ಭಾಗ- 9 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

ಡಾ.ಶಮ್ಸುಲ್‌ಇಸ್ಲಾಂ
ಅನು: ಟಿ.ಸುರೇಂದ್ರರಾವ್

ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್‌ ರವರ ʻಸಾವರ್ಕರ್ ಅನ್‌ಮಾಸ್ಕ್ಡ್‌ʼ ಸಾವರ್ಕರ್‌ ರವರನ್ನು ಕುರಿತ ಏಳು ಮಿಥ್ಯೆಗಳನ್ನು ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತದೆ.

ಮಿಥ್ಯೆ 1 – ʻಸಾವರ್ಕರ್‌ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!

ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ ಎನ್ನುವ ಹಿಂದುತ್ವ ಪ್ರಚಾರಕರ ಮಿಥ್ಯೆಯನ್ನು ಪರಿಶೀಲಿಸುತ್ತ ಕಾಲಾಪಾನಿ ಅಥವಾ ಕರಿನೀರು ಎಂದು ಕರೆಯಲ್ಪಡುವ ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ ಗೂಡಿನಂತಿರುವ ಸಣ್ಣ ಕೋಣೆಯಲ್ಲಿ ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಲೇಖಕರು, ಸೆಲ್ಯುಲರ್ ಜೈಲು ಅಂದರೆ ಕೇವಲ ಸಾವರ್ಕರ್ ಕತೆ ಅಲ್ಲ ಎನ್ನುತ್ತಾರೆ. ಸ್ವತಃ ಸಾವರ್ಕರ್ ತಮ್ಮ ರಾಜಕೀಯ ಜೀವನದ ಮೊದಲ ಘಟ್ಟದಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರಲಿಲ್ಲ. ಆದರೆ ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅವರು ಅಲ್ಲಿ ಪಡಬೇಕಾದ ಘೋರ ಯಾತನೆಯಿಂದ ಸಂಪೂರ್ಣವಾಗಿ ಕುಗ್ಗಿದ ಅವರು ಕೋಮು ಸಾಮರಸ್ಯದ  ಸ್ವತಂತ್ರ ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿಯಾಗಿ ಈಗ ಉಳಿಯಲಿಲ್ಲ… ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿನ ಹಿಂದೂ-ಮುಸ್ಲಿಂ ಐಕ್ಯತೆಯಿಂದ ಆತಂಕಿತರಾಗಿದ್ದ ಬ್ರಿಟಿಷ್ ದೊರೆಗಳಿಗೆ ಕ್ಷಮಾಯಾಚನೆಯ ಅರ್ಜಿಯೊಂದಿಗೆ ತಮ್ಮ ರಾಜಕೀಯ ಬದುಕಿನ ಎರಡನೇ ಘಟ್ಟ ಆರಂಭಿಸಿದ ಸಾವರ್ಕರ್ ರಂತವರ ಸಹಾಯ ಬೇಕಿತ್ತು, ಅದಕ್ಕಾಗಿ ಅವರನ್ನು ಬಿಡುಗಡೆ ಮಾಡಿದರು ಎನ್ನುವುದನ್ನು ಯಾರೂ ಅರ್ಥಮಾಡಿಕೊಳ್ಳಬಲ್ಲರು. ಸಾವರ್ಕರ್ ಅವರ ಆವಶ್ಯಕತೆಯನ್ನು ಈಡೇರಿಸಿದರು. ಸುಭಾಶ್‌ಚಂದ್ರ ಬೋಸ್‌ ರಂತಹ ನಾಯಕರುಗಳು ಸಶಸ್ತ್ರ ಹೋರಾಟಗಳ ಮೂಲಕ ಭಾರತದಿಂದ ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಬೇಕೆಂಬ ತಂತ್ರಗಳನ್ನು ಹೂಡುತ್ತಿದ್ದಾಗ ಬ್ರಿಟಿಷರ ಯುದ್ಧಕಾರ್ಯಾಚರಣೆಗೆ ಸಾವರ್ಕರ್‌ ಅವರ ಸಂಪೂರ್ಣ ಬೆಂಬಲವು ಸುವ್ಯವಸ್ಥಿತ ಹಿಂದುತ್ವ ಸಂಚಿನ ಫಲವಾಗಿತ್ತು.

ವಸಾಹತುಶಾಹಿ ದೊರೆಗಳ ಬಾಲಬಡುಕರಾಗಿ……

ಬ್ರಿಟಿಷ್ ಮಿಲಿಟರಿ ಸಂಚುಗಳಿಗೆ ಬೆಂಬಲ ನೀಡುವಲ್ಲಿ ಸಾವರ್ಕರ್ ಅವರಲ್ಲಿ ಖಂಡಿತವಾಗಿಯೂ ಸಂದಿಗ್ಧವಿರಲಿಲ್ಲ. ವಸಾಹತುಶಾಹಿ ದೊರೆಗಳಿಗೆ ನೀಡುವ ನಿರ್ಲಜ್ಜ ಬೆಂಬಲವನ್ನು ಸಮರ್ಥಿಸುವ ಸಲುವಾಗಿ ಅವರು ವಿಚಿತ್ರ ಕುಂಟುನೆಪ ಒಂದನ್ನು ಮುಂದಿಟ್ಟರು. ಅವರ ತರ್ಕದ ಪ್ರಕಾರ:

ಒಟ್ಟಿನಲ್ಲಿ ನಮ್ಮ ಪರವಾಗಿರುವ ಹಾಗೂ ವಿರುದ್ಧವಾಗಿರುವ ಎಲ್ಲಾ ಸಾಧಕ ಬಾಧಕಗಳನ್ನು ಪರಿಶೀಲಿಸಿದರೆ, ಈ ಯುದ್ಧವು ನಮಗೆ ಒದಗಿಸಿದ ಅವಕಾಶಗಳನ್ನು ಬಳಸಿಕೊಳ್ಳುವುದು ಅತ್ಯುತ್ತಮ ಮಾರ್ಗವೆಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ, ನಮ್ಮ ಜನರಿಗೆ ಮಿಲಿಟರೀಕರಣ ಮತ್ತು ಕೈಗಾರಿಕೀಕರಣವನ್ನು ತರುವಲ್ಲಿ ಅವರು ಮಾಡುತ್ತಿರುವ ಸಹಾಯದ ಹಿನ್ನೆಲೆಯಲ್ಲಿ(ಬ್ರಿಟಿಷ್) ಸರ್ಕಾರವು ಪರಿಸ್ಥಿತಿಯ ಒತ್ತಡದಿಂದಾಗಿ ಸಿಲುಕಿ ನಡೆಸುತ್ತಿರುವ ಎಲ್ಲಾ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗವಹಿಸದೆ ಗತ್ಯಂತರವಿಲ್ಲ.

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ಎರಡನೇ ವಿಶ್ವ ಮಹಾಯುದ್ಧದ ಪರಿಣಾಮವಾಗಿ ಬ್ರಿಟಿಷ್ ಸರ್ಕಾರವು ತಮ್ಮ ಭೂಸೇನೆಗೆ ಹೊಸ ಸೈನಿಕರನ್ನು ನೇಮಕ ಮಾಡಿಕೊಳ್ಳಬೇಕೆಂದು ನಿರ್ಧರಿಸಿದಾಗ, ಸಾವರ್ಕರ್ ಅವರ ನೇರ ಅಧಿಪತ್ಯದಲ್ಲಿನ ಹಿಂದೂ ಮಹಾಸಭಾವು ಈ ಸಾಹಸದಲ್ಲಿ ದೊಡ್ಡ ಸಂಖ್ಯೆಯ ಹಿಂದೂಗಳನ್ನು ಸೇರಿಸಲು ತೀರ್ಮಾನಿಸಿತು. ಇದನ್ನು ಮದುರಾದಲ್ಲಿ ನಡೆದ ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಪ್ರತಿನಿಧಿಗಳಿಗೆ ಸಾವರ್ಕರ್ ಅವರು ವರದಿ ಮಾಡಿದ್ದರು:

ಸಹಜವಾಗಿಯೇ, ಪ್ರಾಯೋಗಿಕ ರಾಜಕೀಯದ ನಿಜವಾದ ಪರಿಜ್ಞಾನದೊಂದಿಗೆ ಹಿಂದೂ ಮಹಾಸಭಾವು, ಭಾರತದ ರಕ್ಷಣೆಯ ಪ್ರಶ್ನೆ ಮತ್ತು ಭಾರತದಲ್ಲಿ ಹೊಸ ಮಿಲಿಟರಿ ಸೇನೆಯನ್ನು ಜಮಾಯಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ, ಬ್ರಿಟಿಷ್ ಸರ್ಕಾರದ ಎಲ್ಲಾ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ನಿರ್ಧರಿಸಿದೆ.

ಆ ಪ್ರಸ್ತಾಪದ ವಿರುದ್ಧ ಸಾಮಾನ್ಯ ಭಾರತೀಯರ ಎಲ್ಲಾ ವರ್ಗಗಳಲ್ಲಿ ಪ್ರಬಲ ಅಸಮಾಧಾನ ಬಲಗೊಳ್ಳುತ್ತಿರುವ ಸಂಗತಿ ಸಾವರ್ಕರ್ ಅವರ ಅರಿವಿಗೆ ಬಂದಿರಲಿಲ್ಲವಂತೇನಲ್ಲ. ಬ್ರಿಟಿಷರೊಂದಿಗೆ ಅವರ ಯುದ್ಧ ಕಾರ್ಯಾಚರಣೆಗೆ ಸಹಕಾರ ನೀಡುವ ಹಿಂದೂ ಮಹಾಸಭಾದ ತೀರ್ಮಾನದ ಯಾವುದೇ ಟೀಕೆಯನ್ನು ಸಾವರ್ಕರ್ ಹೀಗೆ ತಳ್ಳಿಹಾಕುತ್ತಿದ್ದರು:

ಸಾಮಾನ್ಯವಾಗಿ ಬ್ರಿಟಿಷರ ಹಿತಾಸಕ್ತಿಗಳು ಭಾರತೀಯರ ಹಿತಾಸಕ್ತಿಗಳಿಗೆ ವಿರುದ್ಧವಾದುದು, ಬ್ರಿಟಿಷ್ ಸರ್ಕಾರದೊಂದಿಗೆ ಕೈ ಜೋಡಿಸುವ ಯಾವುದೇ ಹೆಜ್ಜೆಯು ಅತ್ಯವಶ್ಯವಾಗಿ ಶರಣಾಗತಿಯ, ದೇಶ ವಿರೋಧಿ ಕ್ರಮವಾಗುತ್ತದೆ, ಬ್ರಿಟಿಷರಿಗೆ ಅನುಕೂಲವಾಗುತ್ತದೆ ಮತ್ತು ಆದ್ದರಿಂದ ಬ್ರಿಟಿಷರೊಂದಿಗಿನ ಸಹಕಾರ ಯಾವುದೇ ಕಾರಣದಲ್ಲೂ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ದೇಶವಿರೋಧಿಯಾಗುತ್ತದೆ ಮತ್ತು ಖಂಡನಾರ್ಹವಾದುದು ಎಂದು ಭಾರತದ ಸಾರ್ವಜನಿಕರು ಭಾವಿಸುವುದು ವಾಡಿಕೆಯಾಗಿದೆ. ಆದರೆ ಅವೆಲ್ಲವೂ ರಾಜಕೀಯ ಮೂರ್ಖತನವೆಂದು ಸಾವರ್ಕರ್ ತಳ್ಳಿಹಾಕುತ್ತಾರೆ.

ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು

ಒಂದು ಕಡೆಯಲ್ಲಿ, ನೇತಾಜಿ ಬೋಸ್ ಅಂಥವರು ಭಾರತದ ವಿಮೋಚನೆಗಾಗಿ ಜರ್ಮನರು ಮತ್ತು ಜಪಾನಿಗಳ ಸಹಾಯ ಪಡೆಯುವ ಮಿಲಿಟರಿ ತಂತ್ರಗಳಲ್ಲಿ ನಿರತರಾಗಿದ್ದರೆ, ಅತ್ತ ಸಾವರ್ಕರ್ ಬ್ರಿಟಿಷ್ ವಸಾಹತುಶಾಹಿ ದೊರೆಗಳಿಗೆ ನೇರವಾಗಿ ನೆರವು ನೀಡುವುದರಲ್ಲಿ ನಿರತರಾಗಿದ್ದರು. ಇದು ನೇತಾಜಿಯವರು ಎತ್ತಿಹಿಡಿಯುತ್ತಿದ್ದ ಧ್ಯೇಯಗಳಿಗೆ ಸಂಪೂರ್ಣವಾಗಿ ದ್ರೋಹ ಬಗೆಯುವುದಾಗಿತ್ತು. ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಬ್ರಿಟಿಷ್ ಸರ್ಕಾರದೊಂದಿಗೆ ಬಹಿರಂಗವಾಗಿ ನಿಂತಿದ್ದರು, ಮತ್ತು ನೇತಾಜಿಯವರ ಆಝಾದ್ ಹಿಂದ್ ಫೌಜ್ (ಐಎನ್‌ಎ)ನ ಸಾವಿರಾರು ಧೀರೋದಾತ್ತ ಸೈನಿಕರನ್ನು ಬ್ರಿಟಿಷ್ ಸರ್ಕಾರ ಕೊಂದು ಹಾಕಿತು ಮತ್ತು ಶಕ್ತಿಗುಂದಿಸಿತು. ಸಾವರ್ಕರ್ ಮದುರಾದಲ್ಲಿ ತನ್ನ ಅನುಯಾಯಿಗಳಿಗೆ ʻಯೂರೋಪಿಯನ್ನರ ಪ್ರಭಾವದಿಂದ ಏಶಿಯಾವನ್ನು ವಿಮೋಚನೆಗೊಳಿಸುವ ಘೋಷಿತ ಉದ್ದೇಶದಿಂದ ಜಪಾನಿನ ಸೇನೆಯು ಮುನ್ನುಗ್ಗುತ್ತಿರುವಾಗ, ಬ್ರಿಟಿಷ್ ಸರ್ಕಾರಕ್ಕೆ ಅದರ ಸೇನಾ ಬಲಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಾರತೀಯರ ಅಗತ್ಯವಿರುವುದರಿಂದ ನಾವು ಅವರಿಗೆ ಸಹಾಯ ಮಾಡಬೇಕು.ʼ ಎಂದು ಹೇಳುತ್ತಾ, ಬ್ರಿಟಿಷರ ಯುದ್ಧತಂತ್ರವನ್ನು ಹೀಗೆ ಹೊಗಳಿದರು:

ಜಪಾನಿನೊಂದಿಗೆ ಯುದ್ಧ ಶುರುವಾಗಿದ್ದೇ ಆದರೆ, ಎಲ್ಲಾ ಯುದ್ಧ ಸನ್ನಾಹಕ್ಕೂ ಭಾರತವೇ ಕೇಂದ್ರ ಬಿಂದುವಾಗಬೇಕಾಗುತ್ತದೆ. ಹತ್ತಾರು ಲಕ್ಷ ಬಲಹೊಂದಿರುವ ಸೈನ್ಯವನ್ನು ಸಿದ್ದಪಡಿಸಬೇಕಾದ ಸಾಧ್ಯತೆಗಳಿವೆ, ನಮ್ಮ ಗಡಿಗಳಲ್ಲಿ ಜಪಾನಿಯರು ಮುಂದುವರಿಯುವಲ್ಲಿ ಎಷ್ಟು ಬೇಗ ಯಶಸ್ವಿಯಾಗುತ್ತಾರೋ ಅಷ್ಟು ಬೇಗ ಭಾರತೀಯ ಅಧಿಕಾರಿಗಳ ಅಡಿಯಲ್ಲಿ ಭಾರತೀಯರನ್ನೇ ನೇಮಿಸಿಕೊಳ್ಳಬೇಕಾಗುತ್ತದೆ, ಎಂದು ಎಂದಿನಂತೆ ಬ್ರಿಟಿಷರು ತಮ್ಮ ದೂರದೃಷ್ಟಿಯ ವ್ಯವಹಾರ ಕೌಶಲ್ಯದಿಂದ ಅರ್ಥಮಾಡಿಕೊಂಡರು.

ಇದನ್ನು ಓದಿ: ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು

ಮುಂದಿನ ಕೆಲವು ವರ್ಷಗಳನ್ನು ಬ್ರಿಟಿಷ್ ಶಸ್ತ್ರಸಜ್ಜಿತ ಸೇನೆಗೆ ನೇಮಕಾತಿ ಕ್ಯಾಂಪುಗಳನ್ನು ಸಂಘಟಿಸುವುದರಲ್ಲೇ ಸಾವರ್ಕರ್ ಕಾಲ ಕಳೆದರು; ನಂತರದಲ್ಲಿ ಅದೇ ಸೇನೆ ಈಶಾನ್ಯ ಗಡಿಗಳ ವಿವಿಧ ಭಾಗಗಳಲ್ಲಿ ಐಎನ್‌ಎ ಕಾರ್ಯಕರ್ತರನ್ನು ಕೊಂದು ಹಾಕುತ್ತದೆ ಮತ್ತು ಶಕ್ತಿಗುಂದಿಸುತ್ತದೆ. ಹಿಂದೂ ಮಹಾಸಭಾವು ಮದುರಾ ಸಮ್ಮೇಳನದಲ್ಲಿ ʻತುರ್ತುಕಾರ್ಯಕ್ರಮʼವೊಂದನ್ನು ಅಂಗೀಕರಿಸಿ, ಎಷ್ಟು ಸಾಧ್ಯವೋ ಅಷ್ಟು ಬೇಗ ಹಿಂದೂಗಳು ಸೇನೆಗೆ, ನೌಕಾಸೇನೆಗೆ ಮತ್ತು ವಾಯುಸೇನೆಗೆ ಪ್ರವೇಶ ಪಡೆಯಬೇಕು ಎಂಬ ಮಹತ್ವದ ನಿರ್ಧಾರ ಮಾಡಿತು. ಹಿಂದೂಮಹಾಸಭಾದ ಪ್ರಯತ್ನ ಮಾತ್ರದಿಂದಲೇ ಒಂದು ವರ್ಷದಲ್ಲಿ ಬ್ರಿಟಿಷ್ ಸಶಸ್ತ್ರ ಸೇನೆಗೆ ಒಂದು ಲಕ್ಷ ಹಿಂದೂಗಳು ನೇಮಕವಾಗಿದ್ದಾರೆ ಎಂದು ಕೂಡ ಅವರು ಅಲ್ಲಿ ಮಾಹಿತಿ ನೀಡಿದರು.

ಆಶ್ಚರ್ಯಕರ ಸಂಗತಿಯೇನೆಂದರೆ, ಸಾವರ್ಕರ್ ಅವರ ಈ ಎಲ್ಲಾ ಘೋರ ದೇಶವಿರೋಧಿ ಆಲೋಚನೆಗಳು ಮತ್ತು ಕುಟಿಲತಂತ್ರಗಳ ಹೊರತಾಗಿಯೂ ಅವರೊಬ್ಬ ಮಹಾನ್ ದೇಶಭಕ್ತ ಎಂದು ಹೊಗಳುತ್ತಲೇ ಇರುವ ಜನರು ಇದ್ದಾರೆ. ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಎಷ್ಟು ಪ್ರಬಲವಾಗಿ ಬ್ರಿಟಿಷರ ಬಾಲಬಡುಕರಾಗಿದ್ದರು ಎನ್ನುವುದನ್ನು ಹಿಂದೂ ಮಹಾಸಭಾವು ಸ್ವಾತಂತ್ರ್ಯ ಪೂರ್ವದಲ್ಲಿ ಹೊರತಂದ ಪುಸ್ತಕವನ್ನು ಇಣುಕಿ ನೋಡಿದರೆ ತಿಳಿಯುತ್ತದೆ. 1941 ರಲ್ಲಿ ಪ್ರಕಟವಾದ ಈ ಪುಸ್ತಕದ ಹೆಸರು ಸ್ವಲ್ಪ ಉದ್ದವಾಗಿಯೇ ಇದೆ: ವಿನಾಯಕ ದಾಮೋದರ ಸಾವರ್ಕರ್ ಅವರ ಕ್ಷಿಪ್ರ ಪ್ರವಾಸದ ಪ್ರಚಾರ: ಡಿಸೆಂಬರ್ 1937 ರಿಂದ ಅಕ್ಟೋಬರ್ 1941ರವರೆಗೆ ಅವರ ಪ್ರಚಾರ ರೂಪದ ಪ್ರವಾಸಗಳು ಸಂದರ್ಶನಗಳು – ಅಧ್ಯಕ್ಷರ ದಿನಚರಿಯಿಂದ ತುಣುಕುಗಳು – ಅದು ಸಾವರ್ಕರ್ ಅವರ ಆತ್ಮಗೆಳೆಯ ಎ ಎಸ್ ಭಿಡೆಯವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಆ ಪುಸ್ತಕದ ಮುನ್ನುಡಿಯಲ್ಲಿ ಹೇಳಿದಂತೆ:

ಈ ಪುಸ್ತಕವು ಪ್ರಥಮತಃ, ವಿಶೇಷವಾಗಿ ಹಿಂದೂ ಮಹಾಸಭಾ ಚಳವಳಿಯ ಪ್ರಚಾರಕರು, ಕಾರ್ಯಕರ್ತರು ಮತ್ತು ಮುಖಂಡರುಗಳಿಗೆ ಹಾಗೂ ಬಹುವಾಗಿ ಹಿಂದೂ ಸಾರ್ವಜನಿಕರಿಗೆ, ಹಿಂದೂಗಳು ಇಂದು ಎದುರಿಸುತ್ತಿರುವ ಹಲವಾರು ಸವಿಸ್ತಾರವಾದ ಪ್ರಶ್ನೆಗಳು ಮತ್ತು ಸಮಸ್ಯೆಗಳಿಗೆ ಹಿಂದೂ ಸಂಘಟನಾ ಚಳವಳಿಯ ಮೂಲಭೂತ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಅಳವಡಿಸುವ ನಿಲುವುಗಳ ಮೇಲೆ ಬೆಳಕು ಚೆಲ್ಲುವ ಒಂದು ಅಧಿಕಾರಯುತವಾದ ಪಠ್ಯ ಹಾಗೂ ವಿಶ್ವಾಸಾರ್ಹವಾದ ಮಾರ್ಗದರ್ಶಿಯಾಗಬೇಕು ಎಂಬುದಕ್ಕಾಗಿಯೇ ಇದನ್ನು ಪ್ರಕಟಿಸಲಾಯಿತು. ಆ ಪುಸ್ತಕವು ಹಿಂದೂ ಮಹಾಸಭಾದ ಪ್ರತಿಯೊಂದು ಘಟಕಕ್ಕೂ ಕಡ್ಡಾಯವಾದುದಾಗಿತ್ತು, ಅದು ಕಾರ್ಯಕರ್ತರಿಗೆ ರಾಜಕೀಯ ಶಿಕ್ಷಣ ನೀಡಲು ಮಾತ್ರವಾಗಿರದೇ ವಿವಿಧ ವಿಚಾರಗಳಲ್ಲಿ ನಿಲುವುಗಳನ್ನು ಸ್ಪಷ್ಟಪಡಿಸಲು ಕೂಡ ಒಂದು ಮಾರ್ಗದರ್ಶಿ ಪುಸ್ತಕವಾಗಿತ್ತು. ಈ ʻಹಿಂದುತ್ವ ಮಾರ್ಗದರ್ಶಿ ಸೂತ್ರʼವನ್ನು ಒಳಗೊಂಡಿರುವ ವಿಷಯಗಳನ್ನು ಸಾವರ್ಕರ್ ಅವರು ಮಾತ್ರವೇ ಬರೆದಿದ್ದು ಮತ್ತು ಮಾತನಾಡಿದ್ದು ಎಂಬ ಬಹು ಮುಖ್ಯವಾದ ಅಂಶವನ್ನು ಇಲ್ಲಿ ಅಲಕ್ಷಿಸಬಾರದು. ಆ ಪುಸ್ತಕದಿಂದ ಉದ್ಧರಿಸಿದ ಭಾಗಗಳು ಹಿಂದುತ್ವದ ನೈಜ ಮುಖವನ್ನು ತೋರಿಸುತ್ತವೆ, ಸಾವರ್ಕರ್ ಅವರ ನೇತೃತ್ವದಲ್ಲಿ ಅದು ಬ್ರಿಟಿಷರ ಕೈಗೊಂಬೆಯಾಗಿತ್ತು ಎನ್ನುವುದನ್ನು ಬಯಲುಮಾಡುತ್ತದೆ. ಸಾವರ್ಕರ್ ಅವರು ಮಹಾನ್ ವಿಚಾರವಂತರು ಮತ್ತು ರಾಷ್ಟ್ರೀಯವಾದಿಯಾಗಿದ್ದರು ಎನ್ನುವುದು ಹಿಂದುತ್ವ ಪಡೆಯ ಅಭಿಪ್ರಾಯ, ಆದರೆ ಸ್ವಾತಂತ್ರ್ಯಾನಂತರ ʻಖೋಟಾ ಜಾತ್ಯತೀತವಾದಿಗಳುʼ (ಸ್ಯೂಡೋ ಸೆಕ್ಯುಲರಿಸ್ಟ್ಸ್‌) ಪಿತೂರಿ ಮಾಡಿ ಸಾವರ್ಕರ್ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಸಾವರ್ಕರ್‌ ವಾದಿಗಳು ದೂರುತ್ತಾರೆ. ಸಾವರ್ಕರ್ ಅವರು ಅಂತಹ ಉದಾತ್ತಗುಣದವರಾಗಿದ್ದರು ಎನ್ನುವುದು ಅವರ ಪ್ರಕಾರ ನಿಜವೇ ಆಗಿದ್ದರೆ, ಅವರ ಉದಾತ್ತಗುಣ ಈಗಿನ ತಲೆಮಾರಿನವರಿಗೂ ಗೊತ್ತಾಗುವಂತೆ ಆ ಪುಸ್ತಕವನ್ನು ಅವರು ಮರುಮುದ್ರಣ ಮಾಡಲಿ! ಆ ಪುಸ್ತಕದಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ ಬ್ರಿಟಿಷರ ಯುದ್ಧ ಸನ್ನಾಹಕ್ಕೆ ಸೇರಿಕೊಳ್ಳುವ ಅಗತ್ಯವಿದೆ ಎನ್ನುವುದಕ್ಕೆ ಸಾವರ್ಕರ್ ಅವರು ಒತ್ತುಕೊಡುವಾಗಲೇ, ಹಿಂದೂ ಮಹಾಸಭಾದ ಕಾರ್ಯಕರ್ತರಿಗೆ ಅವರು ಈ ಕೆಳಗಿನ ನಿರ್ದೇಶನವನ್ನು ನೀಡಿದರು:

ಬ್ರಿಟಿಷರೊಂದಿಗಿನ ಅನಿವಾರ್ಯವಾದ ಸಹಕಾರವನ್ನು ನಿಮ್ಮದೇ ದೇಶಕ್ಕೆ ಲಾಭವಾಗುವಂತೆ ಮಾರ್ಪಾಟು ಮಾಡಿ. ಏಕೆಂದರೆ ಇವತ್ತಿನ ಪರಿಸ್ಥಿತಿಯಲ್ಲಿ ಹಾಗೆ ಮಾಡುವುದು ಸಾಧ್ಯವಿದೆ. ಹೋರಾಡುತ್ತಿರುವ ಶಕ್ತಿಗಳೊಂದಿಗೆ ತಾವು ಸೇರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಶಸ್ತ್ರಸಜ್ಜಿತ ಆಕ್ರಮಣದ ಎದುರಲ್ಲಿಯೂ ಅಪ್ಪಟ ಅಹಿಂಸೆ ಹಾಗೂ ಪ್ರತಿರೋಧ ಮಾಡದಿರುವ ನೀತಿಗೆಟ್ಟ ಹಾಗೂ ಬೂಟಾಟಿಕೆಯ ಗೀಳಿನ ಕಾರಣದಿಂದಲೋ ಅಥವಾ ನೀತಿಯ ಕಾರಣದಿಂದಲೋ ಸರ್ಕಾರದೊಂದಿಗೆ ಸಹಕರಿಸುತ್ತಿಲ್ಲ ಮತ್ತು ಯುದ್ಧ ಸನ್ನಾಹಕ್ಕೆ ಸಹಾಯ ಮಾಡುತ್ತಿಲ್ಲ ಎಂದು ಸಮರ್ಥಿಸುವ ಭ್ರಾಂತಿಯಲ್ಲಿರುವವರು, ಆತ್ಮವಂಚನೆ ಮತ್ತು ಆತ್ಮತೃಪ್ತಿಯಲ್ಲಿ ತೊಡಗಿಕೊಂಡಿರುತ್ತಾರೆ ಎಂಬುದನ್ನು ಮರೆಯಬಾರದು.

ಇದನ್ನು ಓದಿ: ಭಾಗ – 4 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಹಿಂದೂಗಳಿಗೆ ಅವರು ನೀಡಿದ ಕರೆಯಲ್ಲಿ ಯಾವ ದ್ವಂದ್ವವೂ ಇರಲಿಲ್ಲ:

ಆದ್ದರಿಂದ ಹಿಂದೂಗಳು ಈಗಲೇ ಮುಂದೆ ಬರಬೇಕು ಮತ್ತು ಭೂಸೇನೆ, ನೌಕಾದಳ ಹಾಗೂ ವಾಯುಸೇನೆಗಳಲ್ಲಿ, ಮದ್ದುಗುಂಡು ಫಿರಂಗಿ ಮತ್ತು ಇತರ ಯುದ್ಧ-ಸಾಮಗ್ರಿಗಳ ಕಾರ್ಖಾನೆಗಳಲ್ಲಿ ಸಾವಿರ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವೇಶಿಸಬೇಕು.

ಬ್ರಿಟಿಷ್ ಶಸ್ತ್ರಸಜ್ಜಿತ ಸೇನೆ ಸೇರಲು ಬಯಸುವ ಹಿಂದೂಗಳಿಗೆ ಸಹಾಯ ಮಾಡುವ ಸಲುವಾಗಿ ದೇಶದ ವಿವಿಧ ಪ್ರದೇಶಗಳಲ್ಲಿ ಸಾವರ್ಕರ್ ಮುಂದಾಳತ್ವದಲ್ಲಿ ಹಿಂದೂ ಮಹಾಸಭಾವು ಉನ್ನತ-ಮಟ್ಟದ ಮಿಲಿಟರಿ ಸಮಿತಿಗಳನ್ನು ಸಂಘಟಿಸಿತ್ತು. ಈ ಮಂಡಳಿಗಳು ಬ್ರಿಟಿಷ್ ಸರ್ಕಾರದೊಂದಿಗೆ ನೇರ ಸಂಪರ್ಕ ಹೊಂದಿದ್ದವು ಎಂಬುದನ್ನು ಸಾವರ್ಕರ್ ಅವರ ಈ ಕೆಳಗಿನ ಮಾತುಗಳ ಮೂಲಕ ನಾವು ತಿಳಿಯಬಹುದು.

ಸೇನೆಗೆ ಸೇರುವ ಹಿಂದೂ ಸಿಪಾಯಿಗಳು ಕಾಲ ಕಾಲಕ್ಕೆ ಎದುರಿಸುವ ಕಷ್ಟಗಳು ಹಾಗೂ ಕುಂದು ಕೊರತೆಗಳನ್ನು ಪರಿಹರಿಸುವ ಸಲುವಾಗಿ ದೆಹಲಿಯಲ್ಲಿ ಸೆಂಟ್ರಲ್ ನಾರ್ದರನ್ ಹಿಂದೂ ಮಿಲಿಟರೈಸೇಷನ್ ಬೋರ್ಡ್ ಒಂದನ್ನು ಶ್ರೀ ಗಣಪತ್‌ ರಾಯ್, ಬಿಎ, ಎಲ್‌ಎಲ್‌ಬಿ, ಅಡ್ವೊಕೇಟ್, 51, ಪಂಚ್‌ಕುಂವಾ ರೋಡ್, ನವದೆಹಲಿ ಅವರ ಸಂಚಾಲಕತ್ವದಲ್ಲಿ ಹಿಂದೂ ಮಹಾಸಭಾದಿಂದ ರಚಿಸಲಾಗಿತ್ತು. ಅದೇ ರೀತಿಯಲ್ಲಿ ಸೆಂಟ್ರಲ್ ಸದರನ್ ಹಿಂದೂ ಮಿಲಿಟರೈಸೇಷನ್ ಬೋರ್ಡ್ ಒಂದನ್ನು ಕೂಡ ಶ್ರೀ ಎಲ್.ಬಿ. ಭೋಪಟ್‌ ಕರ್, ಎಂ.ಎ. ಎಲ್.ಎಲ್.ಬಿ. ಅಧ್ಯಕ್ಷರು, ಮಹಾರಾಷ್ಟ್ರ ಪ್ರಾವಿನ್ಶಿಯಲ್ ಹಿಂದೂಸಭಾ, ಸದಾಶಿವ್ ಪೇಟ್, ಪೂನಾ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಸೇನೆಗೆ ಪ್ರವೇಶ ಪಡೆಯಲು ಬಯಸುವ ಅಥವಾ ಈಗಾಗಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿರುವ ಹಿಂದೂಗಳು ತಮ್ಮ ಎಲ್ಲಾ ದೂರುಗಳನ್ನು ಅಥವಾ ಮಾಹಿತಿ ಪಡೆಯಲು ಅರ್ಜಿ ಸಲ್ಲಿಸುವವರು ಈ ಮೇಲಿನ ವಿಳಾಸಗಳಿಗೆ ಬರೆಯಬೇಕು. ಈ ಮಿಲಿಟರೈಸೇಷನ್ ಬೋರ್ಡ್‌ ಗಳು ಕಳಿಸಿಕೊಡುವ ಅರ್ಜಿಗಳನ್ನು ಸರ್‌ ಜ್ವಾಲಾ ಪ್ರಸಾದ್ ಶ್ರೀವಾಸ್ತವ್, ಬ್ಯಾರಿಸ್ಟರ್ ಜಮ್ನಾದಾಸ್‌ಜಿ ಮೆಹ್ತಾ, ಬಾಂಬೇ, ಶ್ರೀ ವಿ ವಿ ಕಾಲಿಕರ್, ಎಂ.ಎಲ್.ಸಿ., ನಾಗ್‌ಪುರ್ ಮತ್ತಿತರ ನ್ಯಾಷನಲ್ ಡಿಫೆನ್ಸ್‌ ಕೌನ್ಸಿಲ್ ಅಥವಾ ಅಡ್ವೈಸರಿ ವಾರ್ ಕಮಿಟಿಯ ಸದಸ್ಯರುಗಳು ಖಂಡಿತವಾಗಿಯೂ ತಮ್ಮ ಕೈಲಾದಷ್ಟು ಕಷ್ಟಗಳನ್ನು ಪರಿಹರಿಸುತ್ತಾರೆ.

ಬ್ರಿಟಿಷ್ ಸರ್ಕಾರವು ತಮ್ಮ ಅಧಿಕೃತ ಯುದ್ಧ ಸಮಿತಿಗಳಲ್ಲಿ ಹಿಂದೂ ಮಹಾಸಭಾದ ಮುಖಂಡರುಗಳನ್ನು ಸೇರಿಸಿಕೊಂಡಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಸಾವರ್ಕರ್ ಒಬ್ಬ ಮಹಾನ್ ದೇಶಪ್ರೇಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಂದು ಹಾಡಿ ಹೊಗಳುವವರು ಬ್ರಿಟಿಷ್ ಸೇನೆಗೆ ಸೇರ ಬಯಸುವ ಹಿಂದೂಗಳಿಗೆ ಸಾವರ್ಕರ್ ಅವರು ನೀಡಿದ ಈ ಕೆಳಗಿನ ನಿರ್ದೇಶನಗಳನ್ನು ಓದಿದರೆ ನಾಚಿಕೆಯಿಂದ ತಲೆತಗ್ಗಿಸಬೇಕಾಗುತ್ತದೆ:

ಆದರೆ ಇದಕ್ಕೆ ಸಂಬಂಧಪಟ್ಟಂತೆ ಒಂದು ಅಂಶವನ್ನು ಎಷ್ಟು ಸಾಧ್ಯವೋ ಅಷ್ಟು ಒತ್ತುಕೊಟ್ಟು ನಮ್ಮ ಹಿತಕ್ಕಾಗಿಯೇ ಗಮನಿಸಬೇಕು; ಭಾರತೀಯ (ಬ್ರಿಟಿಷ್ ಎಂದು ಓದಿಕೊಳ್ಳಿ) ಸೇನೆ ಸೇರುವ ಹಿಂದೂಗಳು ಅಲ್ಲಿ ರೂಢಿಯಲ್ಲಿರುವ ಮಿಲಿಟರಿ ಶಿಸ್ತಿಗೆ ಮತ್ತು ಆದೇಶಕ್ಕೆ, ಅವುಗಳು ಯಾವಾಗಲೂ ಉದ್ದೇಶಪೂರ್ವಕವಾಗಿ ಹಿಂದೂ ಗೌರವಕ್ಕೆ ಧಕ್ಕೆತರುವ ಉದ್ದೇಶ ಹೊಂದಿಲ್ಲದಿದ್ದರೆ, ಸಂಪೂರ್ಣವಾಗಿ ಒಳಪಡಬೇಕು ಹಾಗೂ ವಿಧೇಯರಾಗಿರಬೇಕು.

ಇದನ್ನು ಓದಿ: ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಅಚ್ಚರಿಯ ಸಂಗತಿಯೆಂದರೆ, ವಸಾಹತುಶಾಹಿ ದೊರೆಗಳ ಸಶಸ್ತ್ರ ಸೇನೆಗೆ ಸೇರುವುದೇ ಆತ್ಮಗೌರವ ಹೊಂದಿರುವ ಹಾಗೂ ದೇಶಪ್ರೇಮಿ ಭಾರತೀಯರಿಗೆ ಅತಿದೊಡ್ಡ ಅಪಮಾನ ಎಂದು ಸಾವರ್ಕರ್ ಅವರಿಗೆ ಎಂದೂ ಅನಿಸಲೇ ಇಲ್ಲ. ಭಿಡೆಯವರ ಪುಸ್ತಕ ಕೂಡ ಹೇಳುತ್ತದೆ – ʻಮಹಾಸಭಾ ಮತ್ತು ಮಹಾನ್ ಯುದ್ಧʼ ಎಂಬ ತಲೆಬರಹದ ನಿರ್ಣಯದ ಕರಡು ಪ್ರತಿಯನ್ನು ಸಿದ್ಧಪಡಿಸಿದ್ದೇ ಸಾವರ್ಕರ್ ಎಂದು. ಅದು ಹೀಗಿದೆ:

ಯಾವುದೇ ಮಿಲಿಟರಿ ದಾಳಿಯಿಂದ ಭಾರತವನ್ನು ರಕ್ಷಿಸುವ ಹೊಣೆಗಾರಿಕೆ ಬ್ರಿಟಿಷ್ ಸರ್ಕಾರ ಹಾಗೂ ನಮ್ಮದೂ ಕೂಡ ಆಗಿರುವುದರಿಂದ ಮತ್ತು ಶೋಚನೀಯವೆಂದರೆ ನೆರವು ಇಲ್ಲದೇ ಅಂತಹ ಜವಾಬ್ದಾರಿಯನ್ನು ಹೊರುವ ಸ್ಥಿತಿಯಲ್ಲಿ ನಾವು ಇವತ್ತು ಇಲ್ಲದೇ ಇರುವುದರಿಂದ, ಭಾರತ ಮತ್ತು ಇಂಗ್ಲೆಂಡ್ ನಡುವೆ ತುಂಬು ಹೃದಯದ ಸಹಕಾರಕ್ಕೆ ವಿಪುಲವಾದ ಅವಕಾಶವಿದೆ.

(ಮುಂದುವರೆಯುವುದು)

ಇದನ್ನು ಓದಿ: ಭಾಗ – 6 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

Donate Janashakthi Media

Leave a Reply

Your email address will not be published. Required fields are marked *