ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ: ಮಾರ್ಚ್ 28-29 ಅಖಿಲ ಭಾರತ ಸಾರ್ವತ್ರಿಕ ಮಹಾ ಮುಷ್ಕರ

ಮಂಗಳೂರು: ಕಾರ್ಪೊರೇಟ್ ಪರವಾದ 4 ಕಾರ್ಮಿಕ ಸಂಹಿತೆಗಳ ರದ್ಧತಿಗಾಗಿ, ಬೆಲೆ ಏರಿಕೆ ನಿಯಂತ್ರಣಕ್ಕಾಗಿ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ, ರೈತ ವಿರೋಧಿ ಕಾರ್ಮಿಕ ವಿರೋಧಿ ಕಾನೂನುಗಳ ರದ್ಧತಿಗಾಗಿ ರೂ. 24 ಸಾವಿರ ಸಮಾನ ಕನಿಷ್ಠ ವೇತನಕ್ಕಾಗಿ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ದಿನಾಂಕ 28,29ರಂದು 2 ದಿನಗಳ ಕಾಲ ಅಖಿಲ ಭಾರತ ಸಾರ್ವತ್ರಿಕ ಮಹಾಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್ ಹೇಳಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19ರ ಸಾಂಕ್ರಾಮಿಕ ರೋಗದ ಮೊದಲೆರಡು ಅಲೆಗಳ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ವಿಧಿಸಿದ ಲಾಕ್‌ಡೌನ್‌ಗಳು ದುಡಿಯುವ ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದ್ದವು. ಎರಡು ಅಲೆಗಳ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ನೀಡಿದ ಪರಿಹಾರ ಪ್ಯಾಕೇಜ್‌ಗಳು ಬಡ ಜನರ ಬದುಕಿಗೆ ಆಸರೆಯಾಗಲಿಲ್ಲ. ಬದಲಾಗಿ ಕಾರ್ಪೊರೇಟ್ ಬಂಡವಾಳಗಾರರ, ಶ್ರೀಮಂತರ ಜೇಬು ತುಂಬಿಸಿದವು ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೇಂದ್ರದ ಮೋದಿ ಸರ್ಕಾರ ನವ ಉದಾರೀಕರಣ ನೀತಿಗಳನ್ನು ಅಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಐಸಿಡಿಎಸ್ ಯೋಜನೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಮತ್ತಿತರ ಕ್ಷೇತ್ರಗಳಿಗೆ ಪ್ರತಿ ಬಜೆಟ್‌ನಲ್ಲಿಯೂ ಹಣಕಾಸಿನ ಕಡಿತ ಮಾಡಲಾಗುತ್ತಿದೆ. ಇದರಿಂದ ನಿರುದ್ಯೋಗ, ಬಡತನ, ಹಸಿವಿನ ಪ್ರಮಾಣ ನಿರಂತರ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಜೆಸಿಟಿಯು ಸಂಚಾಲಕರಾದ ಎಚ್.ವಿ. ರಾವ್ ಮಾತನಾಡಿ, ಕೇಂದ್ರ ಸರ್ಕಾರದ ಜನ ವಿರೋಧಿ ತೆರಿಗೆ ನೀತಿ, ದಿನ ಬಳಕೆಯ ಸರಕು ಮತ್ತು ಸೇವೆಗಳ ಮೇಲಿನ ಬಾರೀ ಪ್ರಮಾಣದ ಪರೋಕ್ಷ ಜಿ.ಎಸ್.ಟಿ.ಯಂತಹ ಕ್ರಮಗಳಿಂದಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಗಳು ನಿರಂತರ ಹೆಚ್ಚಳಗೊಳ್ಳುತ್ತಲೇ ಇವೆ. ಬಡಜನರ ಆರ್ಥಿಕ ಪುನಶ್ಚೇತನಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ತೆರಿಗೆ ಕಡಿತ ಮಾಡಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಬಡ ಕುಟುಂಬಕ್ಕೆ ಮಾಸಿಕ ರೂ. 7,500/- ನೇರ ನಗದು ವರ್ಗಾವಣೆ, ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ ಆಹಾರ ಧಾನ್ಯಗಳನ್ನು ನೀಡಬೇಕೆಂಬ ಬೇಡಿಕೆಗಳನ್ನು ಸರ್ಕಾರಗಳು ಪರಿಗಣಿಸಲಿಲ್ಲ. ಹಾಗಾಗಿ ದೇಶದ ಎಲ್ಲೆಡೆ ಎಲ್ಲಾ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಸಮಸ್ತ ಜನಪರ ಸಂಘಟನೆಗಳು ಜಂಟಿಯಾಗಿ ಮಾರ್ಚ್‌ 28-29ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿವೆ ಎಂದು ಹೇಳಿದರು.

ಐಎನ್‌ಟಿಯುಸಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ಕೋವಿಡ್ ಸಂದರ್ಭವನ್ನೇ ಉಪಯೋಗಿಸಿಕೊಂಡು ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಯಾವುದೇ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ವಿರೋಧಿಯಾಗಿ ರೂಪಿಸಿತು. ಅಲ್ಲದೆ ಕಾರ್ಮಿಕ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರಗಳ ಮೂಲಕ ಜಾರಿ ಮಾಡಲು ಮುಂದಾಗಿದೆ ಎಂದು ಹೇಳಿದರು.

ಎಐಸಿಸಿಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಇ. ಮಾತನಾಡಿ, ದೇಶದ ಸಂಪತ್ತಾದ ಸಾರ್ವಜನಿಕ ಉದ್ದಿಮೆಗಳಾದ ರೈಲ್ವೆ, ವಿಮಾನಯಾನ, ವಿದ್ಯುತ್, ಕಲ್ಲಿದ್ದಲು, ಬ್ಯಾಂಕ್, ವಿಮಾ ಕ್ಷೇತ್ರ, ದೂರಸಂಪರ್ಕ, ಮೂಲಸೌಕರ್ಯ, ಹೆದ್ದಾರಿಗಳು, ರಕ್ಷಣಾ ಸಾಮಾಗ್ರಿ ಉತ್ಪಾದನಾ ಕೈಗಾರಿಕೆ ಹಾಗೂ ಮತ್ತಿತರ ಸಾರ್ವಜನಿಕ ಉದ್ದಿಮೆಗಳನ್ನು ಹಂತಹಂತವಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಬದಲಾಗಿ ಅಲ್ಪಸ್ವಲ್ಪ ಇರುವ ಕಾನೂನುಗಳನ್ನು ಬದಲಾಯಿಸಿ ಅವರ ಕಲ್ಯಾಣಕ್ಕೆ ಇರುವ ಮಂಡಳಿಗಳನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಿವೆ ಎಂದು ಆರೋಪಿಸಿದರು.

ಕೇಂದ್ರ ಸರಕಾರದ ರೈತ-ಕಾರ್ಮಿಕ ಜನವಿರೋಧಿ ನೀತಿಗಳ ವಿರುದ್ಧ ಮಾರ್ಚ್‌ 28-29ರಂದು ನಡೆಯಲಿರುವ ಮಹಾಮುಷ್ಕರದ ಭಾಗವಾಗಿ ಮಾರ್ಚ್ 28ರಂದು ಎಲ್ಲಾ ತಾಲೂಕು/ವಲಯ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ವಿಮಾ ನೌಕರರ ಸಂಘದ ಮುಖಂಡ ಬಿ.ಎನ್. ದೇವಾಡಿಗ ಮಾತನಾಡಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಣೆ ಮಾಡಬೇಕು. ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು. ಹೆಚ್ಚಿನ ಅನುದಾನ ಬಜೆಟ್‌ನಲ್ಲಿ ನೀಡಬೇಕೆಂದು ಮುಷ್ಕರದ ಬೇಡಿಕೆಗಳಲ್ಲಿ ಒಂದಾಗಿದೆ. ಅದಲ್ಲದೆ, ಕೋವಿಡ್ ಎದುರಿಸಲು ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮಾ ಸೌಲಭ್ಯ ಒದಗಿಸಬೇಕು. ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರೆ ಸ್ಕೀಂ ನೌಕರರಿಗೆ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿ ಮಾಡಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ರಾಷ್ಟೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಲಿಸಲು ಶ್ರೀಮಂತರಿಗೆ ಆಸ್ತಿ ತೆರಿಗೆ ಇತ್ಯಾದಿಗಳನ್ನು ವಿಧಿಸುವ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಇತರೆ ನಿರ್ಣಾಯಕ ಸಾರ್ವಜನಿಕ ಸೇವೆಗಳಿಗೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು.

ರಾಷ್ಟೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕು.

ರೂ. 24 ಸಾವಿರ ಸಮಾನ ಕನಿಷ್ಠ ವೇತನ ನಿಗದಿಗೊಳಿಸಬೇಕು. ಸಂಘ ಮಾನ್ಯತೆ, ಗುತ್ತಿಗೆ ಮುಂತಾದ ಖಾಯಂಯೇತ್ತರರ ಖಾಯಂಗೆ, ಅಸಂಘಟಿತರಿಗೆ ಭವಿಷ್ಯನಿಧಿಗೆ ಶಾಸನ ರೂಪಿಸಬೇಕು ಎಂಬ ಬೇಡಿಕೆಗಳು ಒಳಗೊಂಡಿವೆ.

ಹಾಗಾಗಿ ಮಾರ್ಚ್ 28ರಂದು ಬೆಳಿಗ್ಗೆ 10ಕ್ಕೆ ನಗರದ ಡಾ||ಬಿ.ಆರ್. ಅಂಬೇಡ್ಕರ್ ವೃತ್ತದಿಂದ ವಿವಿಧ ವಿಭಾಗದ ಕಾರ್ಮಿಕರ ಮೆರವಣಿಗೆ ಹೊರಡಲಿದ್ದು, ಬಳಿಕ ಕ್ಲಾಕ್ ಟವರ್ ಬಳಿಯಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ಜರುಗಲಿದೆ ಎಂದು ಸಂಘಟಕರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಣೀಂದ್ರ(ಅಧ್ಯಕ್ಷರು, ಅಖಿಲ ಭಾರತ ಕರ್ನಾಟಕ ಬ್ಯಾಂಕ್ ನೌಕರರ ಸಂಘ), ರಾಘವ ಕೆ. (ರಾಜ್ಯಾಧ್ಯಕ್ಷರು, ಬ್ಯಾಂಕ್ ಅಧಿಕಾರಿಗಳ ಸಂಘಟನೆ), ಪುರುಷೋತ್ತಮ ಪೂಜಾರಿ (ಬಿಇಎಫ್‌ಐ ರಾಜ್ಯ ನಾಯಕರು), ಸುರೇಶ್ ಹೆಗ್ಡೆ (ಬ್ಯಾಂಕ್ ನೌಕರರ ಮುಖಂಡರು), ಕರುಣಾಕರ (ಎಐಟಿಯುಸಿ ಜಿಲ್ಲಾ ಮುಖಂಡರು) ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *