ಭಗತ್ಸಿಂಗ್ ಮತ್ತು ಸಂಗಾತಿಗಳ ಬಲಿದಾನದ ನೆನಪು ಹುತಾತ್ಮ
ಕೆ. ಮಹಾಂತೇಶ
‘ನಾವು…… ಸಾವಿಗೆ ಅಂಜುವವರಲ್ಲ
ಸತ್ತ ನಂತರವೂ ನಾವು…. ಜೀವಂತವಾಗಿರುತ್ತೇವೆ.’
ಇದು 1931 ಮಾರ್ಚ 23 ರಂದು ಲಾಹೋರ ಜೈಲಿನಲ್ಲಿ ನಗುನಗುತಾ ನೇಣುಗಂಭವೇರುವಾಗ ಇಡೀ ದೇಶದ ಜನರಿಗೆ ಸ್ಪೂರ್ತಿ ನೀಡುವಂತೆ ಆ ಯುವ ಮನಸ್ಸುಗಳು ನೀಡಿದ ಹೇಳಿಕೆಯದು.
ಹೌದು ಇನ್ನೂ ಚಿರಯೌವ್ವನದ ಕನಸುಗಳನ್ನು ಒಡಲಲ್ಲಿ ತುಂಬಿಕೊAಡಿದ್ದ ಆ ಯುವಕರದ್ದು ಸಾಯುವ ವಯಸ್ಸಲ್ಲ…ಆದರೆ ಅವರಲ್ಲಿ ಆ ಎಳೆಯದರಲ್ಲೇ ಮನೆ ಮಾಡಿಕೊಂಡಿದ್ದ ದೇಶಪ್ರೇಮವೆಂಬ ಕಿಚ್ಚು ಅವರನ್ನು ನೇಣುಗಂಭದ ಕಟಕಟೆಯತ್ತ ತಂದು ನಿಲ್ಲಿಸಿತ್ತು. ವ್ಯಾಪಾರಕ್ಕಾಗಿ ತಕ್ಕಡಿ ಹಿಡಿದು ಬಂದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಾ ಅದಕ್ಕೆ ಎದುರಾದ ಎಲ್ಲಾ ಪ್ರತಿರೋಧಗಳನ್ನು ತಮ್ಮ ಬಂದೂಕಿನ ತುದಿಯಿಂದ ಹೊಸಕಿಹಾಕುತ್ತಿದ್ದ ಕಾಲವದು. ಆಂಗ್ಲರ ಅಂತಹ ಕ್ರೌರ್ಯದ ವಿರುದ್ದ ಎಳೆ ವಯಸ್ಸಲ್ಲಿ ಹೋರಾಡಿದ ಭಗತ್ಸಿಂಗ್, ಸುಖದೇವ, ರಾಜಗುರು ಎಂಬ ಚೇತನಗಳು ಅದಕ್ಕಾಗಿ ತಮ್ಮ ಯೌವ್ವನದ ಸುಗಂಧವನ್ನೇ ಬ್ರಿಟಿಷರ ನೇಣುಗಂಭಕ್ಕೆ ಬಲಿದಾನವಾಗಿಸಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಜ್ವಲಿಸುವ ತಾರೆಗಳಾಗಿ ಮಿಂಚಿದವು. ಆ ಸಮರಧೀರ ಸಂಗಾತಿಗಳು ಹುತಾತ್ಮರಾಗಿ ಇದೀಗ 93 ವರ್ಷಗಳಾದವು. ಹಳೆಯದನ್ನು ಕಳಚಿ ಹೊಸ ಚಿಗುರಿನ ಕನಸುಗಳೊಂದಿಗೆ ಜನರು ಬದುಕು ಆರಂಭಿಸುವ ಯುಗಾದಿಯ ಸಮಯವಿದು.
“ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತ್ತಿದೆ…”,
ಎಂಬ ಕವಿವಾಣಿ, ವಸಂತದಲ್ಲಿ ಚಿಗರೊಡೆದು ಹಸಿರನ್ನೊತ್ತು ಮೈಚೆಲ್ಲಿ ಸುಗಂಧದ ಸೊಬಗನ್ನೆಲ್ಲಾ ಜಗಕೆ ಪಸರಿಸುವ ಪ್ರಕೃತಿ ಸೌಂಧರ್ಯವನ್ನು ಕುರಿತು ವರ್ಣೀಸುತ್ತಿದೆ. ಇದೇ ಸಂಧರ್ಭದಲ್ಲೇ ಬರುವ ಭಗತ್ಸಿಂಗ್ ಮತ್ತು ಆತನ ಸಂಗಾತಿಗಳು ಹುತಾತ್ಮರಾದ ದಿನವು ಸಮಾಜದಲ್ಲಿ ಪ್ರತಿನಿತ್ಯ ಬದುಕ ಬಂಡಿ ಸಾಗಿಸಲು ಕಷ್ಟಪಡುವ ಮತ್ತು ಒಂದು ಸುಂದರ ಬದುಕನ್ನು ಕಟ್ಟಿಕೊಂಡು ಅದರೊಳಗೆ ತನ್ನ ಸುಖವನ್ನು ಕಾಣಲು ಹೆಣಗಾಡುವ ಕೋಟ್ಯಾಂತರ ದುಡಿಯುವ ಜನರಿಗೆ ಬದಲಾವಣೆಯ ದಿನವಾಗಿ ಕಂಡು ಬರುತ್ತಿದೆ. ಪ್ರಕೃತಿಯಲ್ಲಿ ಪ್ರತಿ ವಸಂತ ಕಾಲದಲ್ಲಿ ಕಂಡು ಬರುವ ಹೊಸ ಚಿಗುರು ಹೊಸ ಹರುಷ ಹಾಗೂ ಹೊಸತನಗಳು ಮಾನವ ಸಂಬAಧದಲ್ಲೂ ಮೇಳೈಸಬೇಕು ಅದಕ್ಕಾಗಿ ಈ ಜಗತ್ತಿನಲ್ಲಿ ‘ಮನುಷ್ಯರಿಂದ ಮನುಷ್ಯರ ಮೇಲೆ ನಡೆಯುವ ಎಲ್ಲಾ ರೀತಿಯ ಶೋಷಣೆ ಕೊನೆಗಾಣಬೇಕೆಂಬುದು ಭಗತ್ ಸಿಂಗ್ ಮತ್ತವರ ಸಂಗಾತಿಗಳ ಅಂತಿಮ ಬಯಕೆಯಾಗಿತ್ತು.
ಹಾಗಾಗಿಯೇ… ಭಗತ್ಸಿಂಗ್ ದೃಷ್ಟಿಯಲ್ಲಿ… ‘ಕ್ರಾಂತಿ’ ಎಂದರೆ………….. ಸ್ಪಷ್ಟವಾಗಿ ಅನ್ಯಾಯದ ಬುನಾದಿಯ ಮೇಲೆ ಕಟ್ಟಲ್ಪಟ್ಟಿರುವ ಇಂದಿನ ಶೋಷಣಾ ವ್ಯವಸ್ಥೆ ಬದಲಾಗಬೇಕು. ಎಂದರ್ಥವಾಗಿತ್ತು. ಮುಂದುವರೆದು …ಉತ್ಪಾದಕರು ಹಾಗೂ ದುಡಿಮೆಗಾರರು ಸಮಾಜದ ಅತ್ಯಂತ ಅವಶ್ಯಕ ಅಂಗವಾಗಿದ್ದಾಗ್ಯೂ ಶೋಷಕರಿಂದ ವಂಚಿಸಲ್ಪಡುತ್ತಾರೆ. ಅವರ ದುಡಿಮೆಯ ಫಲ ಅವರಿಗೆ ದಕ್ಕುತ್ತಿಲ್ಲ. ಅವರ ಅತಿ ಸಾಮಾನ್ಯವಾದ ಹಕ್ಕುಗಳನ್ನು ಅವರಿಂದ ಕಿತ್ತುಕೊಳ್ಳಲಾಗಿದೆ. ಎಂದು ಹೇಳುತ್ತಾ ಅವತ್ತಿನ ಸಂದರ್ಭದಲ್ಲಿ ಅವರ ಕಣ್ಣೆದುರು ಕಂಡ ಅಸಮಾನತೆಯ ಭಾರತವನ್ನು ಹೀಗೆ ಕಟ್ಟಿಕೊಡುತ್ತಾರೆ.
ಇದನ್ನೂ ಓದಿ : ನಾನು ಬಂಧಿಯಾಗಿ ನಿರ್ಬಂಧಗಳ ನಡುವೆ ಬದುಕಲು ಇಚ್ಛಿಸುವುದಿಲ್ಲ : ಭಗತ್ ಸಿಂಗ್
“ಎಲ್ಲರಿಗೂ ಬೇಕಾದ ಧಾನ್ಯಗಳನ್ನು ಬೆಳೆವ ರೈತ, ತನ್ನ ಕುಟುಂಬದೊಂದಿಗೆ ಹಸಿವಿನಿಂದ ನರಳುತ್ತಿದ್ದಾನೆ. ಇಡೀ ಜಗತ್ತಿನ ಮಾರುಕಟ್ಟೆಯನ್ನು ತಾನು ನೇಯುವ ಬಟ್ಟೆಗಳಿಂದ ತುಂಬುವ ನೇಯ್ಗೆಗಾರ, ತನ್ನ ಹಾಗೂ ತನ್ನ ಮಕ್ಕಳ ಶರೀರವನ್ನು ಮುಚ್ಚಲುಬೇಕಾದ ಕನಿಷ್ಟ ಬಟ್ಟೆಯನ್ನು ಹೊಂದಿಲ್ಲ. ಮನೆಗಳನ್ನು ಕಟ್ಟುವ ಕಾರ್ಮಿಕರು, ಕಮ್ಮಾರರು, ಬಡಗಿಗಳು ಭವ್ಯವಾದ ಸೌಧಗಳನ್ನು ಕಟ್ಟುತ್ತಿದ್ದರೂ, ಕೊಳಚೆ ಪ್ರದೇಶಗಳಲ್ಲಿ ಜಾತಿ ಭ್ರಷ್ಟರಾಗಿ ಉಳಿದಿದ್ದಾರೆ.
ಈ ಅಸಮಾನತೆಗೆ ಕಾರಣವಾಗಿರುವವರು ಸಮಾಜದ ಪರತಂತ್ರ ಜೀವಿಗಳಾದ ಬಂಡವಾಳಿಗರು. ಅವರು ಹರಿಯ ಬಿಟ್ಟಿರುವ ಈ ಮನಸೋ ಇಚ್ಚೆಯ ಶೋಷಣೆಯೇ ಅಸಮಾನತೆ ಸಮಾಜಕ್ಕೆ ಕಾರಣವಾಗಿದೆ. ಈ ಅಸಮಾನತೆ ವ್ಯವಸ್ಥೆ ಬಹುಕಾಲ ಉಳಿಯಲಾರದು” ಇಂತಹ ಶೋಷಣಾ ವ್ಯವಸ್ಥೆ ಕೊನೆಗಾಣಬೇಕೆಂದೇ ಆ ಮೂವರು ಯುವಕರು ಕ್ರಾಂತಿ ಎಂಬ ಬಲೀಪೀಠಕ್ಕೆ ತಮ್ಮ ಬದುಕ್ಕನ್ನೇ ಅರ್ಪಿಸಿದರು. ಆದರೆ……….! ನಮಗೆ ಸ್ವಾತಂತ್ರö್ಯ ಬಂದು 77 ವರ್ಷಗಳ ನಂತರವೂ ಆ ಶೋಷಣೆ…ಅಸಮಾನತೆಗಳು ಮಾನವ ಸಮಾಜದ ಮೇಲಿನ ಕ್ರೌರ್ಯಗಳು ಮತ್ತಷ್ಟು ವೇಗವಾಗಿಯೇ ಮುಂದುವರೆದಿರುವುದು ಇವತ್ತಿನ ವಾಸ್ತವ.
ಮನೆಯಲ್ಲಿಯೇ ಚಿಗುರಿತ್ತು ಮೊಳೆಕೆ…!
ಜಗತ್ತಿನೆಲ್ಲೆಡೆ ಹಲವು ದೇಶಗಳಲ್ಲಿ ವಿಮೋಚನಾ ಚಳುವಳಿಗಳು ನಡೆದಿವೆ. ಬಹುಶಃ ಅಲ್ಲೆಲ್ಲೂ ಇಷ್ಟೊಂದು ಎಳೆಯ ವಯಸ್ಸಿನಲ್ಲಿ ಇಷ್ಟೊಂದು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಯಂ ಪ್ರೇರೆಪಣೆಯಿಂದ ಪಾಲ್ಗೊಂಡು ಮತ್ತು ಅಷ್ಟೇ ಧೀರೋದತ್ತವಾಗಿ ಸಾವಿಗೆ ಎದೆಯೊಡಿದ್ದ ಯುವಕರು ಕಂಡು ಬಂದಿಲ್ಲ. ಭಗತ್ಸಿಂಗ್ನಲ್ಲಿ ಸ್ವತಃ ಈ ಕ್ರಾಂತಿಯ ಮೊಳಕೆ ಚಿಗುರಿದ್ದು ಆತನ ಮನೆಯಲ್ಲಿಯೇ.
ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ ಭಗತ್ಸಿಂಗ್ ಅವರ ಚಿಕ್ಕಪ್ಪ ಅಜಿತ್ಸಿಂಗ್ ಅವರೇ ಮೊದಲು ಕ್ರಾಂತಿಯ ಪಾಠ ಹೇಳಿದ್ದು. ತನ್ನ ಸುತ್ತಮುತ್ತಲಿನ ಗ್ರಾಮದ ರೈತರನ್ನು ಸೇರಿಸಿ ಬ್ರಿಟಿಷರು ಹೇರಿದ್ದ ಭೂಕಂದಾಯದದ ವಿರುದ್ದ ನಡೆಸಿದ ಹೋರಾಟದಿಂದಾಗಿ ಅಜಿತ್ಸಿಂಗ್ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ನಂತರ 12 ವರ್ಷದ ಬಾಲಕನಾಗಿದ್ದಾಗ ಅಮೃತಸರದ ಜಲಯಲನ್ವಾಲಬಾಗ್ನಲ್ಲಿ ಜನರಲ್ ಡಯರ್ ನಡೆಸಿದ ಸಾಮೂಹಿಕ ಮಾರಣ ಹೋಮ… ಭಗತ್ಸಿಂಗ್ ಬದುಕಿನಲ್ಲಿ ತಲ್ಹಣವನ್ನುಂಟು ಮಾಡಿತು ಮಾತ್ರವಲ್ಲ ಕೊಲೆಗಡುಕ ಬ್ರಿಟಿಷರನ್ನು ಹೊರಹಾಕಿ ತಾಯ್ನಾಡನ್ನು ವಿಚೋಚನೆಗೊಳಿಸಬೇಕೆಂಬ ಆದಮ್ಯ ಕೆಚ್ಚನ್ನು ಮನಸ್ಸಿನಲ್ಲಿ ಹಚ್ಚಿತು.
ಭಗತ್ಸಿಂಗ್ ಅವರ ಈ ಬಯಕೆಗೆ ಮತ್ತಷ್ಟು ನೀರೆರೆದು ಪೋಷಿಸಿದ್ದು ಲಾಹೋರನಲ್ಲಿ ಲಾಲಲಜಪತ್ರಾಯ್ ಮತ್ತಿತತರು ಸೇರಿ ಆರಂಭಿಸಿದ್ದ ‘ರಾಷ್ಟ್ರೀಯ ಕಾಲೇಜು’ ಮತ್ತು ಅಲ್ಲಿ ಹೇಳಿಕೊಡುತ್ತಿದ್ದ ರಾಷ್ಟ್ರೀಯ ವಿಮೋಚನಾ ಕುರಿತ ಪಾಠಗಳು. ಈ ಎಲ್ಲರದ ಪರಿಣಾಮವಾಗಿ ಸ್ವತಃ ಭಗತ್ ಸಿಂಗ್ ಒಬ್ಬ ಪರಿಪೂರ್ಣತೆ ಮತ್ತು ಪ್ರಜ್ಞಾವಂತಿಕೆ ಹೊಂದಿದ ರಾಜಕೀಯ ಕಾರ್ಯಕರ್ತನಾಗಿ ಹೊರಹೊಮ್ಮಿದ. ನಿರಂತರ ಓದಿನಿಂದಾಗಿ ಅದಾಗಲೇ ತನ್ನ ಗುರಿಯನ್ನು ಸ್ಪಷ್ಟವಾಗಿಸಿಕೊಂಡಿದ್ದ ಭಗತ್ಸಿಂಗ್ಗೆ 1923 ರಲ್ಲಿ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದಾಗ ತನ್ನ ತಂದೆಗೆ “ತಾಯ್ನಾಡಿನ ವಿಮೋಚನೆಯೇ ನನ್ನ ಬದುಕಿನ ಪರಮೊಚ್ಚ ಗುರಿ, ಅಂತಹ ಅಮೂಲ್ಯವಾದ ಉದ್ದೇಶಕ್ಕಾಗಿ ತನ್ನನ್ನು ತಾನು ಈಗಾಗಲೇ ಸಮರ್ಪಿಸಿಕೊಂಡಿದ್ದೇನೆ ಬಹುಶಃ ಅದಕ್ಕಿಂತಲೂ ನನಗೆ ಬರ್ಯಾವ ಬಯಕೆ ಇಲ್ಲ” ಎಂದು ಪತ್ರ ಬರೆದು ಮನೆಯನ್ನು ಹಾಗೂ ತಾನೂ ಓದುತ್ತಿದ್ದ ಕಾಲೇಜನ್ನು ತೊರೆದು ಕಾನ್ಪೂರತ್ತ ಧಾವಿಸಿದ್ದರು.
ಸಮಾಜವಾದವೇ ದಾರಿ
ಕಾನ್ಪೂರಕ್ಕೆ ಆಗಮಿಸಿದ ಭಗತ್ಸಿಂಗ್ ಅಲ್ಲಿ ಸಚಿಂದ್ರನಾಥ ಸನ್ಯಾಲ ಸ್ಥಾಪಿಸಿದ್ದ ಹಿಂದೂಸ್ಥಾನ ನ್ಯಾಷನಲ್ ಆರ್ಮೀಯಲ್ಲಿ ಸಕ್ರಿಯಾನಾಗಿ ಕೆಲಸ ಮಾಡಿದರು. 1925 ರ ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ಎಚ್ಆರ್ಎ ಕಾರ್ಯಕರ್ತರನ್ನು ಜೈಲಿಗೆ ಕಳಿಸಿ, ಅಷ್ಪಖುಲ್ಲಾ ಖಾನ್, ರಾಮಪ್ರಸಾದ ಬಿಸ್ಮಿಲ್ಲಾ ಮೊದಲಾದವರನ್ನು ಗಲ್ಲಿಗೇರಿಸಿ ಸನ್ಯಾಲ ಸೇರಿದಂತೆ ಇನ್ನು ಹಲವರಿಗೆ ಜೀವಾವಧಿ ಶಿಕ್ಷೆಯನ್ನು ಬ್ರಿಟಿಷ ಕೋರ್ಟ ವಿಧಿಸಿತು. ಇದರಲ್ಲಿ ತಲೆ ಮರೆಸಿಕೊಂಡಿದ್ದ ಚಂದ್ರಶೇಖರ ಆಜಾದ ಜೊತೆ ಸೇರಿ ಭಗತ್ಸಿಂಗ್ ನೌಜವಾನ್ ಭಾರತ್ ಸಭಾ ಸ್ಥಾಪಿಸಿ ಇಡೀ ಉತ್ತರ ಭಾರತದಾದ್ಯಂತ ಹಲವು ಚಟುವಟಿಕೆ ಆರಂಭಿಸಿದ್ದರು. ಇದಾದ ನಂತರ ಇದೇ ರೀತಿಯಲ್ಲಿ ವಿಭಿನ್ನ ರೀತಿಯ ಕೆಲಸಗಳಲ್ಲಿ ಸಕ್ರೀಯವಾಗಿದ್ದ ಎಲ್ಲಾ ಕ್ರಾಂತಿಕಾರಿಗಳನ್ನು ಒಂದಡೆ ತಂದು ಸಮಾಜವಾದಿ ನೆಲೆಗಟ್ಟಿನಲ್ಲಿ ದೇಶವನ್ನು ಕಟ್ಟುವ ಹೆಬ್ಬಯಕೆಯೊಂದಿಗೆ ‘ಹಿಂದೂಸ್ಥಾನ ಸೂಷಿಯಲಿಸ್ಟ್ ರಿಪಬ್ಲಿಕ್ ಆರ್ಮೀ’ ಎನ್ನುವ ಸಂಘಟನೆಯನ್ನು ಹುಟ್ಟು ಹಾಕಿದ್ದರು ಭಗತ್ಸಿಂಗ್. ಇದಕ್ಕೆ ಕಾರಣವಾದುದು ಆಕಾಲಘಟ್ಟದಲ್ಲಿ ರಷ್ಯಾದಲ್ಲಿ ಸಂಭವಿಸಿದ್ದ ಸೋವಿಯತ್ ಕ್ರಾಂತಿ. ಅದರಿಂದ ಪ್ರೇರೇಪಣೆಗೊಂಡಿದ್ದ ಭಗತ್ಸಿಂಗ್ ಮತ್ತವರ ಸಂಗಾತಿಗಳು ವಿಮೋಚನೆ ಎಂದರೆ ‘ಕೇವಲ ಆಳುವ ಪ್ರಭುಗಳ ಬದಲಾವಣೆಯಲ್ಲ ಬದಲಾಗಿ ಅನ್ಯಾಯದ ಬುನಾದಿಯ ಮೇಲೆ ನಿಂತಿರುವ ಈ ಅಸಮಾನತೆ ಸೌಧವನ್ನು ನಿರ್ನಾಮಗೊಳಿಸುವುದು’ ಎಂಬ ಸ್ಪಷ್ಟತೆ ಹೊಂದಿದ್ದರು. ಈ ಗುರಿಯೊಂದಿಗೆ ಭಗತ್ಸಿಂಗ್ ಜೊತೆ ಗುರುತಿಸಿಕೊಂಡು ಕೆಲಸ ಮಾಡಿ ಹುತಾತ್ಮರಾದವರು ರಾಜಗುರು, ಸುಖದೇವ ಮತ್ತು ಚಂದ್ರಶೇಖರ್ ಅಜಾದ್, ಭಗವತಿ ಚರಣ, ಮೊದಲಾದವರು ಪ್ರಮುಖರು.
ಶಾಸನಸಭೆಯಲ್ಲಿ ವಿವಾದಿತ ಕಾರ್ಮಿಕ ಕಾನೂನು ತಿದ್ದುಪಡಿ ವಿದೇಯಕ ಮಂಡಿಸಲು ಬ್ರಿಟಿಷರು ಯತ್ನಿಸಿದ ಸಂದರ್ಭ ಮತ್ತೂ ಸಿಡಿಸಿದ ಬಾಂಬುಗಳ ಕುರಿತಾಗಿ ಮತ್ತು ಲಾಹೋರ ಪಿತೂರಿ ಮೊಕದ್ದಮೆಯ ಪ್ರಕರಣದಲ್ಲಿ ಸ್ವತಃ ನ್ಯಾಯಲಯದಲ್ಲಿ ತಮ್ಮ ಕೃತ್ಯವನ್ನು ಸಮರ್ಥಿಕೊಂಡ ಭಗತ್ಸಿಂಗ್ ತಮ್ಮ ಭವಿಷ್ಯದದ ಸ್ವಾತಂತ್ರ್ಯದ ಕನಸನ್ನು ‘ಹಿಂದೂಸ್ಥಾನ ಸೂಷಿಯಲಿಸ್ಟ್ ರಿಪಬ್ಲಿಕ್ ಆರ್ಮೀ’ ಯು ಪ್ರಕಟಿಸಿದ ಕರಪತ್ರದಲ್ಲಿ ಹೀಗೆ ವರ್ಣೀಸುತ್ತಾರೆ.
‘ನಾವು ಮಾನವ ಜೀವನ ಅತ್ಯಂತ ಮಹಾನ್ ಪವಿತ್ರವೆಂದು ಭಾವಿಸುತ್ತೇವೆ. ಮನುಷ್ಯ ಪರಿಪೂರ್ಣ ಶಾಂತಿ ಮತ್ತು ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುವ ಒಂದು ಭವ್ಯ ಕನಸು ಕಾಣುವವರು ಮಾನವ ರಕ್ತ ಹರಿಸಬೇಕಾಗಿ ಬಂದುದಕ್ಕೆ ನಮಗೆ ವಿಷಾಧವಿದೆ. ಆದರೆ ಎಲ್ಲರಿಗೂ ಸ್ವಾತಂತ್ರ್ಯ ತರುವ ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಅಸಾಧ್ಯಗೊಳಿಸುವ ಮಹಾನ್ ಕ್ರಾಂತಿಯ ಬಲಿಪೀಠದಲ್ಲಿ ವ್ಯಕ್ತಿಗಳ ಬಲಿ ಅನಿವಾರ್ಯ” ಎಂದು ಹೇಳಿದ್ದಲ್ಲದೆ ನಮ್ಮನ್ನೂ ತಾವೇ ಬ್ರಿಟಿಷರ ನೇಣುಗಂಭಕ್ಕೆ ಸಂಗಾತಿಗಳೊಡಗೂಡಿ ಬಲಿದಾನಗೈದು ಹುತಾತ್ಮರಾಗುತ್ತಾರೆ. ಅಂತಹ ಮಹಾನ್ ಬಲಿದಾನದ ಕಾರಣದಿಂದಾಗಿಯೇ ಇಂದಿಗೂ ಭಗತ್ಸಿಂಗ್, ರಾಜಗುರು ಮತ್ತು ಸುಖದೇವ ಈಗಲೂ ನಮ್ಮ ಕೋಟ್ಯಾಂತರ ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ಶೋಷಣೆ ವಿರುದ್ದ ನಡೆಸುತ್ತಿರುವ ಪ್ರತಿ ಹೋರಾಟದಲ್ಲೂ ಸದಾ ಪ್ರಜ್ವಲಿಸುವ ತಾರೆಗಳಾಗಿ ಮಿಂಚುತ್ತಿದ್ದಾರೆ.