ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಭಾ.ಮಾ.ಹರೀಶ್‌-ಸಾ.ರಾ.ಗೋವಿಂದ್‌ ನಡುವೆ ತೀವ್ರ ಸ್ಪರ್ಧೆ

ವರದಿ: ವಿನೋದ ಶ್ರೀರಾಮಪುರ

ಬೆಂಗಳೂರು: ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲ ಚುನಾವಣೆ ನಡೆಯದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 2022-2023ನೇ ಸಾಲಿಗೆ ಆಡಳಿತ ಮಂಡಳಿಗೆ ನಾಳೆ (ಮೇ 28) ಚುನಾವಣೆ ನಡೆಯುತ್ತಿದೆ. ಈ ಬಾರಿಯ ಚುನಾವಣೆಗೆ ನಿರ್ಮಾಪಕ ಭಾ.ಮಾ.ಹರೀಶ್ ಮತ್ತು ನಿರ್ಮಾಪಕ ಸಾ.ರಾ. ಗೋವಿಂದ್ ತಂಡದ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಈ ಎರಡೂ ತಂಡದವರು ಈಗಾಗಲೇ ಹಲವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆಯು ನಿಗದಿತ ಸಮಯದಲ್ಲಿ ನಡೆಯಲಿಲ್ಲ. ಒಂದು ಕಡೆ ಕೋವಿಡ್‌ ನಿಯಮವಳಿಗಳು ಮತ್ತೊಂದು ಕಡೆ ಹಾಲಿ ಪದಾಧಿಕಾರಿಗಳು ಹಲವು ನೆಪಗಳನ್ನು ಒಡ್ಡಿ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸುತ್ತಿದ್ದರು.  ಚುನಾವಣೆ ನಡೆಸಲೇ ಬೇಕೆಂದು ಹಾಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ದೂರು ಸಹ ದಾಖಲಾಗಿದ್ದವು.

ಇದನ್ನು ಓದಿ: ಏ.15ರ ಒಳಗೆ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಬೇಕು: ಸಹಕಾರಿ ಇಲಾಖೆ ಆದೇಶ

ಸಾ.ರಾ.ಗೋವಿಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಅವರ ತಂಡದೊಂದಿಗೆ ಚಿತ್ರಲೋಕ ವೀರೇಶ್ ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ, ಕರಿಸುಬ್ಬು (ವಿ.ಸುಬ್ರಮಣಿ) ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ವಿತರಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಎಸ್.ಜ್ಞಾನೇಶ್ವರ ಐತಾಳ್, ಪ್ರದರ್ಶಕರ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಪಿ.ಕುಮಾರ್ ಸ್ಪರ್ಧಿಸಿದ್ದಾರೆ.

ಕೆ.ಸಿ.ಎನ್. ಕುಮಾರ್ (ಎಂ.ಎನ್.ಕುಮಾರ್) ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ, ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಲ್‌.ಸಿ.ಕುಶಾಲ್ ಹಾಗೂ ಖಜಾಂಚಿ ಸ್ಥಾನಕ್ಕೆ ಬಿ.ಕೆ.ಜಯಸಿಂಹ ಮುಸರಿ ಸ್ಪರ್ಧೆಯಲ್ಲಿದ್ದಾರೆ.

ಇದನ್ನು ಓದಿ: ಮಾರ್ಚ್‌ 3ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ

ನಿರ್ಮಾಪಕ ಭಾ.ಮಾ. ಹರೀಶ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಅವರ ತಂಡದೊಂದಿಗೆ, ನಿರ್ಮಾಪಕ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ಜೈ ಜಗದೀಶ್‌, ವಿತರಕ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್‌ ಹೆಚ್‌.ಸಿ., ಪ್ರದರ್ಶಕರ ಉಪಾಧ್ಯಕ್ಷ ಸ್ಥಾನಕ್ಕೆ ರಂಗಪ್ಪ ಕೆ.ಓ. ಪ್ರದರ್ಶಕ ವಲಯ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಹನುಂತರಾಯ ವಿ., ಖಜಾಂಚಿ ಸ್ಥಾನಕ್ಕೆ ಸಿದ್ಧರಾಜು ಟಿ ಪಿ. ಸ್ಪರ್ಧಿಸಿದ್ದಾರೆ.

ಸ್ಪರ್ಧೆಯಲ್ಲಿರುವ ಇತರೆ ಅಭ್ಯರ್ಥಿಗಳ ವಿವರ ಹೀಗವೆ;

ನಿರ್ಮಾಪಕ ವಲಯ ಗೌರವ ಕಾರ್ಯದರ್ಶಿ ರಾಜೇಶ್‌ ಬ್ರಹ್ಮಾವರ್‌, ಸುಂದರ್‌ರಾಜನ್‌ ಎಂ ಕೆ., ಗೌರವ ಕಾರ್ಯದರ್ಶಿ ವಿತರಕ ವಲಯ ಪಾರ್ಥಸಾರಥಿ ಕೆ., ವೆಂಕಟೇಶ್‌ ಜಿ., ಸ್ಪರ್ಧೆಯಲ್ಲಿದ್ದಾರೆ.

ಉಳಿದಂತೆ ಕಾರ್ಯಕಾರಿ ಸಮಿತಿ ನಿರ್ಮಾಪಕರ ವಲಯದ ಸದಸ್ಯರಾಗಿ 12 ಮಂದಿಯನ್ನು ಚುನಾಯಿಸಬೇಕಿದ್ದು, ಸ್ಪರ್ಧೆಯಲ್ಲಿ 28 ಮಂದಿ ಕಣದಲ್ಲಿದ್ದಾರೆ. ಕಾರ್ಯಕಾರಿ ಸಮಿತಿ ವಿತರಕ ವಲಯಕ್ಕೆ 26 ಮಂದಿ ಕಣದಲ್ಲಿದ್ದು 13 ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ.

ಇನ್ನಿತರೆ ವಿವಿಧ ವಿಭಾಗಗಳಿಗೆ ಕೆಲವರು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನೂ ಕೆಲವು ಸ್ಪರ್ಧೆಯಲ್ಲಿದ್ದಾರೆ.

ಇವಿಎಂ ಬದಲಾಗಿ ಮತಪತ್ರ ಬಳಕೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಈ ಬಾರಿ ವಿದ್ಯುನ್ಮಾನ ಮತಯಂತ್ರಗಳ ಬದಲಾಗಿ ಮುದ್ರಿತ ಮತಪತ್ರವನ್ನು ಬಳಕೆ ಮಾಡಲಾಗುತ್ತಿದೆ. ಚುನಾವಣೆಗೆ ಅಗತ್ಯವಿರುವ ವಿದ್ಯುನ್ಮಾನ ಮತಯಂತ್ರಗಳನ್ನು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌(ಬಿಇಎಲ್‌) ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮತಪೆಟ್ಟಿಗೆಯನ್ನು ಬಳಕೆ ಮಾಡಲಾಗುತ್ತಿದೆ.

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಮುಖ್ಯಸ್ಥರೂ ಆಗಿರುವ ಮುಖ್ಯ ಚುನಾವಣಾ ಅಧಿಕಾರಿ ಥಾಮಸ್ ಡಿಸೋಜಾ ಅವರಿಗೆ ಕೆಲ ಅಭ್ಯರ್ಥಿಗಳು ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಬೇಕೆಂದು ವಿನಂತಿಸಿಕೊಂಡಿದ್ದರು.

ಇದನ್ನು ಓದಿ: ಚಲನಚಿತ್ರ ಕಾರ್ಮಿಕರಿಗೆ ಕೋವಿಡ್ ಲಸಿಕೆ: ಅಭಿಯಾನಕ್ಕೆ ಚಾಲನೆ

ಡಿಸೋಜಾ ಅವರು, ನಾವು ಅನುಮೋದಿತ ವಿದ್ಯುನ್ಮಾನ ಮತಯಂತ್ರ ಅಥವಾ ಮತಪೆಟ್ಟಿಗೆಯನ್ನು ಬಳಸಬೇಕೆಂದು ಬೈಲಾದಲ್ಲಿ ಹೇಳಲಾಗಿದೆ. ಬಿಇಎಲ್‌ ವಿದ್ಯುನ್ಮಾನ ಮತಯಂತ್ರಗಳನ್ನು ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚುನಾವಣೆಗೆ ಮತಪತ್ರಗಳನ್ನು ಬಳಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ ಅವರು, ಮತಪೆಟ್ಟಿಗೆ ಬಳಕೆಯಿಂದ ಸ್ವಲ್ಪ ಅನಾನುಕೂಲತೆಯಾಗಬಹುದು. ಆದರೆ, ನಾವು ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಒಟ್ಟಾರೆ, 1,290 ನಿರ್ಮಾಪಕರು, 412 ವಿತರಕರು ಮತ್ತು 187 ಪ್ರದರ್ಶಕರು ಸೇರಿದಂತೆ ಒಟ್ಟು 1,800 ಜನರು ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲು ಮತ ಚಲಾಯಿಸಲಿದ್ದಾರೆ. ನಾಳೆ(ಮೇ 27) ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತ ಎಣಿಕೆ ತಕ್ಷಣವೇ ಆರಂಭವಾಗಲಿದೆ. ಮತ ಎಣಿಕೆಗೆ ಹೆಚ್ಚುವರಿ ಜನರನ್ನು ನೇಮಿಸುತ್ತಿದ್ದೇವೆ ಎಂದು ಡಿಸೋಜಾ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *