ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ರಾಷ್ಟ್ರೀಯ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸೆಪ್ಟೆಂಬರ್ 27 ರಂದು ಭಾರತ ಬಂದ್‌ಗೆ ಕರೆ ನೀಡಿದೆ. ಇದಕ್ಕೆ ರಾಜ್ಯದಲ್ಲಿಯೂ ಕೆಲ ರೈತ ಪರ ಮತ್ತು ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳು, ನೌಕರರ ಒಕ್ಕೂಟಗಳು ಬೆಂಬಲ ವ್ಯಕ್ತಪಡಿಸಿದ್ದು, ಬಂದ್ ದಿನ ಬಸ್, ಆಟೋ, ಕ್ಯಾಬ್ ಮತ್ತು ಅಗತ್ಯ ವಸ್ತುಗಳ ಸೇವೆಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸ ಆಗುವ ಸಾಧ್ಯತೆ ಇದೆ.
ಸಾವಿರಾರು ರೈತರು ಬೀದಿಗಳಿದು ಪ್ರತಿಭಟನೆ
ರೈತಪರ ಸಂಘಟನೆಗಳು ಪ್ರತಿಭಟನೆ, ಧರಣಿ, ಮೆರವಣಿಗೆ ನಡೆಸಲಿವೆ. ಬೆಂಗಳೂರು ಮತ್ತು ರಾಜ್ಯದ ಇತರೆ ಪ್ರಮುಖ ಜಿಲ್ಲೆಗಳಲ್ಲಿಯೂ ಸಂಘಟನೆಗಳು ಮೆರವಣಿಗೆ ಹಮ್ಮಿಕೊಂಡಿದ್ದು, ಸಹಜವಾಗಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.
ಭಾರತ ಬಂದ್ ದಿನದ ಪ್ರತಿಭಟನೆ ಯಾವ ಸ್ವರೂಪದಲ್ಲಿ ಇರಬೇಕು ಎಂಬುದರ ಬಗ್ಗೆ ನಿರ್ಧಾರಗಳನ್ನು ಜಂಟಿ ಸಂಘಟನೆಗಳು ತೆಗೆದುಕೊಂಡಿವೆ. ಅಲ್ಲದೆ, ಬ್ಯಾಂಕ್ ನೌಕರರು, ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರ ಸಂಘಟನೆಗಳ ನೆರವನ್ನೂ ಕೋರಿದ್ದು, ಇದರಿಂದ ಜನಸಾಮಾನ್ಯರಿಗೆ ಪ್ರತಿಭಟನೆಯ ಉದ್ದೇಶ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಏನಿರುತ್ತದೆ? ಏನಿಲ್ಲ?:
ಬಂದ್ ಹಿನ್ನೆಲೆಯಲ್ಲಿ ಹಾಲು, ತರಕಾರಿ, ಮೆಡಿಕಲ್ ಹೀಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಸಾರಿಗೆ ಸಿಬ್ಬಂದಿ, ಆಟೋ, ಕ್ಯಾಬ್ ಚಾಲಕರು ಇದುವರೆಗೆ ಬೆಂಬಲ ವ್ಯಕ್ತಪಡಿಸಿಲ್ಲವಾದರೂ ಅಂದು ಪ್ರತಿಭಟನೆಯ ಸ್ವರೂಪದ ಮೇಲೆ ಸ್ವಲ್ಪಮಟ್ಟಿನ ವ್ಯತ್ಯಯ ಆಗುವ ಸಾಧ್ಯತೆಯಿದೆ.
ಇದನ್ನು ಓದಿ: ಸುಪ್ರೀಂ ನೇಮಿಸಿದ ಸಮಿತಿ ಕಾಯ್ದೆ ರದ್ದತಿ ಬಗ್ಗೆ ಪ್ರಸ್ತಾಪಿಸಿಲ್ಲ-ರೈತ ಹೋರಾಟ ಮುಂದುವರೆದಿದೆ: ಕೋಡಿಹಳ್ಳಿ ಚಂದ್ರಶೇಖರ್
ಮತ್ತೊಂದೆಡೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳ ಕಾರ್ಯಚಟುವಟಿಕಯಲ್ಲಿ ವ್ಯತ್ಯಯ ಆಗಬಹುದು. ಉಳಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಆದರೆ, ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇರಬಹುದು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಂಚಾರ ಇದ್ದು, ನೈತಿಕ ಬೆಂಬಲ ಮಾತ್ರ ನೀಡುತ್ತಿವೆ.
ರೈತರ ಪ್ರತಿಭಟನೆಗೆ ನಮ್ಮ ನೈತಿಕ ಬೆಂಬಲ ನೀಡಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್ ) ಶಾಲೆಗಳಿಗೆ ರಜೆ ನೀಡುವಂತಹ ಪರಿಸ್ಥಿತಿ ಇಲ್ಲ. ಮಕ್ಕಳು ನಿರಂತರ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪೂರ್ಣ ತರಗತಿ ನಡೆಸಬೇಕು ಎಂದು ಸರ್ಕಾರವೂ ಸೂಚನೆ ನೀಡಿರುವುದರಿಂದ ಶಾಲೆಗಳು ಎಂದಿನಂತೆ ನಡೆಯಲಿವೆ. ಶಿಕ್ಷಕರು ಮಾತ್ರ ಹಸಿರು ಬಟ್ಟೆ ಧರಿಸಿ ಬೆಂಬಲ ನೀಡಲಿದ್ದಾರೆ.
ಬೆಂಗಳೂರು ನಗರದ ಕಲಾಸಿಪಾಳ್ಯ, ಯಶವಂತಪುರ, ದಾಸನಪುರ ಮಾರ್ಕೆಟ್ ಬಂದ್ ಆಗುವ ಸಾಧ್ಯತೆ ಇದೆ. ಬಂದ್ ದಿನ ವಾಹನ ಸ್ಥಗಿತವಿಲ್ಲ ಎಂದಿನಂತೆ ಸಂಚಾರ ವ್ಯವಸ್ಥೆ ಇರಲಿದೆ ಎನ್ನಲಾಗುತ್ತಿದೆ. ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಕೆಲವು ಕಡೆಗಳಲ್ಲಿ ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂಬುದು ಹೋಟೆಲ್ ಮಾಲೀಕರ ಸಂಘದ ಅಭಿಪ್ರಾಯವಾಗಿದೆ.
ಇದನ್ನು ಓದಿ: ಸೆ.27 ಭಾರತ್ ಬಂದ್: ರೈತರಿಗೆ ಬೆಂಬಲ ಘೋಷಿಸಿ ದೇಶದೆಲ್ಲೆಡೆ ವ್ಯಾಪಕ ಬೆಂಬಲ
ಮಾಲ್ ಅಸೋಸಿಯೇಷನ್ ನವರು ಬಂದ್ ಬಗ್ಗೆ ಇನ್ನು ಸ್ಪಷ್ಟತೆ ನೀಡಿಲ್ಲ. ತುಂಬಾ ಕಾಲ ಬಂದ್ ಆಗಿದ್ದ ಮಾಲ್ ನಷ್ಟದ ಕಾರಣವೊಡ್ಡಿ ಬಂದ್ ದಿನ ಎಂದಿನಂತೆ ಕಾರ್ಯಾನಿರ್ವಹಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿಯಿದೆ.
ಬಂದ್ ಸಂದರ್ಭ ಪ್ರತಿಭಟನೆಗಳ ಬಿಸಿ
ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ಕರೆ ನೀಡಲಾಗಿರುವ ಭಾರತ್ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬಂದ್ ಯಶಸ್ವಿಯಾಗಲಿದೆ. ಕೃಷಿ ನೀತಿಗಳು ರೈತರನ್ನು ಉತ್ತೇಜಿಸುವ ಬದಲು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ತಮಗೆ ಉತ್ತಮ ದರ ಸಿಗುವ ಕಡೆ ಮಾರಾಟ ಮಾಡುವುದಕ್ಕೂ ಅವಕಾಶ ಸಿಗುತ್ತಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ರೈತರನ್ನು ಸಾಲಬಾಧೆಗೆ ದೂಡಿದೆ. ಇದೆಲ್ಲದರ ವಿರುದ್ಧ ಪ್ರತಿಭಟನೆ ಭಾಗವಾಗಿ ಬಂದ್ ಹಮ್ಮಿಕೊಳ್ಳಲಾಗಿದೆ ಎಂಬುದು ಸಂಘಟಕರ ಹೇಳಿಕೆಯಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದೆ. ಈಗ ರೈತರ ಭಾರತ್ ಬಂದ್‌ಗೆ ಬೆಂಬಲ ನೀಡುವ ಮೂಲಕ ಕೇಂದ್ರದ ವಿರುದ್ಧದ ಹೋರಾಟ ತೀವ್ರಗೊಂಡಿದೆ.
ರೈತರು ಮತ್ತು ಕಾರ್ಮಿಕರ ಹೋರಾಟಗಳ ಮೇಲೆ ಕೇಂದ್ರೀಕರಿಸಿರುವ ಹೋರಾಟವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಆಡಳಿತದ “ದಿವಾಳಿತನ ನೀತಿಗಳ” ವಿರುದ್ಧ ಮೊಳಗಿದೆ.