ಪಾಟ್ನಾ : ಬಿಹಾರದಲ್ಲಿ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಮುನ್ನಡೆಯಲ್ಲಿ ಎನ್.ಡಿ.ಎ ಹಾಗೂ ಮಹಾಘಟಬಂಧನ್ ಸಮಬಲದ ಹೋರಾಟ ನಡೆಸುತ್ತಿವೆ. ಎರಡು ಮೈತ್ರಿಗಳ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ಆರಂಭಿಕ ಹಂತದ ಫಲಿತಾಂಶ ಮುಂದುವರೆದರೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಾಗಲಿದೆ.
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಸದ್ಯ ಚುನಾವಣೋತ್ತರ ಸಮೀಕ್ಷೆಗಳು ನಿತೀಶ್‌ಕುಮಾರ್ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರ ಕಳೆದುಕೊಳ್ಳಲಿದ್ದು ತೇಜಸ್ವಿ ಯಾಧವ್ ನಾಯಕತ್ವದ ಮಹಾ ಘಟಬಂಧನ್ ಸರಕಾರ ರಚಿಸಲಿದೆ ಎಂದು ಚುನಾವಣೆ ಸಮೀಕ್ಷೆಗಳು ಹೇಳುತ್ತಿರುವ ಬೆನ್ನಲ್ಲೆ ಈಗ ಫಲಿತಾಂಶ ಸಮಬಲದಿಂದ ಕೂಡಿದ್ದು ಎನ್,ಡಿ.ಎ ಮತ್ತು ಮಹಾಘಟಬಂಧನ್ ನಡುವೆ ತುರುಸಿನ ಪೈಪೋಟಿ ಆರಂಭವಾಗಿದೆ. ಇನ್ನು ಕೆಲವು ರಾಜಕೀಯ ಪಂಡಿತರ ಪ್ರಕಾರ ಐಪಿಎಲ್ ಮ್ಯಾಚ್‌ನಂತೆ ಈ ಬಾರಿಯ ಫಲಿತಾಂಶ ತೀವ್ರ ರೋಚಕತೆ ಪಡೆಯಲಿದೆ ಎಂದು ಈ ಫಲಿತಾಂಶವನ್ನು ಇಂದಿನ ಐಪಿಎಲ್ ಫೈನಲ್ ಪಂದ್ಯಕ್ಕೆ ಹೋಲಿಸಿ ಲೆಕ್ಕಾಚಾರ ಹಾಕುತ್ತಿದ್ದಾರೆ. 2008 ರಿಂದ 2012 ರವರೆಗೆ ತೇಜಸ್ವಿ ಯಾದವ್ ಡೆಲ್ಲಿ ಡೇರೆಡೆವಿಲ್ಸ್ ತಂಡದ ಪರ ಆಟಗಾರನಾಗಿದ್ದು ಈಗ ಆ ಚರ್ಚೆ ಮುನ್ನಲೆಗೆ ಬಂದಿದೆ.
ಇದನ್ನು ನೋಡಿ : ವಿರೋಧಿ ಅಲೆಯಲ್ಲಿ ನಿತೀಶ್ – ಮೋದಿ
ಬಿಹಾರದ 243 ಸ್ಥಾನಗಳ ಪೈಕಿ ಎನ್.ಡಿ.ಎ 121 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಮಹಾಘಟಬಂಧನ್ 116 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟಾರೆ ಪಕ್ಷವಾರು ಪ್ರಾಭಲ್ಯದಲ್ಲಿ ಆರ್.ಜೆ.ಡಿ ಮತ್ತು ಬಿಜೆಪಿ ನಡುವೆ ಪುಪೋಟಿ ಹೆಚ್ಚುತ್ತಿದೆ. ಬಿಜೆಪಿ 69 ಕ್ಷೇತ್ರಗಳಲ್ಲಿ, ಆರ್.ಜೆ.ಡಿ 71 ಕ್ಷೇತ್ರಗಳಲ್ಲಿ, ಜೆಡಿಯು 49 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 22 ಕ್ಷೇತ್ರಗಳಲ್ಲಿ, ಎಡರಂಗ 18 ಕ್ಷೇತ್ರಗಳಲ್ಲಿ, ಎಲ್.ಜೆಪಿ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಜೆಡಿಯು ಭಾರಿ ಮುಖಭಂಗವನ್ನು ಅನುಭವಿಸುತ್ತಿದ್ದು ಬಿಜೆಪಿಗಿಂತ ಹಿನ್ನಡೆ ಅನುಭವಿಸಿದೆ. ಚುನಾವಣೆಗಿಂತ ಮೊದಲೆ ಸ್ಥಾನ ಹಂಚಿಕೆ ವಿಚಾರದಲ್ಲಿ ಏರ್ಪಟ್ಟ ಗೊಂದಲದಿಂದಾಗಿ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಬೇಕಾಬಿಟ್ಟೆ ಎಂಬಂತೆ ಚುನಾವಣಾ ಪ್ರಚಾರದಲ್ಲಿ ಎದ್ದು ಕಂಡಿತ್ತು, ಆ ಮೂಲಕ ನಿತೀಶ್ ಕುಮಾರರನ್ನು ಬಿಜೆಪಿ ಕೈ ಬಿಟ್ಟಿತ್ತು, ಈಗ ಬಿಹಾರದ ಮತದಾರರು ಕೂಡಾ ನಿತೀಶ್ ಕುಮಾರರನ್ನು ಕೈ ಬಿಡುವ ಸೂಚನೆಯನ್ನು ನೀಡುತ್ತಿದ್ದಾರೆ. ಕೊವೀಡ್ ಕಾರಣದಿಂದಾಗಿ ಹೆಚ್ಚು ಮತಗಟ್ಟೆಗಳನ್ನು ತೆರೆದ ಕಾರಣ ಪೂರ್ಣ ಪ್ರಮಾಣದ ಫಲಿತಾಂಶ ಸಂಜೆ ವೇಳೆಗೆ ಪ್ರಕಟವಾಗಬಹುದು. ಉಳಿದ ರಾಜ್ಯಗಳ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ.