ಡಾ.ಶಮ್ಸುಲ್ ಇಸ್ಲಾಂ
ಅನು: ಟಿ.ಸುರೇಂದ್ರರಾವ್
ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್‌ರವರ ʻಸಾವರ್ಕರ್ ಅನ್‌ಮಾಸ್ಕ್ಡ್ʼ ಪ್ರಸ್ತಾವನೆಯಲ್ಲಿ ಸಾವರ್ಕರ್ ಅವರನ್ನು ರಾಷ್ಟ್ರೀಯ ನೇತಾರನನ್ನಾಗಿ ಬಿಂಬಿಸುವ ಯಾವುದೇ ಯೋಜನೆ 1998ಕ್ಕೂ ಮುಂಚೆ ಹಿಂದುತ್ವ ಬ್ರಿಗೇಡಿಗೆ ಇರಲಿಲ್ಲ, ನಂತರ ಅದು ಮುನ್ನೆಲೆಗೆ ಬರುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೂ ಇದೆ ಎಂಬುದನ್ನು ಪರಿಶೀಲಿಸುತ್ತ ಸಾವರ್ಕರ್ ಅವರ ಹೊಗಳುಭಟರ ತಂಡದಲ್ಲಿ ಕಾಂಗ್ರೆಸ್ ಕೂಡ ಸೇರಿಕೊಂಡದ್ದು ವಿಷಾದದ ಸಂಗತಿ ಎನ್ನುತ್ತಾರೆ. ಮುಂದೆ ಅವರು ಸಾವರ್ಕರ್ ರವರನ್ನು ಕುರಿತ ಏಳು ಮಿಥ್ಯೆಗಳನ್ನು ಒಂದೊಂದಾಗಿ ಈ ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತಾರೆ.
ಮಿಥ್ಯೆ 1 – ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!
ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ ಎಂದು ಹಿಂದುತ್ವ ಪ್ರಚಾರಕರ ಮಿಥ್ಯೆಯನ್ನು ಪರಿಶೀಲಿಸುತ್ತ ಕಾಲಾಪಾನಿ ಅಥವಾ ಕರಿನೀರು ಎಂದು ಕರೆಯಲ್ಪಡುವ ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ ಗೂಡಿನಂತಿರುವ ಸಣ್ಣಕೋಣೆಯಲ್ಲಿ ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಎಂದು ಬಿಂಬಿಸಲು ಬಿಜೆಪಿ ನೇತೃತ್ವದ ಸರ್ಕಾರವು ಶತಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ ಎನ್ನುವ ಲೇಖಕರು, ಸೆಲ್ಯುಲರ್ ಜೈಲು ಅಂದರೆ ಕೇವಲ ಸಾವರ್ಕರ್ ಕತೆ ಅಲ್ಲ ಎನ್ನುತ್ತಾರೆ. ಸ್ವತಃ ಸಾವರ್ಕರ್ ತಮ್ಮ ರಾಜಕೀಯ ಜೀವನದ ಮೊದಲ ಘಟ್ಟದಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರಲಿಲ್ಲ. ಆದರೆ ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅವರು ಅಲ್ಲಿ ಪಡಬೇಕಾದ ಘೋರ ಯಾತನೆಯು ಅವರನ್ನು ಸಂಪೂರ್ಣವಾಗಿ ಕುಗ್ಗಿಸಿತು. ಅದು ಅವರನ್ನು ರಾಜಕೀಯ ಬದುಕಿನ ಎರಡನೇ ಘಟ್ಟಕ್ಕೆ ಎಳೆದೊಯ್ಯಿತು. ನವೆಂಬರ್ 14, 1913 ರಂದು ಸಾವರ್ಕರ್ ಸ್ವತಃ ಒಂದು ಕ್ಷಮಾಯಾಚನೆಯ ಅರ್ಜಿಯನ್ನು ಸರ್ ರೆಜಿನಾಲ್ಡ್ ಅವರಿಗೆ ಸಲ್ಲಿಸಿದರು.
ಸಾವರ್ಕರ್ ರವರ ಬದುಕಿನ ಈ ಆಯಾಮವನ್ನು ಎತ್ತಿತೋರಿಸುತ್ತಾ, ಪ್ರಸಿದ್ಧ ಅಂಕಣಕಾರ್ತಿ ಮಾನಿನಿ ಚಟರ್ಜಿ ಹೀಗೆ ಬರೆಯುತ್ತಾರೆ:
ಜೈಲಿನಿಂದ ಬಿಡುಗಡೆಯಾದ ನಂತರ, ಸಾವರ್ಕರ್ ಅವರು ತಮ್ಮ ಹಿಂದಿನ ಜೀವನವನ್ನು ತ್ಯಜಿಸಿದರು ಮತ್ತು ಹಿಂದೂರಾಷ್ಟ್ರದ ನೀಲ ನಕ್ಷೆಯನ್ನು ರೂಪಿಸಲು ತಮ್ಮನ್ನು ತಾವು ಮುಡುಪಾಗಿಟ್ಟರು. ವಿದೇಶಿ ಆಳ್ವಿಕೆಯ ವಿರುದ್ಧದ ತಮ್ಮ ಹಿಂದಿನ ಕೋಪದ ಸ್ಥಾನದಲ್ಲಿ ʻಪುಣ್ಯಭೂಮಿʼ ಮತ್ತು ʻಪಿತೃಭೂಮಿʼ ಎಂಬ ವಿನಾಶಕಾರಿ ವಾದವನ್ನು ಶುರುಮಾಡಿದರು; ಅದು ಹಿಂದೂ ಗಳಲ್ಲದವರನ್ನು ಭಾರತದ ʻಪರಕೀಯʼರೆಂದು ನಿರೂಪಿಸಿತು. ಮತ್ತು ಸ್ವಾತಂತ್ರ್ಯ ಚಳುವಳಿಗೆ ಸೇರಿಕೊಳ್ಳಲು ಯುವ ಪೀಳಿಗೆಯವರಿಗೆ ಸ್ಪೂರ್ತಿ ನೀಡಿದ ಖುದಿರಾಮ್ ಬೋಸ್, ಅಥವಾ ಸರ‍್ಯ ಸೇನ್, ಆಶ್ಫಕುಲ್ಲಾಖಾನ್ ಅಥವಾ ಭಗತ್ ಸಿಂಗ್ ಅವರಂಥವರಿಗಿಂತ ಭಿನ್ನವಾಗಿ ಅಂಡಮಾನಿನ ನಂತರದ ಸಾವರ್ಕರ್ ಅವರು ಈ ನಾಡಿನ ನಾಥೂರಾಮ್ ಗೋಡ್ಸೆಯಂಥವರನ್ನು ಮಾತ್ರವೇ ಹುರಿದುಂಬಿಸಿದರು.
ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು
ಎಲ್ಲಾ ಧಾರ್ಮಿಕ ಕೋಮಿನವರು ಸಾಮರಸ್ಯದಿಂದ ಬದುಕುವ ಸ್ವತಂತ್ರ ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿ ಸಾವರ್ಕರ್ ಆಗಿ ಈಗ ಉಳಿಯಲಿಲ್ಲ. ಸಾವರ್ಕರ್ ಅವರ ಅಧಿಕೃತ ಜೀವನಚರಿತ್ರಕಾರರ ಪ್ರಕಾರ, ಅವರು ಅಂಡಮಾನ್ ಜೈಲಿನಿಂದ ವಿದಾಯ ಹೇಳುವಾಗಲೇ ಸೆಲ್ಯುಲರ್ ಜೈಲಿನ ಕೆಲವು ಆಯ್ದ ಖೈದಿಗಳಿಗೆ ಪವಿತ್ರ ಪ್ರಮಾಣವಚನ ಬೋಧಿಸಿದಾಗಲೇ ಅವರ ಚಿಂತನೆಯಲ್ಲಿನ ಬದಲಾವಣೆ ಗೋಚರಿಸಿತ್ತು. ಆ ಪ್ರಮಾಣ ವಚನ ಹೀಗಿತ್ತು:
ಒಬ್ಬ ದೇವರು, ಒಂದು ದೇಶ,
ಒಂದು ಗುರಿ, ಒಂದು ಜನಾಂಗ,
ಒಂದು ಜೀವನ, ಒಂದು ಭಾಷೆ
ಸಾವರ್ಕರ್ ಅವರು ಸಮ್ಮಿಶ್ರ ರಾಷ್ಟ್ರೀಯವಾದ ಮತ್ತು ಮುಸ್ಲಿಮರ ಒಬ್ಬ ಕಟ್ಟಾ ವಿರೋಧಿಯಾಗಿ ಬದಲಾಗಿದ್ದನ್ನು ಹಿಂದುತ್ವ ಪಾಳೇಯದವರು ಹೀಗೆ ಸಮರ್ಥಿಸುತ್ತಾರೆ: ಸೆಲ್ಯುಲರ್ ಜೈಲಿನಲ್ಲಿ ಮುಸ್ಲಿಂ ಜೈಲು ಅಧಿಕಾರಿಗಳ ಕೈಯಲ್ಲಿ ಅವರು ಅನುಭವಿಸಿದ ಹಿಂಸೆ, ಕಿರುಕುಳಗಳೇ ಅವರ ಪರಿವರ್ತನೆಗೆ ಕಾರಣ ಎಂದು ಪ್ರಮುಖ ಸಾವರ್ಕರ್ ವಾದಿಯಾದ ವೈ.ಡಿ.ಫಡ್ಕೆ ಹೇಳುತ್ತಾರೆ:
ಸೆಲ್ಯುಲರ್ ಜೈಲಿನಲ್ಲಿ ಪಠಾಣರು ನೀಡುತ್ತಿದ್ದ ಅಮಾನವೀಯ ಕಿರುಕುಳವು ಸಾವರ್ಕರ್ ಅವರ ಚಿಂತನೆಯಲ್ಲಿ ಅನಿರೀಕ್ಷಿತ ಪರಿವರ್ತನೆಯನ್ನು ಉಂಟುಮಾಡಿತು. ʻನನ್ನ ಜೀವಾವಧಿ ಶಿಕ್ಷೆʼ ಎಂಬ ಅವರ ಆತ್ಮಕಥೆಯಲ್ಲಿ ಅವರು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಹಿಂಸೆಯ ಘಾಸಿಗೊಳಿಸುವ ವಿವರಗಳು ಇವೆ.
ಸಾವರ್ಕರ್ ಅವರ ಸ್ವಂತ ಬರವಣಿಗೆಯು ಈ ಸಂಗತಿಯನ್ನು ಪುಷ್ಟೀಕರಿಸುತ್ತದೆ:
ದೊಡ್ಡ ಸಂಖ್ಯೆಯ ದುಷ್ಟ ವಾರ್ಡರುಗಳು ಮುಸಲ್ಮಾನರಾಗಿದ್ದರು ಮತ್ತು ಅವರು ಸಿಂಧ್, ಪಂಜಾಬ್ ಮತ್ತು ವಾಯುವ್ಯ ಗಡಿ ಪ್ರಾಂತದವರಾಗಿದ್ದರು. ಅವರ ಅಡಿಯಲ್ಲಿನ ಬಹುತೇಕ ಖೈದಿಗಳು ಹಿಂದೂಗಳಾಗಿದ್ದರು. ಹಿಂದೂ ಖೈದಿಗಳು ಹಿಂಸೆಗೊಳಗಾಗಿದ್ದರು..
ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು
ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ ಅವರ ಸಮಕಾಲೀನ ಖೈದಿಗಳಾಗಿದ್ದ ಬರೀಂದ್ರಕುಮಾರ್ ಘೋಷ್ (ಅಲಿಪುರ್ ಬಾಂಬ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು) ಕೂಡ ತಮ್ಮ ಆತ್ಮಕಥೆಯಲ್ಲಿ (ನನ್ನ ಗಡೀಪಾರಿನ ಕತೆ – ದಿ ಟೇಲ್ ಆಫ್ ಮೈ ಎಕ್ಸೈಲ್) ಮುಸ್ಲಿಂ ವಾರ್ಡರುಗಳು ನೀಡುತ್ತಿದ್ದ ಹಿಂಸೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಹಿಂದೂಗಳ ರೀತಿಯಲ್ಲಿಯೇ ಮುಸ್ಲಿಂ ಖೈದಿಗಳು ಕೂಡ ಹಿಂಸೆಗೊಳಗಾಗಿದ್ದರು ಎನ್ನುವುದನ್ನು ಉದಾಹರಣೆಗಳ ಸಹಿತ ಸ್ಪಷ್ಟವಾಗಿ ಹೇಳಿದ್ದರು. ಅವರ ಪ್ರಕಾರ:
ಅಂಡಮಾನಿನಲ್ಲಿ ಅವರು (ವಾರ್ಡರ್, ಸಣ್ಣ ಅಧಿಕಾರಿ, ಜಮಾದಾರ್ ಇತ್ಯಾದಿಗಳು) ಎಲ್ಲದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು ಮತ್ತು ಅವರ ಕೈಗಳಲ್ಲೇ ಅಧಿಕಾರವಿತ್ತು. ಅವರೆಲ್ಲಾ ದೊಡ್ಡ ಧಣಿಗಳ-ಜೈಲರನ-ಅಂಗರಕ್ಷಕರಾಗಿದ್ದರು. ಹೊಡೆಯುವ ಮತ್ತು ಬೈಯುವ ಕಲೆಯಲ್ಲಿ ಅವರು ನಿಪುಣರಾಗಿದ್ದರು. ಸಾಲಿನಲ್ಲಿ ಸ್ವಲ್ಪ ಅಡ್ಡ ಕುಳಿತುಕೊಳ್ಳುವ ರಾಮ್‌ಲಾಲ್‌ನ ಕುತ್ತಿಗೆ ಮೇಲೆ ಎರಡು ಹೊಡೆತ ಹಾಕು. ಮುಸ್ತಫಾ ಹೇಳಿದ ಕೂಡಲೇ ಎದ್ದು ನಿಲ್ಲಲಿಲ್ಲ, ಅವನ ಮೀಸೆ ಕಿತ್ತುಹಾಕು. ಬಕಾಉಲ್ಲಾ ಶೌಚಾಲಯದಿಂದ ತಡವಾಗಿ ಬರುತ್ತಾನೆ, ಮೋಟುದೊಣ್ಣೆ ತಗೊಂಡು ಅವನ ಅಂಡಿನ ಚರ್ಮವನ್ನು ಸಡಿಲ ಮಾಡು-ಇಂತಹ ಸುಂದರ ಕಲಾಪಗಳ ಮೂಲಕ ಅವರು ಜೈಲಿನಲ್ಲಿ ಶಿಸ್ತನ್ನು ಕಾಪಾಡುತ್ತಿದ್ದರು.
ಅಲ್ಲಿ ಹಲವಾರು ಸಂದರ್ಭಗಳಲ್ಲಿ ಕರುಣಾಮಯಿ ವಾರ್ಡರುಗಳೂ ಇದ್ದರು ಎಂದು ಬರೀಂದ್ರ ಅವರು ಉದಾಹರಣೆಗಳ ಸಹಿತ ಹೀಗೆ ಹೇಳುತ್ತಾರೆ:
ಯಾರಿಗೂ ಗೊತ್ತಾಗದ ಹಾಗೆ ಗುಟ್ಟಾಗಿ ಮಾಂಸದ ಊಟ ತರುತ್ತಿದ್ದರು….. ಪ್ರಸಿದ್ಧ ದ್ರೌಪದಿಯಿಂದಲೇ ತಯಾರಾದ ಆಹಾರ ಕೂಡ ಅಷ್ಟು ರುಚಿಯಾಗಿರತ್ತಿತ್ತೋ ನನಗೆ ಗೊತ್ತಿಲ್ಲ, ಅಷ್ಟು ಸವಿಯಾದ ಆಹಾರವನ್ನು ನಾನು ಗಬಗಬನೆ ಆತುರದಿಂದ ಮುಕ್ಕುತ್ತಿದ್ದೆ.
ಇದನ್ನು ಓದಿ: ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು
ಅದೇ ಅಲಿಪುರ ಬಾಂಬ್ ಪ್ರಕರಣದಲ್ಲಿ ಬರೀಂದ್ರಕುಮಾರ್ ಘೋಷ್ ಜತೆಯಲ್ಲಿ ಉಪೇಂದ್ರ ನಾಥ್ ಬ್ಯಾನರ್ಜಿಯವರನ್ನೂ ಜೈಲಿಗೆ ಹಾಕಿದ್ದರು. ಅವರೂ ಕೂಡ ಬಂಗಾಳಿಯಲ್ಲಿ ತಮ್ಮ ಆತ್ಮಕಥೆ – ʻನಿರ್ವಸಿತೆರ್ ಆತ್ಮಕಥಾʼ (ಗಡೀಪಾರಿನ ಆತ್ಮಕತೆ) ಬರೆದಿದ್ದರು. ಪಠಾಣ್ ಹಾಗೂ ಬಲೂಚಿ ವಾರ್ಡರುಗಳು ಭೀಕರ ಹಿಂಸೆಯನ್ನು ಅದರಲ್ಲಿ ವಿವರಿಸಿದ್ದರು. ತ್ರೈಲೋಕ್ಯನಾಥ್ ಚಕ್ರವರ್ತಿ ಮತ್ತು ಉಲ್ಲಾಸ್ ಕರ್‌ದತ್ ಮುಂತಾದ ಖೈದಿಗಳು ಕೂಡ ತಮ್ಮ ಸೆಲ್ಯುಲರ್ ಜೈಲಿನ ಅನುಭವಗಳನ್ನು ಬರೆದಿದ್ದಾರೆ, ಆದರೆ ಅವರ‍್ಯಾರೂ ಸಾವರ್ಕರ್ ಅವರು ತಮ್ಮ ʻಗಡೀಪಾರು ಜೀವನದಕಥೆʼಯ ರೀತಿಯಲ್ಲಿ ಜೈಲು ಅಧಿಕಾರಿಗಳ ವರ್ತನೆಯ ಬಗ್ಗೆ ಕೋಮುವಾದಿ ಬಣ್ಣ ಹಚ್ಚಲಿಲ್ಲ.
ಸತ್ಯ ಸಂಗತಿಯೆಂದರೆ ಸಾವರ್ಕರ್ ಮತ್ತವರ ಅನುಯಾಯಿಗಳು ಸ್ವಾತಂತ್ರ್ಯ ಚಳುವಳಿಯಿಂದ ತಮ್ಮನ್ನು ದೂರವಿರಿಸಿಕೊಳ್ಳುವ ಉದ್ದೇಶದಿಂದ ತಮ್ಮ ಆಕ್ರಮಣಕಾರಿ ಮುಸ್ಲಿಂ-ವಿರೋಧಿ ರಾಜಕೀಯವನ್ನು ಸಮರ್ಥಿಸಿಕೊಳ್ಳಲು ಸೆಲ್ಯುಲರ್ ಜೈಲಿನಲ್ಲಿ ಮುಸ್ಲಿಂ ವಾರ್ಡರುಗಳ ಹಿಂಸೆಯ ವಿಷಯವನ್ನು ಎತ್ತಿದ್ದರು. ಈ ರೀತಿಯ ವಾದವು ಗ್ರಹಣಶಕ್ತಿ ಹಾಗೂ ಸಾಮಾನ್ಯ ತಿಳುವಳಿಕೆಯನ್ನು ಮೀರಿದ್ದು. ಆ ಸೆಲ್ಯುಲರ್ ಜೈಲಿನಲ್ಲಿ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ವಾರ್ಡರುಗಳು ಹಾಗೂ ಅಧಿಕಾರಿಗಳೂ ಇದ್ದರೆಂಬ ಸತ್ಯವನ್ನು ಅದು ನಿರಾಯಾಸವಾಗಿ ಮರೆಮಾಚಿತ್ತು. ಕೆಲವು ಮುಸ್ಲಿಮರಾಗಿದ್ದ ವಾರ್ಡರುಗಳು ಹಿಂಸಾತ್ಮಕ ಹಾಗೂ ಅಮಾನುಷ ಚಟುವಟಿಕೆಗಳಲ್ಲಿ ತೊಡಗಿದ್ದರೆಂಬ ಒಂದೇ ಕಾರಣದಿಂದ ಸಾವರ್ಕರ್ ಅವರಂತಹ ಉನ್ನತ ಶಿಕ್ಷಣ ಪಡೆದವರು ಮುಸ್ಲಿಂ – ವಿರೋಧಿಯಾಗುತ್ತಾರೆ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ. ಇದೇ ವಾದವನ್ನು ಮುಂದುವರಿಸಿದರೆ, ಸೀತೆಯನ್ನು ರಾವಣ ಅಪಹರಿಸಿದ ಹಾಗೂ ಕೌರವನಿಂದಾಗಿ ಮಹಾಭಾರತ ಘಟಿಸಿತು ಎಂಬ ಕಾರಣಕ್ಕಾಗಿ ಎಲ್ಲಾ ಹಿಂದೂಗಳನ್ನು ಶತ್ರುಗಳು ಎಂದು ಘೋಷಿಸಬೇಕಾಗುತ್ತದೆ!
ವಾಸ್ತವದಲ್ಲಿ, ಈ ರೀತಿಯ ಮುಸ್ಲಿಂ-ವಿರೋಧಿ ಸಿದ್ಧಾಂತವನ್ನು ಬೆಳೆಸಿದ್ದಕ್ಕಾಗಿ ಸಾವರ್ಕರ್ ಅವರನ್ನು ಪುರಸ್ಕರಿಸಬೇಕೆಂದು ಬ್ರಿಟಿಷರು ನಿರ್ಧರಿಸುತ್ತಾರೆ ಮತ್ತು ಅದಕ್ಕಾಗಿಯೇ ಸಾವರ್ಕರ್ ಅವರನ್ನು ಬಿಡುಗಡೆ ಮಾಡುತ್ತಾರೆ. ಎಂತಹ ವಿಶಿಷ್ಟ ಪರಿಸ್ಥಿತಿಯಲ್ಲಿ ಬಿಡುಗಡೆ ಮಾಡುತ್ತಾರೆ ಎನ್ನುವುದನ್ನು ಗಮನಿಸಬೇಕು:
ಹಿಂದೂ-ಮುಸ್ಲಿಂ ಐಕ್ಯತೆಯ ಅತ್ಯುನ್ನತ ಸ್ಥಿತಿಯ ಕಾರಣ ಅಸಹಕಾರ ಚಳುವಳಿಯು ಉತ್ತುಂಗ ಸ್ಥಿತಿ ತಲುಪಿತ್ತು. ಈ ಬೆಳವಣಿಗೆಯಿಂದ ಗಾಬರಿಗೊಂಡಿದ್ದ ಬ್ರಿಟಿಷರು ಈ ಐಕ್ಯತೆಯನ್ನು ನುಚ್ಚುನೂರು ಮಾಡಬಹುದಾದಂತಹ ಮುಖಂಡರಿಗಾಗಿ ಹುಡುಕಾಡುತ್ತಿದ್ದರು. ಹಿಂದುತ್ವ ಸಿದ್ಧಾಂತದ ತಯಾರಿಯಲ್ಲಿದ್ದ ಸಾವರ್ಕರ್ ಅವರಿಗೆ ಅತ್ಯುತ್ತಮ ಆಯ್ಕೆಯಾಗಿತ್ತು.
1921 ರಲ್ಲಿ ಸೆಲ್ಯುಲರ್ ಜೈಲಿನಿಂದ ಹೊರಗೆ ಬಂದಕೂಡಲೇ, ಸಾವರ್ಕರ್ ಅವರು ಹಿಂದೂರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಇಡೀ ಬದುಕನ್ನು ಮೀಸಲಾಗಿಟ್ಟರು. ಅಚ್ಚರಿಯ ಸಂಗತಿಯೆಂದರೆ, ಸರ್ಕಾರದ ಷರತ್ತುಗಳ ಪ್ರಕಾರ ಸಾವರ್ಕರ್ ಅವರು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗದಂತೆ ನಿಷೇಧವಿದ್ದಾಗ್ಯೂ, ರತ್ನಗಿರಿಯಲ್ಲಿ ಹಿಂದೂಮಹಾಸಭಾವನ್ನು ಸಂಘಟಿಸಲು ಅವಕಾಶ ಮಾಡಿಕೊಡಲಾಯಿತು; ಅದು ಶುದ್ಧೀಕರಣ (ಮುಸ್ಲಿಮರು/ಕ್ರಿಶ್ಚಿಯನರನ್ನು ಹಿಂದೂಗಳಾಗಿ ಶುದ್ಧೀಕರಣ ಅಥವ ಮರುಮತಾಂತರ ಮಾಡುವ) ಕಾರ್ಯದಲ್ಲಿ ತೊಡಗಿತ್ತು ಮತ್ತು ಮಸೀದಿಗಳ ಮುಂದೆ ಹಾಡುಗಳನ್ನು ಹೇಳಲಾಗುತ್ತಿತ್ತು. ಸಾವರ್ಕರ್ ಅವರು ಕೆ.ಬಿ.ಹೆಡ್ಗೇವಾರ್ ಜತೆಯಲ್ಲಿ ದೀರ್ಘ ಸಭೆಗಳನ್ನು ನಡೆಸಿದರು, ಅದು ಆರ್.ಎಸ್.ಎಸ್. ನ ಸ್ಥಾಪನೆಗೆ ಕಾರಣವಾಯಿತು. ಬ್ರಿಟಿಷ್ ದೊರೆಗಳು ಸಹಜವಾಗಿಯೇ ಈ ರಾಜಕೀಯ ಚಟುವಟಿಕೆಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದರು, ಏಕೆಂದರೆ ಭಾರತದ ವಸಾಹತುಶಾಹಿಗಳ ಭವಿಷ್ಯವು ಈ ಕೋಮುವಾದಿ ವಿಭಜನೆಯ ಮೇಲೆ ನಿಂತಿತ್ತು ಮತ್ತು ಕೋಮು ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಕೆಲಸದಲ್ಲಿ ಸಾವರ್ಕರ್ ಅವರು ಸಂಪೂರ್ಣವಾಗಿ ಮುಳುಗಿದ್ದರು.
ಇದನ್ನು ಓದಿ: ಭಾಗ – 4 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು
ಇದನ್ನು ಓದಿ: ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು
ಈ ಹಿಂದೆ, 1923 ರಲ್ಲಿ ರತ್ನಗಿರಿ ಜೈಲಿನಲ್ಲಿ ಬಂಧನದಲ್ಲಿದ್ದಾಗ ಸಾವರ್ಕರ್ ತನ್ನ ವಿವಾದಾತ್ಮಕ ಕೃತಿ ಹಿಂದುತ್ವವನ್ನು ಬರೆಯಲು ಮತ್ತು ಅದನ್ನು ಗುಟ್ಟಾಗಿ ಜೈಲಿನಿಂದ ಹೊರಗೆ ಕಳಿಸಲು ಸಾಧ್ಯವಾಗಿತ್ತು. ಈ ಕೆಲಸವು ಬ್ರಿಟಿಷ್ ಆಡಳಿತದ ನೇರ ಶಾಮೀಲು ಇಲ್ಲದೆ ಆಗಲು ಸಾಧ್ಯವಿರಲಿಲ್ಲ. ಅದನ್ನು ʻಒಬ್ಬ ಮರಾಠಾʼ ಎಂಬ ಕಾಲ್ಪನಿಕ ಹೆಸರಿನಲ್ಲಿ ಪ್ರಕಟಿಸಲಾಗಿತ್ತು, ಏಕೆಂದರೆ ಸಾವರ್ಕರ್ ಅವರು ಜೈಲಿನಲ್ಲಿದ್ದು ಇಂತಹ ಕೃತಿಗಳನ್ನು ಬರೆಯಲು ಅವಕಾಶವಿರಲಿಲ್ಲ. ಆಸಕ್ತಿದಾಯಕ ವಿಷಯವೆಂದರೆ, ಲೇಖಕನ ಹಾಗೂ ಕೃತಿಯ ವಸ್ತುವು ಭಾರತೀಯರ ಹಿಂದೂ ಅಸ್ಮಿತೆಗೆ ಮಾತ್ರವೇ ಹೆಚ್ಚು ಪ್ರಾಮುಖ್ಯತೆ ನೀಡಿತ್ತಾದರೂ, ಆಯ್ದುಕೊಂಡಿದ್ದ ಕಾಲ್ಪನಿಕ ಹೆಸರು ಮಾತ್ರ ಪ್ರಾದೇಶಿಕ ಅಸ್ಮಿತೆಯನ್ನು ಸೂಚಿಸುತ್ತಿತ್ತು, ಧಾರ್ಮಿಕ ಅಸ್ಮಿತೆಯನ್ನಲ್ಲ. ಈ ಪುಸ್ತಕವು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಮಾತ್ರ ಕಳಂಕ ಹಚ್ಚದೇ, ಪ್ರಾಚೀನ ಭಾರತದಲ್ಲಿ ಬೌದ್ಧರನ್ನು ಹಿಂಸಾತ್ಮಕವಾಗಿ ಚೊಕ್ಕಟಗೊಳಿಸಿದ್ದನ್ನು ಕೂಡ ಸಮರ್ಥಿಸಿದೆ. ಅಚ್ಚರಿಯ ಸಂಗತಿಯೆಂದರೆ, ಲೇಖಕನ ನಿಜವಾದ ಗುರುತು ಗುಟ್ಟಾಗಿರಲಿಲ್ಲವಾದರೂ, ಬ್ರಿಟಿಷ್ ಸರ್ಕಾರವು ಸಾವರ್ಕರ್ ಅವರ ವಿರುದ್ಧ ಯಾವುದೇ ರೀತಿಯ ಶಿಕ್ಷೆ ವಿಧಿಸುವ ಕಾರ್ಯಕ್ಕೆ ಮುಂದಾಗಲಿಲ್ಲ. ಅಸಹಕಾರ ಚಳುವಳಿ ಮತ್ತು ಖಿಲಾಫತ್ ಚಳುವಳಿಯ ಸಂದರ್ಭದಲ್ಲಿನ ಹಿಂದೂ-ಮುಸ್ಲಿಂ ಐಕ್ಯತೆಯು ಬ್ರಿಟಿಷ್ ದೊರೆಗಳನ್ನು ಗಲಿಬಿಲಿಗೊಳಿಸಿದ್ದರಿಂದಾಗಿ ಸಾವರ್ಕರ್ ಅಂಥವರ ಕೋಮುವಾದಿ ಹಸ್ತಕ್ಷೇಪಗಳು ಕೋಮುವಾದಿ ವಿಭಜನೆಗಳನ್ನು ಹೆಚ್ಚು ಮಾಡುವಲ್ಲಿ ಅವರಿಗೆ ಸಹಾಯಕವಾಗಿತ್ತು ಎನ್ನುವುದನ್ನು ಯಾರೂ ಅರ್ಥಮಾಡಿಕೊಳ್ಳಬಲ್ಲರು.
(ಮುಂದುವರೆಯುವುದು)
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ