ಅಹಮದಾಬಾದ್: ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ನಿಕಟಪೂರ್ವ ಮುಖ್ಯಮಂತ್ರಿ ವಿಜಯ ರೂಪಾಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಪಕ್ಷದ ಕೇಂದ್ರ ನಾಯಕತ್ವ ಭೂಪೇಂದ್ರ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿತು.
ಭಾನುವಾರದಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದ ಭೂಪೇಂದ್ರ ಪಟೇಲ್(59) ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಅಚಾರ್ಯ ದೆವವ್ರತಾ ಭೂಪೇಂದ್ರ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಇದನ್ನು ಓದಿ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ
ಭೂಪೇಂದ್ರ ಪಟೇಲ್ ನಗರಸಭೆಯಿಂದ ರಾಜಕೀಯ ಆರಂಭಿಸಿದವರು. 2017ರಲ್ಲಿ ಅವರು ಘಟ್ಲೋಡಿಯಾ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆ ಎದುರಿಸಿದ್ದ ಅವರು ಆ ಚುನಾವಣೆಯಲ್ಲಿ ಗರಿಷ್ಠ ಅಂತರದಲ್ಲಿ ಗೆದ್ದರು.
ಗುಜರಾತಿನ ಮಾಜಿ ಮುಖ್ಯಮಂತ್ರಿ ಮತ್ತು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ ನಿಕಟವರ್ತಿ ಭೂಪೇಂದ್ರ ಅವರು ಹಿಂದೆ ಆನಂದಿಬೆನ್ ಅವರು ಪ್ರತಿನಿಧಿಸಿದ್ದ ವಿಧಾನಸಭಾ ಕ್ಷೇತ್ರದಿಂದಲೇ ಶಾಸಕರಾಗಿರುವುರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿನಿಧಿಸುವ ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿದೆ ಈ ವಿಧಾನಸಭಾ ಕ್ಷೇತ್ರ.
ಭೂಪೇಂದ್ರ ಅವರು 2015–17ರ ಅವಧಿಯಲ್ಲಿ ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಅದಕ್ಕೂ ಮೊದಲು 2010ರಿಂದ 2015ರವರೆಗೆ ಅಹಮದಾಬಾದ್ ನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಇದ್ದವರು.
ಭೂಪೇಂದ್ರ ಅವರು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸ್ಥಳೀಯ ರಾಜಕಾರಣದಲ್ಲಿ ಹೆಚ್ಚು ಸಕ್ರಿಯವಾಗಿ ಗುರುತಿಸಿಕೊಂಡವರು. ಅಹಮದಾಬಾದ್ ಜಿಲ್ಲೆಯಲ್ಲಿರುವ ಮೇಮ್‌ನಗರ ನಗರಸಭೆಯ ಸದಸ್ಯರಾಗಿದ್ದರು. ಎರಡು ಬಾರಿ ಅಧ್ಯಕ್ಷರೂ ಆಗಿದ್ದರು. ಪಟೇಲ್ ಸಮುದಾಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಉದ್ದೇಶಕ್ಕೆ ಸ್ಥಾಪಿತವಾದ ಸರ್ದಾರ್‌ಧಾಮ್ ವಿಶ್ವ ಪಾಟೀದಾರ್ ಕೇಂದ್ರದ ಟ್ರಸ್ಟಿಯಾಗಿಯೂ ಅವರು ಇದ್ದಾರೆ.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಕೆಲ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಪ್ರಧಾನಿ ನರೇಂದ್ರಮೋದಿ ಒಳಗೊಂಡು ಹಲವರು ಶುಭಕೋರಿದ್ದಾರೆ.