ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ಸುಗಳು ಬೆಂಕಿಗಾಹುತಿಯಾಗುತ್ತಿರುವ ಘಟನೆಯಿಂದ ಆತಂಕ್ಕೆ ಒಳಗಾಗಿರುವ ಬಿಎಂಟಿಸಿ ಸಂಸ್ಥೆಯು ಅಶೋಕ್ ಲೈಲ್ಯಾಂಡ್ ಕಂಪನಿಯ 186 ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.
ಕೆಲವೇ ದಿನಗಳಲ್ಲಿ ಮೂರು ಬಿಎಂಟಿಸಿ ಬಸ್‍ಗಳು ಬೆಂಕಿಗೆ ಆಹುತಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.
ಇದನ್ನು ಓದಿ: ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಬಿಎಂಟಿಸಿ ಬಸ್ಸು
ಕಳೆದ ಜನವರಿ 21ರಂದು ಚಾಮರಾಜಪೇಟೆಯ ಮಕ್ಕಳ ಕೂಟದ ಬಳಿ ಒಂದು ಬಸ್ ಹಾಗೂ ಫೆಬ್ರವರಿ 1 ರಂದು ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಪ್ರಯಾಣಿಕರಿದ್ದ ಸಂದರ್ಭದಲ್ಲೇ ಎರಡು ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಗೆ ಆಹುತಿಯಾದ ಬಸ್‌ಗಳೆರಡು ಒಂದೇ ಬ್ಯಾಚ್‍ನಲ್ಲಿ ಖರೀದಿಸಿದ್ದ ಅಶೋಕ್ ಲೆಲ್ಯಾಂಡ್ ಸಂಸ್ಥೆಯ ಬಸ್‍ಗಳಾಗಿದ್ದವು.
ಹೀಗಾಗಿ ಲೈಲ್ಯಾಂಡ್ ಸಂಸ್ಥೆಯ ತಜ್ಞರನ್ನು ಕರೆಸಿ ಲೋಪದೋಷ ಪತ್ತೆ ಹಚ್ಚುವಂತೆ ಸೂಚಿಸಲಾಗಿತ್ತು. ತಜ್ಞರು ಬಿಎಂಟಿಸಿ ಘಟಕಕ್ಕೆ ಭೇಟಿ ನೀಡಿ ಲೋಪದೋಷ ಸರಿಪಡಿಸಿ ಎಲ್ಲಾ ಓಕೆ ಎಂದು ತೆರಳಿದ್ದರು. ಆದರೆ, ತಜ್ಞರು ಬಂದು ಹೋದ ಒಂದು ತಿಂಗಳೊಳಗೆ ಅಂದರೆ ಏಪ್ರಿಲ್ 9ರಂದು ಶೇಷಾದ್ರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ಬಸ್ ಬೆಂಕಿಗೆ ಆಹುತಿಯಾಗಿತ್ತು.
ಇದನ್ನು ಓದಿ: ವಿದ್ಯುತ್ ಚಾಲಿತ ಬಸ್ಸುಗಳನ್ನು ಬಿಎಂಟಿಸಿ ಚಾಲಕರು ಓಡಿಸುವಂತಿಲ್ಲ!
ನಗರದಲ್ಲಿ ಹೆಚ್ಚಿರುವ ತಾಪಮಾನದಿಂದ ಬಸ್‍ಗಳಿಗೆ ಬೆಂಕಿ ಬೀಳುತ್ತಿರಬಹುದೆಂದು ಭಾವಿಸಿದ್ದೇವು. ಆದರೆ, ಒಂದೇ ಬ್ಯಾಚ್‍ನಲ್ಲಿ ಖರೀದಿಸಿದ್ದ ಲೈಲ್ಯಾಂಡ್ ಸಂಸ್ಥೆಯ ಬಸ್‍ಗಳಿಗೆ ಬೆಂಕಿ ಬೀಳುತ್ತಿರುವುದು ಖಾತ್ರಿಯಾಗಿರುವ ಹಿನ್ನಲೆಯಲ್ಲಿ ಲೈಲ್ಯಾಂಡ್ ಬಸ್‍ಗಳ ಸಂಚಾರ ರದ್ದುಗೊಳಿಸಲು ತೀರ್ಮಾನಿಸಲಾಯಿತು ಎಂದು ವೆಂಕಟೇಶ್ ವಿವರಣೆ ನೀಡಿದ್ದಾರೆ.
ಅಶೋಕ್ ಲೈಲ್ಯಾಂಡ್ ಬಸ್ ಸಂಚಾರ ರದ್ದುಗೊಳಿಸಿರುವ ಬಗ್ಗೆ ಎಲ್ಲಾ ಡಿಪೋಗಳಿಗೆ ಮಾಹಿತಿ ನೀಡಲಾಗಿದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಬಸ್ ಸಂಚಾರ ನಡೆಸಿ ಯಾವುದೇ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.