ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿ ದಶಪಥ ರಸ್ತೆಗೆ ಹೊಂದಿಕೊಂಡಂತೆ ಮಂಡ್ಯ ತಾಲ್ಲೂಕಿನ ಹನಕೆರೆ ಬಳಿ ಕೆಳ ಸೇತುವೆಯನ್ನು ನಿರ್ಮಾಣ ಮಾಡದಿರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದ ಜನರು ಹಾಗೂ ರೈತಸಂಘದ ಸದಸ್ಯರು ಕೆಳ ಸೇತುವೆ ಮಾಡಬೇಕೆಂದು ಆಗ್ರಹಿಸಿದರು.
ಹನಕೆರೆ ಗ್ರಾಮದ ಜನರು ಹೆದ್ದಾರಿ ಕೆಳ ಸೇತುವೆಯನ್ನು ತಮ್ಮೂರ ಬಳಿಯೇ ನಿರ್ಮಿಸಬೇಕು ಎಂದು ಈ ಹಿಂದೆಯೂ ಪ್ರತಿಭಟನೆ ಮಾಡಿದ್ದರು. ಆದರೆ ಗ್ರಾಮದಿಂದ ದೂರದಲ್ಲಿ ಕೆಳಸೇತುವೆ ನಿರ್ಮಾಣವಾಗಿತ್ತು. ಇದರ ವಿರುದ್ಧ ತಿರುಗಿಬಿದ್ದ ಊರಿನ ಗ್ರಾಮಸ್ಥರು ಇಂದು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರ ಅನುಮತಿ ಕೊಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಇದನ್ನು ಓದಿ: ಆಯುಷ್ಯವಿಲ್ಲದ ಬಜೆಟ್ ನಲ್ಲಿ ಭರಪೂರ ಯೋಜನೆಗಳು
ರಸ್ತೆಗಳಿಗೆ ಎತ್ತಿನಗಾಡಿಗಳ ಮೂಲಕ ಆಗಮಿಸಿದ ಗ್ರಾಮಸ್ಥರು, ಬೈಕ್, ಕಾರು, ಆಟೋಗಳನ್ನು ನಿಲ್ಲಿಸಿ ರಸ್ತೆ ವಾಹನಗಳನ್ನು ತಡೆದಿದ್ದಾರೆ. ಪ್ರತಿಭಟನೆಗೆ ರೈತ ಸಂಘ ಸಹ ಬೆಂಬಲ ಕೊಟ್ಟಿದ್ದು ಪ್ರತಿಭಟನೆ ಕಾವು ಹೆಚ್ಚಾಗಿದೆ. ಪ್ರತಿಭಟನೆಯಿಂದ ಕಿಲೋ ಮೀಟರ್ ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕಾಮಗಾರಿ ಆರಂಭವಾದ ದಿನದಿಂದಲೇ ಕೆಳಸೇತುವೆ ನಿರ್ಮಾಣಕ್ಕಾಗಿ ಒತ್ತಾಯಿಸಿದ್ದೇವು. ಮನವಿಯನ್ನು ಸಲ್ಲಿಸಿದ್ದೇವು. ಆದರೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಹೆದ್ದಾರಿ ಕಾಮಗಾರಿ ಮುಗಿಯುತ್ತಿದ್ದು ಉದ್ಘಾಟನೆಗೆ ಸಿದ್ಧತೆಯಾಗುತ್ತಿವೆ. ಕೆಳಸೇತುವೆ ಕಾಮಗಾರಿ ಆರಂಭವಾಗದಿದ್ದರೆ ಹೆದ್ಧಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನುಮತಿ ಬಂದ ತಕ್ಷಣ ಕೆಳಸೇತುವೆ ಕಾಮಗಾರಿ ಆರಂಭಿಸಲಾಗುವುದು. ಪ್ರತಿಭಟನೆ ಕೈಬಿಡಿ ಎಂದರು. ಈ ಕುರಿತು ಕಳೆದ ಡಿಸೆಂಬರ್‌ನಲ್ಲಿ ಸಲ್ಲಿಸಿದ್ದ ಪತ್ರ ತೋರಿಸಿದರು. ಎಂಜಿನಿಯರ್ ತಂದಿದ್ದ ಪತ್ರ ಕಿತ್ತುಕೊಂಡ ಹೋರಾಟಗಾರರು ಅದನ್ನು ಹರಿದುಹಾಕಿದರು, ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಪೊಲೀಸರು ಹಾಗೂ ಪ್ರತಿಭಟಕಾರರ ನಡುವೆ ಘರ್ಷಣೆ ಏರ್ಪಟ್ಟಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಶೀಘ್ರ ಕೆಳಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದು ಪ್ರಾಧಿಕಾರಿದ ಅಧಿಕಾರಿಗಳು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ