ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಕಳೆದ ಎರಡು ದಿನಗಳಿಂದ ಬೆಂಗಳೂರು ನಗರದಲ್ಲಿ ಮಳೆ ಸುರಿಯುತ್ತಿದ್ದು, ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಕೆಲವೆಡೆ ಮರಗಳು ಧರೆಗುರುಳಿರುವುದು ಬೆಳಕಿಗೆ ಬಂದಿದೆ. ಮಳೆಗೆ ನಗರದಲ್ಲಿ ಹಲವು ರಸ್ತೆಗಳು ನದಿಯಂತಾಗಿ ವಾಹನ ಸವಾರರು ಪರದಾಡಿದ ದೃಶ್ಯ ಸಾಮಾನ್ಯವಾಗಿತ್ತು.
50ಕ್ಕೂ ಹೆಚ್ಚು ಮನೆಗಳಿಗೆ ಹಾನಿ:
ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತ 50ಕ್ಕೂ ಹೆಚ್ಚು ಮನೆಗಳಿಗೆ ತಡರಾತ್ರಿ ಮಳೆ ನೀರು ನುಗ್ಗಿದ ಪರಿಣಾಮ ಜನರು ಸಂಕಷ್ಟ ಎದುರಿಸುವಂತಾಗಿದೆ. ಇದರಿಂದಾಗಿ ದಿನಬಳಕೆ ವಸ್ತುಗಳು ಹಾಳಾಗಿವೆ. ಭಾರಿ ಮಳೆಗೆ ಚರಂಡಿ ಹೊರಗಡೆ ಬಂದು ಕಾರುಗಳು ದ್ವಿಚಕ್ರ ವಾಹನಗಳು ಕೊಚ್ಚಿ ಹೋಗಿರುವುದು ಸಹ ಬೆಳಕಿಗೆ ಬಂದಿದೆ.
ಇದನ್ನು ಓದಿ: ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ: 23ಕ್ಕೇರಿದ ಸಾವಿನ ಸಂಖ್ಯೆ, ನೂರಾರು ಮಂದಿ ನಾಪತ್ತೆ
ಕಾಮಾಕ್ಯ ಬಡಾವಣೆಯಲ್ಲಿ ನೀರಿನಲ್ಲಿ ಕಾರು ಬೈಕ್ಗಳು ರಸ್ತೆಯಲ್ಲಿ, ತಗ್ಗು ಗುಂಡಿಗಳಲ್ಲಿ ಬಂದು ನಿಂತಿವೆ. ಕಾರಿನ ಮೇಲೆ ಮತ್ತೊಂದು ಕಾರು ಬಂದು ನಿಂತಿರುವುದು ಸಹ ಕಂಡುಬಂದಿದೆ.
ಉತ್ತರಹಳ್ಳಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಜನರು ಅಹೋರಾತ್ರಿ ಜಾಗರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಯಲ್ಲಿ ಹಲವು ವಸ್ತುಗಳು ನೀರು ಪಾಲಾಗಿವೆ. ಚಾಮರಾಜಪೇಟೆಯಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿದೆ. ವಾಹನಗಳಿಗೆ ತಡರಾತ್ರಿಯ ಮಳೆಯಿಂದ ಸಾಕಷ್ಟು ಹಾನಿಯಾಗಿದೆ.
ಇದನ್ನು ಓದಿ: ರಾಜ್ಯದಲ್ಲಿ ಭಾರೀ ಮಳೆ : ಶಾಲಾ ಕಾಲೇಜುಗಳಿಗೆ ರಜೆ, ಬೀದಿಗೆ ಬಿದ್ದ ರೈತರು
ಉತ್ತರಹಳ್ಳಿಯ ಹೇಮಾವತಿ ನೀರು ಸರಬರಾಜು ಬಡಾವಣೆಯಲ್ಲಿ ನೀರು ನುಗ್ಗಿ ಹತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದ ಕಾರಣ ನೀರನ್ನು ತಡೆ ಹಿಡಿದಿದ್ದ ಹಿನ್ನೆಲೆಯಲ್ಲಿ ನೀರು ನುಗ್ಗಿದ್ದು ಮನೆಯಲ್ಲಿದ್ದ ಸರಕು ಸರಂಜಾಮುಗಳು ನೀರಲ್ಲಿ ಮುಳುಗಿದೆ.
ಬಹುತೇಕ ಕಡೆಗಳಲ್ಲಿ ಮಳೆ:
ರಾಜಾಜಿ ನಗರ, ವಿದ್ಯಾರಣ್ಯಪುರ, ಜಯನಗರ, ಜೆ.ಪಿ.ನಗರ, ಶೇಷಾದ್ರಿಪುರ, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಸರ್ಕಲ್, ಶಿವಾಜಿ ನಗರ, ಎಂ.ಜಿ.ರೋಡ್, ಶಾಂತಿ ನಗರ, ಹಲಸೂರು, ಲಕ್ಕಸಂದ್ರ, ಚಾಮರಾಜಪೇಟೆ, ಬಸವನಗುಡಿ, ವಿಜಯ ನಗರ, ಗೋವಿಂದರಾಜ ನಗರ, ಚಂದ್ರಾಲೇ ಔಟ್, ಆರ್.ಟಿ.ನಗರ, ದೊಮ್ಮಲೂರು, ಆರ್.ಆರ್.ನಗರ, ಹೆಮ್ಮಿಗೆಪುರ, ಪೀಣ್ಯ, ಯಶವಂತಪುರ, ಉತ್ತರಹಳ್ಳಿ, ಸಂಪಂಗಿ ರಾಮನಗರದಲ್ಲಿ ಮಳೆಯ ಆರ್ಭಟ ಹೆಚ್ಚಿತ್ತು.
ವಾಡಿಕೆಯಂತೆ ಮಳೆ: ಹವಾಮಾನ ಇಲಾಖೆ
ಈ ಬಾರಿಯ ನೈರುತ್ಯ ಮುಂಗಾರು ವಾಡಿಕೆಯಂತೆ ಇರಲಿದ್ದು, ಉತ್ತರ ಭಾರತದ ಕೆಲವೆಡೆ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಹೇಳಿದೆ. ದೇಶದ ಮಧ್ಯ ಭಾಗ, ಹಿಮಾಲಯದ ತಪ್ಪಲಿನಲ್ಲಿ ಹಾಗೂ ವಾಯವ್ಯ ಭಾಗದಲ್ಲಿ ಸಹ ವಾಡಿಕೆಗಿಂತ ಹೆಚ್ಚು ಮಳೆ ಬೀಳುವುದು. ದೇಶದ ಈಶಾನ್ಯ ಹಾಗೂ ವಾಯವ್ಯ ಭಾಗದ ಕೆಲ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನು ಓದಿ: ಚೆನ್ನೈಯಲ್ಲಿ ಭಾರಿ ಮಳೆ, ಹಲವೆಡೆ ನೆರೆ: ಶಾಲೆ–ಕಾಲೇಜುಗಳಿಗೆ ರಜೆ, ವಿಮಾನ ಹಾರಾಟ ಸ್ಥಗಿತ
1971–2020ವರೆಗಿನ ದೀರ್ಘಾವಧಿ ಸರಾಸರಿ (ಎಲ್‌ಪಿಎ) ಮಳೆ 87 ಸೆಂ.ಮೀ. ಇದೆ. ಈ ಬಾರಿ ಈ ಎಲ್‌ಪಿಎ ದ ಶೇ 96ರಿಂದ 104ರಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಈ ಮೊದಲು 1961ರಿಂದ2010ರ ವರೆಗಿನ ಎಲ್‌ಪಿಎ 88 ಸೆಂ.ಮೀ. ಅನ್ನು ಮಾನದಂಡವಾಗಿ ಇಲಾಖೆ ಪರಿಗಣಿಸುತ್ತಿತ್ತು.