ಡಾ. ಶಮ್ಸುಲ್ ಇಸ್ಲಾಂ
ಅನು: ಟಿ.ಸುರೇಂದ್ರರಾವ್
ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್ ರವರ ʻಸಾವರ್ಕರ್ ಅನ್‌ಮಾಸ್ಕ್ಡ್ʼ ಪ್ರಸ್ತಾವನೆಯಲ್ಲಿ ಸಾವರ್ಕರ್ ಅವರನ್ನು ರಾಷ್ಟ್ರೀಯ ನೇತಾರನನ್ನಾಗಿ ಬಿಂಬಿಸುವ ಯಾವುದೇ ಯೋಜನೆ 1998ಕ್ಕೂ ಮುಂಚೆ ಹಿಂದುತ್ವ ಬ್ರಿಗೇಡಿಗೆ ಇರಲಿಲ್ಲ, ನಂತರ ಅದು ಮುನ್ನೆಲೆಗೆ ಬರುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೂ ಇದೆ ಎಂಬುದನ್ನು ಪರಿಶೀಲಿಸುತ್ತ ಸಾವರ್ಕರ್ ಅವರ ಹೊಗಳುಭಟರ ತಂಡದಲ್ಲಿ ಕಾಂಗ್ರೆಸ್ ಕೂಡ ಸೇರಿಕೊಂಡದ್ದು ವಿಷಾದದ ಸಂಗತಿ ಎನ್ನುತ್ತಾರೆ. ಮುಂದೆ ಅವರು ಸಾವರ್ಕರ್ ರವರನ್ನು ಕುರಿತ ಏಳು ಮಿಥ್ಯೆಗಳನ್ನು ಒಂದೊಂದಾಗಿ ಈ ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತಾರೆ.
ಮಿಥ್ಯೆ 1 – ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!
ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ ಎಂದು ಹಿಂದುತ್ವ ಪ್ರಚಾರಕರ ಮಿಥ್ಯೆಯನ್ನು ಪರಿಶೀಲಿಸುತ್ತಾ ಕಾಲಾಪಾನಿ ಅಥವಾ ಕರಿ ನೀರು ಎಂದು ಕರೆಯಲ್ಪಡುವ ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ ಗೂಡಿನಂತಿರುವ ಸಣ್ಣ ಕೋಣೆಯಲ್ಲಿ ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಎಂದು ಬಿಂಬಿಸಲು ಬಿಜೆಪಿ ನೇತೃತ್ವದ ಸರ್ಕಾರವು ಶತಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ ಎನ್ನುವ ಲೇಖಕರು, ಸತ್ಯಸಂಗತಿಗಳು ಮಾತ್ರ ಬೇರೆಯೇ – ಗಾಬರಿ ಹುಟ್ಟಿಸುವ – ಕತೆಯನ್ನೇ ಹೇಳುತ್ತವೆ ಎನ್ನುತ್ತಾರೆ. ಸಾವರ್ಕರ್ ಗಿಂತ ಎಷ್ಟೋ ಮೊದಲು ಭಾರತದ ಮೊದಲ ಸ್ವಾತಂತ್ರ್ಯ ಯುದ್ಧ ಎಂದು ದಾಖಲಾಗಿರುವ 1857ರ ಬಂಡಾಯದಲ್ಲಿ ಭಾಗವಹಿಸಿದ್ದಕ್ಕಾಗಿ ಈ ಶಿಕ್ಷೆ ಅನುಭವಿಸಿದ ಮೂವರ ಕುರಿತು ಕಳೆದ ಸಂಚಿಕೆಯಲ್ಲಿ ಓದಿದ್ದೀರಿ. ಮುಂದೆ ಓದಿ…
ಸಾವರ್ಕರ್‌ರ ಆರಂಭದ ರಾಜಕೀಯ ಜೀವನ
ಹೀಗೆ, ಸೆಲ್ಯುಲರ್ ಜೈಲು ಅಂದರೆ ಕೇವಲ ಸಾವರ್ಕರ್ ಕತೆ ಅಲ್ಲ. ಇಲ್ಲಿ, ಸಾವರ್ಕರ್ ಬಗ್ಗೆ ಕೂಡ ಕೆಲವು ವಿವರಗಳನ್ನು ತಿಳಿದುಕೊಳ್ಳುವುದು ಬಹಳ ಪ್ರಸ್ತುತವಾಗುತ್ತದೆ. ಅವರು ಮಹಾರಾಷ್ಟ್ರದ ಭೂಮಾಲಕ ಚಿತ್ಪಾವನ ಬ್ರಾಹ್ಮಣರ ಕುಟುಂಬದಲ್ಲಿ 1983 ರಲ್ಲಿ ಜನಿಸಿದರು. ಅವರ ಶಾಲಾ ದಿನಗಳಿಂದಲೇ, ಅವರು ಬ್ರಿಟಿಷ್ ವಿರೋಧಿ ಚಳುವಳಿಗೆ ಆಕರ್ಷಿತರಾಗಿದ್ದರು ಮತ್ತು ಮೇ 1904ರಲ್ಲಿ, ಮಝ್ಝಿನಿಯ ʻಗಿಯೊವನ್ನಿ ಇತಾಲಿಯʼ (ಯುವ ಇಟಲಿ) ಚಳುವಳಿಯಿಂದ ಪ್ರಭಾವಿತರಾಗಿ ಅಭಿನವ್ ಭಾರತ್ (ಯುವ ಭಾರತ) ಸಮಾಜವನ್ನು ಸ್ಥಾಪಿಸಲು ಸಹಾಯ ಮಾಡಿದರು. ಕಾನೂನು ಅಧ್ಯಯನಕ್ಕಾಗಿ ಅವರು ಇಂಗ್ಲೆಂಡಿಗೆ (1906-1910) ತೆರಳಿದರು. ಆದರೆ ಅಲ್ಲಿ ಅವರು ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇಂಗ್ಲೆಂಡಿನಲ್ಲಿ, ಅವರು ಫ್ರೀ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು, ಭಾರತದಿಂದ ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಲು ಅದು ಗುಪ್ತ ಚಟುವಟಿಕೆಗಳನ್ನು ಸಂಘಟಿಸಿತು. ಫ್ರೀ ಇಂಡಿಯಾ ಸೊಸೈಟಿಯ ಸದಸ್ಯರಲ್ಲೊಬ್ಬರಾದ ಮದನ್ ಲಾಲ್ ಢಿಂಗ್ರಾ ಅವರು ಲಂಡನ್ನಿನ ಭಾರತೀಯ ಕಛೇರಿಯ ಒಬ್ಬ ಅಧಿಕಾರಿಯನ್ನು ಹತ್ಯೆ ಮಾಡಿದ ನಂತರ ಸಾವರ್ಕರ್ ಅವರನ್ನು ಬಂಧಿಸಲಾಯಿತು ಮತ್ತು ಭಾರತಕ್ಕೆ ಕರೆ ತರಲಾಯಿತು. ಭಾರತಕ್ಕೆ ಬರುವಾಗಿನ ಹಾದಿಯಲ್ಲಿ, ಬಂಧನದಲ್ಲಿದ್ದ ಸಾವರ್ಕರ್ ಅವರು ಫ್ರಾನ್ಸ್ ನ ಮರ‍್ಸೈಲ್ಸ್ ಎಂಬಲ್ಲಿ ತಪ್ಪಿಸಿಕೊಳ್ಳಲು ಒಂದು ದಿಟ್ಟ, ಆದರೆ ನಿಷ್ಫಲ ಪ್ರಯತ್ನ ಮಾಡಿದರು.
ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು
ಭಾರತದಲ್ಲಿ, ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಎರಡು ವಿಭಿನ್ನ ಪ್ರಕರಣಗಳಲ್ಲಿ ಎರಡು ಜೀವಾವಧಿ ಗಡಿಪಾರು ಶಿಕ್ಷೆ ಅಂದರೆ 50 ವರ್ಷಗಳ ಜೈಲುವಾಸದ ಶಿಕ್ಷೆ ನೀಡಲಾಗುತ್ತದೆ. ಜುಲೈ 4, 1911ರಂದು ಅವರನ್ನು ಶಿಕ್ಷೆ ಅನುಭವಿಸಲು ಅಂಡಮಾನಿನ ಸೆಲ್ಯುಲರ್ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಅವರು 1911, 1913, 1914, 1918 ಮತ್ತು 1920ರಲ್ಲಿ ಐದು ಬಾರಿ ಬ್ರಿಟಿಷ್ ದೊರೆಗಳಿಗೆ ಕ್ಷಮಾದಾನ ಬೇಡಿ ಪತ್ರ ನೀಡಿದರೂ ಅವರ ಬಿಡುಗಡೆಯಾಗಲಿಲ್ಲ; ಆದರೆ ಅವರು ಕ್ರಮೇಣವಾಗಿ ಜೈಲು ಅಧಿಕಾರಿಗಳ ವಿಶೇಷ ಪ್ರೀತಿಪಾತ್ರರಾಗುತ್ತಾರೆ; ಅವರಿಗೆ 1920ರಲ್ಲಿ ಒಂದು ಗುಮಾಸ್ತನ ಕೆಲಸ ನೀಡುತ್ತಾರೆ; ನಂತರದಲ್ಲಿ ಜೈಲಿನ ಎಣ್ಣೆ ಉಗ್ರಾಣದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡಲು ಅವರಿಗೆ ಅವಕಾಶ ನೀಡುತ್ತಾರೆ. ಅವರಿಗೆ ಕ್ಷಮಾದಾನ ನೀಡುವ ಭಾಗವಾಗಿ 1921ರಲ್ಲಿ ಬ್ರಿಟಿಷ್ ಸರ್ಕಾರವು ಮೊದಲಿಗೆ ಅವರನ್ನು ಭಾರತದ ಮುಖ್ಯ ಭೂಭಾಗಕ್ಕೆ ಸ್ಥಳಾಂತರಿಸುತ್ತದೆ. ಬೇರೆ ಬೇರೆ ಜೈಲುಗಳಲ್ಲಿ ಇಟ್ಟ ನಂತರ, ಜನವರಿ 6, 1924ರಂದು ಅವರನ್ನು ಅಂತಿಮವಾಗಿ ಪಶ್ಚಿಮ ಭಾರತದ ಪುಣೆಯ ಯೆರವಾಡಾ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ, ಅವರು ರತ್ನಗಿರಿ ಜಿಲ್ಲೆಯಲ್ಲಿ ಮಾತ್ರ ವಾಸಿಸಬೇಕು ಮತ್ತು ʻʻಬ್ರಿಟಿಷ್ ಸರ್ಕಾರದ ಅನುಮತಿಯಿಲ್ಲದೇ ಐದು ವರ್ಷಗಳ ಕಾಲ ಸಾರ್ವಜನಿಕವಾಗಿಯಾಗಲೀ ಅಥವಾ ಖಾಸಗಿಯಾಗಿಯಾಗಲೀ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಬಾರದು….ʼʼ ಎಂಬ ಷರತ್ತಿನೊಂದಿಗೆ ಬಿಡುಗಡೆಯಾಗುತ್ತದೆ. ಸಾವರ್ಕರ್ ಅವರ ಮೇಲೆ ವಿಧಿಸಿದ ಈ ಷರತ್ತುಗಳನ್ನು 1937ರಲ್ಲಷ್ಟೇ ಮಾತ್ರವೇ ಹಿಂತೆಗೆದುಕೊಳ್ಳಲಾಗುತ್ತದೆ. ಆದರೆ, ಆ ಷರತ್ತುಗಳು ಜಾರಿಯಲಿದ್ದ ಅವಧಿಯಲ್ಲಿ ಬ್ರಿಟಿಷ್ ಯಜಮಾನರುಗಳ ಒಡೆದು ಆಳುವ ನೀತಿಗೆ ಸರಿಯಾಗಿ ಹೊಂದಿಕೊಳ್ಳುವಂತೆ ಕೋಮುವಾದಿ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅವರಿಗೆ ಅವಕಾಶ ನೀಡಲಾಗಿತ್ತು.
ಮೊದಲ ಘಟ್ಟ: ಎಲ್ಲರನ್ನೂ ಒಳಗೊಳ್ಳುವ ಭಾರತದ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ
ಒಬ್ಬ ಕಾರ್ಯಕರ್ತನಾಗಿ, ಬರಹಗಾರನಾಗಿ ಮತ್ತು ಭಾಷಣಗಾರನಾಗಿ ಸಾವರ್ಕರ್ ಅವರ ಪಾತ್ರವನ್ನು ಎರಡು ಭಿನ್ನವಾದ ಮತ್ತು ತದ್ವಿರುದ್ಧವಾದ ಘಟ್ಟಗಳಾಗಿ ವಿಭಜಿಸಬಹುದು. ಸಾವರ್ಕರ್ ಅವರು ತಮ್ಮ ರಾಜಕೀಯ ಜೀವನವನ್ನು ಒಬ್ಬ ನಿಜವಾದ ಕ್ರಾಂತಿಕಾರಿಯಾಗಿ ಆರಂಭಿಸಿದರು; ಯಾವುದೇ ಧಾರ್ಮಿಕ ಹಾಗೂ ರಾಜಕೀಯ ತಾರತಮ್ಯವಿಲ್ಲದ ಸ್ವತಂತ್ರ ಭಾರತಕ್ಕಾಗಿ ದೃಢವಾಗಿ ನಿಂತರು. 1911ರಲ್ಲಿ ಅಂಡಮಾನಿನ ಸೆಲ್ಯುಲರ್ ಜೈಲಿಗೆ ಹೋಗುವ ವರೆಗೆ ಧಾರ್ಮಿಕ ಭಿನ್ನತೆಗಳನ್ನು ಕಿಂಚಿತ್ತೂ ಲೆಕ್ಕಿಸದ ಸ್ವತಂತ್ರ ಭಾರತದ ಗುರಿಸಾಧನೆಗೆ ಬದ್ಧನಾದ ಪ್ರತಿಪಾದಕನಾಗಿ ಅವರು ಉಳಿದರು. ಅವರ ಒಟ್ಟು ಆಲೋಚನೆಯು ಹಿಂದೂ ಪುರಾಣ ಹಾಗೂ ಚರಿತ್ರೆಯಲ್ಲಿ ಬೇರು ಬಿಟ್ಟಿದ್ದರೂ ಕೂಡ, ಭಾರತವೆಂಬ ತಾಯಿನಾಡಿನ ವಿಮೋಚನೆಯು ದೇಶದ ಹಿಂದೂಗಳು ಹಾಗೂ ಮುಸ್ಲಿಮರ ಐಕ್ಯ ದೃಢ ಸಂಕಲ್ಪದ ಮೇಲೆಯೇ ಅವಲಂಬಿತವಾಗಿದೆ ಎಂದು ಅಚಲವಾಗಿ ನಂಬಿದ್ದರು.
ಅವರ ಈ ಆಲೋಚನೆಯು 1857ರ ಬಂಡಾಯ ಕುರಿತ ಅವರ ಪ್ರಧಾನ ಕೃತಿಯಾದ ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857ದಲ್ಲಿ ನಿಸ್ಸಂದೇಹವಾಗಿ ಕಣ್ಣಿಗೆ ಕಾಣುತ್ತದೆ; ಅದನ್ನವರು 1907 ರಲ್ಲಿ ಇಂಗ್ಲೆಂಡಿನಲ್ಲಿದ್ದಾಗ ಬರೆದಿದ್ದರು. ಬ್ರಿಟಿಷ್ ಸರ್ಕಾರ ಆ ಪುಸ್ತಕವನ್ನು ನಿಷೇಧಿಸಿದ್ದರೂ, ಜಗತ್ತಿನಾದ್ಯಂತ ಹಲವಾರು ಮುದ್ರಣಗಳನ್ನು ಕಂಡಿದೆ ಮತ್ತು ಅವುಗಳು ಸ್ವಾತಂತ್ರ್ಯಪೂರ್ವ ಕ್ರಾಂತಿಕಾರಿ ಗುಂಪುಗಳು ಮತ್ತು ವ್ಯಕ್ತಿಗಳಿಂದ ಪ್ರಾಯೋಜಿತವಾಗಿದ್ದವು. ಆ ಪುಸ್ತಕದ ಪ್ರಸ್ತಾವನೆಯಲ್ಲಿಯೇ ಸಾವರ್ಕರ್ ಅವರು ಮುಸ್ಲಿಮರ ಬಗೆಗಿನ ಕಡು ಹಗೆತನದ ಬಗ್ಗೆ ಎಚ್ಚರಿಸಿದ್ದರು; ತಾಯಿನಾಡಿನ ವಿಮೋಚನೆಗೆ ಹಿಂದೂಗಳ ಹಾಗೂ ಮುಸ್ಲಿಮರ ಐಕ್ಯತೆಯು ತೀರಾ ಅಗತ್ಯವಾದುದೆಂದು ಒತ್ತಿ ಹೇಳಿದ್ದರು. ಅವರು ಹೀಗೆ ಬರೆದಿದ್ದರು:
ತನ್ನ ಗತಕಾಲದ ಬಗ್ಗೆ ಅರಿವಿಲ್ಲದ ದೇಶಕ್ಕೆ ಭವಿಷ್ಯವಿಲ್ಲ. ಗತಕಾಲದ ಬಗ್ಗೆ ಸಾರಿ ಹೇಳುವುದಷ್ಟೇ ಅಲ್ಲ ಅದನ್ನು ತನ್ನ ಭವಿಷ್ಯದ ಮುಂದುವರಿಕೆಗಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನೂ ತಿಳಿದುಕೊಳ್ಳುವ ಸಾಮರ್ಥ್ಯವನ್ನು ದೇಶವು ಬೆಳೆಸಿಕೊಳ್ಳಬೇಕು ಎನ್ನುವುದೂ ಅಷ್ಟೇ ಸತ್ಯ. ದೇಶವು ತನ್ನ ಇತಿಹಾಸದ ಧಣಿಯಾಗಬೇಕೇ ವಿನಃ ಅದರ ಗುಲಾಮನಾಗಬಾರದು… ಮಹಮ್ಮದೀಯರ ವಿರುದ್ಧದ ದ್ವೇಷ ಭಾವನೆಯು ಶಿವಾಜಿಯ ಕಾಲದಲ್ಲಷ್ಟೇ ಅಗತ್ಯವಾಗಿತ್ತು – ಆದರೆ, ಆಗ ಹಿಂದೂಗಳಲ್ಲಿ ಅಂತಹ ಭಾವನೆಯು ಪ್ರಧಾನವಾಗಿತ್ತು ಎನ್ನುವ ಮಾತ್ರಕ್ಕೆ ಈಗ ಅಂತಹ ಭಾವನೆಯನ್ನು ಪೋಷಿಸುವುದು ಅನ್ಯಾಯ ಹಾಗೂ ಮೂರ್ಖತನವಾಗುತ್ತದೆ.
ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು
ಸಾವರ್ಕರ್ ಅವರ ಈ ಚಿರಸ್ಥಾಯೀ ಕೃತಿಯು, 1857ರ ಕ್ರಾಂತಿ ಐಕ್ಯತೆ, ಸ್ವಾತಂತ್ರ್ಯ ಹಾಗೂ ಜನರ ಕಾರ್ಯಶಕ್ತಿಯ ಚೈತನ್ಯವನ್ನು ಭಾರತವು ಎಷ್ಟರಮಟ್ಟಿಗೆ ಮೈಗೂಡಿಸಿಕೊಂಡಿತ್ತು ಎಂಬುದರ ಒಂದು ಪರೀಕ್ಷೆಯಾಗಿತ್ತು ಎಂದು ಸಾರುತ್ತ ಕೊನೆಗೊಳ್ಳುತ್ತದೆ. ಮುಂದುವರೆದು ಅವರು ದೇಶವಾಸಿಗಳಿಗೆ ಹೀಗೆ ಕರೆ ಕೊಟ್ಟರು:
ಸ್ವರಾಜ್ಯಕ್ಕಿಂತ – ಅದು ಪ್ರಜಾಪ್ರಭುತ್ವದ್ದಾಗಿರಲಿ, ಅಥವಾ ರಾಜಪ್ರಭುತ್ವದ್ದಾಗಿರಲಿ, ಅಥವಾ ಅರಾಜಕತೆಯದ್ದೇ ಆಗಿದ್ದರೂ ಕೂಡ, ವಿದೇಶಿ ಅಧಿಪತ್ಯವು ಕೆಟ್ಟದು ಎಂದು ಸಂಪೂರ್ಣವಾಗಿ ತಿಳಿದುಕೊಂಡು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಮುಂದೆ ಬಂದ ಆ ವೀರರಿಗೆ ನಿಜವಾದ ಕೀರ್ತಿ ಸಲ್ಲಬೇಕು; ಈ ತತ್ವವನ್ನು ಅರಿತವರು, ತಮ್ಮ ಧರ್ಮ ಹಾಗೂ ತಮ್ಮ ದೇಶಕ್ಕಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದವರು…… ಅಂಥವರ ಹೆಸರುಗಳನ್ನು ನಾವು ನೆನೆಯಬೇಕು, ಗೌರವಭಾವದಿಂದ ಸಾರಬೇಕು!
ಇಂತಹ ವೀರರ ಗೌರವಾರ್ಥವಾಗಿಯೇ ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857 ಕೃತಿಯನ್ನು ಸಾವರ್ಕರ್ ʻ1857ರ ಹುತಾತ್ಮರಿಗೆʼ ಅರ್ಪಿಸಿದರು. ತಾಯಿನಾಡಿಗಾಗಿ ತಮ್ಮ ಜೀವವನ್ನೇ ಅರ್ಪಿಸಿದ ಆ ಧೀರ ವ್ಯಕ್ತಿಗಳ ಹೆಸರುಗಳ ಪಟ್ಟಿಯಲ್ಲಿ ಮಂಗಲ್ ಪಾಂಡೆ, ರಾಣಿ ಲಕ್ಷ್ಮಿಬಾಯಿ, ನಾನಾ ಸಾಹೇಬ್, ಮೌಲ್ವಿ ಅಹಮದ್ ಶಾಹ್, ಅಜಿಮುಲ್ಲಾ ಖಾನ್, ತಾಂತ್ಯಾ ಟೋಪೆ, ಬಹಾದ್ದೂರ್ ಶಾಹ್ ಜಫರ್, ಬೇಗಂ ಜೀನತ್ ಮಹಲ್ ಮತ್ತು ಇನ್ನೂ ಅನೇಕರ, ಹಿಂದೂಗಳ ಹಾಗೂ ಮುಸ್ಲಿಮರ ಹೆಸರುಗಳನ್ನು ಈ ಪುಸ್ತಕದಲ್ಲಿ ಅವರು ಸೇರಿಸಿದ್ದಾರೆ.
ಸಾವರ್ಕರ್ ಅವರು ತಮ್ಮ ಮೊದಲ ಘಟ್ಟದ ರಾಜಕೀಯ ಜೀವನದಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರಲಿಲ್ಲ. 1857 ರ ಬಗೆಗಿನ ಅವರ ಕೃತಿಯಲ್ಲಿ ಅವರು ನಿದರ್ಶನಗಳ ಮೇಲೆ ನಿದರ್ಶನಗಳನ್ನು ನೀಡಿ ಹಿಂದೂಗಳ ಒಂದು ವಿಭಾಗದವರ ವಂಚನೆಯನ್ನು ಬಯಲು ಮಾಡಿದ್ದಾರೆ. ಅಂತಹ ಒಂದು ಉದಾಹರಣೆಯಲ್ಲಿ ಬಾಜಿ ಪೇಶ್ವೆ ಬ್ರಿಟಿಷರಿಗೆ ಸಹಾಯ ಮಾಡಿ ಪಂಜಾಬನ್ನು ವಶಪಡಿಸಿಕೊಳ್ಳುವಲ್ಲಿ ಸಹಾಯ ಮಾಡಿದ್ದನ್ನು ಬರೆದಿದ್ದಾರೆ:
ಈ ಬಾಜಿಯು – ಶಿವಾಜಿಯ ಈ ಪೇಶ್ವೆ ಮತ್ತು ವಂಶದವರು – ತಮ್ಮ ಕೈಯಿಂದಲೇ ಹಣ ಖರ್ಚು ಮಾಡಿ ಒಂದು ಸಾವಿರ ಕಾಲ್ದಳಗಳನ್ನು ಮತ್ತು ಒಂದು ಸಾವಿರ ಅಶ್ವದಳಗಳನ್ನು ಇಂಗ್ಲಿಷರ ಸಹಾಯಕ್ಕೆ ಕಳಿಸಿದರು! ಈ ಬಾಜೀರಾಯನಿಗೆ ತಮ್ಮದೇ ಆದ ಶನಿವಾರವಾಡೆಯನ್ನು ರಕ್ಷಿಸಲು ಸಾಕಷ್ಟು ಸೇನೆಯನ್ನು ಕಳಿಸಲಾಗಲಿಲ್ಲ, ಆದರೆ ಗುರು ಗೋವಿಂದ್ ಸಿಂಗ್ ಅವರ ಮನೆಯನ್ನು ಪ್ರತ್ಯೇಕಿಸುವಲ್ಲಿ ಶತ್ರುಗಳಿಗೆ ಸಹಾಯ ಮಾಡಲು ಆತನ ಬಳಿ ಸೇನೆ ಇತ್ತು.
ಈ ಘಟ್ಟದಲ್ಲಿ, ಸಾವರ್ಕರ್ ಅವರು ಹಿಂದೂಗಳು ಮತ್ತು ಮುಸ್ಲಿಮರ ಬಗ್ಗೆ ಈ ನಂಬಿಕೆ ತಳೆದಿದ್ದರು:
ಇಬ್ಬರೂ ಹಿಂದೂಸ್ತಾನದ ಮಣ್ಣಿನ ಮಕ್ಕಳೇ ಆಗಿದ್ದಾರೆ. ಅವರ ಹೆಸರುಗಳು ಬೇರೆ ಬೇರೆ, ಅದರೆ ಅವರು ಒಂದೇ ತಾಯಿಯ ಮಕ್ಕಳಾಗಿದ್ದಾರೆ; ಆದ್ದರಿಂದ ಭಾರತವು ಈ ಇಬ್ಬರಿಗೂ ಸಮಾನ ತಾಯಿಯಾಗಿರುವುದರಿಂದ, ಅವರು ರಕ್ತಸಂಬಂಧದಲ್ಲಿ ಸೋದರರಾಗಿದ್ದಾರೆ. ನಾನಾ ಸಾಹೇಬ್, ದೆಹಲಿಯ ಬಹಾದುರ್ ಶಾಹ್, ಮೌಲ್ವಿ ಅಹಮದ್ ಶಾಹ್, ಖಾನ್ ಬಹಾದುರ್ ಖಾನ್, ಮತ್ತು 1857 ರ ಇತರ ಮುಖಂಡರುಗಳಿಗೆ ತಮ್ಮ ನಡುವಣ ಈ ಸಂಬಂಧ ಸ್ವಲ್ಪ ಮಟ್ಟಿಗೆ ಅನುಭವಕ್ಕೆ ಬಂದಿತ್ತು. ಆದ್ದರಿಂದಲೇ, ತಮ್ಮ ಹಗೆತನವನ್ನು ಹೊರಗಿಟ್ಟು ಸ್ವದೇಶದ ಬಾವುಟದ ಸುತ್ತ ಅಣಿನೆರೆದರು….
ಸಾವರ್ಕರ್ ಅವರು ನಾನಾ ಹಾಗೂ ಅಜೀಮುಲ್ಲಾ ಅವರ ನೀತಿಗಳನ್ನು ಹಾಡಿ ಹೊಗಳಿದ್ದರು:
ದೇಶದ ಸ್ವಾತಂತ್ರ್ಯಕ್ಕಾಗಿ ಭುಜಕ್ಕೆ ಭುಜ ಕೊಟ್ಟು ಒಟ್ಟಿಗೇ ಹೋರಾಡಲು ಮತ್ತು, ಸ್ವಾತಂತ್ರ್ಯ ಸಿಕ್ಕಾಗ ಭಾರತೀಯ ಆಳರಸರು ಹಾಗೂ ರಾಜರುಗಳ ಅಡಿಯಲ್ಲಿ ಸಂಯುಕ್ತ ಭಾರತದ ರಾಜ್ಯಗಳನ್ನು ರಚಿಸಬೇಕು ಎಂಬುದಕ್ಕಾಗಿ ಹಿಂದೂಗಳು ಮತ್ತು ಮುಸ್ಲಿಮರನ್ನು ಒಂದುಗೂಡಿಸಬೇಕು, ಆಗ ಮಾತ್ರವೇ ಇಬ್ಬರೂ ಒಟ್ಟಿಗೇ ಹೋರಾಡಬಹುದು ಎಂಬುದು ಅವರ ಗುರಿಯಾಗಿತ್ತು ಎಂದಿದ್ದರು.
ನಾನಾ ಅವರ ಆಪ್ತ ನಂಬಿಕಸ್ತನಾಗಿದ್ದ ಮತ್ತು ಮಹಾನ್ ಮಿಲಿಟರಿ ತಂತ್ರಗಾರನಾಗಿದ್ದ ಅಜೀಮುಲ್ಲಾ ಖಾನ್‌ಗೆ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ವಿರುದ್ಧ ಪ್ರತಿರೋಧ ಒಡ್ಡುವುದಕ್ಕಾಗಿ ಒಂದು ನೀಲಿ ನಕ್ಷೆಯನ್ನು ತಯಾರಿಸಿದ ಪೂರ್ಣ ಕೀರ್ತಿಯನ್ನು ಹೀಗೆ ಕೊಟ್ಟಿದ್ದಾರೆ:
1857 ರ ಕ್ರಾಂತಿಕಾರಿ ಸಮರದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಅಜೀಮುಲ್ಲಾ ಖಾನ್ ಅವರ ಹೆಸರು ಅವಿಸ್ಮರಣೀಯವಾದುದು. ಸ್ವಾತಂತ್ರ್ಯ ಸಮರದ ವಿಚಾರವನ್ನು ಮೊದಲು ಪರಿಕಲ್ಪಿಸಿದ ಉತ್ಸಾಹಭರಿತ ಬುದ್ಧಿಶಾಲಿಗಳು ಹಾಗೂ ವಿವೇಕಶಾಲಿಗಳಲ್ಲಿ ಅಜೀಮುಲ್ಲಾ ಅವರಿಗೆ ಪ್ರಮುಖ ಸ್ಥಾನ ನೀಡಲೇಬೇಕು. ಕ್ರಾಂತಿಯ ವಿವಿಧ ಮಜಲುಗಳ ಹಲವಾರು ಯೋಜನೆಗಳನ್ನು ರೂಪಿಸಿದವರಲ್ಲಿ ಅಜೀಮುಲ್ಲಾ ಅವರಿಗೆ ವಿಶೇಷವಾದ ಗೌರವ ಸಲ್ಲಬೇಕು.
ಹಿಂದೂ ಮುಸ್ಲಿಂ ಸ್ವಾತಂತ್ರ್ಯ ಪ್ರೇಮಿ ಕ್ರಾಂತಿಕಾರಿಗಳ ಐಕ್ಯತೆಯನ್ನು ಸಾವರ್ಕರ್ ಅಭಿನಂದಿಸಿದರು. ಮೌಲ್ವಿ ಅಹಮದ್ ಶಾಹ್ ಅವರ ಜೆಹಾದಿ ಆದರ್ಶವನ್ನು ಹೊಗಳುವಷ್ಟರ ಮಟ್ಟಿಗೆ ಅವರು ಮುಂದಾದರು.
(ಮುಂದುವರೆಯುವುದು)
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ