ಬಳ್ಳಾರಿ: ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಕೈಗಾರಿಕೆಗಳ ಸ್ಥಾಪನೆಗೆಂದು ಕಳೆದ 12 ವರ್ಷಗಳಿಂದ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು, ಯಾವ ಕೈಗಾರಿಕೆಗಳನ್ನು ಸ್ಥಾಪನೆ ಮಾಡದೆ ಹಾಗೆ ಬಿಡಲಾಗಿದ್ದು, ಸ್ವಾಧೀನಪಡಿಸಿಕೊಂಡ ಭೂಮಿಯನ್ನು ವಾಪಸ್ಸು ಕೊಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ಪಾದಯಾತ್ರೆ ಹಮ್ಮಿಕೊಂಡಿದೆ.
ಬಳ್ಳಾರಿ ಜಿಲ್ಲೆಯ ಭೂಮಿ ಕಳೆದುಕೊಂಡ ಗ್ರಾಮಗಳಾದ ಕುಡಿತಿನಿ, ಹರಗಿನಢೋಣಿ, ವೀರಾಪುರ, ಕೊಳಗಲ್ಲು, ಜಾನೇಕುಂಟೆ ಹಾಗೂ ಸಿದ್ದಮನಹಳ್ಳಿಯಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, 2022ರ ಡಿಸೆಂಬರ್ 7-8ರಂದು ನಡೆಯಲಿದೆ ಎಂದು ಕೆಪಿಆರ್‌ಎಸ್ ಬಳ್ಳಾರಿ ಜಿಲ್ಲಾ ಸಮಿತಿ ಪ್ರಕಟಣೆ ನೀಡಿದೆ.
ನವೆಂಬರ್ 2ರಿಂದ 4ರವರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ರೀತಿಯಲ್ಲೇ ಹಿಂದೆ ಯಡಿಯೂರಪ್ಪ, ಮುರುಗೇಶ್ ನಿರಾಣಿ, ಗಾಲಿ ಜನಾರ್ದನ ರೆಡ್ಡಿ, ಶ್ರೀರಾಮಲು ಪ್ರಮುಖ ಪಾತ್ರವಹಿಸಿ ಬಂಡವಾಳ ಹೂಡಿಕೆದಾರರ ಸಭೆ ಸಂಘಟಿಸಿದ್ದರು.
ಆ ಸಭೆಯಲ್ಲಿ ಆದ ಒಪ್ಪಂದದಂತೆ ಅರ್ಸೆಲರ್ ಮಿತ್ತಲ್ ಸಂಸ್ಥೆಗೆ ಐದು ಸಾವಿರ ಎಕರೆ, ಬ್ರಹ್ಮಿಣಿ ಸ್ಟೀಲ್ಸ್ ಗೆ ಐದು ಸಾವಿರ ಎಕರೆ, ಎನ್ ಎಂ ಡಿ ಸಿ ಗೆ ಎರಡೂವರೆ ಸಾವಿರ ಎಕರೆ ಹೀಗೆ ಒಟ್ಟಾರೆ ಹನ್ನೆರಡುವರೆ ಸಾವಿರ ಎಕರೆ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಪ್ರತಿಯೊಂದು ಭೂ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗುವುದು ಎಂದು ಭರವಸೆ ನೀಡಿ ಎಕರೆಗೆ ಕೇವಲ ಐದು ಲಕ್ಷ ರೂಪಾಯಿಯಿಂದ ಹದಿನಾರು ಲಕ್ಷ ರೂ ವರೆಗೆ ಹಣ ನೀಡಿ ಭೂಮಿ ಕಸಿದುಕೊಳ್ಳಲಾಗಿದೆ ಎಂದು ಸಂಘಟನೆಯು ತಿಳಿಸಿದೆ.
ಅವತ್ತಿನ ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಈ ಭೂಮಿ ಹಸ್ತಾಂತರದಲ್ಲೇ ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ರೈತರಿಗೆ ನಷ್ಟವಾಗಿತ್ತು. ಕೈಗಾರಿಕೆಗಳು ಸ್ಥಾಪನೆಯಾಗದೇ ಕೃಷಿ ದುಡಿಮೆಯೂ ಇಲ್ಲದೇ ಈ ಹನ್ನೆರೆಡು ವರ್ಷಗಳಲ್ಲಿ ಸುಮಾರು ಮೂರು ಸಾವಿರ ಕುಟಂಬಗಳು ಸುಮಾರು ನಾಲ್ಕುವರೆ ಸಾವಿರ ಕೋಟಿ ರೂಗಳ ನಷ್ಟ ಆನುಭವಿಸಿವೆ.
ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ರೈತರು ಹಾಗೂ ರಾಜ್ಯಾದ್ಯಂತ ಬಲವಂತದ ಭೂ ಸ್ವಾಧೀನ ವಿರೋಧಿಸಿ ಹೋರಾಟ ನಡೆಸುತ್ತಿರುವುದು ರೈತ ಸಮುದಾಯವನ್ನು ಇಂತಹ ಅನ್ಯಾಯದಿಂದ ರಕ್ಷಿಸುವ ಸಲುವಾಗಿ ಕರ್ನಾಟಕ ಪ್ರಾಂತ ರೈತ ಸಂಘವು ಪಾದಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ ಭೂಮಿ ಕಳೆದುಕೊಂಡವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಪಿಆರ್‌ಎಸ್ ಮುಂದಾಗಿದೆ ಎಂದು ಪ್ರಕಟನೆ ನೀಡಿದೆ.
ಭೂ ಸಂತ್ರಸ್ತ ಗ್ರಾಮಗಳಿಂದ ಹತ್ತಾರು ಬೈಕ್ ಗಳ ಮೂಲಕ ಬಳ್ಳಾರಿಯ ಕೆಐಎಡಿಬಿ ಕಛೇರಿ ವರೆಗೆ ಬಂದ ಕಾರ್ಯಕರ್ತರು ಪಾದಯಾತ್ರೆ ಹಮ್ಮಿಕೊಂಡಿರುವ ಕುರಿತು ಸಂಘಟನೆ ಮುಂದಾಗಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ವಿಎಸ್ ಶಿವಶಂಕರ್, ಜಿಲ್ಲಾ ಕಾರ್ಯದರ್ಶಿ ಗಾಳಿಬಸವರಾಜ, ಸಿಐಟಿಯು ಜಿಲ್ಲಾಧ್ಯಕ್ಷ ಜೆ ಸತ್ಯಬಾಬು,ಜಿಲ್ಲಾ ಕಾರ್ಯದರ್ಶಿ ಜಿಎಂ ಚನ್ನಬಸವಯ್ಯ, ಭೂ ಸಂತ್ರಸ್ತ ಹೋರಾಟ ಸಮಿತಿಯ ಜೋಲಪ್ಪ, ಶ್ರೀನಿವಾಸ್, ಜಂಗ್ಲಿಸಾಬ್ ,ಬಿಎಂ ತಿಪ್ಪೇಸ್ವಾಮಿ ಮುಂತಾದವರ ನಾಯಕತ್ವದಲ್ಲಿ ನಡೆಯುತ್ತಿರುವ ಮಹತ್ವದ ಈ ರೈತ ಹೋರಾಟವನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸಲು ಕೆಪಿಆರ್‌ಎಸ್ ರಾಜ್ಯ ಸಮಿತಿ ಮನವಿ ಮಾಡಿದೆ.