ಭೀಕರ ಅತಿವೃಷ್ಟಿ-ಜನಜೀವನ ಅಸ್ತವ್ಯಸ್ತ: ನಾಳೆ ಬೆಳಗಾವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

ಬೆಂಗಳೂರು: ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾನಗರಿ ಬೆಳಗಾವಿಯಲ್ಲಿ ಭೀಕರ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ಉತ್ತರ ಕರ್ನಾಟದಲ್ಲಿ ಮಳೆಯಿಂದಾಗಿ ಪ್ರವಾಹ ಎದುರಾಗಿದೆ ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಳೆ‌ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಮಳೆ ತೀವ್ರತೆಯನ್ನು ಎದುರಿಸುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಇಂದು ಸಹ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಗಳಲ್ಲಿಯೇ ಉಳಿದುಕೊಂಡು ಅಲ್ಲಿಗೆ ಅಗತ್ಯವಿರುವ ನೆರವು ನೀಡುವಂತೆ, ಪರಿಸ್ಥಿತಿ ಅವಲೋಕಿಸುವಂತೆ ಸೂಚಿಸಿದ್ದಾರೆ.

ಇದನ್ನು ಓದಿ: ಮಳೆಯ ಆರ್ಭಟ : ಕೊಡಗಿನಲ್ಲಿ ನಿಲ್ಲದ ಅವಾಂತರ

ಅತಿವೃಷ್ಟಿ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಉಸ್ತುವಾರಿಗಳಿಂದ ಮಳೆ ಹಾನಿ ಪರಿಸ್ಥಿತಿಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯಲಾಗುತ್ತಿದೆ. ಸಚಿವರುಗಳಿಗೆ ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿಯೇ ಇರುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಅಪಾರ ಹಾನಿ

ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಆಸ್ತಿ-ಪಾಸ್ತಿ ನಷ್ಟವಾಗಿದೆ. ಜಿಲ್ಲೆಯಲ್ಲಿ ಆದ ನಷ್ಟಗಳ ಬಗ್ಗೆ ಈಗಾಗಲೇ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲೆಯ 5 ತಾಲ್ಲೂಕುಗಳ 51 ಗ್ರಾಮಗಳು ಪ್ರವಾಹ ಭೀತಿಯಲ್ಲಿವೆ. ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಉತ್ತರ ಕರ್ನಾಟಕ,ಕರಾವಳಿ ಭಾಗಗಳಲ್ಲಿ ಮಳೆ ಅಬ್ಬರ : ಜನಜೀವನ ಅಸ್ತವ್ಯಸ್ತ

ಬೆಳಗಾವಿ ವ್ಯಾಪ್ತಿಯಲ್ಲಿ 36 ಸೇತುವೆಗಳು ಮುಳುಗಡೆಯಾಗಿವೆ. ಬೆಳಗಾವಿ, ಧಾರವಾಡ, ಕಾರವಾರ ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ರಸ್ತೆಗಳು ಹಾನಿಗೀಡಾಗಿವೆ. ಅವುಗಳ ದುರಸ್ತಿಗಾಗಿ 50 ಕೋಟಿ ರೂಪಾಯಿ ಬಿಡುಗಡೆಗೆ ಮನವಿ ಸಲ್ಲಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ ಹಲವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಸಂಪರ್ಕ ಕಳೆದುಕೊಂಡಿವೆ, ನದಿ ಪಾತ್ರದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಗಂಜಿ ಕೇಂದ್ರಗಳಲ್ಲಿ ಸುಮಾರು 2 ಸಾವಿರ ಮಂದಿ ಆಶ್ರಯ ಪಡೆದಿದ್ದಾರೆ. 2 ಎನ್ ಡಿ ಆರ್ ಎಫ್ ತಂಡ, ರಾಜ್ಯ ರಕ್ಷಣಾ ತಂಡ ಪರಿಹಾರ ಕಾರ್ಯಕ್ಕೆ ಧಾವಿಸಿದೆ. ಇದುವರೆಗೆ 224 ಮನೆಗಳಿಗೆ ಹಾನಿಯಾಗಿದ್ದು ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *