ಸುಕೋಮಲ್ ಸೆನ್ ಮೇರುಕೃತಿ “ಭಾರತದ ಕಾರ್ಮಿಕ ಚಳುವಳಿಯ ಚರಿತ್ರೆ (1830-2010)” ಕುಂದಾಪುರದಲ್ಲಿ ಬಿಡುಗಡೆ

ಕಾರ್ಮಿಕ ವರ್ಗದ ಚರಿತ್ರೆಯ ಕುರಿತು ಮೇರುಕೃತಿಯೆಂದು ಹೆಸರಾದ ಸುಕೋಮಲ ಸೆನ್ ಅವರ “Working Class of India : History of Emergence and Movement, 1830-2010”, ಕುಂದಾಪುರದಲ್ಲಿ ನಡೆಯಲಿರುವ 15ನೆಯ ಸಿಐಟಿಯು ರಾಜ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬ್ರಿಟಿಷರ ವಸಾಹತುಶಾಹಿ ಆಕ್ರಮಣದೊಂದಿಗೆ ಬಂಡವಾಳಶಾಹಿ ವ್ಯವಸ್ಥೆ ಕಾಲಿಟ್ಟಿತು. ಬಾರತದ ಕಾರ್ಮಿಕ ವರ್ಗದ ಉದಯ ಅದರೊಂದಿಗೆ ಆಯಿತು. ಸ್ವಾತಂತ್ರ್ಯ ಚಳುವಳಿಯಲ್ಲೂ ಸ್ವಾತಂತ್ರ್ಯಾ ನಂತರವೂ ದೇಶದ ಆರ್ಥಿಕ-ರಾಜಕೀಯ ಬೆಳವಣಿಗೆಯಲ್ಲಿ ಅದು ಪ್ರಮುಖ ಪಾತ್ರ ವಹಿಸಿದೆ. ಬಾರತದ ಕಾರ್ಮಿಕ ವರ್ಗದ ಉದಯ, ಬೆಳವಣಿಗೆ  ಮತ್ತು ಚಳುವಳಿಯ ಕುರಿತ ಚರಿತ್ರೆ ಭಾರತದ ಚರಿತ್ರೆಯ ಪ್ರಮುಖ ಭಾಗ.  ಆಧರೆ ಇದು ಅತ್ಯಂತ ನಿರ್ಲಕ್ಷಿತ ಭಾಗ. ಈ ಕುರಿತು ಪುಸ್ತಕಗಳು ಬಹಳ ಕಡಿಮೆ. ಈ ಕುರಿತ ಪುಸ್ತಕಗಳಲ್ಲಿ ಪ್ರಮುಖವಾಗಿರುವುದು ಸುಕೋಮಲ ಸೆನ್ ಅವರ “Working Class of India : History of Emergence and Movement, 1830-2010”.  ಈ ಪುಸ್ತಕದ ಮೊದಲ ಆವೃತ್ತಿ 1830-1970 ಅವಧಿಯ ಚರಿತ್ರೆಯನ್ನು ಒಳಗೊಂಡಿದ್ದು 1977ರಲ್ಲಿ ಪ್ರಕಟವಾಯಿತು. ಇದು ಕಾರ್ಮಿಕ ವರ್ಗದ ಚರಿತ್ರೆಯ ಕುರಿತು ಮೇರುಕೃತಿಯೆಂದು ಹೆಸರಾಗಿದ್ದು ಇದರ ಎರಡನೆಯ ಆವೃತ್ತಿ 2013ರಲ್ಲಿ ಪ್ರಕಟವಾಯಿತು.

ಈ ಮೇರುಕೃತಿ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಅನುವಾದಗೊಂಡಿದೆ. ಕಾರ್ಮಿಕ ವರ್ಗದ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮತ್ತು ಲೇಖಕರೂ ಅನುವಾದಕರೂ ಆದ ಸಿ.ಆರ್.ಶಾನಭಾಗ ಮತ್ತು ವೇದರಾಜ ಎನ್.ಕೆ ಅವರು ಇದೀಗ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಂಗಳೂರಿನ ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ¼ ಕ್ರೌನ್ ಸೈಜಿನಲ್ಲಿ ಮುದ್ರಿತವಾದ ಸುಮಾರು 700 ಪುಟಗಳ ಈ ಬೃಹತ್ ಕೃತಿ ನವೆಂಬರ್ 15ರಂದು ಬಿಡುಗಡೆಯಾಗಲಿದೆ. ದೇಶದ ಪ್ರಮುಖ ಕೇಂದ್ರೀಯ ಟ್ರೇಡ್ ಯೂನಿಯನುಗಳಲ್ಲಿ ಒಂದಾದ ಸಿಐಟಿಯು ನ ಕುಂದಾಪುರದಲ್ಲಿ ನಡೆಯಲಿರುವ 15ನೆಯ ರಾಜ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ. ಸಾದಾಪ್ರತಿಗೆ ರೂ. 1200 ಮತ್ತು ಉತ್ತಮ ಪ್ರತಿಗೆ ರೂ. 1500 ಮುಖಬೆಲೆಯ ಈ ಪುಸ್ತಕ ಭಾರೀ ರಿಯಾಯಿತಿಯೊಂದಿಗೆ ಅನುಕ್ರಮವಾಗಿ ರೂ. 500 ಮತ್ತು ರೂ.600 ರ ಬೆಲೆಗೆ ಬಿಡುಗಡೆಯ ದಿನದಂದು ದೊರೆಯಲಿದೆ ಎಂದು ಕ್ರಿಯಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

 

ಸೆನ್ ಮತ್ತು ಅವರ ಕೃತಿ

ಈ ಪುಸ್ತಕ ಭಾರತದ ಕಾರ್ಮಿಕ ಆಂದೋಲನದ, ಎಂದಿನ ಸಾಂಪ್ರದಾಯಿಕ ರೀತಿಯ ಚರಿತ್ರೆಯಲ್ಲ. ಬದಲಿಗೆ, ಇದರಲ್ಲಿ ಒಂದು ವಿಸ್ತೃತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂದರ್ಭದಲ್ಲಿ, ಭಾರತದ ಕಾರ್ಮಿಕ ವರ್ಗದ ಹೋರಾಟದಲ್ಲಿ ರಾಜಕೀಯ ಮತ್ತು ಆರ್ಥಿಕ ಆಯಾಮಗಳ ಅಂತರ್-ಕ್ರಿಯೆಯನ್ನು ಆಮೂಲಾಗ್ರವಾಗಿ ಪರಿಶೀಲಿಸುವ ಪ್ರಯತ್ನವನ್ನು ಮಾಡಲಾಗಿದೆ.   ಇದು ಭಾರತೀಯ ಕಾರ್ಮಿಕ ವರ್ಗದ ಹುಟ್ಟು ಮತ್ತು ಅದರ ತದನಂತರದ ಮುನ್ನಡೆಗೆ ಹಿನ್ನೆಲೆಯನ್ನು ಒದಗಿಸಿರುವ ಸಾಮಾಜಿಕ ಮತ್ತು ಆರ್ಥಿಕ ಪ್ರಕ್ರಿಯೆಗಳ ಸಾರ ಸಂಗ್ರಹವನ್ನು ಮಂದಿಡುತ್ತ ಒಂದು ಸಮಗ್ರ ರೂಪುರೇಷೆ ಮತ್ತು ಲಭ್ಯ ಜ್ಞಾನದ ಸಂಯೋಗವನ್ನು ಕೊಡುವ ಉದ್ದೇಶ ಹೊಂದಿದೆ. ಎಲ್ಲಕ್ಕಿಂತ ಮಿಗಿಲಾಗಿ, ದಸ್ತಾವೇಜುಗಳ ಸಾಕ್ಷ್ಯ ಮತ್ತು ಅವುಗಳ ವ್ಯಾಖ್ಯಾನ ಇವೆರಡಕ್ಕೂ ಸಮಾನ ಮಹತ್ವ ನೀಡುವ ಒಂದು ಸಮತೋಲದ ಸಂಕಥನವನ್ನು ಕೊಡಲಾಗಿದೆ. ಹೀಗೆಂದು ಸುಕೋಮಲ ಸೇನ್ ಹೇಳುವುದು ಅಕ್ಷರಶಃ ನಿಜವೆಂಬುದು ಈ ಪುಸ್ತಕವನ್ನು ಓದಿದ ಯಾರಿಗಾದರೂ ಸ್ಪಷ್ಟವಾಗುವಂಥದ್ದು.

ಕಲ್ಕತ್ತಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರಾದ ಸುಕೋಮಲ್ ಸೇನ್ ಅವರು ಭಾರತದ ಕಾರ್ಮಿಕ ಆಂದೋಲನದಲ್ಲಿ ದೀರ್ಘಕಾಲದ ಮತ್ತು ಅನುಭವಿ ನೇತಾರರಾಗಿದ್ದರು. ಅವರು 1982ರಿಂದ 2008ರ ವರೆಗೆ ಎಂಭತ್ತು ಲಕ್ಷ ಸಾರ್ವಜನಿಕ ಉದ್ಯೋಗಿಗಳನ್ನು ಪ್ರತಿನಿಧಿಸುವ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಿಐಟಿಯು ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದ ಇವರು ಅಂತರರಾಷ್ಟೀಯ ಕಾರ್ಮಿಕ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. 1982ರಲ್ಲಿ ಪ್ರಾಗ್‌ನಲ್ಲಿ ನಡೆದ ‘ಟ್ರೇಡ್ ಯೂನಿಯನ್ ಇಂಟರ್‌ನ್ಯಾಷನಲ್ ಆಫ್ ಪಬ್ಲಿಕ್ ಅಂಡ್ ಅಲ್ಲೈಡ್ ಎಂಪ್ಲಾಯೀಸ್’ (ಸಾರ್ವಜನಿಕ ಮತ್ತು ಸಂಬಂಧಿತ ನೌಕರರ ಅಂತರರಾಷ್ಟ್ರೀಯ ಕಾರ್ಮಿಕ ಸಂಘ)ನ ನಿರ್ದೇಶನ ಸಮಿತಿ ಸಭೆಯಲ್ಲಿ ಭಾಗವಹಿಸಿದರು. 1996 ರಲ್ಲಿ ಅದರ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು,  2009 ರ ಜೂನ್ ವರೆಗೆ ಈ ಹುದ್ದೆಯಲ್ಲಿದ್ದರು. 2011 ರ ವರೆಗೆ ಅವರು ವರ್ಲ್ಡ್ ಫೇಡರೇಶನ್ ಆಫ್ ಟ್ರೇಡ್ ಯೂನಿಯನ್ಸ್ (ಡಬ್ಲ್ಯೂ.ಎಫ್‌.ಟಿ.ಯು)ನ ಅಧ್ಯಕ್ಷಮಂಡಳಿಯ ಸದಸ್ಯರಾಗಿದ್ದರು. ಅವರು 1982 ರಿಂದ 1994 ರವರೆಗೆ ಸಿಪಿಐ(ಎಂ) ಸಂಸತ್ ಸದಸ್ಯರಾಗಿದ್ದರು. ಅವರು ಸಿಪಿಐ(ಎಂ) ಕೇಂದ್ರ ಸಮಿತಿಯ ಸದಸ್ಯರೂ ಆಗಿದ್ದರು.

ವಿದ್ವತ್ಪೂರ್ಣ ಬರಹಗಾರರಾದ ಸುಕೋಮಲ್ ಸೆನ್ ಅವರು “ಅಂತರರಾಷ್ಟ್ರೀಯ ಕಾರ್ಮಿಕ ವರ್ಗದ ಚಳವಳಿಯ ಇತಿಹಾಸ”; “ಮೇ ದಿನ ಮತ್ತು ಭಾರತದಲ್ಲಿ ಎಂಟು ಗಂಟೆಯ ಕೆಲಸದ ದಿನದ ಹೋರಾಟ”; “ಕಮ್ಯುನಿಸ್ಟ್ ಪ್ರಣಾಳಿಕೆ: ಕ್ರಾಂತಿಯ ಸಿದ್ಧಾಂತದ 150 ನೇ ವಾರ್ಷಿಕೋತ್ಸವದ ಕೊಡುಗೆ” ಮತ್ತು “ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಇತಿಹಾಸ” ಮುಂತಾದ ಪುಸ್ತಕಗಳ ಲೇಖಕರಾಗಿದ್ದಾರೆ.

ಅರ್ಥಪೂರ್ಣ ಮುನ್ನುಡಿ

ಹಿರಿಯ ಕಾರ್ಮಿಕ ನಾಯಕ ವಿ.ಜೆ.ಕೆ.ನಾಯರ್ ಬರೆದಿರುವ ಮುನ್ನುಡಿ ಈ ಪುಸ್ತಕದ ಇನ್ನೊಂದು ವಿಶೇಷತೆ. ಅವರು ತಮ್ಮ ಮುನ್ನುಡಿಯಲ್ಲಿ ಅಧ್ಯಾಯ ವಾರರಾಗಿ ಮತ್ತು ಅವಧಿ ವಾರಾಗಿ ಈ ಪುಸ್ತಕದಲ್ಲಿ ನಿರೂಪಿತವಾಗಿರುವ ಚರಿತ್ರೆಯ ಸಾರಾಂಶ ಕೊಡುವುದಲ್ಲದೆ, ಕಾರಣಾಂತರದಿಂದ ಈ ಪುಸ್ತಕದಲ್ಲಿ ಬಿಟ್ಟು ಹೋಗಿರುವ ಕೆಲವು ವಿದ್ಯಮಾನಗಳನ್ನು ಘಟನೆಗಳನ್ನು ನಿರೂಪಿಸುತ್ತಾರೆ. ಕೆಲವು ಕಡೆ ತಮ್ಮ ವಿಮರ್ಶಾತ್ಮಕ ಒಳನೋಟಗಳನ್ನು ನೀಡುತ್ತಾರೆ. ಇದಕ್ಕಿಂತಲೂ ಹೆಚ್ಚಾಗಿ ಈ ಪುಸ್ತಕದಲ್ಲಿ ಅಷ್ಟಾಗಿ ಸಿಗದ, ಕರ್ನಾಟಕದ ಕಾರ್ಮಿಕ ವರ್ಗದ ರಚನೆ, ಉದಯ ಮತ್ತು ಹೋರಾಟಗಳಿಗೆ ಸಂಬಂಧಿಸಿದ ಅಂತರವನ್ನು ತುಂಬುವ ಮೂಲಕ ಈ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾರೆ.    ಕರ್ನಾಟಕದ ಕಾರ್ಮಿಕ ವರ್ಗದ ಚಳುವಳಿಯ ಬಗ್ಗೆ ಓದುಗರಿಗೆ ಮತ್ತು ಭವಿಷ್ಯದ ಸಂಶೋಧಕರಿಗೆ ಮಾರ್ಗದರ್ಶನ ನೀಡಲು, ರಾಜ್ಯಕ್ಕೆ ಸಂಬಂಧಿಸಿದ ಸಂಗತಿಗಳನ್ನು ಮತ್ತು ಪೂರಕ ವಿಶ್ಲೇಷಣೆಯನ್ನು ಸೇರಿಸಿದ್ದಾರೆ. ವಿ.ಜೆ.ಕೆ.ನಾಯರ್ ಬರೆದಿರುವ ದೀರ್ಘ ಅರ್ಥಪೂರ್ಣ ಮುನ್ನುಡಿ ಸ್ವತಂತ್ರ ಪುಸ್ತಿಕೆಯಾಗಿ ಪ್ರಕಟವಾಗುವಷ್ಟು ಸತ್ವವನ್ನು ಹೊಂದಿದೆ.

ತಿಲಕ್ ಬಂಧನವಾದಾಗ ಮುಂಬಯಿಯ ಕಾರ್ಮಿಕರು ಹೂಡಿದ ಪ್ರಖ್ಯಾತ ಕಾರ್ಮಿಕರ ಮುಷ್ಕರ, ಭಾರತದ ಮೊದಲ ಮೇದಿನ, ಮೊದಲ ಕೇಂದ್ರೀಯ ಕಾರ್ಮಿಕ ಸಂಘಟನೆ ಎಐಟಿಯುಸಿಯ ಸ್ತಾಪನೆ, ಭಾರತದ ಮೊದಲ ಕಾರ್ಮಿಕರ ಪ್ರಣಾಳಿಕೆ, ಕಾರ್ಮಿಕ ಸಂಘಟನೆಯಲ್ಲಿ ಸುಧಾರಣಾವಾದಿ ಮತ್ತು ಕ್ರಾಂತಿಕಾರಿ ಧಾರೆಗಳ ನಡುವೆ ಸೈದ್ಧಾಂತಿಕ ಸಂಘಟನಾ ಭಿನ್ನಾಭಿಪ್ರಾಯಗಳು ಮತ್ತು ಒಡಕುಗಳು, ಎರಡನೆಯ ಮಹಾಯುದ್ಧ ನಂತರದ ರಿನ್ ನಾವಿಕರ ದಂಗೆ ಮತ್ತು ಇತರ ಬ್ರಿಟಿಷ್ ವಿರೋಧಿ ಹೋರಾಟಗಳಲ್ಲಿ ಕಾರ್ಮಿಕರ ಪಾತ್ರ, 1970ರ ದಶಕದ ರೈಲ್ವೇ ಮುಷ್ಕರ, ತುರ್ತು ಪರಿಸ್ಥಿತಿಯಲ್ಲಿ, ಮೊದಲು ಮತ್ತು ನಂತರ ಕಾರ್ಮಿಕ ವಿರೋಧಿ ದಬ್ಬಾಳಿಕೆಯ ವಿರುದ್ಧ ಹೋರಾಟಗಳು, 1991ರ ಚಾರಿತ್ರಿಕ ಸಾರ್ವತ್ರಿಕ ಮುಷ್ಕರ, – ಇವು ಈ ಪುಸ್ತಕದಲ್ಲಿ ಬರುವ ಕೆಲವು ಆಸಕ್ತಿದಾಯಕ ಭಾಗಗಳು.

Donate Janashakthi Media

Leave a Reply

Your email address will not be published. Required fields are marked *