ಡಾ.ಶಮ್ಸುಲ್ ಇಸ್ಲಾಂ
ಅನು: ಟಿ.ಸುರೇಂದ್ರ ರಾವ್
ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್ ರವರ `ಸಾವರ್ಕರ್ ಅನ್‌ಮಾಸ್ಕ್ಡ್ʼ ಸಾವರ್ಕರ್ ರವರನ್ನು ಕುರಿತ ಏಳು ಮಿಥ್ಯೆಗಳನ್ನು ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತದೆ.
ಮಿಥ್ಯೆ 1- ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ !
ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ ಎನ್ನುವ ಹಿಂದುತ್ವ ಪ್ರಚಾರಕರ ಮಿಥ್ಯೆಯನ್ನು ಪರಿಶೀಲಿಸುತ್ತ ಕಾಲಾಪಾನಿ ಅಥವಾ ಕರಿನೀರು ಎಂದು ಕರೆಯಲ್ಪಡುವ ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ ಗೂಡಿನಂತಿರುವ ಸಣ್ಣ ಕೋಣೆಯಲ್ಲಿ ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಲೇಖಕರು, ಸೆಲ್ಯುಲರ್ ಜೈಲು ಅಂದರೆ ಕೇವಲ ಸಾವರ್ಕರ್ ಕತೆ ಅಲ್ಲ ಎನ್ನುತ್ತಾರೆ. ಸ್ವತಃ ಸಾವರ್ಕರ್ ತಮ್ಮ ರಾಜಕೀಯ ಜೀವನದ ಮೊದಲ ಘಟ್ಟದಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರಲಿಲ್ಲ. ಆದರೆ ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅವರು ಅಲ್ಲಿ ಪಡಬೇಕಾದ ಘೋರ ಯಾತನೆಯಿಂದ ಸಂಪೂರ್ಣವಾಗಿ ಕುಗ್ಗಿದ ಅವರು ಕೋಮು ಸಾಮರಸ್ಯದ ಸ್ವತಂತ್ರ ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿಯಾಗಿ ಈಗ ಉಳಿಯಲಿಲ್ಲ… ತಮ್ಮ ರಾಜಕೀಯ ಬದುಕಿನ ಎರಡನೇ ಘಟ್ಟದಲ್ಲಿ ನವೆಂಬರ್ 14, 1913 ರಂದು ಸಾವರ್ಕರ್ ಸ್ವತಃ ಒಂದು ಕ್ಷಮಾಯಾಚನೆಯ ಅರ್ಜಿಯನ್ನು ಸಲ್ಲಿಸಿದರು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿನ ಹಿಂದೂ-ಮುಸ್ಲಿಂ ಐಕ್ಯತೆಯಿಂದ ಆತಂಕಿತರಾಗಿದ್ದ ಬ್ರಿಟಿಷ್ ದೊರೆಗಳಿಗೆ ಸಾವರ್ಕರ್‌ರಂತವರ ಸಹಾಯ ಬೇಕಿತ್ತು, ಅದಕ್ಕಾಗಿ ಅವರನ್ನು ಬಿಡುಗಡೆ ಮಾಡಿದರು ಎನ್ನುವುದನ್ನು ಯಾರೂ ಅರ್ಥಮಾಡಿಕೊಳ್ಳಬಲ್ಲರು. ʻʻಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಇದೆ ಎನ್ನಲಾದ ಸಂಯುಕ್ತ ರಂಗ ಛಿದ್ರವಾದರೂ ತನಗೆ ಚಿಂತೆಯಿಲ್ಲʼʼ ಎಂದು ಘೋಷಿಸುವಷ್ಟರ ಮಟ್ಟಿಗೂ ಹೋದ ಸಾವರ್ಕರ್ ವಾಸ್ತವದಲ್ಲಿ ಅವರ ಆವಶ್ಯಕತೆಯನ್ನು ಈಡೇರಿಸಿದರು.
ಸುಭಾಶ್ ಚಂದ್ರ ಬೋಸ್ ಬಗ್ಗೆ ಹಿಂದುತ್ವ ಬ್ರಿಗೇಡಿನ ಮೆಚ್ಚಿಕೆ ಎಂಬುದೂ ಹುಸಿ
ಬ್ರಿಟಿಷರನ್ನು ಭಾರತದಿಂದ ಹೊರಗಟ್ಟಲು ಮಿಲಿಟರಿ ಅಭಿಯಾನ ಸಂಘಟಿಸುವ ಪ್ರಯತ್ನ ಮಾಡಿದ ನೇತಾಜಿ ಸುಭಾಶ್ ಚಂದ್ರ ಬೋಸ್ ಬಗ್ಗೆ ತಮಗೆ ಭಾರಿ ಮೆಚ್ಚುಗೆ ಇದೆ ಎಂಬ ತೋರಿಕೆಯ ಮಾತನ್ನು ಈಗಲೂ ಹಿಂದುತ್ವ ಬ್ರಿಗೇಡ್ ಮುಂದುವರಿಸಿದೆ. ಆದರೆ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾ ನೇತಾಜಿಯವರಿಗೆ ವಿಶ್ವಾಸದ್ರೋಹ ಎಸಗಿದ ಸಂಗತಿ ಬಹಳ ಜನರಿಗೆ ಗೊತ್ತಿಲ್ಲ. ಎರಡನೇ ವಿಶ್ವ ಮಹಾ ಯುದ್ಧದ ಸಮಯದಲ್ಲಿ ನೇತಾಜಿಯವರು ದೇಶದ ವಿಮೋಚನೆಗಾಗಿ ವಿದೇಶಿ ಬೆಂಬಲ ಪಡೆಯುವ ಪ್ರಯತ್ನ ಮಾಡುತ್ತಿದ್ದಾಗ ಮತ್ತು ದೇಶದ ಈಶಾನ್ಯ ದಿಕ್ಕಿನಲ್ಲಿ ಮಿಲಿಟರಿ ದಾಳಿ ನಡೆಸಲು ಯತ್ನಿಸುತ್ತಿದ್ದಾಗ, ಆ ಪ್ರಯತ್ನದ ಭಾಗವಾಗಿ ʻಆಜಾದ್ ಹಿಂದ್ ಫೌಜ್ʼ (ಇಂಡಿಯನ್ ನ್ಯಾಷನಲ್ ಆರ್ಮಿ) ರಚನೆ ಮಾಡಿದ ಸಂದರ್ಭದಲ್ಲಿ ಸಾವರ್ಕರ್ ಬ್ರಿಟಿಷ್ ಧಣಿಗಳಿಗೆ ಸಂಪೂರ್ಣ ಮಿಲಿಟರಿ ಸಹಕಾರ ನೀಡುತ್ತಾರೆ. 1941 ರಲ್ಲಿ ಭಾಗಲ್ಪುರದಲ್ಲಿ ಹಿಂದೂ ಮಹಾಸಭಾದ 23 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ ಸಾವರ್ಕರ್ ಹೇಳುತ್ತಾರೆ:
ಎರಡನೆಯ ಅತ್ಯಂತ ಪ್ರಮುಖವಾದ ಹಾಗೂ ತುರ್ತಾದ ವಿಷಯವೇನೆಂದರೆ ದೇಶಾದ್ಯಂತ ಇರುವ ಹಿಂದೂ ಸಂಘಟನಾವಾದಿಗಳು (ಹಿಂದೂ ಮಹಾಸಭಾದವರು) ತಮ್ಮೆಲ್ಲಾ ಶಕ್ತಿಯನ್ನು ಹಾಗೂ ಚಟುವಟಿಕೆಗಳನ್ನು ಹಿಂದೂಗಳನ್ನು ಮಿಲಿಟರೀಕರಣ ಮಾಡುವತ್ತ ವಿನಿಯೋಗಿಸಬೇಕು. ನಮ್ಮ ಕಡಲತಡಿಯನ್ನು ತಲುಪಿರುವ ಯುದ್ಧವು ನೇರವಾದ ಅಪಾಯವನ್ನು ಹಾಗೂ ಅವಕಾಶವನ್ನು ತಂದೊಡ್ಡಿದೆ, ಅವೆರಡೂ ಉಂಟುಮಾಡಿರುವ ಅಗತ್ಯದಿಂದಾಗಿ ಮಿಲಿಟರೀಕರಣದ ಚಳುವಳಿಯನ್ನು ತೀವ್ರಗೊಳಿಸಬೇಕಾಗಿದೆ ಮತ್ತು ಎಲ್ಲಾ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿರುವ ಹಿಂದೂ ಮಹಾಸಭಾದ ಪ್ರತಿಯೊಂದು ಘಟಕವೂ ಜನರನ್ನು ಹುರಿದುಂಬಿಸಿ ಸೇನೆಗೆ, ನೌಕಾದಳಕ್ಕೆ, ವಾಯುದಳಕ್ಕೆ ಹಾಗೂ ಸಮರಶಸ್ತ್ರ ಕಾರ್ಖಾನೆಗಳಿಗೆ ಸೇರುವಂತೆ ಮಾಡುವ ಕೆಲಸದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು.
ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು
ಬ್ರಿಟಿಷರಿಗೆ ಸಹಾಯ ಮಾಡಲು ಸಾವರ್ಕರ್ ಯಾವ ಮಟ್ಟಕ್ಕೆ ಇಳಿದಿದ್ದರು ಎನ್ನುವುದು ಈ ಕೆಳಗಿನ ಶಬ್ದಗಳಲ್ಲಿ ಸ್ಪಷ್ಟವಾಗುತ್ತದೆ:
ಭಾರತದ ರಕ್ಷಣೆಗೆ ಸಂಬಂಧಪಟ್ಟಂತೆ ಹಿಂದುತ್ವ(ಹಿಂದೂಡಂ) ಯಾವುದೇ ಹಿಂಜರಿಕೆಯಿಲ್ಲದೇ ಭಾರತ ಸರ್ಕಾರದ ಸಮರ ಕಾರ್ಯಾಚರಣೆಗಳಲ್ಲಿ ಸಂವೇದನಾಶೀಲ ಸಹಕಾರದ ಉತ್ಸಾಹದೊಂದಿಗೆ ಜತೆಗೂಡಬೇಕು, ಅದು ಹಿಂದೂ ಹಿತಾಸಕ್ತಿಗಳಿಗೆ ನಿಷ್ಠೆ ಹೊಂದಿರುವ ಕಾರಣ ಭೂಸೇನೆ, ನೌಕಾದಳ ಹಾಗೂ ವಾಯುದಳಕ್ಕೆ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸೇರಿಸಬೇಕು ಮತ್ತು ಶಸ್ತ್ರಾಸ್ತ್ರ, ಮದ್ದುಗುಂಡು ಹಾಗೂ ಸಮರಶಸ್ತ್ರ ಕಾರ್ಖಾನೆಗಳಲ್ಲಿ ಪ್ರವೇಶ ಪಡೆಯಬೇಕು… ಪುನಃ ಈ ಯುದ್ಧಕ್ಕೆ ಜಪಾನಿನ ಪ್ರವೇಶವು ನಮ್ಮನ್ನು ನೇರವಾಗಿ ಅಪಾಯಕ್ಕೀಡುಮಾಡಿದೆ ಮತ್ತು ಬ್ರಿಟನ್ನಿನ ಶತೃಗಳಿಂದ ತಕ್ಷಣದಲ್ಲೇ ದಾಳಿಯಾಗುವ ಸಾಧ್ಯತೆಯನ್ನು ಗಮನಿಸಬೇಕು. ಇದರ ಪರಿಣಾಮವಾಗಿ, ನಾವು ಇಷ್ಟಪಡುತ್ತೇವೋ ಬಿಡುತ್ತೇವೋ, ಯುದ್ಧದ ಹಾವಳಿಯಿಂದ ನಮ್ಮ ಮನೆಮಾರುಗಳನ್ನು ರಕ್ಷಿಸಿಕೊಳ್ಳಬೇಕಿದೆ, ಮತ್ತು ಭಾರತವನ್ನು ರಕ್ಷಿಸುವ ಸರ್ಕಾರದ ಸಮರ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವ ಮೂಲಕ ಮಾತ್ರವೇ ಇದು ಸಾಧ್ಯವಾಗುತ್ತದೆ. ಆದ್ದರಿಂದ ಹಿಂದೂ ಮಹಾಸಭಾದವರು ಬಹಳ ಮುಖ್ಯವಾಗಿ ಬಂಗಾಳ ಹಾಗೂ ಅಸ್ಸಾಂ ಪ್ರಾಂತ್ಯಗಳಲ್ಲಿ ಒಂದು ಕ್ಷಣವೂ ವ್ಯರ್ಥವಾಗದಂತೆ ಮಿಲಿಟರಿಯ ಎಲ್ಲಾ ದಳಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಸಾಧ್ಯವೋ ಅಷ್ಟು ಪ್ರವೇಶ ಪಡೆಯಲು ಹಿಂದೂಗಳನ್ನು ಹುರಿದುಂಬಿಸಬೇಕು.
ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು
ಹಿಂದೂಗಳಿಗೆ ಕರೆ ನೀಡಿದ ಸಾವರ್ಕರ್ ʻʻಮಿಲಿಯಾಂತರ ಹಿಂದೂ ಯೋಧರು ಬ್ರಿಟಿಷ್ ಭೂಸೇನೆ, ನೌಕಾದಳ ಹಾಗೂ ವಾಯುದಳಕ್ಕೆ ಪ್ರವಾಹದೋಪಾದಿಯಲ್ಲಿ ಹಿಂದೂ ಸಂಘಟನಾವಾದಿಗಳ ಹೃದಯದೊಂದಿಗೆ ಸೇರಬೇಕುʼʼ ಎಂದರು ಮತ್ತು ಈ ತಕ್ಷಣದ ಕಾರ್ಯಕ್ರಮಕ್ಕೆ ಬದ್ಧರಾಗಿದ್ದರೆ ಮತ್ತು ಹಿಂದೂ ಸಂಘಟನಾವಾದಿಗಳ ಆದರ್ಶದ ದೃಷ್ಟಿಕೋನದೊಂದಿಗೆ ಯುದ್ಧ ಸನ್ನಿವೇಶವನ್ನು ಸಾಧ್ಯವಾಗುವಷ್ಟು ಮಟ್ಟಿಗೆ ಪ್ರಯೋಜನ ಪಡೆದಿದ್ದಾದರೆ, ಹಿಂದೂ ಜನಾಂಗದ ಮಿಲಿಟರೀಕರಣಕ್ಕಾಗಿನ ಚಳುವಳಿಯ ಮೇಲೆ ಒತ್ತಾಯ ಮಾಡಿದರೆ, ಯುದ್ಧಾನಂತರ ಅದು ಆಂತರಿಕ ಹಿಂದೂ-ವಿರೋಧಿ ಅಂತರ್ಯುದ್ಧವಾಗಲಿ ಅಥವಾ ಸಾಂವಿಧಾನಿಕ ಬಿಕ್ಕಟ್ಟು ಅಥವಾ ಒಂದು ಸಶಸ್ತ್ರ ಕ್ರಾಂತಿಯಾಗಲಿ ಸಂಭವಿಸಿದರೆ ಅವುಗಳನ್ನು ಎದುರಿಸಲು, ನಮ್ಮ ಹಿಂದೂ ರಾಷ್ಟ್ರವು ಹೆಚ್ಚು ಬಲಶಾಲಿಯಾಗಿ, ಕ್ರೋಡೀಕರಣಗೊಂಡು ಮತ್ತು ಹೋಲಿಸಲು ಸಾಧ್ಯವೇ ಆಗದ ಹೆಚ್ಚು ಅನುಕೂಲಕರ ಸ್ಥಿತಿಯಲ್ಲಿ ಹೊರಹೊಮ್ಮಲೇಬೇಕಾಗುತ್ತದೆ, ಎಂದು ಸಾವರ್ಕರ್ ಆಶ್ವಾಸನೆ ನೀಡಿದರು.
ಭಾಗಲ್‌ಪುರದಲ್ಲಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ಸಾವರ್ಕರ್ ಮತ್ತೊಮ್ಮೆ ʻಬ್ರಿಟಿಷ್ ಸರ್ಕಾರದ ಯುದ್ಧ ಕಾರ್ಯಾಚರಣೆಗೆ ಭಾರತದ ಹಿಂದೂಗಳು ಸೇರಬೇಕುʼ ಎಂದು ಒತ್ತುಕೊಟ್ಟು ಹೇಳಿದರು. ಯಾವುದೇ ಮುಚ್ಚುಮರೆಯಿಲ್ಲದೇ ಅವರು ಹೇಳಿದರು:
ಪುನಃ, ಯುದ್ಧಾನಂತರ ದೇಶಗಳ ಪರಿಸ್ಥಿತಿ ಮತ್ತು ಸ್ಥಾನಮಾನ ಏನೇ ಆಗಿರಲಿ, ಇವತ್ತು ಪ್ರಸ್ತುತ ಸಂದರ್ಭದಲ್ಲಿ ಎಲ್ಲವನ್ನೂ ಒಟ್ಟಿಗೇ ಪರಿಗಣಿಸಿದಾಗ, ಭಾರತದ ರಕ್ಷಣೆಯ ವಿಚಾರದಲ್ಲಿ ಹಿಂದೂಗಳ ಹಿತಾಸಕ್ತಿಗೆ ವಿಶ್ವಾಸದ್ರೋಹದ ಬಲವಂತಕ್ಕೆ ಒಳಗಾಗದೆ ಇರುವಂತೆ ಬ್ರಿಟಿಷ್ ಸರ್ಕಾರದೊಂದಿಗೆ ನಮ್ಮನ್ನು ನಾವು ಯಾವುದೇ ಅನುಮಾನವಿಲ್ಲದೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ಕಾರ್ಯಸಾಧುವಾದ ಹಾಗೂ ತುಲನಾತ್ಮಕವಾಗಿ ಅನುಕೂಲಕರವಾದ ಧೋರಣೆಯನ್ನು ಮಾತ್ರವೇ ಹಿಂದೂ ಸಂಘಟನಾವಾದಿಗಳು ಹೊಂದಬಹುದು.
ತಮ್ಮ ವ್ಯಾವಹಾರಿಕ ತಿಳುವಳಿಕೆಯ ಪ್ರಕಾರ ಬ್ರಿಟಿಷರ ಸಮರ ಕಾರ್ಯಾಚರಣೆಗೆ ನೆರವಾಗುವುದು ನಮ್ಮ ದೇಶಕ್ಕೆ ಒಂದು ಮಹಾನ್ ಭವಿಷ್ಯವನ್ನು ಸಾರಬಹುದು ಎಂದು ಸಾವರ್ಕರ್ ಅವರು ಭಾಗಲ್‌ಪುರದಲ್ಲಿನ ತಮ್ಮ ಮುಕ್ತಾಯ ಭಾಷಣದಲ್ಲಿ ಸ್ಪಷ್ಟಗೊಳಿಸಿದರು:
ಕತ್ತಲೆಯ ಕರಾಳ ಕ್ಷಣಗಳು ಬೆಳಗಿನ ಸುವರ್ಣ ಉದಯಕ್ಕೆ ಸಮೀಪದಲ್ಲಿದೆ ಎಂಬ ಮಾತು ಸತ್ಯವೇ ಆಗಿದ್ದರೆ ಅದು ಇವತ್ತು ಸಂಭವಿಸಲಿದೆ. ನಮ್ಮ ಪೂರ್ವ ಕಡಲತಡಿಯಿಂದ ಯುದ್ಧವು ಪ್ರವೇಶವಾಗುತ್ತಿರುವುದು ಮತ್ತು ಅದು ಕೆಲವೇ ಸಮಯದಲ್ಲಿ ಪಶ್ಚಿಮದಿಂದಲೂ ಕೇಡನ್ನು ಉಂಟುಮಾಡುವ ಸಂಗತಿಯು ಅಪಾಯಕಾರಿಯಾದುದು, ಅದರ ಪರಿಮಾಣ, ವಿನಾಶಕಾರ್ಯ ಹಾಗೂ ಫಲಿತಾಂಶ ಎಣೆಯಿಲ್ಲದ್ದಾಗಿ ಪರಿಣಮಿಸುತ್ತದೆ. ಆದರೆ ಅದು ಜಗತ್ತಿಗೆ ಒಂದು ಹೊಸ ದಿನವಾಗಿ ಹಠಾತ್ತನೆ ಉದ್ಭವಿಸುತ್ತದೆ ಕೂಡ ಮತ್ತು ಜಗತ್ತಿನ ಈ ಅವ್ಯವಸ್ಥೆಯಿಂದ ಹೊಚ್ಚ ಹೊಸದಾದ ಮಾತ್ರವಲ್ಲ ಉತ್ತಮ ವ್ಯವಸ್ಥೆಯೊಂದು ಹೊರಹೊಮ್ಮಬಹುದು ಎಂಬುದನ್ನು ನಮಗೆ ತೋರಲು ಯಾವುದೇ ಕುರುಹುಗಳ ಅಗತ್ಯವಿಲ್ಲ. ಎಲ್ಲವನ್ನೂ ಕಳೆದುಕೊಂಡವರು ಕೊನೆಯಲ್ಲಿ ಸಾಕಷ್ಟು ಗಳಿಸಬಹುದು. ನಾವೂ ಕೂಡ ನಮ್ಮ ಸಮಯಕ್ಕಾಗಿ ಕಾಯೋಣ ಮತ್ತು ಪ್ರಾರ್ಥಿಸೋಣ ಹಾಗೂ ಶಕ್ತಿಮೀರಿ ಕೆಲಸ ಮಾಡೋಣ.
ಇದನ್ನು ಓದಿ: ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು
ಸುಭಾಶ್ ಚಂದ್ರ ಬೋಸ್ ರಂತಹ ನಾಯಕರುಗಳು ಸಶಸ್ತ್ರ ಹೋರಾಟಗಳ ಮೂಲಕ ಭಾರತದಿಂದ ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಬೇಕೆಂಬ ತಂತ್ರಗಳನ್ನು ಹೂಡುತ್ತಿದ್ದಾಗ ಬ್ರಿಟಿಷರ ಯುದ್ಧ ಕಾರ್ಯಾಚರಣೆಗೆ ಸಾವರ್ಕರ್ ಅವರ ಸಂಪೂರ್ಣ ಬೆಂಬಲವು ಸುವ್ಯವಸ್ಥಿತ ಹಿಂದುತ್ವ ಸಂಚಿನ ಫಲವಾಗಿತ್ತು. ಮಧುರಾ ಅಧಿವೇಶನ (1940 ರ 22 ನೇ ಹಿಂದೂ ಮಹಾಸಭಾ ಅಧಿವೇಶನ)ದಲ್ಲಿ ಅವರು ತಮ್ಮ ಆದ್ಯತೆಯನ್ನು ಸ್ಪಷ್ಟ ಮಾಡಿಕೊಂಡಿದ್ದರು: ʻʻಈ ಯುದ್ಧದಲ್ಲಿ ಇಂಗ್ಲೆಂಡ್ ತನ್ನ ಭಾರತದ ಸಾಮ್ರಾಜ್ಯವನ್ನು ಜರ್ಮನಿಗೆ ಸಂಪೂರ್ಣವಾಗಿ ವಹಿಸಿಕೊಡಬೇಕಾದ ಬಲವಂತಕ್ಕೆ ಈಡಾಗುವ ರೀತಿಯಲ್ಲಿ ವಿನಾಶಕಾರೀ ಸೋಲು ಅನುಭವಿಸುತ್ತದೆ ಎನ್ನುವುದು ಪೂರಾ ಅಸಂಭವ ಎನ್ನುವ ತರ್ಕದ ಮೇಲೆ ಬ್ರಿಟಿಷರಿಗೆ ಅವರ ಬೆಂಬಲ ಆಧರಿಸಿತ್ತು.ʼʼ ಅಷ್ಟರಮಟ್ಟಿಗೆ ಅವರು ಬ್ರಿಟಿಷ್ ಸಾಮ್ರಾಜ್ಯದ ಅಜೇಯತೆಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು.
ಮಧುರಾದಲ್ಲಿ ಅವರ ಅಧ್ಯಕ್ಷೀಯ ಭಾಷಣ ಬ್ರಿಟಿಷ್ ಸಾಮ್ರಾಜ್ಯಶಾಹೀ ಕುತಂತ್ರಗಳಿಗೆ ಅವರ ನಾಚಿಕೆಗೆಟ್ಟ ಬೆಂಬಲಕ್ಕೆ ಒಂದು ಜೀವಂತ ಪುರಾವೆ. ಭಾರತದ ವಿಮೋಚನೆಯ ನೇತಾಜಿಯ ಪ್ರಯತ್ನಗಳನ್ನು ಅವರು ಸಂಪೂರ್ಣವಾಗಿ ತಿರಸ್ಕರಿಸಿದರು.
ʻʻನೈತಿಕ ಅಧಾರದಲ್ಲಿ ಮಾತ್ರವೇ ಅಲ್ಲದೆ, ವ್ಯಾವಹಾರಿಕ ರಾಜಕೀಯದ ನೆಲೆಯಲ್ಲಿ ಕೂಡ, ನಾವು ಪ್ರಸಕ್ತ ಸಂದರ್ಭಗಳಲ್ಲಿ, ಯಾವುದೇ ಸಶಸ್ತ್ರ ಪ್ರತಿರೋಧದ ಕಾರ್ಯಕ್ರಮದಲ್ಲಿ ಹಿಂದೂಮಹಾಸಭಾದ ಸಂಘಟನೆಯ ಪರವಗಿ ತೊಡಗಿಸಿಕೊಳ್ಳದಿರುವ ಬಲವಂತದಲ್ಲಿದ್ದೇವೆ.ʼʼ ಎಂದು ಅವರು ಘೋಷಿಸಿದರು.
(ಮುಂದುವರೆಯುವುದು)
ಇದನ್ನು ಓದಿ: ಭಾಗ – 4 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು
ಇದನ್ನು ಓದಿ: ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು
ಇದನ್ನು ಓದಿ: ಭಾಗ – 6 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು