ಬಿಹಾರ ಚುನಾವಣೆ ಸಮಬಲದ ಪೈಪೋಟಿ

ಮುಖ್ಯಮಂತ್ರಿ ಹುದ್ದೆ ಮೇಲೆ ಬಿಜೆಪಿ, ಆರ್ ಜೆಡಿ, ಜೆಡಿಯು ಕಣ್ಣು

ಬಿಹಾರ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಮಹಾಘಟಬಂಧನ್ ಭಾರೀ ಪೈಪೋಟಿ ನಡುವೆಯೂ ಎನ್.ಡಿ.ಎ ಅಲ್ಪ ಮುನ್ನಡೆ ಸಾಧಿಸಿದೆ. ಬಿಹಾರದಲ್ಲಿ ಎಡರಂಗ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು ಎಡಪಕ್ಷಗಳ ಬಲವನ್ನು ಇಮ್ಮಡಿಗೊಳಿಸಿದೆ.  ಇನ್ನೂ ಇದೇ ವೇಳೆ 56 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ದೇಶಾದ್ಯಂತ ಕೂತೂಹಲ ಮೂಡಿಸಿದ್ದ ಬಿಹಾರ ಚುನಾವಣೆಯಲ್ಲಿ ಎನ್.ಡಿ.ಎ ಮ್ಯಾಜಿಕ್ ನಂಬರ್ ತಲುಪಿದ್ದರೂ ಮುಖ್ಯಮಂತ್ರಿ ಯಾರಾಗಬಹುದು ಎಂಬುದು ಕುತೂಹಲ ಮೂಡಿಸಿದೆ.

ಬಿಹಾರನಲ್ಲಿ ತಡ ರಾತ್ರಿ ಪೂರ್ಣಪ್ರಮಾಣದ ಫಲಿತಾಂಶ ಬಂದಿದ್ದು, 243 ಕ್ಷೇತ್ರಗಳ ಪೈಕಿ ಎನ್.ಡಿ.ಎ 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಮಾಹಾಘಟಬಂಧನ್ 110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎನ್.ಡಿ.ಎ ನ ಅಲ್ಪ ಮುನ್ನಡೆಯ ಗೆಲುವು ಬಿಜೆಪಿ ಮತ್ತು ಜೆಡಿಯು ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಈ ಬಾರಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ತೇಜಸ್ವಿ ಯಾಧವ್ ಹಾಗೂ ಮಹಾಘಟಬಂಧನ್  ಕಾರ್ಯಕರ್ತರಿಗೆ ಅಲ್ಪ ನಿರಾಸೆಯಾಗಿದೆ.  ಇವೆಲ್ಲದರ ನಡುವೆ ಎಡಪಕ್ಷಗಳು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದು ಸ್ಪರ್ಧಿಸಿದ್ದ  29 ಕ್ಷೇತ್ರಗಳಲ್ಲಿ 16 ಕ್ಷೇತ್ರಗಳಲ್ಲಿ ಭಾರೀ ಜಯಗಳಿಸಿವೆ.

ಕಳೆದ ಚುನಾವಣಿಯಲ್ಲಿ ಸಿಪಿಐಎಂಎಲ್ ಮೂರು ಕ್ಷೇತ್ರಗಳನ್ನು ಗೆದ್ದಿತ್ತು ಈ ಬಾರಿ 12 ಕ್ಷೇತ್ರಗಳಲ್ಲಿ ಸಿಪಿಐಎಂಎಲ್ ಗೆಲುವು ಸಾಧಿಸಿದೆ. ಸಿಪಿಐಎಂ 02, ಸಿಪಿಐ 02 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ತಡ ರಾತ್ರಿ ವರೆಗೆ ನಡೆದೆ ಎಣಿಕೆ ಕಾರ್ಯ: ಈ ಬಾರಿ ಶೇ 63ರಷ್ಟು ಎಲೆಕ್ಟ್ರಾನಿಕ್ ಮತ ಯಂತ್ರಗಳ ಸಂಖ್ಯೆ ಏರಿಕೆಯಾದ ಕಾರಣ, ಇಂದು ತಡರಾತ್ರಿಯವರೆಗೂ ಮತ ಎಣಿಕೆ ಕಾರ್ಯ ಮುಂದುವರಿಯಲಿದೆ ಎಂದು ಚುನಾವಣಾ  ಉಪ ಆಯುಕ್ತರಾದ  ಸುದೀಪ್ ಜೈನ್  ತಿಳಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸುವುದಕ್ಕಾಗಿ ಮತದಾನ ಕೇಂದ್ರಗಳ ಸಂಖ್ಯೆಯನ್ನು 65 ಸಾವಿರದಿಂದ 1.06 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಹೀಗಾಗಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು.

ಬಿಹಾರದಲ್ಲಿ ಎನ್.ಡಿ.ಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೇರುವುದು ಬಹುತೇಕ ನಿಚ್ಚಳವಾಗಿದೆ. ಆದರೆ ನಿತೀಶ್ ಕುಮಾರ್  ಮತ್ತೆ ಮುಖ್ಯಮಂತ್ರಿಯಾಗಲಿದ್ದಾರಾ? ಇಲ್ಲಿಯವರೆಗೆ ಈ ಪ್ರಶ್ನೆ ಹುಟ್ಟಿಕೊಂಡಿರಲಿಲ್ಲ. ಕಾರಣ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಯು ಅತೀ ದೊಡ್ಡ ಪಕ್ಷವಾಗಿತ್ತು; ಬಿಜೆಪಿ ಎರಡನೇ ಸ್ಥಾನದಲ್ಲಿತ್ತು.

ಆದರೆ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಬಿಜೆಪಿ ಹಿರಿಯ ಮಿತ್ರಪಕ್ಷದ ಸ್ಥಾನಕ್ಕೆ ಬಡ್ತಿ ಪಡೆದಿದ್ದರೆ, ಜೆಡಿಯು ಕಿರಿಯ ಜತೆಗಾರನಾಗಿದೆ. ಇದರಿಂದ ಮತ್ತೆ ಸಿಎಂ ಕುರ್ಚಿ ಏರುವ ನಿತೀಶ್‌ ಕನಸು ಪೂರ್ತಿಯಾಗಿ ಬಿಜೆಪಿ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

ಎನ್.ಡಿ.ಎ ಮೈತ್ರಿ ಕೂಟದಲ್ಲಿ ಬಿಜೆಪಿ 74 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದರೆ, ಜೆಡಿಯು 43 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನೂ ಮಹಾಘಟಬಂಧನ್ ಮೈತ್ರಿಯಲ್ಲಿ ಆರ್.ಜೆ.ಡಿ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.  ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು,  ಎಡಪಕ್ಷಗಳು 16  ಸ್ಥಾನದಲ್ಲಿ ಗೆಲ್ಲುವ ಮೂಲಕ ಮಹಾಘಟಬಂಧನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.

“ಮೋದಿಯವರ ಇಮೇಜ್‌ ಈ ಚುನಾವಣೆಯಲ್ಲಿ ನಮ್ಮನ್ನು ರಕ್ಷಿಸಿತು,” ಎಂದು ಬಿಜೆಪಿ ಹಿರಿಯ ನಾಯಕ ಕೈಲಾಶ್‌‌ ವಿಜಯವರ್ಗೀಯ ಹೇಳಿದ್ದಾರೆ.  “ಸಂಜೆ ಹೊತ್ತಿಗೆ ನಾವು ಸರಕಾರ ರಚನೆ ಮತ್ತು ನಾಯಕತ್ವದ ಬಗ್ಗೆ ನಿರ್ಧರಿಸುತ್ತೇವೆ,” ಎಂಬ ವಿಜಯವರ್ಗಿಯವರ  ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ.  ಈ ಹೇಳಿಕೆ ಮೂಲಕ ಬಿಜೆಪಿ ಮುಖ್ಯಮಂತ್ರಿ ಗಾದಿ ಮೇಲೆ ಹೊಸ ವ್ಯಕ್ತಿಯೊಬ್ಬರನ್ನು ಕೂರಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದು ಸ್ಪಷ್ಟವಾಗಿದೆ.  ನಿತಿಶ್ ಕುಮಾರ್ ರವರು ಮುಖ್ಯಮಂತ್ರಿಯಾಗದೆ ಹೋದಲ್ಲಿ ಅವರು ಎನ್.ಡಿ.ಎ ತೊರೆಯುವ ಸಾಧ್ಯತೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು, ಗುಜರಾತಿನಲ್ಲಿ ಜನತಾ ಪಕ್ಷವನ್ನು ನಾಶ ಮಾಡಿದಂತೆ ಬಿಹಾರದಲ್ಲಿ ಜೆಡಿಯುವನ್ನು ನಾಶಪಡಿಸುತ್ತಿದೆ. ಇದರ ಅರಿವು ಈಗ ನಿತೀಶ್ ಕುಮಾರ್ ರವರಿಗೆ ಆಗಿದೆ. ಹಾಗಾಗಿ ಅವರನ್ನು ಮುಖ್ಯಮಂತ್ರಿ ಮಾಡದೆ ಹೋದಲ್ಲಿ ಅವರು ಎನ್.ಡಿ.ಎ ಮೈತ್ರಿಕೂಟವನ್ನು ತೊರೆಯಬಹುದು. ಆಗ ಮಹಾಘಟಬಂಧನ್ ಸರಕಾರ ರಚನೆಗೆ ಮುಂದಾಗಬಹುದು ಎಂದು ರಾಜಕೀಯ ಲೆಕ್ಕಾಚಾರಗಳು ಬಿಹಾರದಲ್ಲಿ ನಡೆಯುತ್ತಿವೆ.

ಇನ್ನೂ 11 ರಾಜ್ಯಗಳ 59 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ.  ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಜಾರ್ಖಂಡ್ ಸೇರಿದಂತೆ 11 ರಾಜ್ಯಗಳ 59 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಮಧ್ಯ ಪ್ರದೇಶದಲ್ಲಿ ತೆರವಾಗಿರುವ 28 ಕ್ಷೇತ್ರಗಳಲ್ಲಿ ಬಿಜೆಪಿ 18 ಕಡೆ ಮುನ್ನಡೆ ಹೊಂದಿದೆ. ಸರ್ಕಾರವನ್ನು ಉಳಿಸಿಕೊಳ್ಳುವಷ್ಟು ಅವಶ್ಯವಿರುವ ಎಂಟರ ಗಡಿಯನ್ನು ಬಿಜೆಪಿ ಸುಲಭವಾಗಿ ದಾಟಿದೆ. ಕಾಂಗ್ರೆಸ್ ಇಲ್ಲಿ 8 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. 28 ಕಾಂಗ್ರೆಸ್ ಶಾಸಕರು ಜ್ಯೋತಿರಾದಿತ್ಯ ಸಿಂಧ್ಯಾ ಅವರ ನೇತೃತ್ವದಲ್ಲಿ ರಾಜೀನಾಮೆ ನೀಡಿ ಕಮಲನಾಥ್ ಸರ್ಕಾರ ಪತನವಾಗಿ ಶಿವರಾಜ್ ಸಿಂಗ್ ಚೌವ್ಹಾಣ್ ಸರ್ಕಾರ ರಚನೆಯಾದ ಮೇಲೆ 28 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ರಾಜ್ಯದಲ್ಲಿ ಗೆಲುವಿನತ್ತ ದಾಪುಗಾಲು ಹಾಕಿದ್ದು ಚೌವ್ಹಾಣ್ ಸರ್ಕಾರ ಸೇಫ್ ಆಗಿದೆ.

ಗುಜರಾತ್, ಉತ್ತರ ಪ್ರದೇಶದಲ್ಲೂ ಬಿಜೆಪಿ ಉಪಚುನಾವಣೆ ಫಲಿತಾಂಶದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಕಾಂಗ್ರೆಸ್ ಇಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಸಾಧ್ಯವಾಗಿಲ್ಲ.  ಗುಜರಾತ್‍ನ 8 ಕ್ಷೇತ್ರದಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ಹಾದಿಯತ್ತ ಸಾಗಿದ್ದಾರೆ. ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆಯಲಿದ್ದಾರೆ. ಉತ್ತರ ಪ್ರದೇಶದ 7 ಕ್ಷೇತ್ರಗಳಲ್ಲಿ ಬಿಜೆಪಿ ಐದು ಕಡೆ ಮುನ್ನಡೆ ಪಡೆದಿದೆ. ಕಾಂಗ್ರೆಸ್‍ನ ಇಬ್ಬರು ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ತೆಲಂಗಾಣದ ದುಬ್ಬಕ್ಕ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಹೊಂದಿರುವುದು ಗಮನಾರ್ಹ. ಇನ್ನು, ಬಿಹಾರದ ಏಕೈಕ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಯು ಮುನ್ನಡೆ ಸಾಧಿಸಿದೆ. ಕರ್ನಾಟಕದ ತುಮಕೂರಿನ ಶಿರಾ ಮತ್ತು ಬೆಂಗಳೂರಿನ ಆರ್‍ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ.

ಆರ್.ಆರ್. ನಗರದಲ್ಲಿ ಮುನಿರತ್ನ ರವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಸೆಟೆಪ್ ಬಾಕ್ಸ್ ಅವರನ್ನು ಕೈಹಿಡಿದಿದೆ. ಮತದಾರರಿಗೆ ಸೆಟೆಪ್ ಬಾಕ್ಸ್ ಹಂಚಿರುವ ಆರೋಪವನ್ನು ಮುನಿರತ್ನರವರು ಎದುರಿಸುತ್ತಿದ್ದಾರೆ. ಪಕ್ಷದ ವರ್ಚಸ್ಸು ಇಲ್ಲದಿರುವ ಶಿರಾದಲ್ಲಿ ಬಿಜೆಪಿ ಗೆದ್ದಿರುವುದು ಅಚ್ಚರಿಯ ಸಂಗತಿಯಾಗಿದೆ. ಯಡಿಯೂರಪ್ಪನವರ ಮಗ ವಿಜಯೇಂದ್ರ ಶಿರಾದಲ್ಲಿ ಮೊಕ್ಕಾಂ ಹೂಡಿ ವ್ಯಾಪಕ ಪ್ರಚಾರ ನಡೆಸಿದ್ದರು. ಇನ್ನೂ ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಎದುರಿಸಿದ ಮೊದಲ ಚುನಾವಣೆಯಾಗಿದ್ದು ಡಿಕೆಶಿಯವರ ತಂತ್ರ ಫಲ ನೀಡದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.

ಬಿಹಾರ ಚುನಾವಣೆಯ ಫಲಿತಾಂಶ ಪೂರ್ಣ ಪ್ರಮಾಣದಲ್ಲಿ ಪ್ರಕಟವಾಗಿದ್ದು,  ಬಿಹಾರ ಗದ್ದುಗೆ ಯಾರಿಗೆ ಒಲಿಯಬಹುದು ಎಂಬ ಕೂತುಹಲ ಎಲ್ಲರಲ್ಲೂ ಮೂಡಿದೆ. ಮೇಲನೋಟಕ್ಕೆ ಎನ್.ಡಿ.ಎ ಗೆಲುವು ಸಾಧಿಸಿದ್ದರೂ, ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಕಣ್ಣು ಹಾಕುತ್ತಾ ಅಥವಾ ಕೊಟ್ಟ ಮಾತಿನಂತೆ ನಿತೀಶ್ ರವರನ್ನು ಮುಖ್ಯಮಂತ್ರಿ ಮಾಡುತ್ತಾ ಕಾದು ನೋಡಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *