- ನೀರಿನಲ್ಲಿ ಕಣ್ಮರೆಯಾದ ಹೋದ ವೃದ್ದ
- ಪೊಲೀಸ್ ಬಡಾವಣೆ ಸೇರಿ ಬಹುತೇಕ ಬಡಾವಣೆಗಳು ಜಲಾವೃತ
- ಧರೆಗುರುಳಿದ ಮರಗಳಿಗೆ ಲೆಕ್ಕವಿಲ್ಲ
ಮೈಸೂರು: ಭಾನುವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಸಾಂಸ್ಕೃತಿಕ ನಗರಿ ಮೈಸೂರು ತತ್ತರವಾಗಿದೆ.
ಮಳೆಯಿಂದ ಭೂಮಿ ಸಂಪೂರ್ಣ ತೇವವಾಗಿ ಧರಾಶಾಹಿಯಾಗುತ್ತಿರುವ ಮರಗಳಿಗೆ ಲೆಕ್ಕವೇ ಇಲ್ಲದಿರುವುದು ಒಂದೆಡೆಯಾದರೆ, ಮೋರಿ ಬಳಿ ನಿಂತಿದ್ದ ವೃದ್ದರೊಬ್ಬರು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಮತ್ತೊಂದೆಡೆ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪೊಲೀಸ್ ಬಡಾವಣೆ ಜಲಾವೃತವಾಗಿದ್ದು, ಕೆಲ ರಸ್ತೆಗಳಿಗೆ ಸಾರ್ವಜನಿಕ ಸಂಪರ್ಕ ಕಡಿತವಾಗಿದೆ.
ವೃದ್ದ ನಾಪತ್ತೆ: ಸಂಜೆಯಿಂದ ತಡರಾತ್ರಿಯವರೆಗೆ ಎಡೆಬಿಡದೆ ಸುರಿದ ಭಾರೀ ಮಳೆಗೆ ಮೈಸೂರಿನ ಸಿದ್ದಾರ್ಥ ನಗರದ ದೊಡ್ಡ ಮೋರಿಯೊಂದರಲ್ಲಿ ವೃದ್ದ ವ್ಯಕ್ತಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ಮೋರಿಯಲ್ಲಿ ಕೊಚ್ಚಿಕೊಂಡು ಹೋದವರು ಸಿದ್ದಾರ್ಥನಗರ ವಿನಯಮಾರ್ಗ 2ನೇ ಕ್ರಾಸ್ ನಿವಾಸಿ ಎಂ.ಜೆ. ಚಂದ್ರೇಗೌಡ(60) ಎಂದು ಹೇಳಲಾಗಿದೆ. ನಿನ್ನೆ ಸಂಜೆ 6 ಗಂಟೆಯ ಸುಮಾರಿಗೆ ಆರಂಭವಾದ ಧಾರಾಕಾರ ಮಳೆ ಸೋಮವಾರ ಬೆಳಿಗ್ಗೆಯವರೆಗೂ ಸುರಿಯಿತು. ಧಾರಾಕಾರ ಮಳೆಗೆ ಮೈಸೂರು ನಗರದ ಮೋರಿಗಳಲ್ಲಿ ನೀರು ನದಿಯಂತೆ ಹರಿಯಲಾರಂಭಿಸಿತ್ತು.
ರಾತ್ರಿ 11 ಗಂಟೆ ಸುಮಾರಿಗೆ ಸಿದ್ದಾರ್ಥ ನಗರದ ವಿನಯಮಾರ್ಗ 2ನೇ ಕ್ರಾಸ್ ಮನೆ ಸಂಖ್ಯೆ 1109ರ ಕಾಂಪೌಂಡ್ ಒಳಗೂ ನೀರು ನುಗ್ಗಿತ್ತು. ಮನೆಮಂದಿ ನೀರನ್ನು ಹೊರಹಾಕುವ ಪ್ರಯತ್ನದಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಮನೆ ಮುಂದಿರುವ ಸಣ್ಣ ಸೇತುವೆ ಬಳಿ ನಿಂತು ದೊಡ್ಡ ಮೋರಿಯಲ್ಲಿ ತುಂಬಿ ಹರಿಯುತ್ತಿದ್ದ ನೀರನ್ನು ನೋಡುತ್ತಿದ್ದ ಚಂದ್ರೇಗೌಡ ಎಂಬವರು ಕಾಲು ಜಾರಿ ಮೋರಿಗೆ ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು, ಸ್ಥಳಕ್ಕೆ ದೌಡಾಯಿಸಿದ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಮೋರಿಯಲ್ಲಿ ಹುಡುಕಾಟ ನಡೆಸಿದರು. ಮೋರಿಯು ಕಾರಂಜಿಕೆರೆಗೆ ಸಂಪರ್ಕ ಹೊಂದಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಮಳೆಯ ನಡುವೆಯೂ ಮೋರಿಯುದ್ದಕ್ಕೂ ಕಾರಂಜಿಕೆರೆಯವರೆಗೆ ಹುಡುಕಾಟ ನಡೆಸಿದರಾದರೂ ಇದುವರೆಗೂ ಚಂದ್ರೇಗೌಡ ಅವರು ಪತ್ತೆಯಾಗಿಲ್ಲ.
ಪೊಲೀಸ್ ಬಡಾವಣೆ ಜಲಾವೃತ : ಸಾಂಸ್ಕೃತಿಕ ನಗರಿ ಮೈಸೂರಿಗೆ ಕಿರೀಟ ಪ್ರಾಯದಂತಿರುವ ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಪೊಲೀಸ್ ಬಡಾವಣೆ ಅಕ್ಷರಶಃ ಜಲಾವೃತವಾಗಿದೆ.
ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಇಡೀ ರಾತ್ರಿ ಜಾಗರಣೆ ಮಾಡುವಂತಾಗಿದೆ.
ಮಾತ್ರವಲ್ಲ, ಬಡಾವಣೆಗೆ ತಾಕಿಕೊಂಡಂತೆ 19 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ತಿಪ್ಪಯ್ಯನ ಕೆರೆ ತುಂಬಿ ತುಳುಕುತ್ತಿದೆ. ಪರಿಣಾಮ, ಕೆರೆಯ ಎರಡು ಕಡೆಗಳಲ್ಲಿರುವ ಕೋಡಿ ಮೇಲೆ ಸುಮಾರು ಎರಡು ಅಡಿ ಎತ್ತರದಲ್ಲಿ ನೀರು ಹೊರಭಾಗಕ್ಕೆ ಹರಿಯುತ್ತಿದೆ.
ಕೆರೆಯಿಂದ ಹೊರಹೋದ ನೀರು ಒಂದು ಕಡೆ ರಿಂಗ್ ರಸ್ತೆ ಮೇಲೆ ಹರಿಯುತ್ತಿದ್ದರೆ, ಮತ್ತೊಂದೆಡೆ ಇದೀಗ ತಾನೇ ನಿರ್ಮಾಣ ಮಾಡಲಾಗುತ್ತಿದ್ದ ಸರ್ವೀಸ್ ರಸ್ತೆ ಮೇಲೆ ನೀರು ರಭಸವಾಗಿ ಹರಿದ ಪರಿಣಾಮ ಇಡೀ ಸರ್ವೀಸ್ ರಸ್ತೆ ಸಂಪೂರ್ಣ ಹಾಳಾಗಿದೆ.
ಕೆರೆಯ ಮತ್ತೊಂದು ಕೋಡಿ ಭಾಗದಲ್ಲೂ ನಿರೀಕ್ಷೆಗೂ ಮೀರಿ ನೀರು ಹರಿದಿದ್ದು, ಪೊಲೀಸ್ ಬಡಾವಣೆಯ ಕೆಲ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಬಡಾವಣೆಯ ನಿವಾಸಿಗಳು ಪರದಾಡುವಂತಾಗಿದೆ.
ಇವೆಲ್ಲವುಗಳ ನಡುವೆ ನೀರಿನಿಂದ ಪ್ರಾಣ ರಕ್ಷಿಸಿಕೊಳ್ಳುವ ಸಲುವಾಗಿ ಹಾವು, ಚೇಳು, ಮುಂಗುಸಿಯಂತಹ ಪ್ರಾಣಿಗಳು ಬಡಾವಣೆಯಲ್ಲಿರುವ ಬಹುತೇಕ ಮನೆಗಳಿಗೆ ಹೊಕ್ಕುತ್ತಿರುವುದು, ನಿವಾಸಿಗಳ ನೆಮ್ಮದಿ ಕೆಡಿಸಿದೆ.
ಕುಸಿದ ಪಂಚಗವಿ ಮಠ: ಭಾನುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಎರಡು ಶತಮಾನಗಳ ಇತಿಹಾಸವಿರುವ ಪಂಚಗವಿ ಮಠದ ಕಟ್ಟಡದ ಒಂದು ಭಾಗ ಕುಸಿದಿದೆ. ಮಠದ ಕಟ್ಟಡ ಈಗಾಗಲೇ ಶಿಥಿಲಾವಸ್ಥೆಯಲ್ಲಿತ್ತು. ಭಾನುವಾರ ಸುರಿದ ಮಳೆಗೆ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ.
ಮಠದಲ್ಲಿ 20 ವಿದ್ಯಾರ್ಥಿಗಳು ವಾಸ್ತವ್ಯವಿದ್ದರು. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಠದ ಕಟ್ಟಡ ಸರಿಯಾದ ನಿರ್ವಹಣೆ ಇಲ್ಲದ ಹಿನ್ನೆಲೆಯಲ್ಲಿ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಮಕ್ಕಳ ಹಿತದೃಷ್ಟಿಯಿಂದ ಕಟ್ಟಡದ ದುರಸ್ತಿ ಕಾರ್ಯ ಆಗಬೇಕಾಗಿದೆ.
ನಲುಗಿದ ಮೈಸೂರು: ಮಳೆಯ ಅಬ್ಬರಕ್ಕೆ ಮೈಸೂರು ನಗರದ ವಿವಿಧ ಬಡಾವಣೆಗಳು ನಲುಗಿ ಹೋಗಿವೆ. ಸಾತಗಳ್ಳಿ, ಅಜೀಜ್ಸೇಠ್ ನಗರ, ಮಧುವನ, ಜನತಾನಗರ, ದಟ್ಟಗಳ್ಳಿ, ಗುಂಡೂರಾವ್ ನಗರ, ಬನ್ನಿಮಂಟಪ ಹುಡ್ಕೋ, ಗಿರಿದರ್ಶಿನಿ ಬಡಾವಣೆ, ಆಲನಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿರುವ ಕುರಿತು ವರದಿಯಾಗಿದೆ.
ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಮತ್ತು ಗುಡುಗು-ಮಿಂಚಿನ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆನಂದ ನಗರ ಆಶ್ರಯ ಬಡಾವಣೆಯ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಲಾಗಿದೆ.
ಶಾಸಕ ಜಿ.ಟಿ.ದೇವೇಗೌಡ ಭೇಟಿ ಪರಿಶೀಲನೆ:
ಚಾಮುಂಡೇಶ್ವರಿ ಕ್ಷೇತ್ರ ಭಾಗದ ವಿಜಯನಗರ ೧, ೨ ನೇ ಹಂತದ ಕೆಲವಡೆ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸೋನವಾರ ಬೆಳಿಗ್ಗೆ ಶಾಸಕ ಜಿ.ಟಿ.ದೇವೇಗೌಡ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಒತ್ತುವರಿಯಾಗಿರುವ ರಾಜಕಾಲುವೆ ತೆರವುಗೊಳಿಸಿ ನೀರು ಸುಲಲಿತವಾಗಿ ಹರಿಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಗರಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.