ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಕೋರ್ಸ್ ಗಳನ್ನು ಪ್ರಾರಂಭ ಮಾಡಬೇಕು ಹಾಗೂ ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಬೆಂಗಳೂರು ನಗರದ ಎಲ್ಲಾ ಕಾಲೇಜುಗಳಲ್ಲಿ ಎಲ್ಲಾ ಕೋರ್ಸುಗಳಿಗೆ ದಾಖಲಾತಿಗೆ ಅವಕಾಶ ಕಲ್ಪಿಸಬೇಕು ಹಾಗೂ ಉತ್ತರ ವಿವಿಯ ಸಮಗ್ರ ಅಭಿವೃದ್ಧಿಗಾಗಿ ಭಾರತ ವಿಧ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಸಂಘಟನೆಯಿಂದ ಉತ್ತರ ವಿವಿ ಕಛೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ವಿಶ್ವವಿದ್ಯಾಲಯಗಳಾಗಿ ವಿಂಗಡಿಸಿದ ನಂತರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಗಿದೆ ಅಂದಿನಿಂದ ಇಂದಿನವರೆಗೂ ಅನೇಕ ಸಮಸ್ಯೆಗಳ ಆಗರವಾಗಿದೆ. ಕನಿಷ್ಠ ಮೂಲ ಸೌಕರ್ಯ, ಅಗತ್ಯವಾದ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳದೆ ವಿವಿಯನ್ನು ಪ್ರಾರಂಭಿಸಿದ್ದು, ಅತ್ಯಂತ ಅವೈಜ್ಞಾನಿಕ ತೀರ್ಮಾನವಾಗಿದೆ ಎಂದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ, ಈ ವಿವಿಯ ವ್ಯಾಪ್ತಿಗೆ ಬೆಂಗಳೂರು ನಗರದ ಕೆ.ಆರ್ ಪುರ, ಪುಲಿಕೇಶಿನಗರ ಸರ್ವಜ್ಞ ನಗರ ಸಿ.ವಿ.ರಾಮನ್‌ನಗರ, ಮಹದೇವಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಾಲೇಜುಗಳು ಮತ್ತು ಕೋಲಾರ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಮಾರು ೨೭೦ ಕಾಲೇಜುಗಳನ್ನು ಒಳಗೊಂಡಿದೆ. ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವುದರಲ್ಲಿ ಸರ್ಕಾರ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಎಸ್ಎಫ್ಐ ರಾಜ್ಯ ಮುಖಂಡ ಸೋಮಶೇಖರ್ ಮಾತನಾಡಿ, ಸರಕಾರ ಮತ್ತು ವಿವಿಯ ನಿರ್ಲಕ್ಷದಿಂದ ಇದುವರೆಗೂ ಈ ವಿವಿಯಲ್ಲಿ ಎಲ್ಲಾ ಸ್ನಾತಕೋತ್ತರ ಕೋರ್ಸುಗಳನ್ನು ಪೂರ್ಣಪ್ರಮಾಣದಲ್ಲಿ ಪ್ರಾರಂಭಿಸಲು ಸಾಧ್ಯವಾಗಿಲ್ಲ ಇನ್ನು ಹೆಸರಿಗಷ್ಟೇ ಇರುವ ಕೆಲವು ಕೋರ್ಸುಗಳ ವಿಭಾಗದಲ್ಲಿ ಒಬ್ಬೇ ಒಬ್ಬರು ಖಾಯಂ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳದೆ, ಅತಿಥಿ ಉಪನ್ಯಾಸಕರು ಮತ್ತು ಹೊರಗುತ್ತಿಗೆ ನೌಕರರ ಮೂಲಕ ವಿಶ್ವ ವಿದ್ಯಾಲಯವನ್ನು ನಡೆಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಗುಣಮಟ್ಟದ ಶಿಕ್ಷಣ ಸಿಗುವ ಕುರಿತು ಆತಂಕಕ್ಕೆ ಒಳಗಾಗಿದ್ದಾರೆ ಇಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಮೆರಿಟ್ ಹೊಂದಿದ್ದರೂ ಸಹ ಬೆಂಗಳೂರು ಸೆಂಟ್ರಲ್ ವಿವಿಯ ಹೊರ ವಿಶ್ವವಿದ್ಯಾಲಯದವರು ಎಂದು ಈ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಹಂಚದೆ ಅನ್ಯಾಯವೆಸಗಿದೆ. ಇದರಿಂದ ಐದಾರು ಸಾವಿರ ವಿದ್ಯಾರ್ಥಿಗಳ ಶಿಕ್ಷಣದ ಮುಂದಿನ ಭವಿಷ್ಯವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಸರ್ಕಾರ ಅಪಾಯಕ್ಕೆ ನೂಕಿದೆ ಎಂದರು.
ಡಿವೈಎಫ್ಐ ಜಿಲ್ಲಾ ಸಂಚಾಲಕ ವಿ.ಅಂಬರೀಷ್ ಮಾತನಾಡಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲಿ ಅಗತ್ಯವಾದ ಕೋರ್ಸುಗಳನ್ನು ಸಮರ್ಪಕ ಮೂಲಸೌಕರ್ಯಗಳಾದ ಲ್ಯಾಬ್, ಪ್ರಯೋಗಾಲಯ, ಗ್ರಂಥಾಲಯ ಪಠ್ಯಪುಸ್ತಕ ಕಾಯಂ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಸಿಬ್ಬಂದಿಗಳನ್ನು ಒದಗಿಸಿ ಎಲ್ಲ ಕೋರ್ಸ್ಗಳನ್ನು ಪ್ರಾರಂಭಿಸಬೇಕು.
ಕೇವಲ ಒಂದೆರಡು ಕಾಲೇಜುಗಳಲ್ಲಿ ಹೆಸರಿಗೆ ಕೋರ್ಸುಗಳನ್ನು ಪ್ರಾರಂಭಿಸಿದರೆ ಸಾಲದು ಐದಾರು ಸಾವಿರ ವಿದ್ಯಾರ್ಥಿಗಳು ಪದವಿ ಕೋರ್ಸುಗಳಿಗೆ ಪಡೆಯಲು ಅರ್ಹರಾಗಿದ್ದಾರೆ ಆದ್ದರಿಂದ ಕನಿಷ್ಠ ೫೦ ರಿಂದ ೬೦ ಕಾಲೇಜುಗಳಲ್ಲಿ ಎಂ.ಎಸ್ಸಿ ಕೆಮಿಸ್ಟ್ರಿ ಮುಂತಾದ ಎಲ್ಲಾ ಸ್ನಾತಕೋತ್ತರ ಪದವಿ ಕೋರ್ಸ್ ಗಳನ್ನು ಪ್ರಾರಂಭಿಸಬೇಕು.
ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲಿ ಬೆಂಗಳೂರು ಉತ್ತರ ವಿ.ವಿ. ವಿದ್ಯಾರ್ಥಿಗಳಿಗೆ ದಾಖಲಾತಿಗೆ ಸೀಟುಗಳನ್ನು ಹಂಚಿಕೆ ಮಾಡಬೇಕು ಇದಕ್ಕಾಗಿ ಮೂರು ವಿಶ್ವವಿದ್ಯಾಲಯಗಳ ಕುಲಪತಿಗಳು ಈ ಕೂಡಲೇ ಜಂಟಿ ಸಭೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಶಿವಪ್ಪ, ತಾಲ್ಲೂಕ ಅಧ್ಯಕ್ಷ ಶ್ರೀಕಾಂತ್ ಜೆ, ತಾಲ್ಲೂಕು ಕಾರ್ಯದರ್ಶಿ ಅಂಕಿತ, ಮುಖಂಡರಾದ ಸುರೇಶ್ ಬಾಬು,ಮನೋಜ್ ಕುಮಾರ್,ಭರತ್, ವೆಂಕಟಾದ್ರಿ, ಗಂಗಾಧರ, ಕಾವ್ಯ, ಕುಸುಮ, ರಮ್ಯ, ಶ್ರೀನಾಥ್, ಮುಂತಾದವರು ಇದ್ದರು.