ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಡಾ.ಶಮ್ಸುಲ್ ಇಸ್ಲಾಂ
ಅನು: ಟಿ.ಸುರೇಂದ್ರರಾವ್

ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್‌ ರವರ ʻಸಾವರ್ಕರ್ ಅನ್‌ಮಾಸ್ಕ್ಡ್‌ʼ ಪ್ರಸ್ತಾವನೆಯಲ್ಲಿ ಸಾವರ್ಕರ್ ಅವರನ್ನು ರಾಷ್ಟ್ರೀಯ ನೇತಾರನನ್ನಾಗಿ ಬಿಂಬಿಸುವ ಯಾವುದೇ ಯೋಜನೆ 1998 ಕ್ಕೂ ಮುಂಚೆ ಹಿಂದುತ್ವ ಬ್ರಿಗೇಡಿಗೆ ಇರಲಿಲ್ಲ, ನಂತರ ಅದು ಮುನ್ನೆಲೆಗೆ ಬರುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೂ ಇದೆ ಎಂಬುದನ್ನು ಪರಿಶೀಲಿಸುತ್ತ ಸಾವರ್ಕರ್ ಅವರ ಹೊಗಳುಭಟರ ತಂಡದಲ್ಲಿ ಕಾಂಗ್ರೆಸ್ ಕೂಡ ಸೇರಿಕೊಂಡದ್ದು ವಿಷಾದದ ಸಂಗತಿ ಎನ್ನುತ್ತಾರೆ. ಮುಂದೆ ಅವರು ಸಾವರ್ಕರ್‌ ರವರನ್ನು ಕುರಿತ ಏಳು ಮಿಥ್ಯೆಗಳನ್ನು ಒಂದೊಂದಾಗಿ ಈ ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತಾರೆ;

ಮಿಥ್ಯೆ1 – ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!

ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ ಎಂದು ಹಿಂದುತ್ವ ಪ್ರಚಾರಕರ ಮಿಥ್ಯೆಯನ್ನು ಪರಿಶೀಲಿಸುತ್ತ ಕಾಲಾಪಾನಿ ಅಥವಾ ಕರಿನೀರು ಎಂದು ಕರೆಯಲ್ಪಡುವ ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ ಗೂಡಿನಂತಿರುವ ಸಣ್ಣಕೋಣೆಯಲ್ಲಿ ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಎಂದು ಬಿಂಬಿಸಲು ಬಿಜೆಪಿ ನೇತೃತ್ವದ ಸರ್ಕಾರವು ಶತಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ ಎನ್ನುವ ಲೇಖಕರು, ಸೆಲ್ಯುಲರ್ ಜೈಲು ಅಂದರೆ ಕೇವಲ ಸಾವರ್ಕರ್ ಕತೆ ಅಲ್ಲ ಎನ್ನುತ್ತಾರೆ. ಸ್ವತಃ ಸಾವರ್ಕರ್ ತಮ್ಮ ರಾಜಕೀಯ ಜೀವನದ ಮೊದಲ ಘಟ್ಟದಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರಲಿಲ್ಲ. ಅವರು ಹೇಗೆ ಹಿಂದೂ ಮತ್ತು ಮುಸ್ಲಿಂ ಸ್ವಾತಂತ್ರ್ಯ ಪ್ರೇಮಿ ಕ್ರಾಂತಿಕಾರಿಗಳ ಐಕ್ಯತೆಯನ್ನು ಅಭಿನಂದಿಸಿದರು, ಮೌಲ್ವಿ ಅಹಮದ್ ಶಾಹ್ ಅವರ ಜೆಹಾದಿ ಆದರ್ಶವನ್ನು ಹೊಗಳುವಷ್ಟರ ಮಟ್ಟಿಗೆ ಮುಂದಾದರು ಎಂಬುದರ ಕುರಿತು ಕಳೆದ ಸಂಚಿಕೆಯಲ್ಲಿ ಓದಿದ್ದೀರಿ…

ಕ್ರಾಂತಿಕಾರಿ ಘಟ್ಟದಿಂದ ಪ್ರತ್ಯೇಕತಾವಾದದ ಪ್ರವಾದಿಯ ಘಟ್ಟದತ್ತ

ಸಾವರ್ಕರ್ ಪ್ರಕಾರ:

ಮಹಾನ್ ಹಾಗೂ ಋಷಿಸದೃಶ ಅಹ್ಮದ್ ಶಾಹ್ ಲಖ್ನೌ ಮತ್ತು ಆಗ್ರಾದ ಮೂಲೆ ಮೂಲೆಗಳಿಂದ ಜೆಹಾದ್‌ ನ-ಸ್ವಾತಂತ್ರ್ಯ ಸಮರದ, ನವಿರಾದ ಹಾಗೂ ಜಾಣತನದ ಜಾಲವನ್ನು ಹೆಣೆದಿದ್ದರು. ಜಗದೀಶ್ ಪುರದ ಮುಖಂಡ ಕುಮಾರ್ ಸಿಂಗ್ ತನ್ನ ಪ್ರಾಂತ್ಯದ ನೇತೃತ್ವವನ್ನು ವಹಿಸಿಕೊಂಡಿದ್ದರು, ಮತ್ತು ನಾನಾ ಅವರೊಂದಿಗೆ ಸಮಾಲೋಚನೆ ಮಾಡಿ, ಸಮರಕ್ಕೆ ಅಗತ್ಯವಿದ್ದ ಸಲಕರಣೆಗಳನ್ನು ಒಟ್ಟುಹಾಕುತ್ತಿದ್ದರು. ಪಾಟ್ನಾದಲ್ಲಿ ಜೆಹಾದ್(ಪವಿತ್ರ ಸಮರ)ನ ಬೀಜಗಳು ಎಂತಹ ಆಳಕ್ಕೆ ಹೋಗಿದ್ದವೆಂದರೆ ಇಡೀ ನಗರವು ಕ್ರಾಂತಿಕಾರಿ ಪಕ್ಷದ ನಿಯಮಿತ ಭೇಟಿ ತಾಣವಾಗಿತ್ತು. ಮೌಲ್ವಿಗಳು, ಎಲ್ಲಾ ಜಾತಿ ಮತ್ತು ಪಂಗಡಗಳ ಪಂಡಿತರು, ಜಮೀನ್ದಾರರು, ರೈತರು, ವರ್ತಕರು, ವಕೀಲರು, ವಿದ್ಯಾರ್ಥಿಗಳು ಎಲ್ಲರೂ ಸ್ವದೇಶ ಮತ್ತು ಸ್ವಧರ್ಮಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧವಾಗಿದ್ದರು.

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

1857ರ ಮೇ 11ರಂದು ದೆಹಲಿಯು ಬ್ರಿಟಿಷರಿಂದ ವಿಮೋಚನೆಗೊಂಡಿತ್ತು ಮತ್ತು ಮೇ 16 ರ ಹೊತ್ತಿಗೆ ಬಹಾದುರ್ ಶಾಹಜಫರ್ ಭಾರತದ ದೊರೆ ಎಂದು ಘೋಷಣೆಯಾದ ನಂತರ ವಿದೇಶಿ ಆಳ್ವಿಕೆಯ ಎಲ್ಲಾ ಅವಶೇಷಗಳೂ ಅಳಿಸಿಹಾಕಲ್ಪಟ್ಟಿದ್ದವು. ಆ ಕಾಲದ ಸಂದರ್ಭವನ್ನು ಸಂಭ್ರಮಿಸಿದ ಸಾವರ್ಕರ್ ಹೇಳಿದರು:

ಹಿಂದೂಗಳು ಮತ್ತು ಮಹಮ್ಮದೀಯರು ಸರ್ವಾನುಮತದಿಂದ ದೆಹಲಿಯಲ್ಲಿ ರಾಷ್ಟ್ರೀಯ ಸ್ವಾತಂತ್ರ್ಯದ ಬಾವುಟವನ್ನು ಎತ್ತಿಹಿಡಿದಾಗ ಆ ಐದು ದಿನಗಳಲ್ಲಿ ಹಿಂದೂಗಳು ಮತ್ತು ಮಹಮ್ಮದೀಯರು ಭಾರತವು ತಮ್ಮ ದೇಶ ಮತ್ತು ತಾವೆಲ್ಲರೂ ಸೋದರರು ಎಂದು ಘೋಷಿಸಿದರು. ವೈಭವದಿಂದ ಕೂಡಿದ ಆ ದಿನಗಳು ಹಿಂದೂಸ್ತಾನದ ಚರಿತ್ರೆಯಲ್ಲಿ ಎಂದೆಂದಿಗೂ ಮರೆಯಲಾಗದ್ದು.

ಮುಸ್ಲಿಂ ಧೀರರ ಬಗ್ಗೆ ಸಾವರ್ಕರ್ ಅವರ ಪ್ರೀತ್ಯಾದರ

ಸಾವರ್ಕರ್ ಅವರ ಪ್ರಕಾರ, ವಿದೇಶಿ ಆಳ್ವಿಕೆಗೆ ಪ್ರತಿರೋಧ ಒಡ್ಡಿದ ಮಹಾನ್ ಚೇತನದ ಪ್ರತಿರೂಪವೆಂದರೆ ಅದು ಮುಘಲ್ ವಂಶದ ಕೊನೆಯ ಬಾದಶಾಹ ಬಹಾದುರ್ ಶಾಹಜಫರ್ ಅಲ್ಲದೇ ಬೇರಾರಿರಲು ಸಾಧ್ಯವಿಲ್ಲ. ʻʻಬೇರಾವುದೇ ದರ್ಬಾರಿಗಿಂತ ದೆಹಲಿಯ ದಿವಾನ್-ಇ-ಖಾಸ್ ನಲ್ಲಿ ಕ್ರಾಂತಿಯ ಬೀಜಗಳು ಬೇರು ಬಿಡಲು ಆರಂಭವಾಗಿತ್ತುʼʼ ಎಂದು 1857ರ ಬಂಡಾಯ ಸಂಘಟಿಸಿದ್ದನ್ನು ಕುರಿತು ಬರೆಯುವಾಗ ಸಾವರ್ಕರ್ ಅವರು ಬಹಾದುರ್ ಶಾಹ್‌ಜಫರ್ ಅವರಿಗೆ ಸಂಪೂರ್ಣ ಗೌರವ ಸಲ್ಲಿಸಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮುಘಲರಿಗೆ ಸಾವರ್ಕರ್ ಸಂಪೂರ್ಣ ಸಹಮತ ಹಾಗೂ ಸಹಾನುಭೂತಿ ವ್ಯಕ್ತಪಡಿಸಿ ಹೀಗೆ ಬರೆದಿದ್ದರು:

ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು

ಬ್ರಿಟಿಷರು ದೆಹಲಿಯ ಬಾದಶಾಹರಿಂದ ಅವರ ಬಾದಶಾಹಿಯ ಪದವಿಯನ್ನು ಕಿತ್ತುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ ಬಾಬರನ ಎಲ್ಲಾ ವಂಶಸ್ಥರಿಂದ ಆ ಬಾದಶಾಹಿ ಪದವಿಯನ್ನು ಕಿತ್ತುಹಾಕಲು ತೀರ್ಮಾನ ಮಾಡಿದ್ದರು. ಬಾದಶಾಹನು ಅಂತಹ ಕೊನೆಯ ಘಟ್ಟದಲ್ಲೂ ಮತ್ತು ಬಾದಶಾಹನ ಪ್ರೀತಿಯ, ಬುದ್ಧಿವಂತೆ ಮತ್ತು ದಿಟ್ಟ ಬೇಗಂ ಜೀನತ್ ಮಹಲ್ ಅವರು ʻʻಗತವೈಭವವನ್ನು ಮತ್ತೆ ಪಡೆದುಕೊಳ್ಳಲು ಇರುವ ಈ ಕೊನೆಯ ಅವಕಾಶವನ್ನು ಹಾಗೆಯೇ ಬಿಡಬಾರದು, ಪ್ರಾಣತ್ಯಾಗವೊಂದೇ ದಾರಿಯೆಂದಾದರೆ ಅದಕ್ಕೂ ಸಿದ್ಧವಾಗಿ ಬಾದಶಾಹ ಮತ್ತು ಬಾದಶಾಹಿನಿಯ ಘನತೆಗೆ ತಕ್ಕಂತೆ ಸಾಯುವುದೇ ಒಳ್ಳೆಯದುʼʼ ಎಂದು ಅದಾಗಲೇ ನಿರ್ಧರಿಸಿದ್ದರು.

ಬಹಾದುರ್ ಶಾಹ ಕೊನೆಯ ದಿನಗಳು-ಬ್ರಿಟಿಶರ ಕೈದಿಯಾಗಿ

ಸಾವರ್ಕರ್ ಅವರು ತಮ್ಮ ಪ್ರಧಾನಕೃತಿಯನ್ನು ಬಹಾದುರ್ ಶಾಹ ಜಫರ್ ಅವರ ಎರಡು ದ್ವಿಪದಿಗಳನ್ನು ಉಲ್ಲೇಖಿಸಿ ಈ ಕೆಳಗಿನಂತೆ ಮುಕ್ತಾಯಗೊಳಿಸಿದ್ದರು:

ಬಾದಶಾಹ ಬಹಾದುರ್‌ಶಾಹ ಒಬ್ಬ ಮಹಾನ್ ಕವಿಯಾಗಿದ್ದರು. ಕ್ರಾಂತಿಯ ಆ ಆವೇಶದ ಅವಧಿಯಲ್ಲಿ ಒಂದು ಗಝಲ್‌ನ್ನು ಕಲಾತ್ಮಕವಾಗಿ ಬರೆದಿದ್ದರು. ಯಾರೋ ಅವರನ್ನು ಕೇಳಿದರು:

ದಮ್‌ದಮೇಮೇಂದಂ ನಹೀ ಖೈರ್ ಮಾಂಗೋಜಾನ್‌ಕೀ/
ಐ ಜಫರ್‌ಥಂಡೀ ಹುಯೀ ಶಂಶೇರ್ ಹಿಂದೂಸ್ತಾನ್‌ಕೀ

(ಈಗ, ಆ ಪ್ರತಿಯೊಂದು ಕ್ಷಣವೂ, ನೀನು ದುರ್ಬಲನಾಗುತ್ತಿದ್ದೀಯ, ಪ್ರಾರ್ಥಿಸು ನಿನ್ನ ಜೀವಕ್ಕಾಗಿ ಏಕೆಂದರೆ,
ಓ ಜಫರ್, ಹಿಂದೂಸ್ತಾನದ ಖಡ್ಗವೀಗ ಮುರಿದುಹೋಗಿದೆ)

ಅದಕ್ಕೆ ಅವರು ಈ ದ್ವಿಪದಿಯ ಮೂಲಕ ಉತ್ತರ ನೀಡಿದರು,

ಘಾಜಿಯೋಂಮೇಂ ಬೂ ರಹೇಗಿ ಜಬ್‌ತಲಕ್ ಇಮಾನ್‌ಕೀ
ತಖ್ತೇ ಲಂದನ್‌ತಕ್ ಚಲೇಗಿ ತೇಗ್ ಹಿಂದೂಸ್ತಾನ್‌ಕೀ

(ಎಲ್ಲಿಯತನಕ ಇರುವುದೋ ಇನಿತು ನಂಬಿಕೆಯ ಒಲವು ನಮ್ಮ ಧೀರರೆದೆಯಲ್ಲಿ,
ತಲುಪುವುದು ಲಂಡನ್ನಿನ ಸಿಂಹಾಸನದವರೆಗೆ ಹಿಂದೂಸ್ತಾನದ ಖಡ್ಗವು)

ಮೊದಲ ದ್ವಿಪದಿಯಲ್ಲಿನ ಪ್ರಶ್ನೆಯು, ನಿಜವಾಗಿಯೂ, ಕ್ರಾಂತಿಕಾರಿಗಳ (1857) ಸೋಲಿನ ನಂತರ ಜಫರ್ ಅವರ ಪರಿಚಿತನ ಭಾವನೆಗಳನ್ನು ತಿಳಿಸುವ ಮೂಲಕ ವ್ಯಕ್ತಪಡಿಸಿದ್ದು. ಎರಡನೆಯ ದ್ವಿಪದಿಯು ಆ ಸೋಲಿನ ನಂತರವೂ ಜಾಫರ್‌ಅವರ ನಿರ್ಧಾರವನ್ನು ವ್ಯಕ್ತಪಡಿಸಿತು.

ಭಗತ್ ಸಿಂಗ್‌ ನಂತಹ ಕ್ರಾಂತಿಕಾರಿಗಳು ಸಾವರ್ಕರ್ ಮತ್ತವರ ತತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದರು ಮತ್ತು ಸಾವರ್ಕರ್‌ ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧದ ರಾಷ್ಟ್ರೀಯ ಹೋರಾಟದ ಸಂಕೇತವಾಗಿದ್ದರು ಎಂದು ಹಿಂದೂ ಕೋಮುವಾದಿ ಶಕ್ತಿಗಳು ಆಗಾಗ ವಾದ ಮಾಡುತ್ತಾರೆ. ಸಾವರ್ಕರ್‌ ಅವರ ಮೊದಲ ಹಂತದ ಹೋರಾಟಕ್ಕೆ ಸಂಬಂಧಪಟ್ಟಂತೆ ಅದು ನಿಜವೇ ಆಗಿತ್ತು; ಏಕೆಂದರೆ ಸಾವರ್ಕರ್‌ ಅವರು ಆಗ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಹಿಂದೂ ಮತ್ತು ಮುಸ್ಲಿಮರು ಇಬ್ಬರೂ ಒಗ್ಗೂಡಿ ಹೋರಾಡಬೇಕು ಎಂಬ ಧೋರಣೆ ಹೊಂದಿದ್ದರು ಹಾಗೂ ಸಂಯುಕ್ತ ದೇಶದ ಪರವಾಗಿ ನಿಂತಿದ್ದರು. ಕ್ರಾಂತಿಕಾರಿಗಳು ಸಾವರ್ಕರ್‌ ಅವರ ಈ ಹಂತದ ಹೋರಾಟವನ್ನು ಮೆಚ್ಚಿದ್ದರು; ಮತ್ತು ಆ ಕಾರಣಕ್ಕಾಗಿಯೇ ಭಗತ್ ಸಿಂಗ್ ಮತ್ತವರ ಸಂಗಾತಿಗಳು ಬಂಧನಕ್ಕೊಳಗಾದಾಗ, ಅವರ ಅಡಗುತಾಣದಿಂದ ಸಾವರ್ಕರ್‌ ಅವರ 1857 ಬಂಡಾಯ ಕುರಿತ ನಾಲ್ಕನೇ ಮುದ್ರಣದ ಪ್ರತಿಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದರು. ಸಾವರ್ಕರ್, ಹಿಂದುತ್ವದತ್ತ ತಿರುಗಿ ಕೇವಲ ಹಿಂದೂಗಳನ್ನು ಮಾತ್ರ ಸಂಘಟಿಸುವುದಕ್ಕೆ ತೊಡಗಿಗೊಂಡಿದ್ದು ತಮ್ಮ ರಾಜಕೀಯ ಜೀವನದ ಎರಡನೇ ಹಂತದಲ್ಲಿಯಷ್ಟೇ,  ಮೊದಲ ಹಂತದಲ್ಲಿ ಅವರು ಎಲ್ಲರನ್ನೂ ಒಳಗೊಂಡ ರಾಷ್ಟ್ರೀಯ ಚಟುವಟಿಕೆಗಳಿಗೆ ತೆರೆದುಕೊಂಡಿದ್ದರು. ಸಾವರ್ಕರ್‌ಅವರು 1904 ರಲ್ಲಿ ಸ್ಥಾಪಿಸಿದ ʻಅಭಿನವ್ ಭಾರತ್ʼ ಎಂಬ ಮೊದಲ ಕ್ರಾಂತಿಕಾರಿ ಸಂಘಟನೆಗೆ ಎಲ್ಲಾ ಧರ್ಮಗಳ ಜನರು ಆಕರ್ಷಿತರಾಗಿದ್ದರು ಎಂಬುದನ್ನು ಗಮನಿಸಬೇಕು. ಇಲ್ಲಿ ಒಂದು ಘಟನೆಯನ್ನು ಪ್ರಸ್ತಾಪಿಸಲೇಬೇಕು. 1857 ಕುರಿತ ಅವರ ಪುಸ್ತಕವನ್ನು ಬ್ರಿಟಿಷ್ ಸರ್ಕಾರ ನಿಷೇಧ ಮಾಡಿದಾಗ ಹಾಲೆಂಡಿನಲ್ಲಿ ಅದನ್ನು ಗುಟ್ಟಾಗಿ ಮುದ್ರಿಸಲಾಯಿತು; ಅದನ್ನು ಭಾರತಕ್ಕೆ ರಹಸ್ಯವಾಗಿ ಕೊಂಡುತರಲು ಧೈರ್ಯಮಾಡಿದ್ದು ಹದಿಹರೆಯದ ಯುವಕ ʻಅಭಿನವ್ ಭಾರತ್ʼದ ಸದಸ್ಯರಾಗಿದ್ದ ಸಿಕಂದರ್ ಹಯಾತ್‌ಖಾನ್. ಅವರು ನಂತರದಲ್ಲಿ ಅವಿಭಜಿತ ಭಾರತದಲ್ಲಿ ಪಂಜಾಬಿನ ಮುಖ್ಯಮಂತ್ರಿಯಾದರು ಕೂಡ. ಅವರು ವಿದೇಶದಿಂದ ಬರುವಾಗ ತಮ್ಮ ಚೀಲದ ಹುಸಿತಳದಲ್ಲಿ ಆ ಪುಸ್ತಕದ ಕೆಲವು ಪ್ರತಿಗಳನ್ನು ತಂದಿದ್ದರು.

ಎರಡನೇ ಘಟ್ಟ: ಹಿಂದೂ ಪ್ರತ್ಯೇಕತಾವಾದದ ಪ್ರವಾದಿಯಾಗಿ ಬ್ರಿಟಿಷರ ಎದುರು ಶರಣಾಗತಿ

ಆದರೆ ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅವರು ಅಲ್ಲಿ ಪಡಬೇಕಾದ ಘೋರಯಾತನೆಯು ಅವರನ್ನು ಸಂಪೂರ್ಣವಾಗಿ ಕುಗ್ಗಿಸಿತು. ಅದು ಅವರನ್ನು ರಾಜಕೀಯ ಬದುಕಿನ ಎರಡನೇ ಘಟ್ಟಕ್ಕೆ ಎಳೆದೊಯ್ಯಿತು. 1913 ರ ಹೊತ್ತಿಗೆ, ತನ್ನ ಬ್ರಿಟಿಷ್ ಯಜಮಾನರ ʻಒಡೆದು ಆಳುʼವ ಸಂಚಿಗೆ ಸಹಾಯ ಮಾಡಲು ಅವರು ಸಿದ್ಧರಾದರು. ಭಾರತ ಸರ್ಕಾರದ ಗೃಹ ಸಚಿವಾಲಯದ ಸದಸ್ಯ ಸರ್ ರೆಜಿನಾಲ್ಡ್ ಕ್ರಾಡ್ಡೊಕ್ 1913ರಲ್ಲಿ ಸೆಲ್ಯುಲರ್ ಜೈಲಿಗೆ ಭೇಟಿ ನೀಡಿದ್ದ ಸಮಯದಲ್ಲಿ ಅದು ಸ್ಪಷ್ಟರೂಪ ಪಡೆದುಕೊಂಡಿತು. ಸಾವರ್ಕರ್‌ ಅವರು ಸ್ವತಃ ಒಂದು ಕ್ಷಮಾಯಾಚನೆಯ ಅರ್ಜಿಯನ್ನು (ಆ ಅರ್ಜಿಯ ಪೂರ್ಣ ಪಠ್ಯ ಅಧ್ಯಾಯ 3 ರಲ್ಲಿ ಲಭ್ಯವಿದೆ) ನವಂಬರ್ 14, 1913 ರಂದು ಸರ್ ರೆಜಿನಾಲ್ಡ್ ಅವರಿಗೆ ಸಲ್ಲಿಸಿದರು. ಭಾರತವನ್ನು ಆಳುವ ಬ್ರಿಟಿಷ್ ಪ್ರಭುಗಳ ಕೊಳಕು ತಂತ್ರಕ್ಕೆ ಅವರು ಬಲಿಯಾಗಿರುವುದರ ಯಥಾವತ್ತಾದ ಸಾಕ್ಷ್ಯವನ್ನು ಆ ಅರ್ಜಿಯ ಕೊನೆಯ ಭಾಗದಲ್ಲಿ ನೋಡಬಹುದು. ಅದು ಹೀಗಿದೆ:

ಬ್ರಿಟಿಷ್ ಸರ್ಕಾರ ಇಷ್ಟಪಡುವ ಯಾವುದೇ ಸ್ಥಾನದಲ್ಲಿ ಸೇವೆ ಮಾಡಲು ನಾನು ಸಿದ್ಧನಾಗಿದ್ದೇನೆ, ಆ ಉದ್ದೇಶಕ್ಕಾಗಿ ಶುದ್ಧಾಂತಃಕರಣದಿಂದ ನನ್ನ ಪರಿವರ್ತನೆಯಾಗಿದೆ. ಆ ನಿಟ್ಟಿನಲ್ಲಿ ನನ್ನ ಮುಂದಿನ ನಡವಳಿಕೆಗಳೂ ಇರುತ್ತವೆ ಎಂಬ ವಿಶ್ವಾಸವಿದೆ. ಬಲಿಷ್ಠರು ಮಾತ್ರವೇ ಕರುಣಾಮಯಿಗಳಾಗಲು ಸಮರ್ಥರಿರುತ್ತಾರೆ. ಆದ್ದರಿಂದ ದುರ್ಮಾರ್ಗದಿಂದ ಸನ್ಮಾರ್ಗಕ್ಕೆ ಹಿಂದಿರುಗುವ ಮಗನು ಸರ್ಕಾರವೆಂಬ ಪೋಷಕರ ಬಾಗಿಲಿಗಲ್ಲದೆ ಬೇರೆಲ್ಲಿ ಹೋಗುತ್ತಾನೆ.

ವಿಷಾದವೆಂದರೆ, ಸಂಕುಚಿತ ಮನೋಭಾವದ ಕೋಮುವಾದಿ ಹಾದಿಯತ್ತ ಸಾಗುವ ಮೂಲಕ ಮತ್ತು ವಸಾಹತುಶಾಹಿ-ವಿರೋಧಿ ಹೋರಾಟದಿಂದ ದೂರ ಉಳಿಯುವ ಮೂಲಕ ಬ್ರಿಟಿಷರಿಗೆ ನಿಷ್ಠೆ ತೋರುವ ಈ ಪ್ರತಿಜ್ಞೆ ಮಾಡುವುದು ಸ್ವಲ್ಪ ಹೆಚ್ಚು ಗಂಭೀರವಾದ ಸಂಗತಿ. ರಾಜಕೀಯ ಖೈದಿಗಳ ಸಂಕಲ್ಪವನ್ನು ಭಂಗಗೊಳಿಸುವ ಸಲುವಾಗಿಯೇ ಅಂಡಮಾನಿಗೆ ಗಡೀಪಾರು ಮಾಡುವ ಬ್ರಿಟಿಷರ ಉದ್ದೇಶವಾಗಿತ್ತು, ಸಾವರ್ಕರ್‌ ರದ್ದು ಆ ನೀತಿಯ ದುರಂತ ಯಶೋಗಾಥೆಯ ಭಾಗವಾಗಿದೆ.

(ಮುಂದುವರೆಯುವುದು)

Donate Janashakthi Media

Leave a Reply

Your email address will not be published. Required fields are marked *