ಭಾರತೀಯ ಸಂಸ್ಕೃತಿ ಉತ್ಸವ : ಜನರಿಲ್ಲದೆ ಖಾಲಿ ಖಾಲಿ

ಕಲಬುರ್ಗಿ: ಸೇಡಂನಲ್ಲಿ ನಡೆಯುತ್ತಿರುವ ಆರ್‌ಎಸ್ಎಸ್‌ನ ಮಹತ್ವಾಕಾಂಕ್ಷೆಯ ಭಾರತೀಯ ಸಂಸ್ಕೃತಿ ಉತ್ಸವ ಜನರನ್ನು ಸೆಳೆಯಲು ವಿಫಲವಾಗಿ ಮುಗ್ಗರಿಸಿದ್ದೂ, ಪ್ರಗತಿಪರ, ಬಸವಪರ ಮತ್ತು ದಲಿತ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದ 9 ದಿನಗಳ ಉತ್ಸವದಲ್ಲಿ 25 ಲಕ್ಷ ಜನರನ್ನು ಭಾಗವಹಿಸಲಿದ್ದಾರೆ ಎಂದು ಆಯೋಜಕರು ಹೇಳಿದ್ದರು.

ಉತ್ಸವಕ್ಕೆ ಪ್ರತಿದಿನ ಹೋಗುತ್ತಿರುವ ಪತ್ರಕರ್ತರೊಬ್ಬರು ಮೊದಲ 6 ದಿನಗಳನ್ನೂ ಸೇರಿಸಿದರೂ ಅಲ್ಲಿಗೆ ಹೋಗಿರುವ ಸಂಖ್ಯೆ ಒಂದೆರಡು ಲಕ್ಷ ದಾಟುವುದಿಲ್ಲ ಎಂದರು. ಸಂಘ ಪರಿವಾರದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಮತ್ತು ಕಾರ್ಯಕರ್ತರನ್ನು ಬಿಟ್ಟರೆ ಸಾರ್ವಜನಿಕರು ಬೆರಳಣಿಕೆಯಷ್ಟು ಮಾತ್ರ ಬರುತ್ತಿದ್ದಾರೆ, ಎಂದು ಹೇಳಿದರು.

ಜನರ ಕೊರತೆ ಎದ್ದು ಕಾಣಿಸುತ್ತಿರುವುದು ಪ್ರತಿ ದಿನ ನಡೆಯುತ್ತಿರುವ ವಿಚಾರ ಸಂಕಿರಣಗಳಲ್ಲಿ. ಘೋಷ್ಠಿಗಳನ್ನು ನಡೆಸಲು 70,000 ಜನರನ್ನು ಕೂರಿಸಬಹುದಾದ ಸಭಾಂಗಣ ನಿರ್ಮಿಸಲಾಗಿದೆ, ಆದರೆ ಕೆಲವು ಗೋಷ್ಠಿಗಳಲ್ಲಿ 70 ಜನರನ್ನೂ ಸೇರಿಸಿವುದು ಕಷ್ಟವಾಗಿದೆ. ಇದು ಸಮಸ್ಯೆಯ ಗಂಭೀರತೆ, ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’: ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ

ಒಂದು ಗೋಷ್ಠಿಯಲ್ಲಿ ಮಾತನಾಡಿದ ಚಿಂತಕರು ಇಷ್ಟು ನೀರಸ ಪ್ರತಿಕ್ರಿಯೆ ಬರುತ್ತದೆ ಎಂದು ಗೊತ್ತಿದ್ದರೆ ನೂರಾರು ಕಿಲೋಮೀಟರು ದೂರದಿಂದ ಬರುತ್ತಲೇ ಇರುತ್ತಿರಲಿಲ್ಲ ಎಂದು ಬಸವ ಮೀಡಿಯಾಗೆ ಹೇಳಿದರು. ಇದು ಆರೆಸ್ಸೆಸ್ ಕಾರ್ಯಕ್ರಮವಾಗಿದ್ದರಿಂದ ಜನ ಬರುತ್ತಾರೆ ಅನ್ನೋ ನಂಬಿಕೆಯಿತ್ತು. ಆದರೆ ವೇದಿಕೆಯ ಮುಂದಿದ್ದ ವಿಐಪಿ ವಿಭಾಗವೂ ತುಂಬಲಿಲ್ಲ ಎಂದರು.

ಪ್ರದರ್ಶನಗಳಲ್ಲಿ ಕೆಲವು ಶಾಲಾ ಮಕ್ಕಳು ಕಾಣಿಸುತ್ತಾರೆ. ಸ್ವಲ್ಪ ಕಾದರೆ ಅಲ್ಲೊಬ್ಬ ಇಲ್ಲೊಬ್ಬ ಸಂದರ್ಶಕರನ್ನು ನೋಡಬಹುದು. ಒಟ್ಟಾರೆ ಬಿಕೋ ಎನ್ನುತ್ತಿದೆ, ಎಂದು ಸೇಡಂನ ನಿವಾಸಿಯೊಬ್ಬರು ಹೇಳಿದರು.

ವಿಶೇಷ ಕಾರ್ಯಕ್ರಮಗಳಿಗೆ ಆಯೋಜಕರು ಶ್ರಮವಹಿಸಿ ಜನ ಸೇರಿಸಿದರೆ ಜನ ತುಂಬಿದ ಹಾಗೆ ಕಾಣುತ್ತದೆ. ರಮೇಶ್ ಅರವಿಂದ ಬಂದಾಗ ಜನವಿದ್ದರು, ಕೈ ತುತ್ತು ಕಾರ್ಯಕ್ರಮದಲ್ಲಿ ಜನವಿದ್ದರು. ಇಲ್ಲವೆಂದರೆ ಇಲ್ಲಿ ಖಾಲಿ ಕುರ್ಚಿಗಳ ಸಾಮ್ರಾಜ್ಯ, ಎಂದರು. ಪ್ರಸಿದ್ಧ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಜನರಿಲ್ಲದಿರುವುದು ನೋವಿನ ಸಂಗತಿ ಎಂದರು.

ಕಾರ್ಯಕ್ರಮದ ಮೊದಲನೇ ದಿನ ಒಂದು ಲಕ್ಷ ತಾಯಿಯರಿಂದ ತಮ್ಮ ಮಕ್ಕಳಿಗೆ ಕೈತುತ್ತು ಹಾಕಿಸಿ ಗಿನ್ನೆಸ್ ದಾಖಲೆ ಸೃಷ್ಟಿ ಮಾಡುವ ಉದ್ದೇಶವಿದೆ ಎಂದು ಆಯೋಜಕರು ಬಹಳ ಪ್ರಚಾರ ಮಾಡಿದ್ದರು. ಪ್ರಚಾರದ ಸಮಯದಲ್ಲಿ ಹಿರಿಯ ಸಂಘ ಪರಿವಾರದ ನಾಯಕರೊಬ್ಬರು ಬರುವ ತಾಯಿಯಂದಿರ ಸಂಖ್ಯೆ ಎರಡು ಲಕ್ಷ ಮುಟ್ಟಬಹುದು ಎಂದು ಪತ್ರಿಕಾ ಹೇಳಿಕೆಯನ್ನೂ ಕೊಟ್ಟಿದ್ದರು.

ಆದರೆ ಕೈತುತ್ತು ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರ ಜನರಿದ್ದಿರಬಹುದು ಎಂದು ಅಲ್ಲಿದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಅದರಲ್ಲಿ ತಮ್ಮ ಮಕ್ಕಳಿಗೆ ಕೈ ತುತ್ತು ನೀಡುತ್ತಿದ್ದ ತಾಯಿಯಂದಿರ ಸಂಖ್ಯೆ ಕಡಿಮೆಯಿತ್ತು. ಬಹಳಷ್ಟು ಕಡೆ ಶಾಲಾ ಮಕ್ಕಳನ್ನು ಕೂರಿಸಿ ಮಹಿಳೆಯರು ಊಟ ಬಡಿಸುತ್ತಿದ್ದುದ್ದು ಕಾಣಿಸಿತು.

ಸ್ಥಳೀಯ ಯು ಟ್ಯೂಬ್ ಚಾನೆಲ್ ನಡೆಸುವ ಒಬ್ಬರು ಲಕ್ಷ ಕೈತುತ್ತು ಕಾರ್ಯಕ್ರಮದಲ್ಲಿದ್ದ ಹುಡುಗನನ್ನು ಮಾತನಾಡಿಸಿದಾಗ ಅವನು ಹೇಳಿದ್ದು: “ಇಲ್ಲಿ ಬರೀ ಬೋರು.”

ವ್ಯಾಪಾರಸ್ಥರಿಗೆ ನಿರಾಸೆ

ಪ್ರಚಾರ ನೋಡಿ ಮಳಿಗೆಗೆ ಹತ್ತು ಸಾವಿರ ರುಪಾಯಿ ಬಾಡಿಗೆ ತೆತ್ತು ಅತೀವ ನಿರೀಕ್ಷೆಯಿಂದ ಹಲವಾರು ಜಿಲ್ಲೆಗಳಿಂದ ಬಂದ ವ್ಯಾಪಾರಸ್ಥರಿಗೆ ಬಹಳ ನಿರಾಸೆಯುಂಟಾಗಿದೆ. ನಿರೀಕ್ಷಿತ ವ್ಯಾಪಾರ ಇಲ್ಲದೆ ವ್ಯಾಪಾರಸ್ಥರು ಹಣೆಗೆ ಕೈ ಹಚ್ಚಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ, ಎಂದು ಮಾದ್ಯಮಗಳು ವರದಿ ಮಾಡಿವೆ.

ದಿನಕ್ಕೆ ಸಾವಿರ ರುಪಾಯಿ ವ್ಯಾಪಾರ ಆಗುತ್ತಿಲ್ಲ ಎಂದು ಚನ್ನಪಟ್ಟಣದ ಗೊಂಬೆ ಮಾರಾಟ ಮಳಿಗೆಯ ರಾಜು ಹೇಳಿದ್ದಾರೆ. ಮಳಿಗೆಯ ಬಾಡಿಗೆ ಜೊತೆಗೆ ಸಾಗಾಣಿಕೆ ವೆಚ್ಚವೂ ಹಿಂದೆ ಬಾರದ ಆತಂಕ ಇವರನ್ನು ಕಾಡುತ್ತಿದೆ.

ವರ್ಷಗಳ ತಯಾರಿ

ಕೆಲವು ದಿನಗಳ ಹಿಂದೆ ಬಸವ ಮೀಡಿಯಾದ ಜೊತೆ ಮಾತನಾಡಿದ ಆಯೋಜಕರೊಬ್ಬರು ಭಾರತೀಯ ಸಂಸ್ಕೃತಿ ಉತ್ಸವದ ಹಿಂದೆ ಬಹಳ ವರ್ಷಗಳ ಪ್ರಯತ್ನವಿದೆ ಎಂದು ಹೇಳಿದ್ದರು.

ಕಳೆದ ಒಂದು ವರ್ಷದಿಂದ 240 ಎಕರೆ ಪ್ರದೇಶದಲ್ಲಿ ಸರಕಾರದ ಯಾವುದೇ ನೆರವಿಲ್ಲದೆ ತಯಾರಿ ನಡೆದಿದೆ ಎಂದು ಹೇಳಿದ್ದರು. 16 ಜಿಲ್ಲೆಗಳಲ್ಲಿ ಸಂಚಾಲಕರನ್ನು ನೇಮಿಸಿ ಬಹಳ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೆಳೆಯಲಾಗುವುದು ಎಂದು ವಿಶ್ವಾಸದಿಂದ ಮಾತನಾಡಿದ್ದರು.

ಆರೆಸ್ಸೆಸ್ ಗೆ ಭಾರತೀಯ ಸಂಸ್ಕೃತಿ ಉತ್ಸವ ಇಷ್ಟೊಂದು ಮಹತ್ವದ ಕಾರ್ಯವಾಗಲು ಒಂದು ದೊಡ್ಡ ಕಾರಣವಿತ್ತು, ಎಂದು ಸೌಹಾರ್ದ ಕರ್ನಾಟಕದ ಕಾರ್ಯಕರ್ತರೊಬ್ಬರು ಹೇಳಿದರು. ಕಳೆದ ಎರಡು ಚುನಾವಣೆಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಎಲ್ಲರೂ ಬೆಚ್ಚಿಬೀಳುವಂತಹ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿ ಒಂದು ಸಂಚಲನ ಮೂಡಿಸುವ ರಾಜಕೀಯ ಉದ್ದೇಶವಿತ್ತು.

ಕಲ್ಯಾಣ ಕರ್ನಾಟಕ ಐತಿಹಾಸಿಕವಾಗಿ ಉತ್ತರ ಭಾರತೀಯರಿಗೆ ದಕ್ಷಿಣ ಭಾರತದ ಹೆಬ್ಬಾಗಿಲು. ಸಂಸ್ಕೃತಿ ಉತ್ಸವದ ನೆಪದಲ್ಲಿ ಇಲ್ಲಿರೋ ಸೂಫಿ-ಶರಣ ಪರಂಪರೆಯ ಬೇರು ಅಲುಗಾಡಿಸುವುದು ಮತ್ತೊಂದು ಉದ್ಧೇಶ. ಇವೆರಡಕ್ಕೂ ಇಲ್ಲಿ ಹಿನ್ನಡೆಯಾಗಿದೆ, ಎಂದರು.

ನೆಲ ಕಚ್ಚಲು ಕಾರಣ

ಭಾರತೀಯ ಸಂಸ್ಕೃತಿ ಉತ್ಸವ ವಿಫಲವಾಗಿರುವುದರಿಂದ ಸಂಘ ಪರಿವಾರದಲ್ಲಿ ದಿಗ್ಭ್ರಮೆ ಬೆರೆತ ಗೊಂದಲ ಕಾಣಿಸುತ್ತಿದೆ. ಅತಿಯಾದ ವಿಶ್ವಾಸ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ನೀರಸವಾದ ಕಾರ್ಯಕ್ರಮಗಳು, ಪಟ್ಟಣದಿಂದ ದೂರವಿರುವುದು, ಆಂತರಿಕ ಕಲಹ, ಸರಿಯಾದ ನಿರ್ವಹಣೆ ಇಲ್ಲದಿರುವುದು ಇವೆಲ್ಲಾ ಕೇಳಿಸುತ್ತಿರುವ ಕಾರಣಗಳು.

“ನಮಗೆ ಮೊದಲು ನಮ್ಮ ಕೆಲಸದ ಮೇಲೆ ಗಮನವಿರುತ್ತಿತ್ತು. ಈಗ ಇರೋ ಗಮನವೆಲ್ಲಾ ಹಣದ ಮೇಲೆ,” ಎಂದು ಸಂಘ ಪರಿವಾರದ ಪ್ರಮುಖರೊಬ್ಬರು ಹೇಳಿದರು.

ಕೆಲವರು ಇದು ಬಸವರಾಜ ಪಾಟೀಲ ಸೇಡಂ ಅವರ ವೈಫಲ್ಯ ಎನ್ನುತ್ತಿದ್ದಾರೆ. ಕೆಲವರು ಮೋದಿ, ಅಮಿತ್ ಶಾ ಇದನ್ನು ಬೆಂಬಲಿಸಲಿಲ್ಲ ಎನ್ನುತ್ತಿದ್ದಾರೆ. ರಾಜ್ಯ ಸರಕಾರದ ಅಸಹಕಾರವನ್ನೂ ಕೆಲವರು ಹೊಣೆ ಮಾಡಿದ್ದಾರೆ.

ಜಿಲ್ಲೆಯ ಮಾಜಿ ಬಿಜೆಪಿ ಶಾಸಕರೊಬ್ಬರು ಸರಕಾರದ ಬೆಂಬಲವಿಲ್ಲದಿದ್ದರೆ ಇಂತಹ ದೊಡ್ಡ ಕಾರ್ಯಕ್ರಮವನ್ನು ಮಾಡಲು ಆರೆಸ್ಸೆಸ್ ಅಂತಹ ಸಂಘಟನೆಗೂ ಸಾಧ್ಯವಿಲ್ಲ ಎನ್ನುವುದು ಇಲ್ಲಿನ ದೊಡ್ಡ ಪಾಠ ಎಂದರು.

ಮುಂದಿನ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬೇಕಿರುವವರಿಗೆ ಜನರನ್ನು ಕರೆತರುವ ಜವಾಬ್ದಾರಿ ನೀಡಲಾಗಿತ್ತು. ಅವರೂ ಆಸಕ್ತಿ ತೋರದಿರುವುದು ಇಂದು ಬಿಜೆಪಿ ಟಿಕೆಟ್ ಯಾರಿಗೂ ಬೇಡವಾಗಿದೆ ಎಂದು ಸೂಚಿಸುತ್ತದೆ ಎಂದರು.

ಲಿಂಗಾಯತರು ಕೈ ಕೊಟ್ಟರೆ?

ಸೌಹಾರ್ದ ಕರ್ನಾಟಕದ ಕಲಬುರ್ಗಿ ಚಲೋ ಅಭಿಯಾನ ಕೂಡ ದೊಡ್ಡ ಪೆಟ್ಟು ಕೊಟ್ಟಿತು. ಅವರು ಮತ್ತೆ ಮತ್ತೆ ಇದು ಆರೆಸ್ಸೆಸ್ ಉತ್ಸವ ಅಂತ ಕೊಟ್ಟ ಸಂದೇಶ ಜನರು ಇದನ್ನು ಅನುಮಾನದಿಂದ ನೋಡುವ ಹಾಗೆ ಮಾಡಿತು ಎಂದರು.ಉತ್ಸವದ ಆಯೋಜಕರು ಲಿಂಗಾಯತರನ್ನು ಸೆಳೆಯಲು ದೊಡ್ಡ ಕಾರ್ಯತಂತ್ರವನ್ನು ರೂಪಿಸಿದ್ದರು. ಪ್ರಚಾರಕ್ಕೆ ಕಳಿಸಿದ ವಾಹನಗಳಿಗೆ ‘ಬಸವ ರಥ’ ಎಂದು ಹೆಸರಿಟ್ಟರು. ಅವು ಸಾಧ್ಯವಾದೆಡೆ ಬೇರೆ ಬೇರೆ ತಾಲೂಕುಗಳಲ್ಲಿ ಲಿಂಗಾಯತ ಮಠಗಳಿಂದ ಚಾಲನೆ ಪಡೆದವು. ಅಕ್ಕ ಗಂಗಾಂಬಿಕೆ, ಭಾಲ್ಕಿ ಶ್ರೀಗಳಂತವರಿಗೆ ವಿಶೇಷ ಅಹ್ವಾನ ನೀಡಿ ಕರೆಸಿಕೊಳ್ಳಲಾಯಿತು.

ಉತ್ಸವಕ್ಕೆ ಮುಂಚೆ ಸೇಡಂನಲ್ಲಿ ನೂರಾರು ಮಹಿಳೆಯರಿಂದ ‘ಬಸವ ಬುತ್ತಿ’ ಮೆರವಣಿಗೆಯನ್ನೂ ನಡೆಸಲಾಯಿತು. ಉತ್ಸವದಲ್ಲಿ ಬಸವಣ್ಣನವರ, ಕೂಡಲ ಸಂಗಮದ ದೊಡ್ಡ ಶಿಲ್ಪಗಳನ್ನೂ ನಿರ್ಮಿಸಲಾಯಿತು.

ಇಷ್ಟೆಲ್ಲಾ ಪ್ರಯತ್ನಗಳು ನಡೆದರೂ ಲಿಂಗಾಯತ ಸಮುದಾಯ ಸ್ಪಂದಿಸದಿರುವುದರಿಂದ ಉತ್ಸವಕ್ಕೆ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ. ‘ಲಿಂಗಾಯತರು ಹೆಚ್ಚಿರುವ ಹಳ್ಳಿಗಳಿಗೆ ಉಚಿತ ವಿಶೇಷ ಬಸ್ಸುಗಳನ್ನು ಕಳಿಸಿದರೂ ಯಾರೂ ಬರುತ್ತಿಲ್ಲ,” ಎಂದು ಪತ್ರಕರ್ತರೊಬ್ಬರು ಹೇಳಿದರು.

ಇದನ್ನೂ ನೋಡಿ: ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’ ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ

Donate Janashakthi Media

Leave a Reply

Your email address will not be published. Required fields are marked *