ಸೇನಾಪತಿ: ಕಾಂಗ್ರೆಸ್ ಪಕ್ಷವೂ ಮಣಿಪುರದ ಜನರೊಂದಿಗೆ ನಿಂತಿದ್ದು, ರಾಜ್ಯವನ್ನು ಮತ್ತೆ ಶಾಂತಿಯುತ ಮತ್ತು ಸೌಹಾರ್ದಯುತವಾಗಿಸಲು ಬಯಸುತ್ತದೆ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎರಡನೇ ದಿನವಾದ ಸೋಮವಾರ ಜನರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದ್ದಾರೆ. ಬೆಳಗ್ಗೆ ಬಸ್‌ನಲ್ಲಿ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ ಅವರು ಸ್ವಲ್ಪ ದೂರದವರೆಗೆ ನಡೆದುಕೊಂಡು ಹೋಗಿ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ವಿಚಾರಿಸಿದರು.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಯಾತ್ರೆಯ ಮಾರ್ಗದಲ್ಲಿ ಸಾಲುಗಟ್ಟಿ ನಿಂತು ರಾಹುಲ್ ಗಾಂಧಿಗೆ ಸ್ವಾಗತಕೋರಿದ್ದು, ಬಸ್ಸು ಜನನಿಬಿಡ ಪ್ರದೇಶಗಳಲ್ಲಿ ಸಾಗುತ್ತಿದ್ದಂತೆ ಜನರು ಅವರಿಗೆ ಹರ್ಷೋದ್ಗಾರದೊಂದಿಗೆ ಸ್ವಾಗತ ಮಾಡಿದ್ದಾರೆ. ಮಣಿಪುರದ ಸೇನಾಪತಿಯಲ್ಲಿ ತಮ್ಮ ಬಸ್ಸಿನ ಮೇಲಿಂದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಮಾಡಿದ್ದು ಭಾರತದ ಜನರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಆಗಿದೆ. ಇದು ಅತ್ಯಂತ ಯಶಸ್ವಿ ಯಾತ್ರೆಯಾಗಿದ್ದು, ನಾವು 4,000 ಕಿ.ಮೀ.ಗೂ ಹೆಚ್ಚು ನಡೆದುಕೊಂಡು ಯಾತ್ರೆ ತಲುಪಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 2024ರ ಚುನಾವಣೆ ಏಕಾಂಗಿ ಹೋರಾಟ | ಇಂಡಿಯಾ ಅಥವಾ ಎನ್‌ಡಿಎ ಜೊತೆ ಮೈತ್ರಿ ಇಲ್ಲ – ಮಾಯಾವತಿ
“ನಾವು ಪೂರ್ವದಿಂದ ಪಶ್ಚಿಮಕ್ಕೆ ಮತ್ತೊಂದು ಯಾತ್ರೆಯನ್ನು ಮಾಡಲು ಬಯಸಿದೆವು. ಮಣಿಪುರದಿಂದ ಯಾತ್ರೆಯನ್ನು ಪ್ರಾರಂಭಿಸುವುದು ಅತ್ಯಂತ ಶಕ್ತಿಯುತವಾದ ವಿಚಾರ ಎಂದು ನಾವು ನಿರ್ಧರಿಸಿದೆವು. ಇದರಿಂದಾಗಿ ಮಣಿಪುರದ ಜನರು ಅನುಭವಿಸಿದ ಕಷ್ಟವನ್ನು, ಅವರು ಎದುರಿಸಿದ ಹೋರಾಟವನ್ನು ಭಾರತದ ಜನರು ಅರ್ಥಮಾಡಿಕೊಳ್ಳಲಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ನೀವು ದುರಂತವನ್ನು ಎದುರಿಸಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನೀವು ನಿಮ್ಮ ಕುಟುಂಬ ಸದಸ್ಯರನ್ನು, ನಿಮ್ಮ ಆಸ್ತಿಯನ್ನು ಕಳೆದುಕೊಂಡಿದ್ದೀರಿ. ಇಂತಹ ಸಮಯದಲ್ಲಿ ನಾವು ನಿಮ್ಮೊಂದಿಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದೇವೆ ಎಂದು ನಾನು ತಿಳಿಸಲು ಬಯಸುತ್ತೇನೆ. ನಾವು ಮಣಿಪುರಕ್ಕೆ ಶಾಂತಿಯನ್ನು ಮರಳಿ ತರಲು ಬಯಸುತ್ತೇವೆ. ನಾವು ಮಣಿಪುರವನ್ನು ಶಾಂತಿಯುತ ಮತ್ತು ಮತ್ತೆ ಸಾಮರಸ್ಯವಾಗಿಸಲು ಬಯಸುತ್ತೇವೆ” ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಮಣಿಪುರದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳುತ್ತಿರುವ ರಾಜ್ಯದ ನಿಯೋಗಗಳೊಂದಿಗೆ ತಾನು ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದ್ದು, “ಮಣಿಪುರಕ್ಕೆ ಆದಷ್ಟು ಬೇಗ ಶಾಂತಿ ಮರಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಸೌಹಾರ್ದ ಕರ್ನಾಟಕದಿಂದ ‘ಸೌಹಾರ್ದ ಸಂಕ್ರಾಂತಿ’
ಎರಡನೇ ದಿನದ ಭಾರತ್ ಜೋಡೋ ನ್ಯಾಯ್ ಯಾತ್ರೆ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಭಾರತ್ ಜೋಡೋ ನ್ಯಾಯ್ ಯಾತ್ರೆಯ 2 ನೇ ದಿನವು ಬೆಳಿಗ್ಗೆ 7:30 ಕ್ಕೆ ಕ್ಯಾಂಪ್‌ಸೈಟ್‌ನಲ್ಲಿ ಸೇವಾದಳದಿಂದ ಸಾಂಪ್ರದಾಯಿಕ ಧ್ವಜಾರೋಹಣದೊಂದಿಗೆ ಉಜ್ವಲವಾಗಿ ಪ್ರಾರಂಭವಾಯಿತು. ಮಣಿಪುರದ ಕಾಂಗ್ರೆಸ್ ಅಧ್ಯಕ್ಷ ಮೇಘಚಂದ್ರ ಧ್ವಜಾರೋಹಣ ಮಾಡಿದರು. ಯಾತ್ರೆಯು ಸೆಕ್ಮಾಯಿಯಿಂದ ಕಾಂಗ್ಪೋಕ್ಪಿಗೆ ಮತ್ತು ನಂತರ ಮಣಿಪುರದ ಸೇನಾಪತಿಗೆ ಚಲಿಸುತ್ತದೆ. ಅಂತಿಮವಾಗಿ ರಾತ್ರಿ ನಾಗಾಲ್ಯಾಂಡ್‌ನಲ್ಲಿ ನಿಲ್ಲುತ್ತದೆ” ಎಂದು ಅವರು ಹೇಳಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಭಾನುವಾರ ಆರಂಭವಾದ ಯಾತ್ರೆಯು, ಸೌಹಾರ್ದತೆ, ಭ್ರಾತೃತ್ವ ಮತ್ತು ಸಮಾನತೆಯ ಆಧಾರದ ಮೇಲೆ ಮತ್ತು ದ್ವೇಷ, ಹಿಂಸೆ ಮತ್ತು ಏಕಸ್ವಾಮ್ಯವನ್ನು ಇಲ್ಲದ ಭಾರತಕ್ಕಾಗಿ ಪಕ್ಷವೂ ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಯಾತ್ರೆಯು ಒಟ್ಟು 6,700 ಕಿಮೀ ಇರಲಿದ್ದು, ಭಾನುವಾರ ತೌಬಲ್‌ನಲ್ಲಿ ಚಾಲನೆ ಪಡೆಯಿತು. ಭಾರತ್ ಜೋಡೋ ನ್ಯಾಯ್ ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿದೆ. ಹೆಚ್ಚಿನ ಸಮಯ ಬಸ್‌ಗಳಲ್ಲಿ ಯಾತ್ರೆ ಚಲಿಸಲಿದ್ದು, ಕಾಲ್ನಡಿಗೆಯಲ್ಲಿ ಕೂಡಾ ಯಾತ್ರೆ ಮುನ್ನಡೆಯಲಿದೆ. ಈ ವರ್ಷದ ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಇದು ಕೊನೆಗೊಳ್ಳುತ್ತದೆ.
ವೀಡಿಯೊ ನೋಡಿ: ಸುಗ್ಗಿ ಹಬ್ಬ. ಸಂಕ್ರಾಂತಿಯ ಸೊಬಗು..ಜನಪದ ಹಾಡು… Janashakthi Media