ಡಾ.ಶಮ್ಸುಲ್‌ಇಸ್ಲಾಂ
ಅನು: ಟಿ.ಸುರೇಂದ್ರರಾವ್
ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್‌ರವರ ʻಸಾವರ್ಕರ್ ಅನ್‌ಮಾಸ್ಕ್ಡ್ʼ ಪ್ರಸ್ತಾವನೆಯಲ್ಲಿ ಸಾವರ್ಕರ್ ಅವರನ್ನು ರಾಷ್ಟ್ರೀಯ ನೇತಾರನನ್ನಾಗಿ ಬಿಂಬಿಸುವ ಯಾವುದೇ ಯೋಜನೆ 1998ಕ್ಕೂ ಮುಂಚೆ ಹಿಂದುತ್ವ ಬ್ರಿಗೇಡಿಗೆ ಇರಲಿಲ್ಲ, ನಂತರ ಅದು ಮುನ್ನೆಲೆಗೆ ಬರುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೂ ಇದೆ ಎಂಬುದನ್ನು ಪರಿಶೀಲಿಸುತ್ತ ಸಾವರ್ಕರ್ ಅವರ ಹೊಗಳುಭಟರ ತಂಡದಲ್ಲಿ ಕಾಂಗ್ರೆಸ್ ಕೂಡ ಸೇರಿಕೊಂಡದ್ದು ವಿಷಾದದ ಸಂಗತಿ ಎನ್ನುತ್ತಾರೆ. ಮುಂದೆ ಅವರು ಸಾವರ್ಕರ್ ರವರನ್ನು ಕುರಿತ ಏಳು ಮಿಥ್ಯೆಗಳನ್ನು ಒಂದೊಂದಾಗಿ ಈ ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತಾರೆ.
ಮಿಥ್ಯೆ 1 ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!
ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ ಎನ್ನುವ ಹಿಂದುತ್ವ ಪ್ರಚಾರಕರ ಮಿಥ್ಯೆಯನ್ನು ಪರಿಶೀಲಿಸುತ್ತ ಕಾಲಾಪಾನಿ ಅಥವಾ ಕರಿನೀರು ಎಂದು ಕರೆಯಲ್ಪಡುವ ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ ಗೂಡಿನಂತಿರುವ ಸಣ್ಣ ಕೋಣೆಯಲ್ಲಿ ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಲೇಖಕರು, ಸೆಲ್ಯುಲರ್ ಜೈಲು ಅಂದರೆ ಕೇವಲ ಸಾವರ್ಕರ್ ಕತೆ ಅಲ್ಲ ಎನ್ನುತ್ತಾರೆ. ಸ್ವತಃ ಸಾವರ್ಕರ್ ತಮ್ಮ ರಾಜಕೀಯ ಜೀವನದ ಮೊದಲ ಘಟ್ಟದಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರಲಿಲ್ಲ. ಆದರೆ ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅವರು ಅಲ್ಲಿ ಪಡಬೇಕಾದ ಘೋರ ಯಾತನೆಯಿಂದ ಸಂಪೂರ್ಣವಾಗಿ ಕುಗ್ಗಿದ ಅವರು ಕೋಮು ಸಾಮರಸ್ಯದ ಸ್ವತಂತ್ರ ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿಯಾಗಿ ಈಗ ಉಳಿಯಲಿಲ್ಲ… ತಮ್ಮ ರಾಜಕೀಯ ಬದುಕಿನ ಎರಡನೇ ಘಟ್ಟದಲ್ಲಿ ನವೆಂಬರ್ 14, 1913 ರಂದು ಸಾವರ್ಕರ್ ಸ್ವತಃ ಒಂದು ಕ್ಷಮಾಯಾಚನೆಯ ಅರ್ಜಿಯನ್ನು ಸಲ್ಲಿಸಿದರು. ಅಸಹಕಾರ ಚಳುವಳಿ ಮತ್ತು ಖಿಲಾಫತ್ ಚಳುವಳಿಯ ಸಂದರ್ಭದಲ್ಲಿನ ಹಿಂದೂ-ಮುಸ್ಲಿಂ ಐಕ್ಯತೆಯು ಬ್ರಿಟಿಷ್ ದೊರೆಗಳನ್ನು ಗಲಿಬಿಲಿಗೊಳಿಸಿದ್ದರಿಂದಾಗಿ ಸಾವರ್ಕರ್ ಅಂಥವರ ಕೋಮುವಾದಿ ಹಸ್ತಕ್ಷೇಪಗಳು ಕೋಮುವಾದಿ ವಿಭಜನೆಗಳನ್ನು ಹೆಚ್ಚು ಮಾಡುವಲ್ಲಿ ಅವರಿಗೆ ಸಹಾಯಕವಾಗಿದ್ದ ಮುಸ್ಲಿಂ-ವಿರೋಧಿ ಸಿದ್ಧಾಂತವನ್ನು ಬೆಳೆಸಿದ್ದಕ್ಕಾಗಿ ಸಾವರ್ಕರ್ ಅವರನ್ನು ಪುರಸ್ಕರಿಸಬೇಕೆಂದು ಬ್ರಿಟಿಷರು ನಿರ್ಧರಿಸುತ್ತಾರೆ ಮತ್ತು ಅದಕ್ಕಾಗಿಯೇ ಸಾವರ್ಕರ್ ಅವರನ್ನು ಬಿಡುಗಡೆ ಮಾಡುತ್ತಾರೆ. ಎನ್ನುವುದನ್ನು ಯಾರೂ ಅರ್ಥಮಾಡಿಕೊಳ್ಳಬಲ್ಲರು.
ಬ್ರಿಟಿಷ್ ಸಾಮ್ರಾಜ್ಯಶಾಹಿ-ವಿರೋಧಿ ಸಂಯುಕ್ತ ರಂಗ ಛಿದ್ರವಾದರೂ ಚಿಂತೆಯೇನಿಲ್ಲ ಎಂದು ಸಾರಿದವರು!
ಸಾವರ್ಕರ್ ಅವರ ರಾಜಕೀಯ ಚಟುವಟಿಕೆಗಳ ಮೇಲೆ ನಿಷೇಧವಿದ್ದರೂ
ಹಿಂದೂ ಮಹಾಸಭಾವನ್ನು ಪುನರ್‌ಸಂಘಟಿಸಲು ಅವಕಾಶ ನೀಡಲಾಯಿತು
ಸಾವರ್ಕರ್ ಅವರನ್ನು ಯೆರವಾಡಾ ಜೈಲಿನಿಂದ ಜನವರಿ 6, 1924ರಂದು ಎರಡು ಷರತ್ತುಗಳ ಮೇಲೆ ಬಿಡುಗಡೆ ಮಾಡಲಾಯಿತು. ಮೊದಲ ಷರತ್ತಿನ ಪ್ರಕಾರ, ʻʻಸಾವರ್ಕರ್ ಅವರು ರತ್ನಗಿರಿ ಜಿಲ್ಲೆಯಲ್ಲೇ ವಾಸ ಮಾಡಬೇಕು ಮತ್ತು ಸರ್ಕಾರದ ಅನುಮತಿಯಿಲ್ಲದೇ ಆ ಜಿಲ್ಲೆಯ ಗಡಿ ದಾಟಿ ಹೊರಗೆ ಹೋಗಬಾರದುʼʼ. ಎರಡನೇ ಷರತ್ತು ʻʻಅವರು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಸರ್ಕಾರದ ಅನುಮತಿಯಿಲ್ಲದೆ ಐದು ವರ್ಷಗಳ ಕಾಲ ಯಾವುದೇ ರೀತಿಯ ರಾಜಕೀಯ ಚುವಟಿಕೆಗಳಲ್ಲಿ ತೊಡಗಬಾರದುʼʼ.36 ಆದರೆ, ಧನಂಜಯ ಕೀರ್ ಅವರು ಬರೆದಿರುವ ಸಾವರ್ಕರ್ ಜೀವನಚರಿತ್ರೆಯಲ್ಲಿನ ವಿವರಣೆಗಳ ಪ್ರಕಾರ ಹಿಂದೂ ಮಹಾಸಭಾ ಸಂಘಟಿಸಲು ಮತ್ತು ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಪ್ರಚಾರ ಮಾಡುವುದಕ್ಕೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಬಿಡುಗಡೆಯಾದ ಎರಡು ವಾರಗಳ ಒಳಗೇ ಆ ಆತ್ಮಕತೆ ಹೀಗೆ ಹೇಳುತ್ತದೆ:
ರತ್ನಗಿರಿ ಹಿಂದೂ ಮಹಾಸಭಾವನ್ನು ಹೊರಗೆ ಕಾಣುವಂತೆ ಬಾಬಾರಾವ್ ಸಾವರ್ಕರ್ ಅವರ ಪ್ರಭಾವ ಹಾಗೂ ಪ್ರಯತ್ನಗಳ ಮೂಲಕ ಸ್ಥಾಪಿಸಲಾಯಿತು ಎಂದು ಹೊರನೋಟಕ್ಕೆ ಕಂಡರೂ, ವಾಸ್ತವದಲ್ಲಿ, ಸಾವರ್ಕರ್ ಅವರ ಪ್ರೋತ್ಸಾಹದಿಂದಲೇ ಅದು ನಡೆಯಿತು. ಹಿಂದೂಗಳನ್ನು ಒಂದು ಸುಸಂಘಟಿತ ಅಖಂಡವಾಗಿ ಸಂಘಟಿಸುವುದು, ಕ್ರೋಡೀಕರಿಸುವುದು ಮತ್ತು ಒಂದುಗೂಡಿಸುವುದು, ಮತ್ತು ಯಾವುದೇ ನ್ಯಾಯವಲ್ಲದ ಆಕ್ರಮಣವನ್ನು ಪರಿಣಾಮಕಾರಿಯಾಗಿ ವಿರೋಧಿಸಲು ಸಮರ್ಥರಾಗುವಂತೆ ಮಾಡುವುದು ಸಭಾದ ಪ್ರಮುಖ ಗುರಿಯಾಗಿತ್ತು.37
ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು
ಬಹಳ ಮುಖ್ಯವಾಗಿ, ʻಅನ್ಯಾಯವಲ್ಲದ ಆಕ್ರಮಣʼ ಎಂಬುದು ಬ್ರಿಟಿಷರ ಆಳ್ವಿಕೆಯನ್ನು ಕುರಿತ ಉಲ್ಲೇಖವಾಗಿರದೆ, ಅದು ಮುಸ್ಲಿಮರ ಹಾವಳಿ ಎಂಬರ್ಥವನ್ನು ಪಡೆಯುತ್ತದೆ. ಆಗಸ್ಟ್ 24 ರಂದು ಸಾವರ್ಕರ್ ಅವರು ನಾಸಿಕ್ ನ ಒಂದು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲು (ರತ್ನಗಿರಿಯಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡಿದ್ದರಿಂದ ಅವರಿಗೆ ಹೊರಗೆ ಹೋಗಲು ಅನುಮತಿ ಸಿಕ್ಕಿತ್ತು) ಅವಕಾಶ ನೀಡಲಾಗಿರುತ್ತದೆ. ಆ ಸಮಾರಂಭವನ್ನು ಹಿಂದೂ-ಮುಸ್ಲಿಂ ಐಕ್ಯತೆಯನ್ನು ವಿರೋಧಿಸುವ ಬಿ.ಎಸ್.ಮೂಂಜೆ ಮತ್ತು ಎನ್.ಸಿ.ಕೇಲ್ಕರ್ ಅವರು ಸಂಘಟಿಸಿದ್ದರು. ಈ ಸಮಾರಂಭದಲ್ಲಿ ಸಾವರ್ಕರ್ ಅವರಿಗೆ ಒಂದು ನಿಧಿ ಸಮರ್ಪಿಸಲಾಯಿತು ಮತ್ತು ಗಮನಾರ್ಹ ಸಂಗತಿಯೆಂದರೆ, “ಶಂಕರಾಚರ್ಯ ಅವರು ತಮ್ಮ ಅನುಗ್ರಹದೊಂದಿಗೆ ಮಹಾನ್ ದೇಶಭಕ್ತನಿಗೆ ಒಂದು ಗೌರವದ ಉಡುಪನ್ನು ಕಳಿಸಿದ್ದರು”.38
ಸಾವರ್ಕರ್ ಅವರ ಹಿಂದುತ್ವ ಕಾರ್ಯಸೂಚಿಯಲ್ಲಿ ಹೇಗೆ ದ್ವಂದ್ವಾರ್ಥ ಇರಲಿಲ್ಲವೋ ಹಾಗೆಯೇ ಬ್ರಿಟಿಷರ ತಂತ್ರಗಳಲ್ಲಿಯೂ ಕೂಡ ಅದಿರಲಿಲ್ಲ. ಅವರು ನಾಸಿಕ್‌ನಲ್ಲಿ ಇದ್ದಾಗಿನ ವಿವರಣೆಯಲ್ಲಿ ಕೀರ್ ಅವರು ಸಾವರ್ಕರ್ ಜೀವನಚರಿತ್ರೆಯಲ್ಲಿ ಅದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕೀರ್ ಪ್ರಕಾರ:
ಸಾವರ್ಕರ್ ಅವರು ಹಿಂದೂ ಸಮಾಜವನ್ನು ಮೇಲೆತ್ತುವ ತಮ್ಮ ಕಾರ್ಯವನ್ನು ನಾಸಿಕ್‌ನಲ್ಲಿಯೂ ಮಾಡಿದರು. ನಾಸಿಕ್‌ನಲ್ಲಿ ಅವರು ಉಳಿದುಕೊಂಡಿದ್ದಾಗ ಮಹರ್ ಹಿಂದೂಗಳನ್ನು ಆಘಾಖಾನಿ ಮೊಹಮ್ಮದರ ಪ್ರಲೋಭನೆಯಿಂದ ಕಾಪಾಡಿದರು. ಸರ್ಕಾರದ ಅನುಮತಿಯೊಂದಿಗೆ ಅವರು ಭಾಗೂರ್, ತ್ರ್ಯಂಬಕ್, ಯೇಲಾ ಹಾಗೂ ನಗರ್ ಗಳಿಗೆ ಭೇಟಿ ನೀಡಿದರು ಮತ್ತು ಅವರ ನೂತನ ಹಿಂದೂ ಸಂಘಟನಾತ್ಮಕ ಸಿದ್ಧಾಂತವನ್ನು ಜನರ ನಡುವೆ ಪ್ರಚಾರ ಮಾಡಿದರು.39
ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು
ರಾಜಕೀಯ ಚಟುವಟಿಕೆಗಳಿಗೆ ಕಾನೂನಿನ ನಿರ್ಬಂಧವಿದ್ದರೂ ಸಾವರ್ಕರ್ ಅವರು ತಮ್ಮ ಸಂಕುಚಿತ ಮನೋವೃತ್ತಿಯ ರಾಜಕೀಯ ಚಟುವಟಿಕೆಗಳನ್ನು ನಿಲ್ಲಿಸಿರಲಿಲ್ಲ. ಕೀರ್ ಮುಂದುವರಿದು ಹೇಳುತ್ತಾರೆ:
ಸಾವರ್ಕರ್ ಅವರು ಕ್ರಮೇಣವಾಗಿ ಹಿಂದೂ ಮಹಾಸಭಾದ ಮೂಲಕ ಜನರಲ್ಲಿ ತಮ್ಮ ನೂತನ ಸಿದ್ಧಾಂತದ ಉಪದೇಶ ನೀಡಿದರು. ನೂತನ ಸಿದ್ಧಾಂತದ ಆವೇಶದೊಂದಿಗೆ ರತ್ನಗಿರಿಯ ಹಿಂದೂಗಳು ಶಕ್ತಿ, ಬಲವರ್ಧನೆ ಮತ್ತು ಐಕ್ಯತೆಯನ್ನು ಆರಾಧಿಸಲು ಶುರುಮಾಡಿದರು. ಅಂತಹ ಅಪ್ಪಟ ಹಿಂದೂ ಚಳುವಳಿಯು ಗಾಂಧೀವಾದಿ ಮುಸ್ಲಿಂಪರ ಉತ್ಸಾಹಿಗಳ ಮಾನಸಿಕ ಸ್ಥಿಮಿತತೆಯನ್ನು ಅಲುಗಾಡಿಸಿದ್ದು ಸ್ವಾಭಾವಿಕವಾಗಿತ್ತು.40
ಸಾವರ್ಕರ್ ಅವರು ಹಿಂದೂ ಕೋಮುವಾದವನ್ನು ʻಸರಿಯಾದದ್ದುʼ ಮತ್ತು ಹಿಂದೂ ಪ್ರತ್ಯೇಕತಾವಾದವನ್ನು ʻರಾಷ್ಟ್ರೀಯವಾದʼ ಎಂದು ಸಮರ್ಥಿಸಿದರು; ಇಂತಹ ರಾಜಕೀಯ ಚಟುವಟಿಕೆಗಳನ್ನು ಯಾವುದೇ ತಡೆಯಿಲ್ಲದೆ ಮುಂದುವರಿಸಲು ಅವರಿಗೆ ಬ್ರಿಟಿಷರು ಏಕೆ ಅವಕಾಶ ಮಾಡಿಕೊಟ್ಟರು ಎನ್ನುವುದು ಬಹಳ ಬೇಗ ಸ್ಪಷ್ಟವಾಯಿತು. ಭಾರತದ ಸ್ವಾತಂತ್ರ್ಯ ಚಳುವಳಿಗೆ ಹಿಂದೂ-ಮುಸ್ಲಿಂ ಐಕ್ಯತೆ ತೀರಾ ಅಗತ್ಯವಿದ್ದ ಸಂದರ್ಭದಲ್ಲಿ ಹೆಚ್ಚೆಚ್ಚು ಹೊಸ ಹೊಸ ಸಂಘರ್ಷಗಳನ್ನು ಅಗೆದು ಹೊರತರಲಾಗುತ್ತಿತ್ತು. ಮಸೀದಿಗಳ ಎದುರಿನಲ್ಲಿ ಹಾಡುಗಳನ್ನು ನುಡಿಸಿ ಗಂಭೀರ ಘರ್ಷಣೆಗಳಿಗೆ ಕಾರಣವಾದ್ದನ್ನು ಮೊದಲು ರತ್ನಗಿರಿಯಲ್ಲಿ ನೋಡುವಂತಾಯಿತು. ಹಿಂದೂ-ಮುಸ್ಲಿಂ ಘರ್ಷಣೆಗಳಿಗೆ ಕಾರಣವಾಗುವ ಈ ನಿತ್ಯನೂತನ ಆವಿಷ್ಕಾರವು ನಂತರದಲ್ಲಿ ಎಂದೆಂದಿಗೂ ಎರಡು ಕೋಮುಗಳ ನಡುವಿನ ಕೋಮು ಗಲಭೆಗಳಿಗೆ ಕಾರಣವಾದವು. ಮಸೀದಿಗಳಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗ ಹಾಡುಗಳನ್ನು ನುಡಿಸುವ ಹಿಂದೂ ಚಳುವಳಿಯ ಮುಂಚೂಣಿಯಲ್ಲಿ ಸಾವರ್ಕರ್ ಇರುತ್ತಿದ್ದರು.
ಸಾರ್ವಜನಿಕವಾಗಿ ಶುದ್ಧಿಗೊಳಿಸುವ ಅಥವಾ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಹಿಂದೂಗಳಾಗಿ ಮತಾಂತರಗೊಳಿಸುವ ಕ್ರಿಯೆಗಳು ಎಲ್ಲಾ ಧರ್ಮೀಯರನ್ನು ಒಂದುಗೂಡಿಸುವ ಸಂಯುಕ್ತ ಸ್ವಾತಂತ್ರ್ಯ ಚಳುವಳಿಯ ಪ್ರಯತ್ನಗಳಿಗೆ ಭಾರಿ ಹಾನಿಯನ್ನು ಉಂಟುಮಾಡಿದವು. ಬ್ರಿಟಿಷ್ ದೊರೆಗಳಿಗೆ ತೀರಾ ಅಪ್ಯಾಯಮಾನವಾದ ಈ ವಿಷಯವು ಅಂತಿಮವಾಗಿ 1920 ರ ಅಸಹಕಾರ ಚಳುವಳಿಯ ಚೈತನ್ಯವನ್ನೇ ಉಡುಗಿಸಿದ ನಂಜಾಗಿ ಪರಿಣಮಿಸಿತು. ʻಮರುಮತಾಂತರವು (ಶುದ್ಧಿಯು) ಹಿಂದೂ ಸಮಾಜವನ್ನು ಒಟ್ಟುಮಾಡಿತು ಮತ್ತು ಬಲಪಡಿಸಿತುʼ ಎಂದು ಸಾವರ್ಕರ್ ನಂಬಿದರು.41 ʻʻಸಂಘಟನಾವಾದದ ಮೂಲ ಸ್ರೋತವಾದ ಶುದ್ಧಿ ಅಥವಾ ಮರುಮತಾಂತರ ಚಳುವಳಿಯು ರತ್ನಗಿರಿಯಲ್ಲಿ ಸಾವರ್ಕರ್ ಅವರಿಂದಲೇ ಉದ್ಘಾಟನೆಗೊಂಡಿತು ಮತ್ತು ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲೂ ಉತ್ಕಟ ಮಟ್ಟ ತಲುಪಿತುʼʼ42 ಎನ್ನುವುದನ್ನೂ ಕೂಡ ನಾವು ಕೀರ್ ಅವರಿಂದ ತಿಳಿಯುತ್ತೇವೆ. ಸಾವರ್ಕರ್ ಶುದ್ಧಿ ಚಳುವಳಿಯನ್ನು ʻಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲೂʼ ನಡೆಸಿದರು ಎನ್ನುವುದನ್ನು, ಇಂತಹ ಸಂಕುಚಿತ ಮನೋವೃತ್ತಿಯ ಚಳುವಳಿಗಳು ಸಮಕಾಲೀನ ರಾಷ್ಟ್ರೀಯ ರಾಜಕೀಯ ದೃಶ್ಯವನ್ನು ಕೋಮುವಾದೀಕರಣಗೊಳಿಸುವಲ್ಲಿ ಯಶಸ್ವಿಯಾದವು ಮತ್ತು ಇದರಲ್ಲಿ ಕೋಮುವಾದಿ ಗುಂಪುಗಳ ನಡುವಿನ ಪೈಪೋಟಿ ಒಂದು ಸಂಯುಕ್ತ ಸ್ವಾತಂತ್ರ್ಯ ಹೋರಾಟಕ್ಕೆ ಅವಕಾಶವೇ ಇಲ್ಲದಂತೆ ಮಾಡಿತು ಎಂಬ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.
ತೋರಿಕೆಗೆ, ಸಾವರ್ಕರ್ ಅವರ ಚಟುವಟಿಕೆಗಳಿಗೆ ನಿರ್ಬಂಧವಿತ್ತಾದರೂ, ಅವರ ಸಂಕುಚಿತ ಮನೋವೃತ್ತಿಯ ಹಿಂದೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ನಿರ್ಬಂಧ ಇರಲೇ ಇಲ್ಲ. ಅಷ್ಟೇ ಅಲ್ಲದೆ, ಅವರು ಗಾಂಧಿಯ ʻʻಹಿಂದೂ-ಮುಸ್ಲಿಂ ಐಕ್ಯತೆಯ ಗೀಳಿನʼʼ ವಿರುದ್ಧ ನಿಯತಕಾಲಿಕವಾಗಿ ಬರೆಯುತ್ತಾ ಹೋದರು ಮತ್ತು ಮೋತಿಲಾಲ್ ನೆಹರೂರವರನ್ನು ಕೂಡ ಅವರು ಬಿಡಲಿಲ್ಲʼʼ.43 ಕೀರ್ ಅವರು ಮುಂದುವರಿದು ಹೇಳುತ್ತಾರೆ:
ಸಾವರ್ಕರ್ ಅವರು ರತ್ನಗಿರಿಯಲ್ಲಿ ಉಳಿದುಕೊಂಡಿದ್ದು ಅಖಿಲ ಭಾರತ ಮಟ್ಟದಲ್ಲಿ ಪ್ರಸಿದ್ಧರಾದ ಹಲವಾರು ಪಂಡಿತರನ್ನು ಮತ್ತು ದೇಶಪ್ರೇಮಿಗಳನ್ನು ಆಕರ್ಷಿಸಿತ್ತು. ಆರಂಭದ ದಿನಗಳಲ್ಲಿ ಭೇಟಿಯಾದ ಮೊದಲಿಗರಲ್ಲಿ ಆರ್.ಎಸ್.ಎಸ್.ನ ಮಹಾನ್ ಸಂಸ್ಥಾಪಕರಾದ ಡಾ.ಕೆ.ಬಿ.ಹೆಡ್ಗೆವಾರ್. ಮಾರ್ಚ್ 1925ರಲ್ಲಿ ಶಿರ‍್ಗಾಂವ್‌ನಲ್ಲಿ ಅವರಿಬ್ಬರ ಸಂದರ್ಶನ ನಡೆಯಿತು. ಸಾವರ್ಕರ್ ಅವರ ಮೌಲಿಕವಾದ ಕೃತಿ ಹಿಂದುತ್ವ ಆಗ ತಾನೆ ಬಿಡುಗಡೆಯಾಗಿತ್ತು; ಅದು ಹಿಂದು ರಾಷ್ಟ್ರೀಯವಾದದ ತತ್ವಗಳನ್ನು ಹಾಗೂ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ನೀಡಿತ್ತು; ಮತ್ತು ಮಹಾನ್ ಬುದ್ಧಿಶಾಲಿಗಳ ಹಾಗೂ ಮಹಾನ್ ಹೃದಯವಂತರ ಮನಸೂರೆಗೊಂಡಿತ್ತು ಹಾಗೂ ಹುರಿದುಂಬಿಸಿತ್ತು.44
ಬ್ರಿಟಿಷರಿಗೆ ಸಹಾಯ ಮಾಡುವ ಮೂಲಕ ಸಾವರ್ಕರ್
ಭಾರತ ಬಿಟ್ಟು ತೊಲಗಿ ಚಳುವಳಿಗೆ ದ್ರೋಹ ಬಗೆದರು
1942ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾವು ತೀರಾ ವಿಶ್ವಾಸದ್ರೋಹದ ಹಾಗೂ ವಿಚ್ಛಿದ್ರಕಾರಿ ಪಾತ್ರವನ್ನು ವಹಿಸಿತ್ತು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಹಳ ದೊಡ್ಡ ಸಂಖ್ಯೆಯಲ್ಲಿ ಭಾರತದ ಜನಸಮುದಾಯವು ವಸಾಹತುಶಾಹಿ ದೊರೆಗಳ ಅಪರಿಮಿತ ದಮನ ಎದುರಿಸುತ್ತಿದ್ದಾಗ ಮತ್ತು ಸರ್ಕಾರದ ಸಂಸ್ಥೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾಗ, ಬ್ರಿಟಿಷ್ ದೊರೆಗಳ ಜತೆ ಸಹಕರಿಸಲು ಹಿಂದೂ ಮಹಾಸಭಾ ತೀರ್ಮಾನ ಮಾಡಿತು. 1942 ರಲ್ಲಿ ಕಾನ್ಪುರದಲ್ಲಿ ನಡೆಯುತ್ತಿದ್ದ ಹಿಂದೂ ಮಹಾಸಭಾದ 24ನೇ ಅಧಿವೇಶನದಲ್ಲಿ ಹಿಂದೂ ಮಹಾಸಭಾವು ಬ್ರಿಟಿಷ್ ದೊರೆಗಳೊಂದಿಗೆ ಸಹಕರಿಸುವ ತಂತ್ರಗಾರಿಕೆಯ ರೂಪರೇಷೆಯನ್ನು ಸಾವರ್ಕರ್ ಅವರು ಹೀಗೆ ವಿವರಿಸಿದರು:
ಎಲ್ಲಾ ಪ್ರಾಯೋಗಿಕ ರಾಜಕೀಯದ ಪ್ರಮುಖ ತತ್ವವಾದ ಸ್ಪಂದನಶೀಲ ಸಹಕಾರದ ನೀತಿಯನ್ನು ಹಿಂದೂ ಮಹಾಸಭಾವು ಪಾಲಿಸುತ್ತದೆ. ಮತ್ತು ಅದರ ಆಧಾರದಲ್ಲಿ, ಹಿಂದೂ ಸಂಘಟನಾವಾದಿಗಳಾದ ಎಲ್ಲರೂ, ಕೌನ್ಸಿಲರುಗಳು, ಸಚಿವರು, ಶಾಸಕರು ಮತ್ತು ಯಾವುದೇ ಮುನಿಸಿಪಲ್ ಅಥವಾ ಯಾವುದೇ ಸಾರ್ವಜನಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಅಂತಹ ಸರ್ಕಾರಿ ಅಧಿಕಾರದ ಕೇಂದ್ರಗಳನ್ನು ಹಿಂದೂಗಳ ರಕ್ಷಣೆಗಾಗಿ ಮತ್ತು ಅವರ ನ್ಯಾಯಯುತ ಹಿತಾಸಕ್ತಿಯನ್ನು ಪ್ರೋತ್ಸಾಹಿಸಲು ಕೂಡ, ಬೇರೆಯವರ ಹಿತಾಸಕ್ತಿಗಳಿಗೆ ಧಕ್ಕೆ ಬರದಂತೆ, ಬಳಸಿಕೊಳ್ಳುವ ದೃಷ್ಟಿಕೋನ ಹೊಂದಿರುವವರು ನಮ್ಮ ದೇಶಕ್ಕೆ ದೊಡ್ಡ ಮಟ್ಟದ ದೇಶಸೇವೆಯನ್ನು ಮಾಡುತ್ತಾರೆಂದು ಹಿಂದೂ ಮಹಾಸಭಾವು ವಿಶ್ವಾಸವಿಡುತ್ತದೆ. ಯಾವ ಇತಿಮಿತಿಯಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದಿದ್ದರೂ ಸಹ, ಆ ಪರಿಸ್ಥಿತಿಯ ಅಡಿಯಲ್ಲಿ ಏನೆಲ್ಲಾ ಒಳ್ಳೆಯದನ್ನು ಮಾಡಬಹುದು ಅವನ್ನು ಮಾಡಬೇಕೆಂದು ಮಹಾಸಭಾವು ನಿರೀಕ್ಷಿಸುತ್ತದೆ ಮತ್ತು ಅಷ್ಟನ್ನು ಮಾಡಲು ವಿಫಲರಾಗದಿದ್ದರೆ, ಅವರು ತಮಗೆ ವಹಿಸಿದ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಂದು ಮಹಾಸಭಾವು ಧನ್ಯವಾದ ಸಲ್ಲಿಸುತ್ತದೆ. ಇತಿಮಿತಿಗಳು ಕ್ರಮೇಣವಾಗಿ ಸಂಪೂರ್ಣವಾಗಿ ನಿರ್ಮೂಲವಾಗುವ ತನಕ ತಮ್ಮಷ್ಟಕ್ಕೆ ತಾವೇ ಮಿತಿಗೊಳಗಾಗುತ್ತವೆ. ಸ್ಪಂದನಶೀಲ ಸಹಕಾರದ ನೀತಿಯು ಬೇಷರತ್ತಾದ ಸಹಕಾರದಿಂದ ಆರಂಭವಾಗಿ ಕ್ರಿಯಾಶೀಲವಾದ ಮತ್ತು ಸಶಸ್ತ್ರ ಪ್ರತಿರೋಧದವರೆಗೂ ಸಕಲ ವಿಧವಾದ ದೇಶಪ್ರೇಮಿ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ, ನಮ್ಮ ವಶದಲ್ಲಿರುವ ಸಂಪನ್ಮೂಲಗಳು ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ಆದೇಶಕ್ಕೆ ಅನುಗುಣವಾಗಿ ಕಾಲದ ಅಗತ್ಯಕ್ಕೆ ತಕ್ಕಂತೆ ತನ್ನನ್ನು ತಾನು ಅಳವಡಿಸಿಕೊಳ್ಳುತ್ತದೆ ಕೂಡ. [ದಪ್ಪಕ್ಷರಗಳು ಮೂಲದಲ್ಲೇ ಇವೆ]45
ʻʻಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಇದೆ ಎನ್ನಲಾದ ಸಂಯುಕ್ತ ರಂಗ ಛಿದ್ರವಾದರೂʼʼ ತನಗೆ ಚಿಂತೆಯಿಲ್ಲ ಎಂದು ಘೋಷಿಸುವಷ್ಟರ ಮಟ್ಟಿಗೂ ಸಾವರ್ಕರ್ ಹೋದರು. ಹೀಗೆ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ನಾಶಮಾಡಲೂ ಹೇಸುವುದಿಲ್ಲ ಎಂಬರ್ಥದ ಮಾತನ್ನಾಡಿದ ಸಾವರ್ಕರ್ ವಾಸ್ತವದಲ್ಲಿ ಅದನ್ನೇ ಮಾಡಿದರು.
(ಮುಂದುವರೆಯುವುದು)
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ