ಶಿವಮೊಗ್ಗ: 1918ರಲ್ಲಿ ಆರಂಭವಾದ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ(ವಿಐಎಸ್ಎಲ್) ಮುಚ್ಚುವ ಆದೇಶವನ್ನು ಹಿಂಪಡೆಯಬೇಕೆಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
‘ವಿಐಎಸ್‌ಎಲ್ ಅನ್ನು ನಾನು ಪ್ರಧಾನಿಯಾಗಿದ್ದ ಅವಧಿಯಲ್ಲಿ 1996ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ತರಲಾಗಿತ್ತು. ಪ್ರಾಧಿಕಾರವು ರೂ.650 ಕೋಟಿ ವೆಚ್ಚದಲ್ಲಿ ಕಾರ್ಖಾನೆಯನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಸಿದ್ಧಪಡಿಸಿತ್ತು. ಆದರೆ, ಅದು ಸಾಕಾರಗೊಳ್ಳಲಿಲ್ಲ. 2016ರಲ್ಲಿ ನೀತಿ ಆಯೋಗವು ಹೂಡಿಕೆ ಹಿಂತೆಗೆತಕ್ಕೆ ಶಿಫಾರಸು ಮಾಡಿತ್ತು. ಆದರೆ, ಅದು ಕೂಡ ಸಫಲವಾಗಲಿಲ್ಲ. ಇದರಿಂದಾಗಿ ಕಾರ್ಖಾನೆಯು ಸಂಕಷ್ಟಕ್ಕೆ ಸಿಲುಕಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ದುಸ್ಥಿತಿಯೆಂದು ದೇಶದ ಸಾರ್ವಜನಿಕ ಆಸ್ತಿಯ ಮಾರಾಟ ಯೋಜನೆ ಎನ್‌ಎಂಪಿ : ಪ್ರೊ. ಎಂ ಚಂದ್ರ ಪೂಜಾರಿ
ಸಾರ್ವಜನಿಕ ವಲಯದ ಸಂಸ್ಥೆಯಾದ ವಿಐಎಸ್ಎಲ್ ಅನ್ನು ಮಹಾನ್ ದೂರದೃಷ್ಟಿಯುಳ್ಳ ಮತ್ತು ಇಂಜಿನಿಯರ್-ರಾಜ್ಯಜ್ಞ ಭಾರತ ರತ್ನ ಎಂ ವಿಶ್ವೇಶ್ವರಯ್ಯ ಸ್ಥಾಪಿಸಿದ್ದರು ಎಂದು ಉಲ್ಲೇಖಿಸಿರುವ ಹೆಚ್.ಡಿ. ದೇವೇಗೌಡ ಅವರು, ವಿಐಎಸ್‌ಎಲ್ ಅತ್ಯುತ್ತಮ ಗುಣಮಟ್ಟದ ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಈ ಹಿಂದೆ ಇದೇ ಕಾರ್ಖಾನೆಯು ಅಣುಶಕ್ತಿ ಕೇಂದ್ರಗಳು, ರೈಲ್ವೆ ಇಲಾಖೆ, ಆಟೊಮೊಬೈಲ್ ಕ್ಷೇತ್ರಕ್ಕೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳನ್ನು ಒದಗಿಸುತ್ತಿತ್ತು. ಈಗ 20,000 ಕುಟುಂಬಗಳು ಕಾರ್ಖಾನೆಯನ್ನು ಅವಲಂಬಿಸಿವೆ. ಮುಚ್ಚುವ ನಿರ್ಧಾರ ಕೈಗೊಂಡಿರುವುದರಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂಲಸೌಕರ್ಯ ವಲಯದ ₹1.62 ಲಕ್ಷ ಕೋಟಿ ಮೌಲ್ಯದ ಆಸ್ತಿ ನಗದೀಕರಣ: ಕೇಂದ್ರ ಸರ್ಕಾರ
ವಿಐಎಸ್‌ಎಲ್ ಮೂಲಕ ರಕ್ಷಣಾ ಕ್ಷೇತ್ರ, ಪರಮಾಣು ವಲಯ, ಆಟೋಮೊಬೈಲ್ ಹಾಗೂ ರೈಲ್ವೆ ಉಪಕರಣಗಳಿಗೆ ಪೂರಕ ಉತ್ಪನ್ನಗಳನ್ನು ಪೂರೈಕೆ ಮಾಡಬಹುದಾಗಿದೆ. ಹೀಗಾಗಿ ಈ ಕಾರ್ಖಾನೆಯನ್ನು ಮುಚ್ಚುವ ಪ್ರಸ್ತಾವನೆಯನ್ನು ಕೈ ಬಿಟ್ಟು, ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಉಕ್ಕು ಸಚಿವಾಲಯ ಹಾಗೂ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳಿಗೆ ನಿರ್ದೇಶನ ನೀಡುಡಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ