ವಿಜಯಪುರ : ಹಿರಿಯ ರೈತ ನಾಯಕ ಭೀಮಶಿ ಕಲಾದಗಿ ನಿಧನ

ವಿಜಯಪುರ: ಹಿರಿಯ ರೈತ ನಾಯಕ ‘ಬರಿಗಾಲ ಗಾಂಧಿ’ ಎಂದೇ ಪ್ರಸಿದ್ಧವಾಗಿದ್ದ ಭೀಮಶಿ ಕಲಾದಗಿ(86) ಸೋಮವಾರ ರಾತ್ರಿ ನಿಧನರಾದರು.

ವಿಜಯಪುರ ನಗರದ ಹಿರಿಯ ಪತ್ರಿಕಾ ಏಜೆಂಟರಾದ ಸುರೇಶ ಕಲಾದಗಿ ಮತ್ತು ಮಾಳಪ್ಪ ಕಲಾದಗಿ ಸೇರಿದಂತೆ ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಪತ್ನಿ ಇದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ಉಪಾದ್ಯಕ್ಷರಾಗಿಯು ವಿಜಯಪುರ ಜಿಲ್ಲೆಯ ಅದ್ಯಕ್ಷರಾಗಿದ್ದರು.ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪ್ರಥಮ ರಾಜ್ಯಾಧ್ಯಕ್ಷರಾಗಿ, ಕೃಷಿ ಕೂಲಿಕಾರರನ್ನು ಸಂಘಟಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘವನ್ನು ಆರಂಭಿಕದಿಂದ ಕಟ್ಟಿ ಬೆಳೆಸಿದರು.

ಭೀಮಶೀ ಕಲಾದಗಿಯವರು ದಶಕಗಳ ಕಾಲ ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿದ್ದರು. ವಿಜಯಪುರ ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿದ್ದರು.
ಜೀವನವಿಡಿ ಪಕ್ಷ ಮತ್ತು ದುಡಿಯುವ ಜನತೆಗೆ ಮೀಸಲಿಟ್ಟು ಪೂರ್ಣಾವಧಿ ಕಾರ್ಯಕರ್ತರಾಗಿ ಶ್ರಮಿಸಿದ ಸಮರ ಶೀಲ ನಾಯಕರಾಗಿದ್ದರು.

ವಿಜಯಪುರ ಪ್ರಗತಿಪರ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ರೈತಪರ, ಕಾರ್ಮಿಕ ಪರ, ಮಹಿಳಾಪರ, ನೀರಾವರಿ ಯೋಜನೆಗಳ ಅನುಷ್ಠಾನ ಸಂಬಂಧಿ ಹೋರಾಟ ಸೇರಿದಂತೆ ಜನಪರವಾದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಭೀಮಶಿ ಕಲಾದಗಿ ಅವರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗೌರವ ನೀಡಿ, ತಕ್ಷಣ ಸ್ಪಂದಿಸುತ್ತಿದ್ದರು.

ಕಳೆದ ಒಂದು ವರ್ಷದಿಂದ ವಯೋಸಹಜ ಅನಾರೋಗ್ಯದಿಂದ ಬಳಲಿದ್ದರು. ಭಿಮಶಿ
ಕಲಾದಗಿಯವರ ನಿಧನಕ್ಕೆ ಸಿಪಿಐಎಂ ರಾಜ್ಯ ಸಮಿತಿ, ಕರ್ನಾಟಕ ಪ್ರಾಂತರೈತ ಸಂಘ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ, ಕರ್ನಾಟಕ ಗ್ರಾಮ ಪಂಚಾಯತಿ ನೌಕರರ ಸಂಘ ಸೇರಿದಂತೆ ಅನೇಕ ಜನಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *