- ರೋಗಿಗಳಿಗೆ ಆಸ್ಪತ್ರೆ ಚಿಕಿತ್ಸೆ ಬೇಡವಾಗಲು ಸರ್ಕಾರದ ದುರಾಡಳಿತವೇ ಕಾರಣ: ಸಿಪಿಎಂ ಟೀಕೆ
ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯು 1.5 ಲಕ್ಷದೆಡೆಗೆ ಮುನ್ನಡೆದಿರುವಾಗ ಹಾಗೂ 39,725 ಸಕ್ರಿಯ ಪ್ರಕರಣಗಳು ಇರುವಾಗ ಕೋವಿಡ್ ಆಸ್ಪತ್ರೆಗಳ 6060 ಹಾಸಿಗೆಗಳು ಖಾಲಿ ಇವೆ ಎಂಬ ವರದಿಯು ರಾಜ್ಯ ಹಾಗೂ ಬೆಂಗಳೂರಿನಲ್ಲಿನ ಆರೋಗ್ಯ ದುಸ್ಥಿತಿಯ ಗಂಭೀರತೆಯ ಪ್ರತೀಕವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ), ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐಎಂ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್ ಮತ್ತು ಸಿಪಿಐಎಂ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ, ರೋಗಿಗಳಿಗೆ ಆಸ್ಪತ್ರೆ ಚಿಕಿತ್ಸೆ ಬೇಡವಾಗಲು ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತವೇ ಕಾರಣವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ. ಒಂದೆಡೆ ಜನತೆಯಲ್ಲಿ ಕೋವಿಡ್ ಸೋಂಕು ತಗಲಿರುವ ಭಯ ಆವರಿಸಿರುವಾಗಲೇ ಇನ್ನೊಂದೆಡೆ ರಾಜ್ಯ ಸರ್ಕಾರದ ದುರಾಡಳಿತ ಮತ್ತು ಅವ್ಯವಹಾರಗಳಿಂದಾಗಿ ಆಸ್ಪತ್ರೆಗೆ ಸೇರಿದರೆ ಬದುಕಿ ಬರಲಾರವೆಂಬ ಅಪನಂಬಿಕೆಯನ್ನು ಜನತೆಯಲ್ಲಿ ಉಂಟು ಮಾಡಿದೆ. ಅದರಿಂದಾಗಿ ಸಕ್ರಿಯ ಪ್ರಕರಣಗಳಲ್ಲಿ 18.32 ಶೇಕಡ ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಲಿ ಲಭ್ಯವಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್ ಹಾಸಿಗೆಗಳು ಕೇವಲ 33.57 ಶೇಕಡ ಸೋಂಕಿತರಿಗೆ ಮಾತ್ರ ಸಾಕಾಗುವಷ್ಟು ಇವೆ. ಅವುಗಳು ಸಹಾ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದಿರುವುದು ಪರಿಸ್ಥಿತಿಯ ತೀವ್ರತೆಯನ್ನು ಹಾಗೂ ಜನತೆಯು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿರುವುದನ್ನು ತೋರುತ್ತದೆ ಎಂದು ಸಿಪಿಐ(ಎಂ) ಟೀಕಿಸಿದೆ.
ರಾಜ್ಯ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಸರ್ಕಾರದ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಲಭ್ಯವಿರುವ 3,478 ಹಾಸಿಗೆಗಳ ಪೈಕಿ ಕೇವಲ 2,313 ಅಂದರೆ 66.5 ಶೇಕಡ ಮಾತ್ರ ಭರ್ತಿಯಾಗಿವೆ. ಅಂತೆಯೇ ಖಾಸಗೀ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಒಟ್ಟು 9,859 ಕೋವಿಡ್ ಹಾಸಿಗೆಗಳಲ್ಲಿ 4,964 ಮಾತ್ರ ಅಂದರೆ 50.34 ಶೇಕಡ ಹಾಸಿಗೆಗಳು ಭರ್ತಿಯಾಗಿರುವುದು ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಮತ್ತು ಅಲ್ಲಿನ ಪರಿಸ್ಥಿತಿಯ ಕುರಿತು ಉಂಟಾಗಿರುವ ಭೀತಿಯನ್ನು ಪ್ರತಿಬಿಂಬಿಸುತ್ತದೆ. ಒಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಸೌಲಭ್ಯಗಳ ಕೊರತೆ, ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳಲ್ಲಿನ ದುಬಾರಿ ಶುಲ್ಕ ಜನತೆಯನ್ನು ಆಸ್ಪತ್ರೆ ಚಿಕಿತ್ಸೆಯಿಂದ ವಿಮುಖರನ್ನಾಗಿಸಿದೆ.ಆರಂಭದಲ್ಲಿ ರಾಜ್ಯ ಸರ್ಕಾರವು ತೋರಿದ ನಿರ್ಲಕ್ಷ್ಯ, ರೋಗಿಗಳಿಗೆ ಹಾಸಿಗೆ ಒದಗಿಸಲು, ಆಂಬುಲೆನ್ಸ್ ಸೇವೆ ನೀಡಲು ಮತ್ತು ಆಮ್ಲಜನಕ, ವೆಂಟಿಲೇಟರ್ ವ್ಯವಸ್ಥೆಗಳನ್ನು ಸರಿಯಾಗಿ ಮಾಡದಿದ್ದ ಕಾರಣ ಹಾಗೂ ಖರೀದಿಯಲ್ಲಿನ ಹಗರಣವು ಜನತೆಗಿದ್ದ ಅಲ್ಪಸ್ವಲ್ಪ ವಿಶ್ವಾಸವನ್ನು ಇಲ್ಲದಾಗಿಸಿದೆ. ಪರಿಣಾಮವಾಗಿ ಕೋವಿಡ್ ರೋಗಿಗಳು ಆಸ್ಪತ್ರೆ ಚಿಕಿತ್ಸೆಯಿಂದ ದೂರವಾಗಿದ್ದಾರೆ. ಈ ಪರಿಸ್ಥಿತಿಯ ತೀವ್ರತೆಯನ್ನು ಅರಿತು ಜನತೆಯಲ್ಲಿ ವಿಶ್ವಾಸ ಮೂಡಿಸಲು ರಾಜ್ಯ ಬಿಜೆಪಿ ಸರ್ಕಾರವು ಅಗತ್ಯ ಕ್ರಮವಹಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.