ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಆತಂಕ ಮೂಡಿಸಿದ್ದ ಘಟನೆಗೆ ಅಂತ್ಯ ಹಾಡಲಾಗಿದ್ದು, ವಿವಿಯಲ್ಲಿ ಕಾಣಿಸಿಕೊಂಡಿದ್ದು ಚಿರತೆಯಲ್ಲ, ಅದೇ ಆಕಾರ ಹೋಲುವ ಕಾಡುಬೆಕ್ಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿಶ್ವವಿದ್ಯಾಲಯ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಆತಂಕ ಮೂಡಿತ್ತು. ರಾತ್ರಿ ವೇಳೆ ಓಡಾಡುವಾಗ ಎಚ್ಚರ ವಹಿಸಿ ಎಂದು ವಿವಿ ಸುತ್ತೋಲೆ ಹೊರಡಿಸಿತ್ತು. ಇದರ ಬೆನ್ನಲ್ಲೇ ನಿಜಾಂಶ ಪತ್ತೆ ಹಚ್ಚಲು ಮುಂದಾದ ಅರಣ್ಯ ಅಧಿಕಾರಿಗಳು ಮತ್ತು ವನ್ಯಜೀವಿ ಕಾರ್ಯಕರ್ತರು ಇದು ದಕ್ಷಿಣ ಏಷ್ಯಾದ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಡಿನ ಬೆಕ್ಕು ಎಂದು ಹೇಳಿದರು.
ಇದನ್ನು ಓದಿ: “ಬೆಳಗಾವಿ ನಂದೈತಿ ಬೆಳಗಾವಿ ಬಿಟ್ಟು ಹೋಗಲ್ಲ” ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ಹಾಕಿ ವ್ಯಂಗ್ಯ
ಕಾಡು ಬೆಕ್ಕಿನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದ್ದವು. ಬಹುತೇಕ ಸುದ್ದಿವಾಹಿನಿಗಳು ಸಹ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಪ್ರಸಾರ ಮಾಡಿತು. ಈ ಸುಳ್ಳು ಸುದ್ದಿ ಸಾರ್ವಜನಿಕರಲ್ಲಿ ಅನಗತ್ಯ ಭೀತಿಗೆ ಕಾರಣವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೌಢಾವಸ್ಥೆಯಲ್ಲಿರುವ ಕಾಡುಬೆಕ್ಕು ಅದಾಗಿದೆ. ಆದರೆ ವಿಶ್ವವಿದ್ಯಾಲಯವು ಮಾಧ್ಯಮ ವರದಿಗಳನ್ನು ಆಧರಿಸಿ ಎಚ್ಚರಿಕೆ ಸಂದೇಶ ರವಾನಿಸಿತು. ಕನ್ನಳ್ಳಿ ಸಮೀಪದ ಗಂಗಾಡಿಪುರ ಗ್ರಾಮದ ಮಹಿಳೆಯೊಬ್ಬರು ಬೆಂಗಳೂರು ನಗರ ಆರ್ ಎಫ್ ಒ ಕಚೇರಿಯನ್ನು ಸಂಪರ್ಕಿಸಿ ತಮ್ಮ ಬಳಿ ಇದ್ದ ವಿಡಿಯೋ ತುಣುಕು ಹಂಚಿಕೊಂಡಿದ್ದರು.
ವೀಡಿಯೋ ಚಿರತೆ ಘರ್ಜನೆಯ ಕೃತಕ ಧ್ವನಿ ಶಬ್ದಗಳನ್ನು ಹೊಂದಿತ್ತು. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ ವಿಷಯ ಏನೆಂದು ಮನದಟ್ಟಾಯಿತು. ಆದರೆ ಅದು ನಕಲಿ ಎಂಬುದು ಸ್ಪಷ್ಟವಾಗಿದೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.
ನಂತರ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಈ ಪ್ರದೇಶದಲ್ಲಿ ಯಾರೊಬ್ಬರಿಗೂ ಚಿರತೆ ಕಾಣಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಅವರು ಹೇಳಿದರು. ಸದ್ಯ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ