚ್ಚಿನ ಮಟ್ಟದ್ದೂ ಮತ್ತು ಜೊತೆಗೆ ಭಾರತದಲ್ಲಿ ಹೂಡಿಕೆಯ ಅಪಾಯವನ್ನು ಸರಿದೂಗಿಸಲು ತಕ್ಕ ಪರಿಹಾರವನ್ನೂ ಒಳಗೊಂಡಿರಬೇಕಾಗುತ್ತದೆ. ಇಲ್ಲದಿದ್ದರೆ, ಹಣಕಾಸು ಬಂಡವಾಳವು ಭಾರತದಿಂದ ಅಮೆರಿಕಕ್ಕೆ ಹರಿಯುತ್ತದೆ.


ಸಂಕ್ಷಿಪ್ತವಾಗಿ ಹೇಳುವುದಾದರೆ, ಬಿಡೆನ್ ಅವರ ಪ್ಯಾಕೇಜ್ ಒಂದು ಅಸಮರ್ಥನೀಯ ಊಹೆಯನ್ನು ಆಧರಿಸಿದೆ. ಅದೇನೆಂದರೆ, ಇಪ್ಪತ್ತನೇ ಶತಮಾನದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೆ.ಎಂ. ಕೀನ್ಸ್ ಅವರು ಪ್ರತಿಪಾದಿಸಿದ ವಿತ್ತೀಯ ವಿಧಾನಗಳ ಮೂಲಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸಬಹುದು ಎಂಬುದು. ಆದರೆ, ಕೀನ್ಸ್ ಅವರು ಹೇಳಿದ್ದಎಲ್ಲಕ್ಕಿಂತ ಮಿಗಿಲಾಗಿ ಬಂಡವಾಳವು ರಾಷ್ಟ್ರೀಯ ಮೂಲದ್ದಾಗಿರಬೇಕುಎಂಬ ಕಟ್ಟಳೆಯನ್ನು ನಿರ್ಲಕ್ಷಿಸಲಾಗಿದೆ. ಅಸಮರ್ಥನೀಯ ಊಹೆಯು, ಹಣಕಾಸು ಬಂಡವಾಳದ ಚಲನೆಯ ಮೇಲೆ ನಿರ್ಬಂಧಗಳನ್ನು ವಿಧಿಸದೆ, ನವ ಉದಾರವಾದಿ ಬಂಡವಾಳಶಾಹಿಯು ಜಾಗತಿಕ ಅರ್ಥವ್ಯವಸ್ಥೆಯನ್ನು ತಳ್ಳಿರುವ ದೀರ್ಘಕಾಲದ ಬಿಕ್ಕಟ್ಟಿನಿಂದ ಹೊರಬರಬಹುದು ಎಂಬ ಭ್ರಮೆಯ ಮೇಲೆ ನಿಂತಿದೆ.


ಇತ್ತೀಚಿನವರೆಗೆ, ಅಮೇರಿಕಾ ವಿತ್ತೀಯ ಕ್ರಿಯಾಶೀಲತೆಯನ್ನು ತ್ಯಜಿಸಿತ್ತು. ಹಣಕಾಸು ನೀತಿಯೊಂದರ ಮೂಲಕವೇ ಅರ್ಥವ್ಯವಸ್ಥೆಯನ್ನು ಉತ್ತೇಜಿಸಲು ಪ್ರಯತ್ನಿಸಿತು. ಆದ್ದರಿಂದ, ಬಡ್ಡಿ ದರಗಳನ್ನು ಬಹುತೇಕ ಶೂನ್ಯ ಮಟ್ಟಕ್ಕೆ ಇಳಿಸಿತ್ತು. ಮತ್ತೊಂದೆಡೆ, ವಿತ್ತೀಯ ಕ್ರಿಯಾಶೀಲತೆಯತ್ತ ಹೊರಳಿದಾಗ ಬಡ್ಡಿ ದರಗಳಲ್ಲಿ ಸ್ವಲ್ಪ ಮಟ್ಟಿನ ಏರಿಕೆಯಾಗುತ್ತದೆ. ಅಮೇರಿಕಾದಲ್ಲಿ ಈ ಬದಲಾವಣೆ ಈಗಾಗಲೇ ಕಾಣಿಸಿಕೊಂಡಿದೆ. ಪರಿಣಾಮವಾಗಿ, ಭಾರತದಂತಹ ಅನೇಕ ದೇಶಗಳಲ್ಲಿ ಬಡ್ಡಿ ದರಗಳು ಏರಿವೆ. ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಅಮೇರಿಕಾದ ಬಾಂಡ್-ಇಳುವರಿ ಏರಿಕೆಯಿಂದಾಗಿ, ಭಾರತದ ಬಾಂಡ್‌ಗಳ ಮೇಲಿನ ಬಡ್ಡಿ ದರಗಳನ್ನು ಕಡಿಮೆ ಮಾಡುವ ಸಂಬಂಧವಾಗಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಯು ಕಾಲಾನಂತರದಲ್ಲಿ ತೀವ್ರಗೊಳ್ಳುತ್ತದೆ. ಜೊತೆಗೆ, ಬಡ್ಡಿ ದರಗಳ ಹೆಚ್ಚಳದೊಂದಿಗೆ, ಹೂಡಿಕೆಗಳು ಮತ್ತಷ್ಟು ನಿರುತ್ಸಾಹಗೊಳ್ಳುತ್ತವೆ.

ಹೂಡಿಕೆಗಳ ಇಳಿಕೆಗೆ ಒಂದು ಅಧಿಕ ಕಾರಣವೂ ಇದೆ. ಅದು ಹಣದುಬ್ಬರ. ಈ ಅಂಶವನ್ನು ಅಮೇರಿಕಾದಲ್ಲಿ ಬಹಳವಾಗಿ ಚರ್ಚಿಸಲಾಗುತ್ತಿದೆ. ಬಿಡೆನ್ ಪ್ರಸ್ತಾಪಿಸಿರುವ ಮಟ್ಟದ ಆರ್ಥಿಕ ಉತ್ತೇಜನವು ಅಮೇರಿಕಾದಲ್ಲಿ ಹಣದುಬ್ಬರವನ್ನು ಹರಿಯಬಿಡುತ್ತದೆ ಎಂದು ಅಮೇರಿಕಾದ ಅನೇಕ ಮಧ್ಯ-ಬಲ ಪಂಥೀಯ  ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ, ಆದರೆ, ಹಲವು ಮಧ್ಯ-ಎಡಪಂಥೀಯರು ಅಂತಹ ಹಣದುಬ್ಬರದ ಭೀತಿಯನ್ನು ತಿರಸ್ಕರಿಸುತ್ತಾರೆ. ಈ ಇಡೀ ಚರ್ಚೆಯು, ಅಮೇರಿಕಾದ ಆರ್ಥಿಕ ಉತ್ತೇಜಕವು ಅಮೇರಿಕಾದಲ್ಲಿ ಉಂಟುಮಾಡಬಹುದಾದ ಹಣದುಬ್ಬರದ ಮಟ್ಟಿಗೆ ಸೀಮಿತಗೊಂಡಿದೆ. ಆದರೆ, ಈ ಆರ್ಥಿಕ ಉತ್ತೇಜಕವು (ಬಿಡೆನ್ ಪ್ಯಾಕೇಜ್) ಇತರ ದೇಶಗಳಲ್ಲಿ ಹಣದುಬ್ಬರವನ್ನು ಉಂಟುಮಾಡುವ ಸಾಧ್ಯತೆಯ ಬಗ್ಗೆ ಚಕಾರ ಎತ್ತದಿರುವುದು ಆಶ್ಚರ್ಯಕರವಾಗಿದೆ. ಹಣದುಬ್ಬರದ ಈ ಪ್ರಶ್ನೆಯು ಭಾರತ ಮತ್ತು ಮೂರನೇ ಜಗತ್ತಿನ ಇತರ ದೇಶಗಳಿಗೆ ಬಹಳ ಮುಖ್ಯವಾಗುತ್ತದೆ. ಏಕೆಂದರೆ, ಈ ದೇಶಗಳು ತಮ್ಮ ವಿವಿಧ ಪ್ರಾಥಮಿಕ ಸರಕುಗಳನ್ನು ಅಮೇರಿಕಾ ಮತ್ತು ಇತರ ಬಂಡವಾಳಶಾಹಿ ದೇಶಗಳಿಗೆ ಒದಗಿಸುತ್ತವೆ.

ಇದನ್ನು ಓದಿ: ವಿಫಲಗೊಂಡಿರುವ ‘ವಿಶ್ವ ಗುರು’

ಅಮೇರಿಕಾದ ಈ ಉತ್ತೇಜಕವು ಖಂಡಿತವಾಗಿಯೂ ಪ್ರಾಥಮಿಕ ಸರಕುಗಳ ಮೇಲಿನ ಬೇಡಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಬಹುತೇಕ ಅವುಗಳ ಬೆಲೆಗಳನ್ನೂ ಹೆಚ್ಚಿಸುತ್ತದೆ. ಈ ಬೆಲೆ ಹೆಚ್ಚಳಗಳು ಅಮೇರಿಕಾದ ಹಣದುಬ್ಬರ ದರದ ಮೇಲೆ ಹೆಚ್ಚಿನ ಪರಿಣಾಮ ಬೀರದಿದ್ದರೂ ಸಹ, ಖಂಡಿತವಾಗಿಯೂ ಭಾರತದಂತಹ ಮೂರನೇ ಜಗತ್ತಿನ ಪ್ರಾಥಮಿಕ ಸರಕು ಪೂರೈಕೆದಾರ ದೇಶಗಳಲ್ಲಿ ಹಣದುಬ್ಬರವನ್ನು ಹೆಚ್ಚಿಸುತ್ತವೆ. ಪ್ರಾಥಮಿಕ ಸರಕುಗಳ ಬೆಲೆ ಏರಿಕೆಗೆ ಈ ದೇಶಗಳ ನೀತಿ-ಪ್ರತಿಕ್ರಿಯೆಯು ಹೇಗಿರುತ್ತದೆ ಎಂದರೆ, ಜಾಗತೀಕರಣಗೊಂಡ ಹಣಕಾಸು ಆಳ್ವಿಕೆಯ ಅಡಿಯಲ್ಲಿ, ಅದು ಏನಿರಬೇಕಿತ್ತೋ ಅದಕ್ಕೆ ತದ್ವಿರುದ್ಧವಾಗಿರುತ್ತದೆ ಮತ್ತು ಯುದ್ಧಾನಂತರದ ನಿಯಂತ್ರಣ-ನೀತಿಗಳ ಆಡಳಿತದಲ್ಲಿ ಏನಿರುತ್ತಿತ್ತೋ ಅದಕ್ಕೆ ವಿರುದ್ಧವಾಗಿರುತ್ತದೆ. ಬೇಡಿಕೆಯ ಹಠಾತ್ ಹೆಚ್ಚಳದಿಂದಾಗಿ ಪ್ರಾಥಮಿಕ ಸರಕುಗಳ ಬೆಲೆಗಳು ಏರಿಕೆಯಾದಾಗ, ಸಾಮಾನ್ಯವಾಗಿ, ಅಂತಹ ಸರಕುಗಳ ಉತ್ಪಾದನೆಗೆ ಅನುವಾಗುವ ವಲಯಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಅಂತಹ ಸರಕುಗಳ ಪೂರೈಕೆಯನ್ನು ಹೆಚ್ಚಿಸುವ ಕ್ರಮಗಳನ್ನು ಸರ್ಕಾರವು ಕೈಗೊಳ್ಳಬೇಕಾಗುತ್ತದೆ. ಆದರೆ, ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಆಳ್ವಿಕೆಯಲ್ಲಿ, ಈ ನೀತಿ-ಪ್ರತಿಕ್ರಿಯೆಯು ಹೇಗಿರುತ್ತದೆ ಅಂದರೆ, ಸಾರ್ವಜನಿಕ ಹೂಡಿಕೆಗಳನ್ನು ಮತ್ತು ಸಾರ್ವಜನಿಕ ವೆಚ್ಚಗಳನ್ನು ಮೊಟಕುಗೊಳಿಸಲಾಗುತ್ತದೆ. ಈ ರೀತಿಯಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವ ಸಲುವಾಗಿ ಪೂರೈಕೆಯನ್ನು ಹೆಚ್ಚಿಸುವುದರ ಬದಲು ದೇಶೀಯ ಬೇಡಿಕೆಯನ್ನು ಮೊಟಕುಗೊಳಿಸಲಾಗುತ್ತದೆ. ಅಂದರೆ, ಪ್ರಾಥಮಿಕ ಸರಕುಗಳನ್ನು ಪೂರೈಕೆ ಮಾಡುವ ದೇಶಗಳ ಮೇಲೆ ಮಿತವ್ಯಯ ನೀತಿಗಳನ್ನು ಹೇರಲಾಗುವುದು. ಈ ನೀತಿಗಳಿಂದಾಗಿ, ಈ ದೇಶಗಳ ಚಟುವಟಿಕೆಗಳ ಮಟ್ಟವೂ ಮತ್ತು ಆ ಮೂಲಕ ದೇಶದ ಬೆಳವಣಿಗೆಯ ದರವೂ ನಿರ್ಬಂಧಕ್ಕೊಳಗಾಗುತ್ತವೆ.

ಹೀಗಾಗಿ, ಭಾರತದಂತಹ ಅರ್ಥವ್ಯವಸ್ಥೆಗಳಿಗೆ, ಬಿಡೆನ್ ಅವರ ಪ್ಯಾಕೇಜ್ ಪರಿಣಾಮವಾಗಿ, ರಫ್ತು ಅವಕಾಶಗಳು ಹೆಚ್ಚುತ್ತವೆ, ನಿಜ. ಆದರೆ, ಹಣದುಬ್ಬರವನ್ನು ನಿಯಂತ್ರಣದಲ್ಲಿಡುವ ಸಲುವಾಗಿ ಪ್ರಾಥಮಿಕ ಸರಕುಗಳ ದೇಶೀಯ ಬೇಡಿಕೆಯನ್ನು ಹತ್ತಿಕ್ಕಲಾಗುವುದು. ಹಾಗಾಗಿ, ರಫ್ತುಗಳ ಹೆಚ್ಚಳದ ಜೊತೆಯಲ್ಲಿ ಒಟ್ಟಾರೆ ಚಟುವಟಿಕೆಗಳು ಮತ್ತು ಆರ್ಥಿಕ ಅಭಿವೃದ್ದಿ ಸಂಕುಚಿತಗೊಳ್ಳುತ್ತವೆ.

ಇದನ್ನು ಓದಿ: ಕೋವಿಡ್‌: ಭಾರತದ ನೆರವಿಗೆ ಸಿದ್ಧವೆಂದ ವಿಶ್ವಸಂಸ್ಥೆ

ಎರಡನೆಯ ಮಹಾಯುದ್ಧದ ನಂತರದ ಉತ್ಕರ್ಷದ ಸಮಯದಲ್ಲಿ ಪರಿಸ್ಥಿತಿ ಈ ರೀತಿಯಲ್ಲಿರಲಿಲ್ಲ. ಹಣಕಾಸು ಬಂಡವಾಳದ ಆಜ್ಞೆಗಳಿಗೆ ಸರ್ಕಾರಗಳು ತಲೆಬಾಗುವ ಪರಿಸ್ಥಿತಿ ಇರಲಿಲ್ಲ. ಪ್ರಾಥಮಿಕ ಸರಕುಗಳ ಬೆಲೆಗಳು ಏರಿಕೆಯಾದಾಗ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಅಂತಹ ಸರಕುಗಳ ಪೂರೈಕೆಯನ್ನು ಹೆಚ್ಚಿಸುತ್ತಿದ್ದವು. ಪ್ರಾಥಮಿಕ ಸರಕುಗಳ ಬೆಲೆಗಳು ಏರಿದ ಕೂಡಲೇ ದೇಶೀಯ ಬೇಡಿಕೆಯನ್ನು ಹತ್ತಿಕ್ಕುವ ಮತ್ತು ಸಾರ್ವಜನಿಕ ವೆಚ್ಚಗಳನ್ನು ಮೊಟಕುಗೊಳಿಸುವ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ, ಆ ಅವಧಿಯ ಜಾಗತಿಕ ಉತ್ಕರ್ಷವು ಭಾರತದ ಅರ್ಥವ್ಯವಸ್ಥೆಯ ಮೇಲೆ ಉತ್ತೇಜನಕಾರೀ ಪರಿಣಾಮ ಬೀರಿತೇ ವಿನಃ ಸಂಕುಚಿತಗೊಳಿಸಲಿಲ್ಲ.

ಸAಕ್ಷಿಪ್ತವಾಗಿ ಹೇಳುವುದಾದರೆ, ಬಿಡೆನ್ ಅವರ ಪ್ಯಾಕೇಜ್ ಒಂದು ಅಸಮರ್ಥನೀಯ ಊಹೆಯನ್ನು ಆಧರಿಸಿದೆ. ಅದೇನೆಂದರೆ, ಇಪ್ಪತ್ತನೇ ಶತಮಾನದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೆ. ಎಂ. ಕೀನ್ಸ್ ಅವರು ಪ್ರತಿಪಾದಿಸಿದ ವಿತ್ತೀಯ ವಿಧಾನಗಳ ಮೂಲಕ ಅರ್ಥವ್ಯವಸ್ಥೆಯನ್ನು ಉತ್ತೇಜಿಸಬಹುದು ಎಂಬುದು. ಆದರೆ, ಕೀನ್ಸ್ ಅವರು ಹೇಳಿದ್ದ “ಎಲ್ಲಕ್ಕಿಂತ ಮಿಗಿಲಾಗಿ ಬಂಡವಾಳವು ರಾಷ್ಟ್ರೀಯ ಮೂಲದ್ದಾಗಿರಬೇಕು” ಎಂಬ ಕಟ್ಟಳೆಯನ್ನು ನಿರ್ಲಕ್ಷಿಸಲಾಗಿದೆ. ಈ ಅಸಮರ್ಥನೀಯ ಊಹೆಯು, ಹಣಕಾಸು ಬಂಡವಾಳದ ಚಲನೆಯ ಮೇಲೆ ನಿರ್ಬಂಧಗಳನ್ನು ವಿಧಿಸದೆ, ನವ ಉದಾರವಾದಿ ಬಂಡವಾಳಶಾಹಿಯು ಜಾಗತಿಕ ಅರ್ಥವ್ಯವಸ್ಥೆಯನ್ನು ತಳ್ಳಿರುವ ದೀರ್ಘಕಾಲದ ಬಿಕ್ಕಟ್ಟಿನಿಂದ ಹೊರಬರಬಹುದು ಎಂಬ ಭ್ರಮೆಯ ಮೇಲೆ ನಿಂತಿದೆ. ಹಣಕಾಸು ಬಂಡವಾಳದ ಆಧಿಪತ್ಯದ ಹಾವಳಿಯಿಂದ ಅಮೇರಿಕಾ ಮತ್ತು ಕೆಲವು ಮುಂದುವರೆದ ದೇಶಗಳು ಹಾನಿಗೊಳಗಾಗದಿರಬಹುದು. ಆದರೆ, ಮೂರನೇ ಜಗತ್ತಿನ ದೇಶಗಳು ಅಷ್ಟು ಅದೃಷ್ಟಶಾಲಿಗಳಲ್ಲ. ದೇಶ ದೇಶಗಳು ಮತ್ತೊಮ್ಮೆ ತಮ್ಮ ಸ್ವಾಯತ್ತತೆಯನ್ನು ಮರಳಿ ಪಡೆಯುವಂತಹ ಒಂದು ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಏರ್ಪಾಟಿಗೆ ಕರೆ ಕೊಡುವ ಬದಲು, ಬಿಡೆನ್ ಪ್ಯಾಕೇಜ್, ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಆಧಿಪತ್ಯದಲ್ಲಿ ಎಲ್ಲಾ ದೇಶಗಳೂ ಕೀನ್ಸಿಯನ್ ಬೇಡಿಕೆ ನಿರ್ವಹಣೆಯ ದಿನಗಳಿಗೆ ಮರಳಬಹುದು ಎಂದು ಭಾವಿಸುತ್ತದೆ.

ಜೋ ಬಿಡೆನ್ ಅವರು ಕಲ್ಪಿಸಿಕೊಂಡ ಒಂದು ಅಸಾಧಾರಣ ಮಹತ್ವಾಕಾಂಕ್ಷೆಯ ವಿತ್ತೀಯ ಉತ್ತೇಜಕವು ಜಾಗತಿಕ ವಿಭಜನೆಯನ್ನು ಹೆಚ್ಚಿಸುತ್ತದೆ. ಮುಂದುವರಿದ ದೇಶಗಳು ಬೆಳವಣಿಗೆಯೊಂದಿಗೆ ಮುನ್ನುಗ್ಗುವಾಗ ಮೂರನೇ ಜಗತ್ತಿನ ದೇಶಗಳು ತೀವ್ರ ನಿರುದ್ಯೋಗದ ಮತ್ತು ವಿತ್ತೀಯ ಮಿತವ್ಯಯದ ಸಮಸ್ಯೆಗಳಲ್ಲಿ ಮುಳುಗುತ್ತವೆ. ಈ ಊಹೆಯ ಮೂಲಭೂತ ಅಸಮರ್ಥನೆಯನ್ನು ಈ ಕೆಲವು ಅಂಶಗಳು ವ್ಯಕ್ತಪಡಿಸುತ್ತವೆ. ಐಎಂಎಫ್‌ನ ತಾರತಮ್ಯ ನೀತಿಗಳು ಜಾಗತಿಕ ವಿಭಜನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಆದರೆ, ಐಎಂಎಫ್‌ನ ಹೊರತಾಗಿಯೂ, ಹಣಕಾಸು ಬಂಡವಾಳದ ಪ್ರಾಧಾನ್ಯತೆಯ ಜಾಗತಿಕ ಅರ್ಥವ್ಯವಸ್ಥೆಯು ಈ ದಿಕ್ಕನ್ನೇ ಸ್ವಯಂಪ್ರೇರಿತವಾಗಿ ಆಯ್ಕೆ ಮಾಡಿಕೊಳ್ಳುತ್ತದೆ.

ಬಿಡೆನ್ ಅವರ ಪ್ಯಾಕೇಜ್ ಉದ್ದೇಶ ಒಳ್ಳೆಯದು ಹೌದು ಮತ್ತು ಅದನ್ನು ಮುಂದುವರಿದ ದೇಶಗಳ ಎಡಪಂಥೀಯರು ಬೆಂಬಲಿಸುತ್ತಾರೆ, ನಿಜ. ಆದರೆ, ಈ ಎಡಪಂಥೀಯರು ಮೂರನೇ ಜಗತ್ತಿನ ದೇಶಗಳ ವಿಪತ್ತುಗಳ ಬಗ್ಗೆಯೂ ಸಹ ಸಂವೇದನೆಯನ್ನು ಹೊಂದಿರಬೇಕಾಗುತ್ತದೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *