ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಬೆಂಗಳೂರು ಉಸ್ತುವಾರಿ ಸಾರಥ್ಯದ ಬಗ್ಗೆ ಡಾ. ಅಶ್ವಥ್ ನಾರಾಯಣ್, ಆರ್.ಅಶೋಕ್ ಮತ್ತು ಬೈರತಿ ಬಸವರಾಜ್ ಅವರಿಗೆ ಕಣ್ಣಿತ್ತು. ಒಬ್ಬರಿಗೆ ಈ ಆಯಕಟ್ಟಿನ ಹುದ್ದೆಯನ್ನು ಕೊಟ್ಟರೆ, ಮಿಕ್ಕವರು ಅಸಮಾಧಾನಗೊಳ್ಳಬಹುದು ಎನ್ನುವ ಕಾರಣಕ್ಕಾಗಿ ನೇಮಕ ಮಾಡಲಾಗಿಲ್ಲ.
ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ಹಂಚಿಲ್ಲ, ಆದರೆ, ತಾನೇ ಉಸ್ತುವಾರಿ ಎನ್ನುವ ರೀತಿಯಲ್ಲಿ ಅಶೋಕ್ ವರ್ತಿಸುತ್ತಿದ್ದಾರೆ ಎನ್ನುವ ಗುರುತರ ಆರೋಪ ಕೇಳಿ ಬರುತ್ತಿದೆ. ಆದರೂ, ಕಂದಾಯ ಸಚಿವ ಆರ್. ಅಶೋಕ ನಡೆ ಬಗ್ಗೆ ಬಿಜೆಪಿ ಪಕ್ಷದ ಕೆಲ ಸಚಿವರು ಹಾಗೂ ಶಾಸಕರು ಅಸಮಾಧಾನಗೊಂಡಿರುವುದು ತಿಳಿದುಬಂದಿದೆ. ಈ ಬಗ್ಗೆ ಉನ್ನತ ನಾಯಕರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ.ಸೋಮಣ್ಣ ಬೆಂಗಳೂರು ಉಸ್ತುವಾರಿಯನ್ನು ತಮಗರ್ಧ ಹಾಗೂ ಇನ್ನರ್ಧ ಅಶೋಕ್‌ಗೆ ನೀಡಲಿ. ನಾನು ಹಿಂದೆ ಸಚಿವ ಆಗಿದ್ದಾಗ ಅಶೋಕ್ ಇನ್ನೂ ಶಾಸಕರಾಗಿರಲಿಲ್ಲ. ನಾನು ಸಭೆ ಕರೆದಿದ್ದಾಗ ಅಶೋಕ್ ಬಂದಿರಲಿಲ್ಲ. ನಾನು ಏನು ಮಾಡಲಿ?. ಅವರು ಸಭೆ ಕರೆದರೆ ನಾನು ಹೋಗುತ್ತೇನೆ. ನಾನು ಸಭೆ ಕರೆದರೆ ಅವರು ಬರಬೇಕು. ಇಲ್ಲ ಅಂದರೆ ಅವರಿಗೆ ಲಾಸ್. ಮನೆಗಳನ್ನು ನಮ್ಮ ಕಾರ್ಯಕರ್ತರಿಗೆ ಕೊಡುತ್ತೇನೆ ಅಷ್ಟೇ. ನಾನು ಸೀನಿಯರ್ ಇದ್ದೇನೆ ಎಂದರು.
ಬೆಂಗಳೂರು ನಗರಕ್ಕೆ ಯಾರನ್ನೂ ಉಸ್ತುವಾರಿ ಮಾಡಿಲ್ಲ. ಈಗ ಇರುವ ಉಸ್ತುವಾರಿ ಕೋವಿಡ್‌ಗಾಗಿ ಮಾಡಿದ್ದು. ಅಶೋಕ್ ಹೇಗೆ ಸಭೆ ನಡೆಸ್ತಾರೆಂದು ಮುಖ್ಯಮಂತ್ರಿಗಳು ಕೇಳಬೇಕು. 3-4 ದಿನಗಳಲ್ಲಿ ಉಸ್ತುವಾರಿ ಯಾರೆಂದು ತಿಳಿಯುತ್ತೆ. ಅಶೋಕ್‌ಗೆ ಕೊಡ್ತಾರಾ, ನನಗೆ ಉಸ್ತುವಾರಿ ಕೊಡ್ತಾರಾ. ಎರಡು ಉಸ್ತುವಾರಿ ಮಾಡ್ತಾರಾ ಎಂದು ತಿಳಿಯುತ್ತದೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು ಉಸ್ತುವಾರಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸುಪರ್ದಿಯಲ್ಲಿದೆ. ಆದರೆ, ತಾನೇ ಉಸ್ತುವಾರಿ ಎನ್ನುವ ರೀತಿಯಲ್ಲಿ ಅಶೋಕ್ ಅವರು ವರ್ತಿಸುತ್ತಿರುವುದು ಸಹಿಸಲಾಗುತ್ತಿಲ್ಲ. ಸಿಎಂ ಗಮನಕ್ಕೆ ಬಾರದೇ ಸಭೆಗಳನ್ನು ನಡೆಸುತ್ತಿದ್ದಾರೆ, ಬಿಬಿಎಂಪಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು, ಶಾಸಕರಿಗೆ ಬರಬೇಕಾಗಿರುವ ಅನುದಾನಕ್ಕೆ ಕತ್ತರಿ ಹಾಕುತ್ತಿದ್ದಾರೆ ಎಂದು ನಗರದ ಶಾಸಕರೊಬ್ಬರು ಸುದ್ದಿಸಂಸ್ಥೆಗೆ ಹೇಳಿರುವುದು ಉಲ್ಲೇಖವಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯ ಅಸೆಂಬ್ಲಿ ಕ್ಷೇತ್ರಗಳ ಅಶೋಕ್ ಸೇರಿದಂತೆ ಏಳು ಸಚಿವರಿದ್ದಾರೆ. ಆದರೆ, ಇವರ ಬಳಿ ಚರ್ಚಿಸದೇ ಅಶೋಕ್ ತನ್ನದೇ ನಿರ್ಧಾರ ತೆಗೆದುಕೊಂಡು ಮಿಕ್ಕ ಸಚಿವರಿಗೆ ತೀವ್ರ ಮುಜುಗರವನ್ನು ತಂದೊಡ್ಡುತ್ತಿದ್ದಾರೆ. ಬಿಡಿಎ ವಿಚಾರದಲ್ಲೂ ಅನಾವಶ್ಯಕವಾಗಿ ಮೂಗು ತೂರಿಸುತ್ತಿದ್ದಾರೆ ಎಂದು ವಿಶ್ವನಾಥ್ ಕೂಡಾ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದ್ದರು.