ಈ ವರ್ಷ ಭಗತ್ ಸಿಂಗ್‌ರ ಜನ್ಮ ದಿನಾಚರಣೆ ನಡೆಸುವ ಸಂದರ್ಭದಲ್ಲಿ ಅವರ ಹಲವು ವಿಚಾರಗಳು ಒಂದು ಸಮಕಾಲೀನ ಪ್ರಸ್ತುತತೆ ಮತ್ತು ತುರ್ತಿನಿಂದ ಮಾರ್ದನಿಗೊಳ್ಳುತ್ತಿವೆ. ಕ್ರಾಂತಿಯ ನಿಜವಾದ ಅರ್ಥ, ಶಾಸಕಾಂಗದ ಬಾಯಿ ಮುಚ್ಚಿಸುವುದು. ಕೋಮುವಾದಕ್ಕೆ ಎದುರಾಗಿ ಜಾತ್ಯತೀತತೆ, ಮಾಧ್ಯಮ ಮತ್ತು ಸಾಮಾಜಿಕ ನ್ಯಾಯ ಕುರಿತಂತೆ ಅವರ ಶ್ರೀಮಂತ ಕೊಡುಗೆಗಳನ್ನು ಮುಂದೊಯ್ಯುವ ಪ್ರಜ್ಞಾಪೂರ್ವಕ ಪ್ರಯತ್ನದೊಂದಿಗೆ ಈ ಮಹಾನ್ ಕ್ರಾಂತಿಕಾರಿಗೆ ಮತ್ತೊಮ್ಮೆ ನಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸೋಣ.
– ಸೀತಾರಾಮ್ ಯೆಚುರಿ
ಸೆಪ್ಟೆಂಬರ್ 28, 2020 ರಂದು ಭಾರತದಲ್ಲಿ ಐತಿಹ್ಯವಾಗಿರುವ ಹುತಾತ್ಮ ಭಗತ್ ಸಿಂಗ್ ರ 113 ನೇ ಜನ್ಮ ದಿನಾಚರಣೆ. ಇವರು ವರ್ಷದಿಂದ ವರ್ಷಕ್ಕೆ ಕಾಲದಲ್ಲಿ ದೂರ ಸರಿಯುತ್ತಿರಬಹುದು, ಆದರೆ ಇವರ ಪ್ರಸ್ತುತತೆ ನಮ್ಮ ಇಂದಿನ ಸವಾಲುಗಳಲ್ಲಿ ಇನ್ನೂ ಹೆಚ್ಚಾಗಿ ಅನುರಣಿಸುತ್ತಿದೆ.
ಈ ವರ್ಷ ಈ ಸಂದರ್ಭದಲ್ಲಿ ಭಗತ್ ಸಿಂಗ್‌ರ ಹಲವು ವಿಚಾರಗಳು ಒಂದು ಸಮಕಾಲೀನ ಪ್ರಸ್ತುತತೆ ಮತ್ತು ತುರ್ತಿನಿಂದ ಮಾರ್ದನಿಗೊಳ್ಳುತ್ತಿವೆ. 23 ವರ್ಷಗಳ ಅಲ್ಪ ಜೀವನಾವಧಿಯಲ್ಲಿಯೇ ಅವರು ರಚಿಸಿದ ಕೃತಿಗಳ ಅಗಾಧತೆ ನಮ್ಮನ್ನು ಇಂದಿಗೂ ದಿಗ್ಭ್ರಾಂತಿಗೊಳಿಸುತ್ತದೆ. ಮಾನವ ಜೀವನದ ಎಲ್ಲಾ ಆಯಾಮಗಳ ಕುರಿತಂತೆ ಹಲವಾರು ಪ್ರಶ್ನೆಗಳ ಮೇಲೆ ಅವರು ಬರೆದಿದ್ದಾರೆ. ತನ್ನ ಕ್ರಾಂತಿಕಾರಿ ಚಟುವಟಿಕೆಗಳ ನಡುವೆಯೇ ಸಮಯ ಮಾಡಿಕೊಂಡು ಅವರು ಬಹಳಷ್ಟು ಓದಿದ್ದರು, ಅಂತರರಾಷ್ಟ್ರೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ವಿಶ್ವದ ಬಹುತೇಕ ಬರಹಗಾರರು ಮತ್ತು ಕವಿಗಳಿಂದ ಸ್ಫೂರ್ತಿ ಪಡೆದಿದ್ದರು ಮತ್ತು ದುಡಿಯುವ ವರ್ಗದ ಸರ್ವಾಧಿಕಾರದಡಿ ಕ್ರಾಂತಿಕಾರಿ ವಿಮೋಚನೆಯ ಗುರಿಯನ್ನು ದೃಢವಾಗಿ ಎತ್ತಿ ಹಿಡಿದಿದ್ದರು ಎನ್ನುವುದು ಸ್ಪಷ್ಟ. ಇವರ ಜೀವನ ಮತ್ತು ಕಾರ್ಯದ ಬಗ್ಗೆ ಬಹಳ ಬರೆಯಲಾಗಿದೆ. ಮುಂದೆಯೂ ಇನ್ನಷ್ಟು ಬರೆಯಲಾಗುತ್ತದೆ. ಭಾರತದ ಯುವ ಸಮೂಹದ ಹಲವು ಪೀಳಿಗೆಗಳಿಗೆ ಇವರು ಸ್ಫೂರ್ತಿಯಾಗಿಯೇ ಉಳಿದಿದ್ದಾರೆ. ಇವರ ಶ್ರೀಮಂತ ಕೊಡುಗೆಗಳಲ್ಲಿ, ಕೆಲವು ವಿಷಯಗಳನ್ನು ಸಮಕಾಲೀನ ಸಂದರ್ಭದಲ್ಲಿ ಚರ್ಚಿಸುವುದು ಅಗತ್ಯ.
ದೆಹಲಿ ಬಾಂಬ್ ಕೇಸ್
ಇಂದು ಭಾರತದ ಸಂಸತ್ತು ಆಗಿರುವ, ಅಂದಿನ ದೆಹಲಿ ಕೇಂದ್ರೀಯ ಅಸೆಂಬ್ಲಿಯಲ್ಲಿ ಏಪ್ರಿಲ್ 8, 1929 ರಂದು ಹಾನಿಕಾರಕವಲ್ಲದ ಬಾಂಬ್ ಎಸೆದಿದ್ದು ದೇಶದ ಮತ್ತು ವಿಶ್ವದ ಗಮನ ಸೆಳೆದಿತ್ತು. ಇದನ್ನು ಉಲ್ಲೇಖಿಸಿ ನಂತರದಲ್ಲಿ, ‘ಹಿಂದುಸ್ತಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ’(HSRA ) ಹೊರಡಿಸಿದ ಕರಪತ್ರ ಹೀಗೆ ಹೇಳಿತ್ತು:
’ಕಿವುಡರಿಗೂ ಕೇಳಿಸಬೇಕಾದರೆ ಸದ್ದು ದೊಡ್ಡದಾಗಿರಬೇಕು’ ಎಂದು ಇದೇ ರೀತಿಯ ಸಂದರ್ಭದಲ್ಲಿ ಫ್ರಾನ್ಸ್ ನ ಒಬ್ಬ ಅರಾಜಕತಾವಾದಿ ಹುತಾತ್ಮ ವೈಲಾಂಟ್ ಉದ್ಗರಿಸಿದ ಈ ಅಮರ ಪದಗಳೊಂದಿಗೆ ನಾವು ಇಂದಿನ ನಮ್ಮ ಈ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದೇವೆ.’
ಈ ಬಾಂಬ್ ಪ್ರಕರಣ ಭಗತ್ ಸಿಂಗ್ ಪ್ರತಿನಿಧಿಸುವ `ಹಿಂಸಾ ಪಂಥ’ದ ಅಭಿವ್ಯಕ್ತಿ ಎನ್ನುವ ಆಪಾದನೆಗೆ ಉತ್ತರವಾಗಿ ದೆಹಲಿಯ ಸೆಷನ್ಸ್ ಕೋರ್ಟಿನಲ್ಲಿ ಬಿ.ಕೆ. ದತ್‌ರೊಡನೆ ನೀಡಿದ ಹೇಳಿಕೆ ಹೀಗಿದೆ: (ವಕೀಲರು ಮತ್ತು ಧೀಮಂತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಸಿಫ್ ಅಲಿ ಇದನ್ನು ಕೋರ್ಟಿನಲ್ಲಿ ಓದಿದ್ದರು.)
“
ಕ್ರಾಂತಿ: ಇಂಕ್‌ಲಾಬ್ ಜಿಂದಾಬಾದ್
ಭಗತ್ ಸಿಂಗ್ ಮತ್ತು ಹಿಂದುಸ್ತಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಗೆ ತಮ್ಮ ಗುರಿ ಕೇವಲ ಬ್ರಿಟಿಷ್ ಆಳ್ವಿಕೆಯಿಂದ ರಾಜಕೀಯ ಸ್ವಾತಂತ್ರ್ಯ ಮಾತ್ರವಲ್ಲ, ಈ ಸ್ವಾತಂತ್ರ್ಯ ಜನರ ಆರ್ಥಿಕ, ಸಾಮಾಜಿಕ ಮತ್ತಿತರ ಆಯಾಮಗಳಿಗೂ ಎಲ್ಲಾ ಹರಡಿ ಅದು `ಸಂಪೂರ್ಣ ಸ್ವಾತಂತ್ರ್ಯ’ ವಾಗಬೇಕು ಎನ್ನುವ ಸ್ಪಷ್ಟತೆ ಇತ್ತು. ಇನ್ನೊಂದು ಬೇರೆ ಸಂದರ್ಭದಲ್ಲಿ ಭಗತ್ ಸಿಂಗ್ ಹೀಗಂದಿದ್ದರು:
“ನಮ್ಮ ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷರ ಹಿಡಿತದಿಂದ ತಪ್ಪಿಸಿಕೊಳ್ಳುವುದು ಎಂದರ್ಥವಲ್ಲ; ಸ್ವಾತಂತ್ರ್ಯ ಎಂದರೆ ಸಂಪೂರ್ಣ ಸ್ವಾತಂತ್ರ್ಯ ಎಂದರೆ ಸಂಪೂರ್ಣ ಸ್ವಾತಂತ್ರ್ಯ – ಯಾವಾಗ ಜನರು ಒಬ್ಬರಿಗೊಬ್ಬರು ಮುಕ್ತವಾಗಿ ಜೊತೆಯಾಗಿರುತ್ತಾರೋ ಮತ್ತು ಮಾನಸಿಕ ಗುಲಾಮಗಿರಿಯಿಂದಲೂ ಸ್ವಾತಂತ್ರ್ಯ ಎಂದರ್ಥ”.
ಕೋರ್ಟಿಗೆ ವಿಚಾರಣೆಗೆ ಹೋಗುವಾಗ ಪ್ರತಿ ದಿನವೂ ಭಗತ್ ಸಿಂಗ್ ಮತ್ತು ಬಿ.ಕೆ. ದತ್ ಅವರುಗಳು ‘ಇಂಕ್‌ಲಾಬ್ ಜಿಂದಾಬಾದ್’(ಕ್ರಾಂತಿ ಚಿರಾಯುವಾಗಲಿ) ಎಂದು ಘೋಷಣೆ ಕೊಡುತ್ತ ಪ್ರವೇಶಿಸುತ್ತಿದ್ದರು. ಬ್ರಿಟಿಷ್ ಮ್ಯಾಜಿಸ್ಟೇಟ್ ರವರು ಈ ಘೋಷಣೆಯ ಅರ್ಥವೇನು, ಕ್ರಾಂತಿ ಎಂದರೇನು ಎಂದು ಕೇಳಿದಾಗ, ಲಿಖಿತ ರೂಪದಲ್ಲಿ ಇವರುಗಳು ಹೀಗೆ ಹೇಳಿದ್ದರು:
“ಕ್ರಾಂತಿಯು ರಕ್ತಪಾತಪೂರ್ಣ ಕಲಹವನ್ನು ಹೊಂದಿರಬೇಕು ಎಂದೇನೂ ಇಲ, ಅದರಲ್ಲ್ಲಿ ವೈಯಕ್ತಿಕ ದ್ವೇಷಾಸೂಯೆಗಳಿಗೆ ಜಾಗವಿಲ್ಲ. ಇದು ಬಾಂಬ್ ಮತ್ತು ಪಿಸ್ತೂಲಿನ ಪಂಥವಲ್ಲ. `ಕ್ರಾಂತಿ’ ಎಂದರೆ ಎದ್ದು ಕಾಣುವ ಅನ್ಯಾಯವನ್ನು ಒಳಗೊಂಡಿರುವ ಈ ಪ್ರಸಕ್ತ ವ್ಯವಸ್ಥೆ ಬದಲಾಗಬೇಕು ಎಂದು ನಮ್ಮ ಅರ್ಥ. ಉತ್ಪಾದಕರು ಅಥವಾ ಶ್ರಮಿಕರು ಸಮಾಜದ ಅತ್ಯಂತ ಅಗತ್ಯ ಭಾಗವಾಗಿದ್ದರೂ ಸಹ ತಮ್ಮ ಶೋಷಕರಿಂದ ತಮ್ಮ ದುಡಿಮೆಯ ಫಲದಿಂದ ವಂಚಿತರಾಗುತ್ತಿದ್ದಾರೆ ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಎಲ್ಲರಿಗೂ ಧಾನ್ಯ ಬೆಳೆಯುವ ರೈತ ತನ್ನ ಕುಟುಂಬದೊಂದಿಗೆ ಹಸಿದಿರುತ್ತಾನೆ, ಜಾಗತಿಕ ಮಾರುಕಟ್ಟೆಗೆ ಜವಳಿ ಬಟ್ಟೆಗಳನ್ನು ಒದಗಿಸುವ ನೇಕಾರನಿಗೆ ತನ್ನ ಮತ್ತು ತನ್ನ ಮಕ್ಕಳ ಮೈಯ್ಯನ್ನು ಪೂರ್ಣವಾಗಿ ಮುಚ್ಚಿಕೊಳ್ಳಲು ಆಗುತ್ತಿಲ್ಲ, ಅದ್ಬುತ ಅರಮನೆಗಳನ್ನು ನಿರ್ಮಿಸುವ ಮೇಸ್ರ್ತಿಗಳು, ಮರಗೆಲಸಗಾರರು, ಕುಶಲಕರ್ಮಿಗಳು ಕೊಳೆಗೇರಿಗಳಲ್ಲಿ ಬಹಿಷ್ಕೃತರ ರೀತಿಯಲ್ಲಿ ಜೀವಿಸುತ್ತಿದ್ದಾರೆ. ಸಮಾಜದ ಪರಾವಲಂಬಿಗಳಾಗಿರುವ ಬಂಡವಾಳಿಗರು ಮತ್ತು ಶೋಷಕರು ತಮ್ಮ ಮನಸ್ಸಿಗೆ ಬಂದ ಹಾಗೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದ್ದಾರೆ. ಈ ಅಗಾಧ ಅಸಮಾನತೆಗಳು ಮತ್ತು ಅವಕಾಶದಲ್ಲಿನ ಬಲವಂತದ ತಾರತಮ್ಯಗಳು ಒಂದು ಅವ್ಯವಸ್ಥೆಗೆ ಖಂಡಿತವಾಗಿಯೂ ಎಡೆ ಮಾಡುತ್ತವೆ. ಈ ವಿಧದ ಪರಿಸ್ಥಿತಿ ಬಹುಕಾಲ ಇರಲು ಸಾಧ್ಯವಿಲ್ಲ ಮತ್ತು ಲೋಲುಪತೆಯಲ್ಲಿರುವ ಪ್ರಸಕ್ತ ಸಮಾಜ ಒಂದು ಜ್ವಾಲಾಮುಖಿಯ ಮೇಲೆ ಕೂತಿದೆ ಎಂಬುದು ವೇದ್ಯವಾಗುತ್ತಿದೆ.
ಈ ನಾಗರಿಕತೆಯ ಸಮಸ್ತ ಸೌಧವನ್ನು ಸಮಯದೊಳಗೆ ಕಾಪಾಡದಿದ್ದಲ್ಲಿ, ಈ ಸೌಧ ಕುಸಿದು ಬೀಳುತ್ತದೆ. ಹೀಗಾಗಿ ಕ್ಷಿಪ್ರ ಬದಲಾವಣೆ ಅಗತ್ಯ ಮತ್ತು ಸಮಾಜವನ್ನು ಸಮಾಜವಾದಿ ಆಧಾರದಲ್ಲಿ ಮರುಸಂರಚನೆ ಮಾಡುವುದು ಇದನ್ನು ಅರಿತವರ ಕರ್ತವ್ಯವಾಗುತ್ತದೆ. ಇದಾಗದಿದ್ದರೆ ಮತ್ತು ಮಾನವನಿಂದ ಮಾನವನ ಶೋಷಣೆ ಮತ್ತು ದೇಶಗಳಿಂದ ದೇಶಗಳ ಶೋಷಣೆಯನ್ನು ಕೊನೆಗೊಳಿಸದಿದ್ದರೆ, ಮಾನವತೆ ಎದುರಿಸುತ್ತಿರುವ ಸಂಕಷ್ಟ ಮತ್ತು ಮಾರಣ ಹೋಮದ ಅಪಾಯಗಳನ್ನು ತಡೆಯಲು ಸಾಧ್ಯವಿಲ್ಲ. ಯುದ್ಧ ನಿಲ್ಲಿಸುವುದು ಮತ್ತು ವಿಶ್ವಶಾಂತಿಯ ಯುಗದ ಸ್ಥಾಪನೆ ಎಲ್ಲವೂ ಬರೇ ಆಷಾಢಭೂತಿತನ.
ಕ್ರಾಂತಿ’ ಎಂದರೆ ನಮ್ಮ ಅರ್ಥದಲ್ಲಿ ಅಂತಿಮವಾಗಿ ಇಂತಹ ಭಂಗಗಳಿಂದ ಬೆದರಿಕೆಗೊಳಗಾಗದ, ಶ್ರಮಜೀವಿಗಳ ಸಾರ್ವಭೌಮತೆಯನ್ನು ಮಾನ್ಯ ಮಾಡುವ ಮತ್ತು ಒಂದು ವಿಶ್ವ ಒಕ್ಕೂಟ ಮಾನವತೆಯನ್ನು ಬಂಡವಾಳಶಾಹಿಯ ಗುಲಾಮಗಿರಿಯಿಂದ ಮತ್ತು ಸಾಮ್ರಾಜ್ಯಶಾಹಿ ಯುದ್ಧಗಳ ಸಂಕಷ್ಟಗಳಿಂದ ಮುಕ್ತಗೊಳಿಸುವ ಒಂದು ಸಮಾಜ ವ್ಯವಸ್ಥೆಯನ್ನು ಸ್ಥಾಪಿಸುವುದು.
“ಇದು ನಮ್ಮ ಆದರ್ಶ, ಮತ್ತು ಈ ತತ್ವವನ್ನು ನಮ್ಮ ಸ್ಫೂತಿಯಾಗಿ ತೆಗೆದುಕೊಂಡು ನಾವು ಒಂದು ನ್ಯಾಯಯುತ ಮತ್ತು ಗಟ್ಟಿಯಾದ ಎಚ್ಚರಿಕೆ ನೀಡಿದ್ದೇವೆ.
“ಆದರೆ, ಒಂದು ವೇಳೆ ಇದಕ್ಕೆ ಲಕ್ಷ್ಯಗೊಡದಿದ್ದರೆ ಮತ್ತು ಸರ್ಕಾರದ ಪ್ರಸಕ್ತ ವ್ಯವಸ್ಥೆ ಉಕ್ಕೇರಿ ಬರುತ್ತಿರುವ ಸ್ವಾಭಾವಿಕ ಶಕ್ತಿಗಳಿಗೆ ತೊಡಕಾಗಿ ಮುಂದುವರೆದರೆ, ಎಲ್ಲ ಅಡೆತಡೆಗಳನ್ನು ಕಿತ್ತೆಸೆಯುವ ಮತ್ತು ಕ್ರಾಂತಿಯ ಆದರ್ಶವನ್ನು ಸಾಕಾರಗೊಳಿಸಲು ಶ್ರಮಜೀವಿಗಳ ದುಡಿಯುವ ವರ್ಗದ ಸರ್ವಾಧಿಕಾರವನ್ನು ಸ್ಥಾಪಿಸುವುದನ್ನು ಖಾತ್ರಿಗೊಳಿಸುವ ಒಂದು ಉಗ್ರ ಹೋರಾಟ ನಡೆಯುತ್ತದೆ. ಕ್ರಾಂತಿಯು ಮಾನವಕುಲದ ಅವಿಭಾಜ್ಯ ಹಕ್ಕು. ಸ್ವಾತಂತ್ರ್ಯವು ಎಲ್ಲರ ಒಂದು ಅವಿನಾಶಿ ಜನ್ಮಸಿದ್ಧ ಹಕ್ಕು. ಶ್ರಮಿಕರು ಸಮಾಜದ ನೈಜ ಪೋಷಕರು ಮತ್ತು ಕಾರ್ಮಿಕರ ಈ ಅಂತಿಮ ನಿಯತಿಯ ಸಾರ್ವಭೌಮತೆ.”
ಸಂಸ್ಥೆಯ ವಿರುದ್ಧ, ವ್ಯಕ್ತಿಯ ವಿರುದ್ಧವಲ್ಲ
ಇಂದು ಬಿಜೆಪಿ ಕೇಂದ್ರ ಸರ್ಕಾರವು ಭಾರತದ ಸಂಸತ್ತನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸವೆಸುತ್ತಿರುವುದನ್ನು ಭಾರತವು ಎದುರಿಸುತ್ತಿರುವ ಸಂದರ್ಭದಲ್ಲಿ ಹೇಗೆ ಆ ಸಂಸ್ಥೆಯು ಜನರ ಆಶೋತ್ತರಗಳನ್ನು ಪ್ರತಿನಿಧಿಸದೆ ಆಳುವ ವರ್ಗಗಳಿಂದ ಅದೇ ಜನರ ವಿರುದ್ಧವಾಗುತ್ತದೆ ಎಂದು ಭಗತ್‌ಸಿಂಗ್ ಎಚ್ಚರಿಸಿದ್ದು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಅನುರಣನಗೊಳ್ಳುತ್ತಿದೆ:
“ಸದನ ಅಂಗೀಕರಿಸಿದ ಗಂಭೀರ ಸ್ವರೂಪದ ನಿರ್ಣಯಗಳನ್ನು ಕಡೆಗಣಿಸಿ ಪಾದದ ಕೆಳಗೆ ಹೊಸಕಿ ಹಾಕಲಾಗುತ್ತಿದೆ…” “ಶಾಸಕಾಂಗದ ಚುನಾಯಿತ ಸದಸ್ಯರುಗಳು ಒಪ್ಪಲಾಗದು ಎಂದು ತಿರಸ್ಕರಿಸಿದ ಸರ್ಕಾರದ ಕ್ರಮಗಳು ಮತ್ತು ಪ್ರಸ್ತಾಪಗಳನ್ನು ಕೇವಲ ಒಂದು ಲೇಖನಿಯ ಬಳಕೆಯಿಂದ ಮರುಚಾಲ್ತಿ ಮಾಡಲಾಗುತ್ತಿದೆ”.
ಈ ಮಾತುಗಳು, ನಾವು ಸಂವಿಧಾನದ ಕೇಂದ್ರ ಮಹತ್ವವನ್ನು ಎತ್ತಿ ಹಿಡಿಯುವ ಹೋರಾಟದ ನಡುವೆ ಇರುವಾಗ, `ಜನತೆಯ ಸಾರ್ವಭೌಮತೆಯನ್ನು ಪ್ರತಿಫಲಿಸುವ ‘ನಾವು, ಜನತೆ…’ ಎಂಬುದನ್ನು ಪ್ರಭುತ್ವದ ಒಂದು ಪ್ರಮುಖ ಅಂಗವಾದ ಸಂಸತ್ತಿನಲ್ಲಿ ಹೊಸಕಿ ಹಾಕುತ್ತಿರುವಾಗ, ಮೈನಡುಗಿಸುವ ಜ್ಞಾಪನೆಗಳು.
ಕೋಮುವಾದ v/s ಜಾತ್ಯತೀತತೆ
1919 ರಲ್ಲಿ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ನಂತರ, ಬ್ರಿಟಿಷರು ತಮ್ಮ ಒಡೆದು ಆಳುವ ಅಸ್ತ್ರವನ್ನು ಮತ್ತಷ್ಟು ತೀಕ್ಷ್ಣಗೊಳಿಸಿದರು. ನಿರ್ದಯವಾಗಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಜನಗಳಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಜಂಟಿಯಾಗಿ ಭಾಗವಹಿಸುತ್ತಿದ್ದ ಸಿಖ್ಖರು, ಮುಸ್ಲಿಮರು ಮತ್ತು ಹಿಂದೂಗಳು ಸೇರಿದ್ದರು. ತರುವಾಯ, ದೇಶಾದ್ಯಂತ ಕೋಮುಗಲಭೆಗಳು ಭುಗಿಲೆದ್ದವು. 1924 ರಲ್ಲಿ, ಪಂಜಾಬ್‌ನ ಕೊಹತ್‌ನಲ್ಲಿ ಇಂತಹ ಒಂದು ಭೀಕರ ಗಲಭೆಯ ನಂತರ ಸ್ವಾತಂತ್ರ್ಯ ಚಳವಳಿಯಲ್ಲಿ ಕೋಮುಗಲಭೆಗಳ ಕುರಿತು ಒಂದು ರಾಷ್ಟ್ರೀಯ ಚರ್ಚೆ ಹೊರ ಹೊಮ್ಮಿತು. ಸಾರ್ವತ್ರಿಕವಾಗಿ, ಸ್ವಾತಂತ್ರ್ಯ ಚಳವಳಿಯು ಅಂತಹ ಕಲಹಗಳಿಗೆ ಅಂತ್ಯ ಹಾಡುವ ಅಗತ್ಯವನ್ನು ಗುರುತಿಸಿತು ಮತ್ತು ಅಂದಿನ ಕಾಂಗ್ರೆಸ್ ನಾಯಕತ್ವವು ಹಿಂದೂ ಮತ್ತು ಮುಸ್ಲಿಂ ನಾಯಕರು ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಪ್ರಯತ್ನವನ್ನ ಮಾಡಿತು. ಇದನ್ನು ಭಗತ್‌ಸಿಂಗ್ ಬೆಂಬಲಿಸಿದರು.
“ಭಾರತ v/s ಇಂಡಿಯಾ” ಸ್ಥಿತಿ ಇಂದು ನಿಜಕ್ಕೂ ಕರುಣಾಜನಕವಾಗಿದೆ. ಒಂದು ಧರ್ಮದ ಪೂಜಕರು ಮತ್ತೊಂದು ಧರ್ಮದ ಪೂಜಕರ ಪರಮ ಶತ್ರುಗಳಾಗಿದ್ದಾರೆ. ಕೇವಲ ಒಂದು ಧರ್ಮಕ್ಕೆ ಸೇರಿರುವುದು ಈಗ ಮತ್ತೊಂದು ಧರ್ಮದ ಶತ್ರುಗಳಾಗಲು ಸಾಕಷ್ಟು ಕಾರಣವೆಂದು ಪರಿಗಣಿಸಲಾಗಿದೆ. ಇದನ್ನು ನಂಬಲು ನಮಗೆ ಕಷ್ಟವಾಗಿದೆ. ಲಾಹೋರ್‌ನಲ್ಲಿ ಹೊಸದಾಗಿ ನಡೆಯುತ್ತಿರುವ ಹಿಂಸಾಚಾರವನ್ನು ನೋಡೋಣ…… ಈ ಪರಿಸ್ಥಿತಿಗಳಲ್ಲಿ ಹಿಂದೂಸ್ತಾನದ ಭವಿಷ್ಯವು ತುಂಬ ಮಂಕಾಗಿ ಕಾಣುತ್ತದೆ…….. ಮತ್ತು ಈ ಧಾರ್ಮಿಕ ಗಲಭೆಗಳು ಹಿಂದೂಸ್ತಾನವನ್ನು ಎಷ್ಟು ಕಾಲ ಪೀಡಿಸುತ್ತವೆ ಎಂದು ಯಾರಿಗೂ ತಿಳಿದಿಲ್ಲ.”
ಇದಕ್ಕೆ ಪ್ರತ್ಯೌಷಧ ಏನು? ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸುವುದೇ ಇದಕ್ಕೆ ಉತ್ತರ ಎಂದು ಭಗತ್‌ಸಿಂಗ್‌ಗೆ ಸ್ವಷ್ಟವಾಗಿತ್ತು.
“1914-15 ರಲ್ಲಿ ಹುತಾತ್ಮರು ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಿದರು. ಧರ್ಮವು ವ್ಯಕ್ತಿಯ ವೈಯಕ್ತಿಕ ವಿಷಯ ಎಂದು ಅವರು ನಂಬಿದ್ದರು ಮತ್ತು ಬೇರೆ ಯಾರು ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ಧರ್ಮವು ಕೂಡ ಅದು ಎಲ್ಲರನ್ನೂ ಒಂದುಗೂಡಿಸುವುದಿಲ್ಲವಾದ್ದರಿಂದ ಅಥವ ಒಟ್ಟಿಗೆ ಕೆಲಸ ಮಾಡುವಂತೆ ಮಾಡುವುದಿಲ್ಲವಾದ್ದರಿಂದ ತನ್ನನ್ನು ರಾಜಕೀಯಕ್ಕೆ ತಳ್ಳಲು ಬಿಡಬಾರದು. ಆದ್ದರಿಂದಲೇ ಘದರ್ ಪಾರ್ಟಿಯಂತಹ ಚಳವಳಿಗಳು ಪ್ರಬಲವಾಗಿದ್ದವು, ಅವು ಒಂದೇ ಆತ್ಮವನ್ನು ಹೊಂದಿದ್ದವು. ಅದರಲ್ಲಿ ಸಿಖ್ಖರು ಗಲಿಗೇರುವುದರಲ್ಲಿ ಮುಂಚೂಣಿಯಲ್ಲಿದ್ದರೆ, ಹಿಂದೂಗಳು ಮತ್ತು ಮುಸ್ಲಿಮರು ಸಹ ಹಿಂದುಳಿದಿರಲಿಲ್ಲ.
“ಪ್ರಸ್ತುತ, ಕೆಲವು ಭಾರತೀಯ ನಾಯಕರು ಕೂಡ ಧರ್ಮವನ್ನು ರಾಜಕೀಯದಿಂದ ಬೆರ್ಪಡಿಸಲು ಬಯಸುತ್ತಾರೆ. ಜಗಳಗಳನ್ನು ತೊಡೆದುಹಾಕಲು ಇದು ಸುಂದರವಾದ ಪರಿಹಾರವಾಗಿದೆ, ನಾವು ಅದನ್ನು ಬೆಂಬಲಿಸುತ್ತೇವೆ.
“ಧರ್ಮವು ರಾಜಕೀಯದಿಂದ ಬೇರ್ಪಟ್ಟರೆ, ನಾವೆಲ್ಲರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾದರೂ ರಾಜಕೀಯದಲ್ಲಿ ಒಟ್ಟಿಗೆ ಸೇರಬಹುದು”.
ಆದಾಗ್ಯೂ, ಭಗತ್‌ಸಿಂಗ್ ಕೋಮುವಾದವನ್ನು ತೊಡೆದು ಹಾಕಲು ಅಂತಿಮ ಉತ್ತರವಾಗಿ ವರ್ಗ ಪ್ರಜ್ಞೆಯ ಮಹತ್ವವನ್ನು ಒತ್ತಿ ಹೇಳಿದರು. ಅವರು ಹೀಗೆ ಬರೆದಿದ್ದಾರೆ.
“ಇಂತಹ ಗಲಭೆಗಳ ಬಗ್ಗೆ ಹೃದಯ ಕಲಕುವ ಅಂಶಗಳನ್ನು ಕೇಳಿದರೂ, ಕಲ್ಕತ್ತಾ ಗಲಭೆಗಳ ಬಗ್ಗೆ ಸಕಾರಾತ್ಮಕವಾದುದು ಕೇಳಬಂದಿದೆ. ಕಾರ್ಮಿಕ ಸಂಘಗಳ ಕಾರ್ಮಿಕರು ಗಲಭೆಗಳಲ್ಲಿ ಭಾಗವಹಿಸಲಿಲ್ಲ, ಪರಸ್ಪರ ಹೊಡೆದಾಡಲಿಲ್ಲ; ಮತ್ತೊಂದೆಡೆ; ಎಲ್ಲಾ ಹಿಂದೂಗಳು ಮತ್ತು ಮುಸ್ಲಿಮರು ಗಿರಣಿಗಳಲ್ಲಿ ಪರಸ್ಪರ ಸಾಮಾನ್ಯವಾಗಿ ವರ್ತಿಸುತ್ತಿದ್ದರು, ಅವರು ಗಲಭೆಗಳನ್ನು ತಡೆಯಲು ಸಹ ಪ್ರಯತ್ನಿಸಿದರು. ಏಕೆಂದರೆ ಅವರುಗಳಲ್ಲಿ ವರ್ಗಪ್ರಜ್ಞೆ ಇತ್ತು ಮತ್ತು ಅವರ ವರ್ಗಕ್ಕೆ ಏನು ಪ್ರಯೋಜನವಾಗಲಿದೆ ಎಂಬುದನ್ನು ಅವರು ಸಂಪೂರ್ಣವಾಗಿ ಗುರುತಿಸಿದ್ದಾರೆ. ಇದು ಕೋಮು ಗಲಭೆಯನ್ನು ತಡೆಯಬಲ್ಲ ವರ್ಗ ಪ್ರಜ್ಞೆಯ ಸುಂದರ ಮಾರ್ಗವಾಗಿದೆ”.
ಮಾಧ್ಯಮ
ಕೋಮು ಗಲಭೆಗಳ ರಚನೆಯನ್ನು ವಿಶ್ಲೇಷಿಸುತ್ತ ಭಗತ್‌ಸಿಂಗ್ ಹೀಗೆ ಹೇಳಿದ್ದಾರೆ:
“ನಾವು ನೋಡಿದ ಹಾಗೆ ಕೋಮು ಮುಂದಾಳುಗಳು ಮತ್ತು ವೃತ್ತ ಪತ್ರಿಕೆಗಳು ಗಲಭೆಯ ಹಿಂದಿದ್ದಾರೆ.” ಅಲ್ಲದೆ ಕೆಲವು ವೃತ್ತ ಪತ್ರಿಕೆಗಳು “ಕೋಮು ಗಲಭೆಗಳ ಕಿಡಿ ಹೊತ್ತಿಸುವಲ್ಲಿ ವಿಶೇಷ ಪಾತ್ರ ವಹಿಸಿದವು” ಎಂದು ಅವರು ಹೇಳಿದ್ದರು.
“ಒಂದು ಅತ್ಯುನ್ನತ ವರ್ಚಸ್ಸನ್ನು ಒಂದು ಕಾಲಘಟ್ಟದಲ್ಲಿ ಹೊಂದಿದ್ದ ಪತ್ರಿಕೋದ್ಯಮ ವೃತ್ತಿಯು ಈಗ ಬಹಳ ಕೊಳಕಾಗಿದೆ. ಈ ವ್ಯಕ್ತಿಗಳು ಪ್ರಚೋದನಕಾರಿ ಸುದ್ದಿಗಳನ್ನು ಪ್ರಮುಖವಾಗಿ ಪ್ರಕಟಿಸಿ ಜನರಲ್ಲಿ ಒಬ್ಬರ ವಿರುದ್ಧ ಇನ್ನೊಬ್ಬರ ಭಾವನೆಗಳನ್ನು ಕೆರಳಿಸುತ್ತಾರೆ ಮತ್ತು ಇದು ಗಲಭೆಗೆ ಈಡು ಮಾಡುತ್ತದೆ. ಒಂದೆರಡು ಸ್ಥಳಗಳಲ್ಲಿ, ಹಲವು ಜಾಗಗಳಲ್ಲಿ ಸ್ಥಳೀಯ ಪತ್ರಿಕೆಗಳು ಅವಹೇಳನಕಾರಿ ಲೇಖನಗಳನ್ನು ಬರೆದಿರುವುದರಿಂದ ಗಲಭೆಗಳು ನಡೆದಿವೆ. ಕೆಲವೇ ವರದಿಗಾರರು ಮಾತ್ರ ತಮ್ಮ ವಿವೇಚನೆಯನ್ನು ಕಾಯ್ದುಕೊಂಡಿದ್ದರು, ಇಂತಹ ದಿನಗಳಲ್ಲಿ ಶಾಂತಚಿತ್ತವನ್ನು ಕಾಯ್ದುಕೊಂಡಿದ್ದರು.
“ವೃತ ಪತ್ರಿಕೆಗಳ ನಿಜವಾದ ಕರ್ತವ್ಯವು ಶಿಕ್ಷಣ ನೀಡುವುದು, ಜನರಲ್ಲಿನ ಸಂಕುಚಿತ ಭಾವನೆಗಳನ್ನು ತೆಗೆದು ಹಾಕುವುದು, ಕೋಮು ಭಾವನೆಗಳನ್ನು ಕೊನೆಗೊಳಿಸುವುದು, ಪರಸ್ಪರ ಹೊಂದಾಣಿಕೆಯನ್ನು ಉತ್ತೇಜಿಸುವುದು ಮತ್ತು ಒಂದು ಸಮಾನ ಭಾರತೀಯ ರಾಷ್ಟ್ರೀಯತೆಯನ್ನು ಸ್ಥಾಪಿಸುವುದು ಆಗಿತ್ತು. ಆದರೆ ಅವು ತಮ್ಮ ಪ್ರಮುಖ ವ್ಯವಹಾರವನ್ನು ಮೌಢ್ಯ ಹರಡಿಸಲು, ಸಂಕುಚಿತತೆಯನ್ನು ಭೋಧಿಸಲು, ಪೂರ್ವಾಗ್ರಹಗಳನ್ನು ಉಂಟು ಮಾಡಲು, ಗಲಭೆಗಳನ್ನು ಪ್ರೋತ್ಸಾಹಿಸಲು ಮತ್ತು ಭಾರತದ ಸಮಾನ ರಾಷ್ಟ್ರೀಯತೆಯನ್ನು ನಾಶಗೊಳಿಸುವತ್ತ ತಿರುಗಿಸಿದವು. ಹೀಗಾಗಿಯೇ ಭಾರತದ ಇಂದಿನ ಸ್ಥಿತಿಯನ್ನು ನೋಡಿದಾಗ ನಮ್ಮ ಕಣ್ಣಿನಿಂದ ರಕ್ತ ಸುರಿಯುತ್ತಿರುವುದು ಮತ್ತು ನಮ್ಮ ಮನಸ್ಸಿನಲ್ಲಿ ‘ಹಿಂದೂಸ್ತಾನ ಏನಾಗಬಹುದು?’ ಎಂಬ ಪ್ರಶ್ನೆ ಏಳುತ್ತಿರುವುದು.”
ಸಮಕಾಲೀನ ಸಂದರ್ಭದಲ್ಲಿಯೂ ಕಾರ್ಪೊರೇಟ್ ಮಾಧ್ಯಮಗಳ ಪಾತ್ರದಲ್ಲಿ ಭಗತ್‌ಸಿಂಗ್‌ರ ಈ ಮಾತುಗಳು ಮೈನಡುಗಿಸುವ ರೀತಿಯಲ್ಲಿ ಮಾರ್ದನಿಗೊಳ್ಳುತ್ತಿವೆ. ಕೆಲವೇ ಕೆಲವು ಆದರಣೀಯ ಮಾಧ್ಯಮಗಳು ಇದಕ್ಕೆ ಹೊರತಾಗಿವೆ.
ಸಾಮಾಜಿಕ ನ್ಯಾಯ
ಸಾಮಾಜಿಕ ನ್ಯಾಯ ಮತ್ತು ಎಲ್ಲ ಮಾನವ ಜನಾಂಗಕ್ಕೆ ಸಾರ್ವತ್ರಿಕ ಸಮಾನತೆಯ ಪ್ರಾಮುಖ್ಯತೆಯನ್ನು ಭಗತ್ ಸಿಂಗ್ ಒತ್ತಿ ಹೇಳಿದ್ದರು.
“…… ಪ್ರತಿಯೊಬ್ಬರೂ ಸಮಾನರಾಗಿರಬೇಕು ಎಂದು ನಾವು ಬಯಸುತ್ತೇವೆ. ಯಾವುದೇ ರೀತಿಯ ವರ್ಗ ವಿಭಜನೆಯಯಾಗಲಿ ಹಾಗೆಯೇ ಸ್ಪೃಶ್ಯರು ಮತ್ತು ಅಸ್ಪೃಶ್ಯರು ಎಂಬ ವಿಭಜನೆಯಾಗಲೀ ಇರಬಾರದು. ಆದರೆ ಸನಾತನ ಧರ್ಮವು ಈ ಬೇಧಬಾವದ ಪರವಾಗಿದೆ. ಈ ಇಪ್ಪತ್ತನೇ ಶತಮಾನದಲ್ಲಿಯೂ ಓರ್ವ ತಳ ಜಾತಿಯ ಹುಡುಗ ಯಾವುದೇ ಪಂಡಿತ ಅಥವಾ ಮೌಲ್ವಿಗೆ ಹಾರ ಹಾಕಿದರೆ ಅವರು ತಾವು ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡುತ್ತಾರೆ ಮತ್ತು ಅಸ್ಪೃಶ್ಯರಿಗೆ ಜನಿವಾರ ಹಾಕಲು ವಿರೋಧಿಸುತ್ತಾರೆ. ಒಂದೇ ನಾವು ಈ ಧರ್ಮದ ವಿರುದ್ಧವಾಗಿ ಏನು ಹೇಳದಿರುವ ಪಣ ತೊಟ್ಟು ಮನೆಯಲ್ಲಿ ಮೌನವಾಗಿ ಕುಳಿತಿರಬೇಕು, ಇಲ್ಲವೇ ನಾವು ಇದನ್ನು ವಿರೋಧಿಸಬೇಕು.”
ಭಗತ್‌ಸಿಂಗ್ ತಮ್ಮ ಪ್ರಬಂಧ `ನಾನೇಕೆ ಒಬ್ಬ ನಾಸ್ತಿಕ’ ಬರೆದಾಗ, ಅದು ಅವರ ವೈಚಾರಿಕತೆ, ಭೌತಿಕವಾದೀ ತಿಳಿವಳಿಕೆ ಮತ್ತು ಅವರನ್ನು ಪ್ರಭಾವಿಸಿದ್ದ ಮಾರ್ಕ್ಸ್ ವಾದದ ಜಾಗತಿಕ ಕಣ್ಣೋಟದ ಪ್ರತೀಕವಾಗಿತ್ತು. ಆದರೆ ಮುಖ್ಯವಾಗಿ ಸಂಕುಚಿತ ಧರ್ಮಾಂಧತೆಗಾಗಿ ಧರ್ಮ ಅಥವಾ ಜನರ ಧಾರ್ಮಿಕ ಭಾವನೆಗಳನ್ನು ಶೋಷಿಸುವುದನ್ನು ಭಗತ್‌ಸಿಂಗ್ ಜನರ ಶತ್ರು ಎಂದು ಕಾಣುತ್ತಿದ್ದರು. ಇದು ಎಂತಹ ಮುನ್ನರಿವಿನ ವಿಚಾರ ಎಂಬುದು ಪ್ರಸಕ್ತ ಸಂದರ್ಭದಲ್ಲಿ ಎದ್ದು ಕಾಣಿಸುತ್ತಿದೆ. ಜನರಿಗೆ ಅವರ ಸಂಪೂರ್ಣ ಸ್ವಾತಂತ್ರ್ಯವನ್ನು ನಿರಾಕರಿಸಲು ಧಾರ್ಮಿಕ ಭಾವನೆಗಳನ್ನು ಒಂದು ಬಲವಾದ ಆಯುಧವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.
ಈ ಮಹಾನ್ ಕ್ರಾಂತಿಕಾರಿಗೆ ಮತ್ತೊಮ್ಮೆ ನಮ್ಮ ಶ್ರದ್ಧಾಂಜಲಿಯನ್ನು, ಭಗತ್‌ಸಿಂಗ್ ರವರು ಒಂದು ಉತ್ತಮ ಭಾರತದ ನಿರ್ಮಾಣಕ್ಕಾಗಿ ಮತ್ತು ನಮ್ಮ ಜನರ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ನೀಡಿದ ಕೆಲವು ಅಮೂಲ್ಯ ಕೊಡುಗೆಗಳನ್ನು ಮುಂದೊಯ್ಯುವ ಪ್ರಜ್ಞಾಪೂರ್ವಕ ಪ್ರಯತ್ನದೊಂದಿಗೆ ಅರ್ಪಿಸುತ್ತೇವೆ.
ಅನುವಾದ: ಶೃಂನಾ ಮತ್ತು ರಾಮು