ಬಿಜಿವಿಎಸ್‌ ವತಿಯಿಂದ ಪ್ಲಾಸ್ಟಿಕ್‌ ಕಸ ಸಂಗ್ರಹ-ಪರಿಸರ ಇಟ್ಟಿಗೆ ನಿರ್ಮಾಣ ಚಟುವಟಿಕೆ

ಹಾಸನ: ನಿಟ್ಟೂರಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್‌) ಹಾಸನ ತಾಲ್ಲೂಕು, ನಿಟ್ಟೂರು ಗ್ರಾಮ ಪಂಚಾಯತಿ, ಸರ್ಕಾರಿ ಪ್ರೌಢಶಾಲೆ, ಜಿಪಿಎಲ್‌ಎಫ್ ತಾಲ್ಲೂಕು ಪಂಚಾಯತಿಗಳ ಸಹಯೋಗದಲ್ಲಿ ʻʻಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನʼʼ  ಜಾಗೃತಿ ಜಾಥಾ ಹಾಗೂ ಪ್ಲಾಸ್ಟಿಕ್‌ ಕಸ ಸಂಗ್ರಹ ಮತ್ತು ಪರಿಸರ ಇಟ್ಟಿಗೆ ನಿರ್ಮಿಸುವ ವಿನೂತನ ಚಟುವಟಿಕೆ ನಡೆಸಲಾಯಿತು.

ಜಾಥಾದ ನೇತೃತ್ವವನ್ನು ನಿಟ್ಟೂರು ಆರೋಗ್ಯಾಧಿಕಾರಿ ಹಾಗೂ ಬಿಜಿವಿಎಸ್ ಜಿಲ್ಲಾ ಉಪಾದ್ಯಕ್ಷ ಡಾ. ಮಂಜುನಾಥ್, ಬಿಜಿವಿಎಸ್ ಹಾಸನ ತಾಲ್ಲೂಕು ಅಧ್ಯಕ್ಷೆ ರಾಧಾ. ಆರ್. ಹಾಗು ನಿಟ್ಟೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶಪ್ಪ, ಇಕೋ ಕ್ಲಬ್ ಸಂಚಾಲಕ ಪುರುಶೋತ್ತಮ್ ಹಾಗೂ ಟಿ.ಪಿ.ಎಂ. ವೇಣುಗೋಪಾಲ್ ವಹಿಸಿದ್ದರು.

ಇದನ್ನು ಓದಿ: ʻಪ್ಲಾಸ್ಟಿಕ್ ಬಂಧನ-ಪರಿಸರ ಸ್ಪಂದನ ಜಾಗೃತಿ ಜಾಥಾʼ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ

ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಅವರು ಬಾಟಲಿಗೆ ಪ್ಲಾಸ್ಟಿಕ್ ತುಂಬುವ ಮೂಲಕ‌ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕಿ ಜ್ಯೋತಿ, ಭೂಗ್ರಹ ಪ್ಲಾಸ್ಟಿಕ್ ಮಾಲಿನ್ಯದಿಂದ ತತ್ತರಗೊಂಡಿದೆ ಮತ್ತದು ಭೂಮಿಯ ಫಲವತ್ತತೆ ಹಾಳು ಮಾಡಿ ರೋಗರೂಜಿನಗಳಿಗೆ ಕಾರಣವಾಗಿದೆ ಪ್ಲಾಸ್ಟಿಕ್ ಮಾಲಿನ್ಯದಿಂದ ಮುಕ್ತಿ ಹೊಂದಲು ಒಂದೇ ಮಾರ್ಗ ಅದು ಜನಜಾಗೃತಿ ಮತ್ತು ಮಿತಬಳಕೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ನಿಟ್ಟೂರು ವೈದ್ಯಾಧಿಕಾರಿ ಹಾಗೂ ಜಾಥಾ ಸಂಚಾಲಕ ಡಾ. ಮಂಜುನಾಥ್, ಕನಿಷ್ಟ ಪ್ರಜ್ಞೆ, ಒಂದಿಷ್ಟು ಬದ್ಧತೆ ಮತ್ತು ಸಾಮೂಹಿಕ ಕೆಲಸದಿಂದ ಎಂತಹುದೇ ಕಷ್ಟಗಳನ್ನು ಎದುರಿಸಬಹುದು. ಹಾಗೆಯೇ ನಮ್ಮ ಮನೆಗೆ ಬರುವ ಕಸವನ್ನು ಮನೆಯಲ್ಲೇ ರಸ ಮಾಡಿಕೊಳ್ಳುವ ಕನಿಷ್ಠ ಜ್ಞಾನ ಬೆಳೆಸಿಕೊಂಡರೆ ವೈಯುಕ್ತಿಕವಾಗಿಯೂ ಅನುಕೂಲ ಹಾಗೂ ದೇಶಕ್ಕೂ ಅನುಕೂಲವಾಗುವುದು ಎಂದು ತಿಳಿಹೇಳುವ ಸರಳ ಪ್ರಾಯೋಗಿಕ ಚಟುವಟಿಕೆ ನಡೆಸಿಕೊಟ್ಟರು. ಅಲ್ಲದೆ, ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾದ್ಯಂತ ಪ್ರತಿ ಗ್ರಾಮ ಪಂಚಾಯತಿ ಹಾಗೂ ಶಾಲೆಗಳ ಮೂಲಕ ಇದನ್ನು ಜನರ ಹವ್ಯಾಸವಾಗಿ ರೂಢಿಸಿಕೊಳ್ಳಲು ಜಾಗೃತಿ ಮೂಡಿಸುತ್ತಿರುವು ಶ್ಲಾಘನೀಯ ಎಂದು ಪ್ರಶಂಸಿದರು.

ಇದನ್ನು ಓದಿ: ದೇಶದಲ್ಲಿ ವಿಜ್ಞಾನಕ್ಕಿಂತ ಮೌಢ್ಯಾಚರಣೆ ಹೆಚ್ಚು ಬೆಳೆಯುತ್ತಿವೆ: ಪ್ರೊ.ಪಾಲಹಳ್ಳಿ ವಿಶ್ವನಾಥ್‌

ಶಾಲೆಯ 150ಕ್ಕೂ ಹೆಚ್ಚು ಮಕ್ಕಳು, ಶಾಲಾ ಶಿಕ್ಷಕರು, ಪಂಚಾಯಿತಿ ಸದಸ್ಯರು, ಪಿ.ಡಿ.ಓ., ಕೃಷಿಸಖಿ, ಪಶುಸಖಿ ಹಾಗೂ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಊರಿನ ಎಲ್ಲಾ ಬೀದಿಗಳಲ್ಲಿ ಜಾಥಾ ಹೊರಟು ಪ್ಲಾಸ್ಟಿಕ್ ಮಾಲಿನ್ಯದ ಅಪಾಯ ತಿಳಿಸಿ ಪ್ಲಾಸ್ಟಿಕ್ ಸಂಗ್ರಹಿಸಿದರು.

ಬಿಜಿವಿಎಸ್ ಜಿಲ್ಲಾ ಸಹ ಕಾರ್ಯದರ್ಶಿ ನಾಗೇಶ್ ಹಾಗೂ ಬಿಜಿವಿಎಸ್ ಹಾಸನ ತಾಲ್ಲೂಕು ಸಮಿತಿ ಸದಸ್ಯೆ ಶಾರದಾ ಪ್ರತಿ ಮನೆಯ ಮಹಿಳೆಯರಿಗೆ ಹಾಗೂ ಅಂಗಡಿಯವರಿಗೆ ಪ್ಲಾಸ್ಟಿಕ್ ಬಂಧನ ಮಾಡಿಸಿ ಅದರ ಉಪಯೋಗ ಹಾಗೂ ಅಪಾಯಗಳ ಮಾಹಿತಿ ಜಾಥಾದ ಉದ್ದಕ್ಕೂ ನೀಡಿದರು.

ಸುಮಾರು ಎರಡು ಗಂಟೆ ಸುತ್ತಿದ ಜಾಥಾ ಅಂತಿಮವಾಗಿ ವಾರದ ಸಂತೆ ನಡೆಯುವ ಸ್ಥಳದ ಪಕ್ಕದ ಮೈದಾನದಲ್ಲಿ ಆಯೋಜಿಸಲಾದ ವೇದಿಕೆ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಕಸವನ್ನು ನವೀಕರಣಕ್ಕೊಳಪಡುವ ಮತ್ತು ನವೀಕರಣಗೊಳ್ಳದ ಪ್ಲಾಸ್ಟಿಕ್‌ ಗಳಾಗಿ ವಿಂಗಡಿಸಿ ನವೀಕರಣಗೊಳ್ಳದ ಪ್ಲಾಸ್ಟಿಕ್ ಅನ್ನು ಬಾಟಲಿನಲ್ಲಿ ಬಂಧಿಸಲಾಯಿತು. ಜಾಥಾದಲ್ಲಿ ಕಲೆ ಹಾಕಿದ್ದ ಪ್ಲಾಸ್ಟಿಕ್‌ ವಸ್ತುಗಳನ್ನು ಬಾಟಲಿಗೆ ತುಂಬಿ ಇಟ್ಟಿಗೆ ತಯಾರಿಸುವುದು ಹೇಗೆ ಎಂಬುದನ್ನು ನೆರೆದಿದ್ದ ಮಹಿಳೆಯರು, ಗ್ರಾಪಂಚಾಯತಿ ಸದಸ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಮಾಡಿದರು. ಅವರೇ ಬಾಟಲಿಗೆ ಕವರ್ ತುಂಬಿಸುವ ಮೂಲಕ ಇಂದಿನ ಕಾರ್ಯಕ್ರಮವನ್ನು ಯಶಸ್ಸು ಗೊಳಿಸಿದರು. ಈ ಪ್ರಕ್ರಿಯೆಯಲ್ಲಿ ಸುಮಾರು 3 ಚೀಲ ಪ್ಲಾಸ್ಟಿಕ್ ಬಾಟಲ್ ಇಟ್ಟಿಗೆ ತಯಾರಿಸಲಾಯಿತು ಹಾಗೂ ಮೂರು 2 ಚೀಲ ನವೀಕರಿಸಬಲ್ಲ ಪ್ಲಾಸ್ಟಿಕ್ ಸಂಗ್ರಹಿಸಲಾಯಿತು.

ಸಮಾರೋಪ ನುಡಿಗಳನ್ನಾಡಿದ ಬಿಜಿವಿಎಸ್ ಹಾಸನ ತಾಲ್ಲೂಕು ಅಧ್ಯಕ್ಷೆ ರಾಧಾ, ಪ್ಲಾಸ್ಟಿಕ್‌ ನಿಂದಾಗುವ ಹಾನಿಯ ಬಗ್ಗೆ ಸವಿವರವಾಗಿ ತಿಳಿಸಿ ನಿಮ್ಮ ನಿಮ್ಮ ಮನೆಯ ಪ್ಲಾಸ್ಟಿಕ್ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡಲು ತಿಳಿಯದಿದ್ದರೆ ಚೀಲಕ್ಕೆ ತುಂಬಿ ಅದನ್ನು ಪಂಚಾಯಿತಿ ಕಚೇರಿಗೆ ತಲುಪಿಸಿ ಎಂದು ತಿಳಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಿ.ಡಿ.ಓ. ಮಲ್ಲೇಶಪ್ಪ ಸ್ವಚ್ಛತೆಯೇ ಮಾಲಿನ್ಯಕ್ಕೆ ಪರಿಹಾರ ವಿಶೇಶವಾಗಿ, ಪ್ಲಾಸ್ಟಿಕ್ ಅನ್ನು ಕಸದ ಜೊತೆ ಬೆರೆಸದೆ ಪ್ರತ್ಯೇಕವಾಗಿ ನೀಡಿದರೆ ಅದನ್ನು ಮರುಬಳಕೆ ಮಾಡುವತ್ತ ಪಂಚಾಯತಿ ಗಮನಹರಿಸಲಿದೆ ಎಂದರು.

ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಶಿವಪ್ಪನಾಯಕ ನಿಜಕ್ಕೂ ಪ್ಲಾಸ್ಟಿಕ್ ಚೂರುಗಳನ್ನು ಬೀದಿಗೆಸೆಯದೆ ಖಾಲಿ ಬಾಟಲಿನಲ್ಲಿ ತುಂಬುವುದು ಚಂದದ ಕೆಲಸ ಮಾತ್ರವಲ್ಲ ಅದನ್ನು ಇಟ್ಟಿಗೆಯಂತೆ ಬಳಸುವುದು ಮಾಲಿನ್ಯ ನಿಯಂತ್ರಣದ ಜೊತೆ ಮನೆಯಂಗಳ ಅಂದಗೊಳಿಸುವ ಕ್ರಿಯೆ ಬಹಳ ಅನಂದದಾಯಕವಾದದ್ದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾದ್ಯಕ್ಷ ನಟರಾಜ್, ಕಾರ್ಯದರ್ಶಿ ಕುಮಾರ್, ಎನ್.ಆರ್.ಎಲ್.ಎಂ. ನ ಮುನಿಸ್ವಾಮಿ, ಎಂ.ಬಿ.ಕೆ. ರೂಪ ಶಿಕ್ಷಕರುಗಳಾದ ಮಮತ, ದಾನೇಶ್, ಕವಿತ ಹಾಗೂ ಸಾರ್ವಜನಿಕರು ಇದ್ದರು.

ಶಾಲೆಯ ಮಕ್ಕಳು ಪರಿಸರ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಿದರು, ಮೊದಲಿಗೆ ಇಕೋಕ್ಲಬ್ ಸಂಚಾಲಕ ಪುರುಷೋತ್ತಮ್ ಸ್ವಾಗತಿಸಿದರು, ಕಡೆಯದಾಗಿ ಬಿಜಿವಿಎಸ್ ಜಯನಗರ ಘಟಕಾಧ್ಯಕ್ಷೆ ಶಾರದಾ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ನಾಗೇಶ್ ಹಾಗೂ ಎನ್.ಆರ್.ಎಲ್.ಎಮ್ ನ ಟಿಪಿಎಮ್ ವೇಣುಗೋಪಾಲ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *