ಜೂನ್ ತಿಂಗಳ ವೇಳೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ನಡೆದ ಖಾಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ‘ಭಾರತ ಸರ್ಕಾರದ ಕೈವಾಡ’ವಿದೆ ಎಂದು ಎಂದು ದೇಶದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸೋಮವಾರ ಘೋಷಿಸಿದ್ದರು. ಇದರ ನಂತರ ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಟ್ರುಡೊ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ “ಅಸಂಬದ್ಧ ಮತ್ತು ದುರುದ್ಧೇಶಪ್ರೇರಿತ” ಎಂದು ಕರೆದಿದೆ.
ಪ್ರತ್ಯೇಕ ದೇಶ ಬಯಸುವ ”ಖಾಲಿಸ್ತಾನಿ”ಗಳನ್ನು ಕೆನಡಾ ದೇಶವು ದಮನ ಮಾಡುತ್ತಿಲ್ಲ ಎಂದು ಭಾರತ ಈ ಹಿಂದಿನಿಂದಲೂ ಕೆನಡಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೆ ಇದೆ. ಇದೀಗ ಹರ್ದೀಪ್ ವಿಚಾರವಾಗಿ ಪ್ರಾರಂಭವಾದ ತಿಕ್ಕಾಟದಿಂದಾಗಿ, ಉಭಯ ದೇಶಗಳಲ್ಲಿ ಇರುವ ರಾಜತಾಂತ್ರಿಕರನ್ನು ಪರಸ್ಪರ ಹೊರಹಾಕಲಾಗಿದೆ. ಜೊತೆಗೆ ಗುರುವಾರದಂದು ಭಾರತವು ಭದ್ರತಾ ಬೆದರಿಕೆ ಉಲ್ಲೇಖಿಸಿ ಕೆನಡಾದ ನಾಗರಿಕರಿಗೆ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು.
ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ
ಹರ್ದೀಪ್ ಸಿಂಗ್ ನಿಜ್ಜರ್ ಯಾರು?
ಹರ್ದೀಪ್ ಸಿಂಗ್ ನಿಜ್ಜರ್ ಭಾರತದ ಪಂಜಾಬ್ ರಾಜ್ಯದ ಭಾಗಗಳನ್ನು ‘ಖಾಲಿಸ್ತಾನ್’ ಎಂಬ ಬೇರೆಯೆ ಸಿಖ್ಖರ ದೇಶವನ್ನು ರಚನೆ ಮಾಡಬೇಕು ಎಂದು ಪ್ರತಿಪಾದಿಸುವವರ ನಾಯಕನಾಗಿದ್ದು, ಅದಕ್ಕಾಗಿ ನಿರಂತರ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದನು. ಹರ್ದೀಪ್ ನಿಜ್ಜರ್‌ನನ್ನು ಈ ವರ್ಷದ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಸಿಖ್ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಆತನನ್ನು 2020ರ ಜುಲೈ ತಿಂಗಳಲ್ಲಿ ಭಾರತವು ‘ಭಯೋತ್ಪಾದಕ’ ಎಂದು ಘೋಷಿಸಿತ್ತು, ಮತ್ತು ಆತನಿಗಾಗಿ ಬಲೆ ಬೀಸಿತ್ತು.
ಹರ್ದೀಪ್ ನಿಜ್ಜರ್‌ಗೆ ಜೀವ ಬೆದರಿಕೆ ಇದೆ ಎಂದು ಕೆನಾಡದ ಗೂಢಚಾರಿಕೆ ಸಂಸ್ಥೆ ಈ ಹಿಂದೆಯೆ ಎಚ್ಚರಿಕೆ ನೀಡಿತ್ತು ಎಂದು ಕೆನಡಾದ ಮೂಲದ ”ವಿಶ್ವ ಸಿಖ್ ಸಂಘಟನೆ” ಹೇಳಿದ್ದು, ಆತನನ್ನು “ಉದ್ದೇಶಿತ ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ” ಎಂದು ಆರೋಪಿಸಿದೆ.
ಸುಮಾರು 58% ಸಿಖ್ ಮತ್ತು 39% ಹಿಂದೂಗಳಿರುವ ಪಂಜಾಬ್ 1980 ರ ದಶಕ ಮತ್ತು 1990 ರ ದಶಕದ ಆರಂಭದಲ್ಲಿ ಹಿಂಸಾತ್ಮಕ ಖಲಿಸ್ತಾನ್ ಪ್ರತ್ಯೇಕತಾವಾದಿ ಚಳುವಳಿಯಿಂದ ನಲುಗಿ ಹೋಗಿತ್ತು. ಈ ವೇಳೆ ಸಾವಿರಾರು ಜನರು ಸಾವಿಗೀಡಾಗಿದ್ದರು. ಆದರೆ ಈಗ ಖಾಲಿಸ್ತಾನ ಬೆಂಬಲಿಗರಲ್ಲಿ ಹೆಚ್ಚಿನವರು ವಿದೇಶದಲ್ಲಿ ನೆಲೆಸಿದ್ದು, ತಮ್ಮ ಹೋರಾಟವನ್ನು ವಿದೇಶದಲ್ಲಿದ್ದುಕೊಂಡು ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಂಸತ್ತಿನಲ್ಲೆ ದ್ವೇಷ ಭಾಷಣ! | ಮುಸ್ಲಿಂ ಸಂಸದರನ್ನು ‘ಭಯೋತ್ಪಾದಕ’ ಎಂದ ಬಿಜೆಪಿ ಸಂಸದ
ಕೆನಡಾದ ಸಿಖ್ ಸಮುದಾಯದ ಮೇಲೆ ಭಾರತ ಏಕೆ ಕೇಂದ್ರೀಕೃತವಾಗಿದೆ?
ಕೆನಡಾವು ಭಾರತದ ಹೊರಗೆ ವಿಶ್ವದ ಅತಿದೊಡ್ಡ ಸಿಖ್ ಸಮುದಾಯದ ನೆಲೆಯಾಗಿದೆ. ಕೆನಡಾದ 4 ಕೋಟಿ ಜನಸಂಖ್ಯೆಯಲ್ಲಿ ಸುಮಾರು 14 ಲಕ್ಷ ಜನರು ಸಿಖ್ ಸಮುದಾಯಕ್ಕೆ ಸೇರಿದ್ದಾರೆ. 2021 ರ ಜನಗಣತಿಯಲ್ಲಿ ಸುಮಾರು 7,70,000 ಜನರು ಸಿಖ್ ಧರ್ಮವನ್ನು ತಮ್ಮ ಧರ್ಮವೆಂದು ಅಲ್ಲಿ ದಾಖಲಿಸಿದ್ದಾರೆ. ಪಂಜಾಬ್ ಬಿಟ್ಟರೆ ಅತೀ ಹೆಚ್ಚು ಸಿಖ್ಖರು ಕೆನಡಾದಲ್ಲಿ ನೆಲೆಸಿದ್ದಾರೆ.
ಭಾರತ ವಿರೋಧಿ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವ ಸಿಖ್ ತೀವ್ರವಾದಿಗಳಿಗೆ ಕೆನಡಾ ತಾಣವಾಗಿದೆ ಎಂದು ಭಾರತವು ಅಲ್ಲಿನ ಸರ್ಕಾರಗಳಿಗೆ ಆಗಾಗ್ಗೆ ದೂರು ನೀಡುತ್ತಲೆ ಬಂದಿದೆ. ಕಳೆದ ಜೂನ್‌ನಲ್ಲಿ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯನ್ನು ಸಿಖ್ ಪ್ರತ್ಯೇಕವಾದಿಗಳು ವೈಭವೀಕರಿಸಿದ್ದು, ಅವರನ್ನು ಹತ್ಯೆ ಮಾಡಿದ ಅಂಗರಕ್ಷಕರ ಚಿತ್ರಗಳನ್ನು ಮೆರವಣಿಗೆ ಮಾಡಲು ಅವಕಾಶ ನೀಡಲಾಗಿತ್ತು.
ಕೆನಡಾದ ಈ ನಡೆಯನ್ನು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಖಂಡಿಸಿದ್ದರು. ಜೈಶಂಕರ್ ಎಚ್ಚರಿಕೆ ನೀಡಿದ ಹತ್ತು ದಿನಗಳ ನಂತರ, ಬ್ರಿಟೀಷ್ ಕೊಲಂಬಿಯಾದ ವ್ಯಾಂಕೋವರ್‌ನ ಸಿಖ್ ಗುರುದ್ವಾರದ ಮುಂದೆ ನಿಜ್ಜರ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
2018 ರಲ್ಲಿ, ಭಾರತದಲ್ಲಿ ಪ್ರತ್ಯೇಕತಾವಾದಿ ಚಳುವಳಿಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವ ಯಾರನ್ನೂ ಕೆನಡಾ ಬೆಂಬಲಿಸುವುದಿಲ್ಲ ಎಂದು ಟ್ರೂಡೊ ಭಾರತಕ್ಕೆ ಭರವಸೆ ನೀಡಿದ್ದರು. ಆದರೆ ವಾಕ್ ಸ್ವಾತಂತ್ರ್ಯ, ಪ್ರತಿಭಟನೆ ಮತ್ತು ಪ್ರತಿಭಟನಾಕಾರರ ಸಭೆಯ ಹಕ್ಕನ್ನು ಗೌರವಿಸುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಸನಾತನ ಧರ್ಮದ ಕುರಿತ ಹೇಳಿಕೆ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ಗೆ ಸುಪ್ರೀಂಕೋರ್ಟ್ ನೋಟಿಸ್
ಕೆನಡಾ-ಭಾರತ ಸಂಬಂಧ ಹೇಗಿದೆ?
ಈ ತಿಂಗಳ ಆರಂಭದಲ್ಲಿ ಹೊಸದಿಲ್ಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಇತರ ಪಾಶ್ಚಿಮಾತ್ಯ ನಾಯಕರಂತೆ ಪ್ರಧಾನಿ ನರೇಂದ್ರ ಅವರೊಂದಿಗೆ ಔಪಚಾರಿಕ ದ್ವಿಪಕ್ಷೀಯ ಮಾತುಕತೆ ನಡೆಸಿರಲಿಲ್ಲ. ಅವರ ಈ ನಡೆಯು ಕೆನಡಾ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಡುತ್ತಿವೆ ಎಂಬುದನ್ನು ಸ್ಪಷ್ಟಪಡಿಸಿತ್ತು.
2015 ರಲ್ಲಿ ಟ್ರೂಡೊ ಅಧಿಕಾರಕ್ಕೆ ಬಂದಾಗ ಮತ್ತು ಅವರ 30 ಸದಸ್ಯರ ಕ್ಯಾಬಿನೆಟ್‌ಗೆ ನಾಲ್ವರು ಸಿಖ್ ಮಂತ್ರಿಗಳನ್ನು ನೇಮಿಸಿದ್ದರು. ಇದರಿಂದಾಗಿ ಭಾರತ ಮತ್ತು ಕೆನಡಾದ ಅಧಿಕಾರಿಗಳ ನಡುವಿನ ಉದ್ವಿಗ್ನತೆಗಳು ಮತ್ತಷ್ಟು ಹೆಚ್ಚಾಗಿದ್ದವು. ಅದಾಗ್ಯೂ, ಚೀನಾವನ್ನು ಹಿಮ್ಮೆಟ್ಟಿಸುವುದಕ್ಕೆ ಕೆನಡಾ ಮತ್ತು ಭಾರತ ತಮ್ಮ ಬಾಂಧವ್ಯವನ್ನು ಹೆಚ್ಚಿಸಲು ಪ್ರಾರಂಭಿಸಿದ್ದವು. ಆದರೆ ಇದೀಗ ಹರ್ದೀಪ್ ನಿಜ್ಜರ್ ವಿಚಾರದಲ್ಲಿ ಈ ಸಂಬಂಧಗಳು ಹದಗೆಡುತ್ತಿವೆ.
2023 ರ ಅಂತ್ಯದ ವೇಳೆಗೆ ವ್ಯಾಪಾರ ಒಪ್ಪಂದದ ರೂಪುರೇಷೆಗಳನ್ನು ಒಪ್ಪಿಕೊಳ್ಳಬಹುದು ಎಂದು ಈ ವರ್ಷದ ಆರಂಭದಲ್ಲಿ ಹೇಳಿದ್ದ ಉಭಯ ದೇಶಗಳು ಈಗ ಒಪ್ಪಂದದ ಕುರಿತ ಮಾತುಕತೆಗಳನ್ನು ಸ್ಥಗಿತಗೊಳಿಸಿವೆ. ಒಪ್ಪಂದ ಸ್ಥಗಿತಗೊಳಿಸುವ ವಿಚಾರವಾಗಿ ಕೆನಡಾ ಕೆಲವು ವಿವರಗಳನ್ನು ನೀಡಿದರೆ, ಭಾರತವು ಕೆಲವು ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದೆ.
ಇದನ್ನೂ ಓದಿ: ಪಾಣಿಪತ್:ಕುಟುಂಬ ಸದಸ್ಯರ ಎದುರೇ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ
ವ್ಯಾಪಾರದ ಪ್ರಮುಖ ವಸ್ತುಗಳು ಯಾವುವು?
ಭಾರತವು ಕೆನಡಾದ ಹತ್ತನೇ ಅತಿದೊಡ್ಡ ವ್ಯಾಪಾರಿ ಪಾಲುದಾರ ಆಗಿದ್ದು, ವ್ಯಾಪಾರ ಒಪ್ಪಂದದ ಯೋಜನೆಗಳು ಒಂದು ದಶಕದಿಂದ ಚಾಲ್ತಿಯಲ್ಲಿವೆ. ಮತ್ತೊಂದು ಕಡೆ ಕೆನಡಾವು ಭಾರತದ 17 ನೇ ಅತಿದೊಡ್ಡ ವಿದೇಶಿ ಹೂಡಿಕೆದಾರ ದೇಶವಾಗಿದೆ. ವ್ಯಾಪಾದರ ಸ್ಥಿರವಾದ ಬೆಳವಣಿಗೆಯಿಂದಾಗಿ 2022 ರಲ್ಲಿ ಉಭಯ ದೇಶಗಳ ನಡುವೆ 8 ಶತಕೋಟಿ ಡಾಲರ್‌ಗಳ ಸರಕುಗಳ ವ್ಯಾಪಾರ ನಡೆದಿದೆ. ಕೆನಡಾಕ್ಕೆ ಭಾರತದಿಂದ 4 ಶತಕೋಟಿ ಡಾಲರ್ ರಫ್ತುಗಳು ನಡೆದಿದ್ದು, 4 ಶತಕೋಟಿ ಡಾಲರ್ ಮೌಲ್ಯದ ಆಮದು ನಡೆದಿವೆ.
ಕೆನಡಾದಿಂದ ರಸಗೊಬ್ಬರಗಳ ಜೊತೆಗೆ ಕಲ್ಲಿದ್ದಲು, ಕೋಕ್ ಮತ್ತು ಬ್ರಿಕ್ವೆಟ್‌ಗಳಂತಹ ಇಂಧನ ಉತ್ಪನ್ನಗಳನ್ನು ಭಾರತವು ಆಮದು ಮಾಡುತ್ತಿದ್ದು, ಭಾರತವು ಗ್ರಾಹಕ ಸರಕುಗಳು, ಉಡುಪುಗಳು, ಇಂಜಿನಿಯರಿಂಗ್ ಉತ್ಪನ್ನಗಳಾದ ಆಟೋ ಭಾಗಗಳು, ವಿಮಾನ ಉಪಕರಣಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ರಫ್ತು ಮಾಡುತ್ತದೆ.
ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, 2022 ರಲ್ಲಿ ಕೆನಡಾದಿಂದ ಭಾರತಕ್ಕೆ 1 ಬಿಲಿಯನ್ ಡಾಲರ್ ಮೌಲ್ಯದ ಇಂಧನಗಳು ಮತ್ತು ಅದರ ಸಂಬಂಧಿತ ಉತ್ಪನ್ನಗಳನ್ನು ಆಮದು ಮಾಡಲಾಗಿದೆ. ಜೊತೆಗೆ ಸುಮಾರು 748 ಮಿಲಿಯನ್ ಡಾಲರ್ ಮೌಲ್ಯದ ರಸಗೊಬ್ಬರಗಳು ಮತ್ತು ಸುಮಾರು 384 ಮಿಲಿಯನ್ ಡಾರಲ್ ಮೌಲ್ಯದ ಮರದ ತಿರುಳು ಹಾಗೂ ಸಸ್ಯ ನಾರುಗಳನ್ನು ಕೂಡಾ ಆಮದು ಮಾಡಲಾಗಿದೆ.
ಇದನ್ನೂ ಓದಿ: ಮಹಿಳಾ ಮೀಸಲು ಮಸೂದೆ ತಕ್ಷಣ ಜಾರಿಗೊಳಿಸಿ: ರಾಹುಲ್ ಗಾಂಧಿ
ಕಳೆದ ವರ್ಷ ಭಾರತೀಯ ರಫ್ತಿನ ಬಹುಪಾಲು ಔಷಧೀಯ ಉತ್ಪನ್ನಗಳೆ ಹೊಂದಿದೆ. ಸುಮಾರು 418 ಮಿಲಿಯನ್ ಡಾಲರ್ ಮೌಲ್ಯದ ಔಷಧೀಯ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಸುಮಾರು 328 ಮಿಲಿಯನ್ ಡಾಲರ್ ಮೌಲ್ಯದ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ಸುಮಾರು 287 ಮಿಲಿಯನ್ ಡಾಲರ್ ಮೌಲ್ಯದ ಯಂತ್ರೋಪಕರಣಗಳು, ಪರಮಾಣು ರಿಯಾಕ್ಟರ್‌ಗಳು ಮತ್ತು ಬಾಯ್ಲರ್‌ಗಳನ್ನು ರಫ್ತು ಮಾಡಲಾಗಿದೆ. ಭಾರತದ ಔಷಧೀಯ ಮತ್ತು ಸಾಫ್ಟ್‌ವೇರ್ ಕಂಪನಿಗಳು ಕೆನಡಾದ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಿವೆ.
ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಪಾತ್ರವೇನು?
2018 ರಿಂದ ಕೆನಡಾಕ್ಕೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ನೀಡುವ ಅತಿದೊಡ್ಡ ದೇಶವಾಗಿ ಭಾರತ ಹೊಮ್ಮಿದೆ. 2022 ರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯು 47%ಕ್ಕೆ ಏರಿಕೆಯಾಗಿದೆ. 2022ರಲ್ಲಿ ಅಲ್ಲಿ ಸುಮಾರು 3,20,000 ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. ಕೆನಡಾದಲ್ಲಿರುವ ಒಟ್ಟು ವಿದೇಶಿ ವಿದ್ಯಾರ್ಥಿಗಳಲ್ಲಿ 40% ದಷ್ಟು ಪಾಲು ಭಾರತೀಯ ವಿದ್ಯಾರ್ಥಿಗಳದ್ದೆ ಆಗಿದೆ. 2021 ರ ಜನಗಣತಿಯ ಪ್ರಕಾರ, ಹೆಚ್ಚಿನ ಸಂಖ್ಯೆಯ ಸಿಖ್ಖರು ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಭಾರತದಿಂದ ಕೆನಡಾಕ್ಕೆ ವಲಸೆ ಹೋಗಿದ್ದಾರೆ.
2013 ರಿಂದ ಕೆನಡಾಕ್ಕೆ ವಲಸೆ ಹೋಗುವ ಭಾರತೀಯರ ಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷವೊಂದರಲ್ಲೆ 15 ಸಾವಿರಕ್ಕೂ ಹೆಚ್ಚು ಭಾರತೀಯ ಟೆಕ್ ಉದ್ಯೋಗಿಗಳು ಕೆನಡಾಕ್ಕೆ ತೆರಳಿದ್ದಾರೆ. 2022 ರಲ್ಲಿ 1,18,095 ಭಾರತೀಯರು ಕೆನಡಾದಲ್ಲಿ ಖಾಯಂ ನಿವಾಸಿಗಳಾಗಿದ್ದಾರೆ, ಜೊತೆಗೆ ಸುಮಾರು 60 ಸಾವಿರ ಖಾಯಂ ನಿವಾಸಿಗಳು ಕೆನಡಾದ ನಾಗರಿಕರಾಗಿದ್ದಾರೆ. ಅಷ್ಟೆ ಅಲ್ಲದೆ ಈ ವರ್ಷ ಭಾರತದಿಂದ ಕೆನಡಾಕ್ಕೆ ತೆರಳಿರುವ ವಲಸಿಗರ ಸಂಖ್ಯೆ 2 ಲಕ್ಷ ಗಡಿಯನ್ನು ತಲುಪಲಿದೆ.
ವಿಡಿಯೋ ನೋಡಿ: ಕ್ರೀಡಾ ಬದ್ಧತೆ ಮೆರೆದ ಮೊಹಮ್ಮದ್ ಸಿರಾಜ್ Janashakthi Media