ತಮಿಳುನಾಡಿನ ಧರ್ಮಪುರಿಯ ಡಿಎಂಕೆ ಸಂಸದ ಡಾ. ಸೆಂತಿಲ್‌ಕುಮಾರ್ ಅವರು ಸರ್ಕಾರಿ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯುತ್ತಿದ್ದ ಭೂಮಿ ಪೂಜೆಯನ್ನು ತಡೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅರ್ಚಕನನ್ನು ವಾಪಾಸ್ಸು ಕಳುಹಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.
ಇದು ಎಲ್ಲಾ ಜನರ ಸರ್ಕಾರ, ದ್ರಾವಿಡರ ಸರ್ಕಾರವಾಗಿದ್ದು, ಬೇರೆ ಸರ್ಕಾರದ ರೀತಿ ಈ ಸರ್ಕಾರ ಅಲ್ಲ ಎಂದು ಸಂಸದ ಡಾ. ಸೆಂತಿಲ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿರುವುದು ವರದಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಧಾರ್ಮಿಕತೆಯನ್ನು ದೂರ ಇಟ್ಟಿದ್ದಕ್ಕಾಗಿ ನೆಟ್ಟಿಗರು ಅವರನ್ನು ಶ್ಲಾಘೀಸಿದ್ದಾರೆ.
ஒரு அளவுக்கு மேல் என் பொறுமையை சோதிக்கிறார்கள்.
Trying to Keep my cool.
At times they make me to lose my patience. pic.twitter.com/l1gHdhYkQa— Dr.Senthilkumar.S (@DrSenthil_MDRD) July 16, 2022
ಸರ್ಕಾರಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಡಾ. ಸೆಂತಿಲ್ ಕುಮಾರ ಅವರು, ಭೂಮಿ ಪೂಜೆಯೂ ಹಿಂದೂ ಸಂಪ್ರದಾಯದಂತೆ ಮಾತ್ರ ನಡೆಯುತ್ತಿದ್ದುದನ್ನು ಪ್ರಶ್ನಿಸಿದರು. ಸ್ಥಳದಲ್ಲಿ ಇದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಸರ್ಕಾರಿ ಕಾರ್ಯಕ್ರಮದಲ್ಲಿ ಇವುಗಳನ್ನೆಲ್ಲಾ ನಡೆಸಬಾರದು ಎಂದು ನಿಮಗೆ ಸೂಚನೆ ಇದೆಯೇ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ.
“ಹಿಂದೂ ಧರ್ಮದ ಪ್ರಕಾರ ಭೂಮಿ ಪೂಜೆ ನಡೆಸುವುದಾದರೆ, ಉಳಿದ ಧರ್ಮಗಳ ಧರ್ಮಗುರುಗಳು ಎಲ್ಲಿ? ಕ್ರಿಶ್ಚಿಯನ್, ಮುಸ್ಲಿಂ, ದ್ರಾವಿಡರು ಎಲ್ಲಿ? ಧರ್ಮವನ್ನೇ ಆಚರಿಸದವರು ಎಲ್ಲಿ?” ಎಂದು ಅಧಿಕಾರಿಯೊಂದಿಗೆ ಡಾ. ಸೆಂತಿಲ್ ಕುಮಾರ್ ಪ್ರಶ್ನಿಸಿದ್ದಾರೆ.
“ಮಸೀದಿಯ ಇಮಾಂ, ಚರ್ಚಿನ ಫಾದರ್ ಸೇರಿದಂತೆ ಎಲ್ಲರನ್ನೂ ಕರೆಯಿರಿ” ಎಂದು ಸ್ಥಳದಲ್ಲಿ ಇದ್ದ ಅರ್ಚಕನನ್ನು ತೆರಳುವಂತೆ ಸಂಸದರು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಯನ್ನು ಪ್ರಶ್ನಿಸಿದ ಸಂಸದರು, ‘‘ನಿಮಗೆ ಸೂಚನೆ ಇದೆಯೆ-ಇಲ್ಲವೆ? ಈ ರೀತಿಯ ಕಾರ್ಯಕ್ರಮಕ್ಕೆ ನನ್ನನ್ನು ದಯವಿಟ್ಟು ಕರೆಯದಿರಿ. ಇದು ಎಲ್ಲಾ ಜನರ ಸರ್ಕಾರ, ದ್ರಾವಿಡರ ಸರ್ಕಾರ. ಬೇರೆ ಸರ್ಕಾರದ ರೀತಿ ಈ ಸರ್ಕಾರ ಅಲ್ಲ” ಎಂದು ಹೇಳಿದ್ದಾರೆ.
ತಮಿಳುನಾಡಿನ ಧರ್ಮಪುರಿ ಕ್ಷೇತ್ರವನ್ನು 2019ರಿಂದ ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ಡಾ. ಎಸ್. ಸೆಂಥಿಲ್‌ಕುಮಾರ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ.