ಹಾಸನ: ಹಿಂದೂ ಧರ್ಮ ರಕ್ಷಣೆ ಮತ್ತು ಗೋರಕ್ಷಣೆ ಹೆಸರಿನಲ್ಲಿ ಸಕಲೇಶಪುರ ಭಾಗದಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವ ‘ಭಜರಂಗದಳ’ ಎಂಬ ದುಷ್ಟರ ಕೂಟವನ್ನು ನಿಗ್ರಹಿಸಿ ನಿರಂತವಾಗಿ ಕ್ರಿಮಿನಲ್ ಚಟುವಟಿಕೆ ಹಾಗೂ ಸಮಾಜದಲ್ಲಿ ಶಾಂತಿ ಕದಡಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿರುವ ಭಜರಂಗದಳದ ಕ್ರಿಮಿನಲ್ ಹಿನ್ನೆಲೆಯ ರಘು ಮತ್ತು ಆತನ ಸಹಚರರನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕೆಂದು ಜಿಲ್ಲೆಯ ದಲಿತ ಮತ್ತು ಜನಪರ ಸಂಘಟನೆಗಳು ಒತ್ತಾಯಿಸಿವೆ.
ಇಂದು(ಆಗಸ್ಟ್ 25) ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಹಿಂದೂ ಧರ್ಮ, ಸಂಸ್ಕೃತಿ ಮತ್ತು ಗೋವುಗಳ ರಕ್ಷಣೆಯ ಹೆಸರಿನಲ್ಲಿ ಸಕಲೇಶಪುರ ತಾಲೂಕಿನಲ್ಲಿ ಅನೈತಿಕ, ಅಕ್ರಮ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಭಜರಂಗದಳ ಎಂಬ ದುಷ್ಟರ ಕೂಟ ನಡೆಸುತ್ತಿದೆ. ನಿರಂತರವಾಗಿ ಧರ್ಮ ದ್ವೇಷ, ಜನಾಂಗೀಯ ದ್ವೇಷ ಹರಡುವ ಮುಖಾಂತರ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣವನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಗೋರಕ್ಷಣೆ, ಮತಾಂತರ ಮತ್ತಿತರೆ ವಿಷಯಗಳನ್ನು ಮುಂದಿಟ್ಟುಕೊಂಡು ವ್ಯಾಪಕವಾಗಿ ಸುಳ್ಳುಗಳನ್ನು ಹರಡುತ್ತಾ ಮುಸ್ಲಿಮರು ಮತ್ತು ಕ್ರೈಸ್ತರ ಮೇಲೆ ದಾಳಿ, ಹಲ್ಲೆ ಮತ್ತು ದೌರ್ಜನ್ಯಗಳನ್ನು ನಡೆಸಿ ತಾಲೂಕಿನಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ರಘು ಮತ್ತು ಆತನ ಸಹಚರರ ಮೇಲೆ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟ್‌ನಲ್ಲಿ ಅವರ ಹೆಸರುಗಳಿವೆ. ನಿರಂತರವಾಗಿ ಸಮಾಜದಲ್ಲಿ ಶಾಂತಿಗೆ ಭಂಗ ತರುತ್ತಿರುವ ಹಿನ್ನೆಲೆಯಲ್ಲಿ ರಘು ಮತ್ತು ಆತನ ಸಹಚರರ ಮೇಲೆ ಐಪಿಸಿ 107 ಕಲಮು ಪ್ರಕರಣ ದಾಖಲಾಗಿದ್ದರೂ ಅದರ ಉಲ್ಲಂಘನೆ ನಡೆಯುತ್ತಿದೆ. ಹೀಗಿದ್ದರೂ ಸಕಲೇಶಪುರದ ಪೋಲೀಸರು ಇದ್ಯಾವುದೂ ಗೊತ್ತಿಲ್ಲದಂತೆ ಸುಮ್ಮನಿದ್ದಾರೆ ದೂರಿದರು.
ದಲಿತ ಸಂಘಟನೆಯ ಎಸ್.ಎನ್.ಮಲ್ಲಪ್ಪ, ಸಂದೇಶ್ ಮಾತನಾಡಿ, ಸಕಲೇಶಪುರದಲ್ಲಿ ಪರವಾನಗಿ ಪತ್ರದೊಂದಿಗೆ ಸಾಕುವ ಉದ್ದೇಶದಿಂದ ಹಸುವಿನ ಕರುವನ್ನು ಸಾಗಿಸುತ್ತಿದ್ದಾಗ ಭಜರಂಗದಳ ದುಷ್ಟಕೂಟದ ಸದಸ್ಯ ದೀಪು ಎಂಬುವವನು ಅಕ್ರಮವಾಗಿ ವಾಹನ ತಡೆದು ಹಲಸುಲಗೆ ಗ್ರಾಪಂ ಸದಸ್ಯ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದಾನೆ. ಎಲ್ಲಿಯಾದರೂ ಕಾನೂನು ಉಲ್ಲಂಘನೆಯಾಗುತ್ತಿದ್ದರೆ ಪೊಲೀಸರ ಗಮನಕ್ಕೆ ತರುವ ಜವಾಬ್ದಾರಿ ಸಾರ್ವಜನಿಕರಿಗಿರುತ್ತದೆ. ಆದರೆ ಈ ಪ್ರಕರಣದಲ್ಲಿ ಕಾನೂನು ಉಲ್ಲಂಘನೆ ಆಗಿರದಿದ್ದರೂ ಕೂಡ ದಲಿತ ಯುವಕನನ್ನು ಅಡ್ಡಗಟ್ಟಿ ಹಲ್ಲೆ ಮಾಡಲಾಗುತ್ತದೆ. ಇದು ಜಾತಿ ದೌರ್ಜನ್ಯವಲ್ಲದೆ ಮತ್ತಿನ್ನೇನು ಎಂದು ಪ್ರಶ‍್ನಿಸಿದರು.
ಕ್ರಿಮಿನಲ್ ಹಿನ್ನೆಲೆಯ ಭಜರಂಗದಳದ ದುಷ್ಟ ಕೂಟದ ಬಗ್ಗೆ ಪೂರ್ವಾಪರ ಎಲ್ಲವೂ ಗೊತ್ತಿರುವ ಪೊಲೀಸು ಇಲಾಖೆ ಕೂಡಲೇ ದಲಿತ ಯುವಕನ ಮೇಲೆ ದೌರ್ಜನ್ಯ ನಡೆಸಿದವನನ್ನು ಬಂಧಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವ ಬದಲು ದೌರ್ಜನ್ಯ ನಡೆಸಿದವರ ಪರವಾಗಿ ನಿಂತ ಪರಿಣಾಮವಾಗಿ ದಲಿತ ಸಮುದಾಯ ಪ್ರತಿಭಟನೆಯ ದಾರಿ ಹಿಡಿಯಬೇಕಾಯಿತು. ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದ ದಲಿತರ ಮೇಲೆಯೇ ಪ್ರತಿದೂರನ್ನು ಪೊಲೀಸು ಇಲಾಖೆ ದಾಖಲಿಸಿದೆ. ಇದು ಪೊಲೀಸರು ಭಜರಂಗದಳ ಎಂಬ ದುಷ್ಟರ ಜೊತೆ ಕೈಜೋಡಿಸಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಆರೋಪಿಸಿದರು.
ಭಜರಂಗದಳದ ದುಷ್ಟರು ನಡೆಸಿದ ದಲಿತರ ಮೇಲಿನ ದೌರ್ಜನ್ಯ ಹಾಗೂ ಪೊಲೀಸರ ಉದ್ದೇಶಪೂರ್ವಕ ನಿಷ್ಕ್ರಿಯತೆಯನ್ನು ಖಂಡಿಸಿ ಆಗಸ್ಟ್ 22 ರಂದು ಸಕಲೇಶಪುರದ ದಲಿತ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿ ಭಜರಂಗದಳ ಎಂಬ ದುಷ್ಟರ ಕೂಟವನ್ನು ನಿಷೇಧಿಸುವಂತೆ ಹಾಗೂ ರಘು ಮತ್ತು ಆತನ ಸಹಚರರನ್ನು ಜಿಲ್ಲೆಯಿಂದ ಗಡೀಪಾರು ಮಾಡುವಂತೆ ಆಗ್ರಹಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ ಆಗಸ್ಟ್ 24ರಂದು ಸಕಲೇಶಪುರದಲ್ಲಿ ‘ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು’ ಎಂದು ಹೇಳಿಕೊಳ್ಳುವವರು ಪ್ರತಿಭಟನೆ ನಡೆಸಿ ದಲಿತ ಸಮುದಾಯದ ವಿರುದ್ಧ ಒಕ್ಕಲಿಗ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಇದುವರೆಗೂ ತನ್ನನ್ನು ತಾನು ‘ಹಿಂದೂ ನಾಯಕ’ ಎಂದು ಹೇಳಿಕೊಳ್ಳುತ್ತಿದ್ದ ರಘು ಎಂಬುವವನನ್ನು ಒಕ್ಕಲಿಗರ ನಾಯಕ ಎಂದು ಬಿಂಬಿಸಿ ದಲಿತರು ಮತ್ತು ಒಕ್ಕಲಿಗರ ನಡುವೆ ಸಂಘರ್ಷ ಹುಟ್ಟು ಹಾಕುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಈ ಪ್ರತಿಭಟನೆಯಲ್ಲಿ ನಾಡಪ್ರಭು ಕೆಂಪೇಗೌಡ ಹೆಸರು ಹಾಗೂ ಆದಿಚುಂಚನಗಿರಿ ಮಠಾದೀಶರ ಹೆಸರು ಮತ್ತು ಭಾವಚಿತ್ರಗಳನ್ನು ಬಳಸಿಕೊಳ್ಳುವ ಮುಖಾಂತರ ಜಾತಿ ಸಂಘರ್ಷ ಸೃಷ್ಟಿಸುವ ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ.
ಈ ಕುರಿತು ಆದಿಚುಂಚನಗಿರಿ ಮಠ ಹಾಗೂ ಒಕ್ಕಲಿಗ ಸಮುದಾಯದ ಮುಖಂಡರು ಆದಷ್ಟೂ ಬೇಗ ಎಚ್ಚರಿಕೆ ವಹಿಸಿ ಭಜರಂಗದಳ ಎಂಬ ದುಷ್ಟರ ಕೂಟದ ಕುತ್ಸಿತ ಹುನ್ನಾರದ ವಿರುದ್ಧವಾಗಿ ಬಹಿರಂಗವಾಗಿ ಹೇಳಿಕೆ ನೀಡಬೇಕೆಂದು ವಿನಂತಿಸಿದರು.
ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣಕ್ಕೆ ದಕ್ಕೆಯುಂಟು ಮಾಡುತ್ತಿರುವ ಹಾಗೂ ಧರ್ಮ ದ್ವೇಷ, ಜನಾಂಗೀಯ ದ್ವೇಷ ಸೃಷ್ಟಿಸುತ್ತಿರುವ ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆಸಿ ಜಾತಿ ಸಂಘರ್ಷ ನಡೆಸಲು ಸಂಚು ನಡೆಸುತ್ತಿರುವ ಜೊತೆಗೆ ಸಕಲೇಶಪುರದಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ಅಕ್ರಮ, ಕಾನೂನು ಬಾಹಿರ ಹಾಗೂ ಅನೈತಿಕ ಚಟುವಟಿಕೆಗಳಾದ ಮರಳು ದಂಧೆ, ಅಕ್ರಮ ಗೋಸಾಗಾಣಿಕೆ, ಹಫ್ತಾ ವಸೂಲಿ, ದಲಿತರು ಮತ್ತು ಅಲ್ಪಸಂಖ್ಯಾತ ಮೇಲೆ ದಾಳಿ ದೌರ್ಜನ್ಯ ಜೊತೆಗೆ ಮಹಿಳೆಯರನ್ನು ಅಪಮಾನಿಸುವ ಕೃತ್ಯ ನಡೆಸುತ್ತಿರುವ ಹಾಗೂ ನಮ್ಮ ಸಂವಿಧಾನ, ಸರ್ಕಾರ, ಆಡಳಿತ, ಕಾನೂನು ಪೊಲೀಸು ಮತ್ತು ಸಮಾಜಕ್ಕೆ ಕಂಟಕವಾಗಿರುವ ಸಕಲೇಶಪುರದ ಭಜರಂಗದಳದ ದುಷ್ಟರ ಕೂಟವನ್ನು ನಿಗ್ರಹಿಸಿ ಅವರನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕೆಂದು ಈ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಒತ್ತಾಯಿಸಿದರು.
ಇಲ್ಲದಿದ್ದರೆ ಜಿಲ್ಲೆಯ ಎಲ್ಲಾ ದಲಿತ, ಜನಪರ ಮತ್ತು ಸಂವಿಧಾನ ಪರ ಸಂಘಟನೆಗಳು ಬೃಹತ್ ಹೋರಾಟ ನಡೆಸಲು ಸಿದ್ಧವಾಗಿವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ದಲಿತ ಮುಖಂಡರಾದ ರಾಜಶೇಖರ್, ಸೋಮಶೇಖರ್, ಮಾದಿಗ ದಂಡೋರ ಸಂಘಟನೆಯ ಟಿ.ಆರ್.ವಿಜಯ್‍ಕುಮಾರ್, ದಲಿತ ಹಕ್ಕುಗಳ ಸಮಿತಿಯ ಎಂ.ಜಿ.ಪೃಥ್ವಿ ಇದ್ದರು.