ತಮಿಳುನಾಡಿನ ಅಣಮಲೈ ಹುಲಿ ಸಂರಕ್ಷಣಾ (ಎಟಿಆರ್) ಪ್ರದೇಶದ ಕಲ್ಲರ್ ಎಂಬಲ್ಲಿನ ಕಡರ್ ಬುಡಕಟ್ಟಿನ 23 ಕುಟುಂಬಗಳು ಕೊನೆಗೂ ಅರಣ್ಯ ಹಕ್ಕುಗಳ ಕಾಯ್ದೆ, 2006ರ ಅಡಿಯಲ್ಲಿ ಜಮೀನು ಪಟ್ಟಾ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 20, 2019ರಲ್ಲಿ ಅತಿಕ್ರಮಣಕಾರರು ಎಂದು ಈ ಬುಡಕಟ್ಟಿನ ಸುಮಾರು 90 ಸದಸ್ಯರನ್ನು ಅವರ ಪಾರಂಫರಿಕ ವಾಸಸ್ಥಳಗಳಿಂದ ಎಬ್ಬಿಸಲಾಗಿತ್ತು. ಅವರು ನೆಲೆಸಿದ್ದ ಗುಡಿಸಲುಗಳು ಒಂದು ಭೂಕುಸಿತದಲ್ಲಿ ನೆಲಸಮಗೊಂಡವು. ಆಗ ಅವರು ಹತ್ತಿರದ ಒಂದು ಸ್ಥಳದಲ್ಲಿ ತಾತ್ಕಾಲಿಕ ಗುಡಾರಗಳನ್ನು ಹಾಕಿಕೊಂಡರು. ಆದರೆ ಅವರನ್ನು ಅಲ್ಲಿಂದ ಅರಣ್ಯ ಇಲಾಖೆಯವರು ಪೋಲೀಸ್ ಮತ್ತು ರೆವಿನ್ಯೂ ಇಲಾಖೆಯ ನೆರವಿನಿಂದ ಎಬ್ಬಿಸಿದರು. ಸುಮಾರು 23 ಕುಟುಂಬಗಳನ್ನು ತೈಮುಡಿ ಎಂಬಲ್ಲಿನ ಚಹಾ ಎಸ್ಟೇಟಿನ ಬಳಸದೆ ಬಿಟ್ಟಿದ್ದ ಕ್ವಾರ್ಟ್ರ್ ಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಅವರು ಅಲ್ಲೇ ನೆಲೆಸಿದ್ದರು.
ಒಕ್ಕಲೆಬ್ಬಿಸಿದ ನಂತರ ಈ ಆದಿವಾಸಿ ಸಮುದಾಯದವರು ಅರಣ್ಯ ಹಕ್ಕುಗಳ ಕಾಯ್ದೆಯ ಅಡಿಯಲ್ಲಿ ತೆಪ್ಪಕುಲಮೇಡು ಎಂಬಲ್ಲಿ ಪರ್ಯಾಯ ಜಮೀನಿನ ಪಟ್ಟಾ ಕೊಡಬೇಕು ಎಂದು ಕೇಳಿದರು. ಈ ಕುರಿತಂತೆ ಮಾರ್ಚ್ 2020ರಲ್ಲಿ ಅವರ ಗ್ರಾಮಸಭೆ ಒಂದು ನಿರ್ಣಯವನ್ನು ಪಾಸು ಮಾಡಿತು. ಆದರೆ ಈ ಸ್ಥಳ ‘ಹುಲಿ ಪ್ರದೇಶ’ವಾದ್ದರಿಂದ ಪಟ್ಟಾ ಕೊಡಲಾಗುವುದಿಲ್ಲ ಎಂದು ಎಟಿಆರ್ ನ ಅಧಿಕಾರಿಗಳು ತಿಳಿಸಿದಾಗ ಪಟ್ಟಾ ಪಡೆಯಲು ಅಖಿಲ ಭಾರತ ಕಿಸಾನ್ ಸಭಾಕ್ಕೆ ಸಂಯೋಜಿತವಾದ ತಮಿಳುನಾಡು ಬುಡಕಟ್ಟು ಸಂಘ(ಟಿ.ಎನ್.ಟಿ.ಎ.) ಮತ್ತು ಏಕತಾ ಪರಿಷತ್ ನೇತೃತ್ವದಲ್ಲಿ ಹೋರಾಟ ಆರಂಭಿಸಿದರು. ಕೊನೆಗೂ ಈ ಹೋರಾಟಕ್ಕೆ ಯಶಸ್ಸು ದೊರೆತಿದೆ. ರಾಜ್ಯ ಸರಕಾರ ಮತ್ತು ಜಿಲ್ಲಾ ಆಡಳಿತ ಪಟ್ಟಾ ನೀಡಬೇಕೆಂಬ ಬೇಡಿಕೆಯನ್ನು ಒಪ್ಪಿಕೊಂಡಿದೆ. ಎರಡು ವರ್ಷಗಳ ಹಿಂದೆ ಅತಿಕ್ರಮಣಕಾರರು ಎಂದೆನಿಸಿಕೊಂಡವರು ಈಗ ತಮ್ಮ ಹಕ್ಕಿನ ಜಾಗದಲ್ಲಿ ಬದುಕುವುದು ಸಾಧ್ಯವಾಗಿದೆ ಎಂದಿರುವ ಟಿ.ಎನ್.ಟಿ.ಎ. ಮುಖಂಡರು ತಮಿಳುನಾಡು ಸರಕಾರ ಅರಣ್ಯ ಹಕ್ಕುಗಳ ಕಾಯ್ದೆಯ ಪರಿಣಾಮಕಾರೀ ಅನುಷ್ಠಾನವನ್ನು ಖಾತ್ರಿಪಡಿಸಬೇಕು ಎಂದು ಹೇಳಿದ್ದಾರೆ.