ರಾಮನಗರ: ರಾಮನಗರ ಜಿಲ್ಲೆಯಾದ್ಯಂತ ಎಡಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದೆ. ಇದರಿಂದ ಜನ ಜೀವನ ಅಸ್ತವ್ಯಸ್ಥವಾಗಿದೆ. ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಅವರು ರಾಮನಗರ ಹಾಗೂ ಚನ್ನಪಟ್ಟಣ ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು(ಆಗಸ್ಟ್ 29) ರಜೆ ಘೋಷಣೆ ಮಾಡಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ವಾಹನ ಸವಾರರ ಪರದಾಟವಾಗಿದ್ದು, ಕೆಲವು ಕಡೆಗಳಲ್ಲಿ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದೆ. ಅಲ್ಲದೇ ರಾಮನಗರ ಸಮೀಪದ ಸಂಗಬಸವನ ದೊಡ್ಡಿ ಬಳಿ ವಾಹನ ಮುಳುಗಡೆಯಾಗಿರುವ ಹಿನ್ನೆಲೆ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.
ಭಾರೀ ಮಳೆಯಿಂದಾಗಿ ರಾಮನಗರದಲ್ಲಿರುವ ಆರ್ಕೇಶ್ವರ ಕಾಲೋನಿ ಸಂಪೂರ್ಣ ಜಲಾವೃತವಾಗಿದ್ದು, ಹಲವು ಮನೆಗಳು ಮಳೆಯಿಂದ ಮುಳುಗಡೆಯಾಗಿದೆ. ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳು, ಬೈಕ್, ಕಾರು ಸಂಪೂರ್ಣ ಜಲಾವೃತವಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಾಗ್ಗೆ ನೀರು ನುಗ್ಗುತ್ತಲೇ ಇವೆ. ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದೆ.
ಬಿಡದಿ ಪುರಸಭೆ ವ್ಯಾಪ್ತಿಯ ತೊರೆದೊಡ್ಡಿ ಬಳಿಯ ನಲ್ಲಿಗುಡ್ಡ ಕೆರೆ ಕೋಡಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿಯೆ ಇರುವ ದೊಡ್ಡ ಆಲದಮರವೊಂದು ನೆಲಕ್ಕುರುಳಿದೆ. ಇದರಿಂದಾಗಿ ಆಲದಮರ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಬೋರೆಗೌಡ (50) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭಾರಿ ಮಳೆಯಿಂದ ಸಂತ್ರಸ್ತರಿಗೆ ನೆರವಾಗಲು ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ. ಮಳೆಯ ಮಧ್ಯದಲ್ಲಿ ಸಿಲುಕಿದ ನಾಗರಿಕರನ್ನು ರಕ್ಷಣೆಗೆ ಮುಂದಾಗಿದ್ದಾರೆ. ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದ್ದು, ಆಡಳಿತದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಜೆಸಿಬಿ ಮೂಲಕ ರಸ್ತೆ ಸರಿಪಡಿಸಿ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿದ್ದಾರೆ.
ರಾಮನಗರ ರೈಲ್ವೆ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದು, ರೈಲ್ವೆ ನಿಲ್ದಾಣದ ತುಂಬಾ ಮಳೆ ನೀರು ಆವರಿಸಿಕೊಂಡಿದೆ. ರೈಲು ಹಳಿಯೂ ಕಾಣದಷ್ಟು ನೀರು ತುಂಬಿರುವ ಹಿನ್ನೆಲೆ ಪ್ರತಿನಿತ್ಯ ಬೆಂಗಳೂರು ಮೈಸೂರಿಗೆ ಓಡಾಡುವ ನೂರಾರು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚನ್ನಪ್ಪಟ್ಟಣದ ರೇಷ್ಮೆ ಮಾರುಕಟ್ಟೆಯ ಮುಂಭಾಗ ನೀರು ನುಗ್ಗಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚನ್ನಪಟ್ಟಣದ ತಟ್ಟಿಗೆರೆ ಬಡಾವಣೆಯಲ್ಲಿ ಮಳೆ ನೀರು ಆವರಿಸಿಕೊಂಡಿದ್ದು ಜನರ ಸ್ಥಿತಿ ಚಿಂತೆಗೂಡು ಮಾಡಿದೆ. ಇಲ್ಲಿಯವರೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡದ ಕಾರಣ ಇಲ್ಲಿನ ಜನರು ಆಕ್ರೋಶಗೊಂಡಿದ್ದಾರೆ.
ಚನ್ನಪಟ್ಟಣ ತಾಲೂಕಿನ ಅಪಾಯದ ಅಂಚಿನಲ್ಲಿರುವ ತಿಟ್ಟಮಾರನಹಳ್ಳಿ ಗ್ರಾಮದ ಎರಡು ಶತಮಾನಗಳ ಹಳೆಯ ಸೇತುವೆ ಮುಳುಗಡೆಯಾಗಿದೆ. ಕೆರೆಯ ಅಂಚಿನಲ್ಲಿರುವ ಮನೆಯು ಕೂಡ ಕುಸಿಯುತ್ತಿದೆ.
ಸತತ ಮಳೆಯಿಂದಾಗಿ ಜಿಲ್ಲೆಯ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಮಂಚನಬೆಲೆ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ. ಇದರಿಂದಾಗಿ ಕೈಲಾಂಚ ಹೋಬಳಿಯಲ್ಲಿ ಕೆಳ ಹಂತದ ಸೇತುವೆಗಳು ಮುಳುಗಿದೆ.
ರಾಮಕೃಷ್ಣ ಆಸ್ಪತ್ರೆಯ ನೆಲಮಹಡಿ ಸಂಪೂರ್ಣ ಜಲಾವೃತವಾಗಿದ್ದು, ಹೊರರೋಗಿಗಳ ವಿಭಾಗ ಸಂಪೂರ್ಣ ನೀರಿನಿಂದ ಆವರಿಸಿಕೊಂಡಿದೆ. ಹೀಗಾಗಿ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ ವೈದ್ಯಕೀಯ ಉಪಕರಣಗಳು ಸಂಪೂರ್ಣ ಹಾನಿಯಾಗಿದೆ ಸದ್ಯ ಆಸ್ಪತ್ರೆಯ ಸಿಬ್ಬಂದಿ ವೈದ್ಯಕೀಯ ಸಲಕರಣೆಗಳನ್ನು ನೀರಿನಿಂದ ಹೊರತೆಗೆಯುತ್ತಿದ್ದಾರೆ.
ಹಾನಿ ಪೀಡಿತ ಪ್ರದೇಶಗಳಿಗೆ ಹೆಚ್ ಡಿ ಕುಮಾರಸ್ವಾಮಿ ಭೇಟಿ
ರಾಮನಗರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಈಗಾಗಲೇ ಮಾಜಿ ಹೆಚ್ ಡಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಇನ್ನು ಪರಿಸ್ಥಿತಿ ಪರಿಶೀಲನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಅಶ್ವತ್ಥ್ ನಾರಾಯಣ ಸ್ಥಳಕ್ಕೆ ಆಗಮಿಸಲಿದ್ದಾರೆ.
ಕಂಟೋಲ್ ರೂಂ ಸ್ಥಾಪನೆ
ಅತಿವೃಷ್ಟಿಯಿಂದ ಸಂಭವಿಸುವ ಪ್ರಾಣ ಹಾನಿ, ಮನೆ ಹಾನಿ ಮತ್ತು ಬೆಳೆ ಹಾನಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಕಂಟ್ರೋಲ್ ರೂಂ 24/7 ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ದೂರುಗಳನ್ನು ಯಾವ ಸಮಯದಲ್ಲಾದರು ನೀಡಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಕಂಟ್ರೋಲ್ ರೂಂ, ದೂರು ಸ್ವೀಕಾರ ಕೇಂದ್ರದ ದೂರವಾಣಿ ಸಂಖ್ಯೆ: 080-27275913. ವಾಟ್ಸಾಪ್ ನಂಬರ್: 9113077476 ಗೆ ದೂರು ಸಲ್ಲಿಸಬಹುದಾಗಿದೆ.