ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಂಕ್ಚರ್ ಮಾಫಿಯಾ ಸಕ್ರಿಯವಾಗಿರುವ ಅನುಮಾನ ವ್ಯಕ್ತವಾಗಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಸಂಚಾರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ರೊಬ್ಬರು ಕೆಜಿಗಟ್ಟಲೇ ರಸ್ತೆಗಳಲ್ಲಿ ಮೊಳೆ ಸಂಗ್ರಹಿಸಿ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ಅಶೋಕನಗರ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಹಮ್ಮದ್ ಅಲಿ ಇಮ್ರಾನ್ ಅವರು ಆನೆಪಾಳ್ಯ, ನಂಜಪ್ಪ ಜಂಕ್ಷನ್, ಅಪೇರಾ ಜಂಕ್ಷನ್ ಸೇರಿದಂತೆ ಕೆಲವೇ ದೂರದಲ್ಲಿ ರಾಶಿ ಗಟ್ಟಲೇ ಮೊಳೆ, ಕಬ್ಬಿಣದ ತುಂಡುಗಳನ್ನು ಸಂಗ್ರಹ ಮಾಡಿದ್ದು, ಇದರ ಹಿಂದೆ ಪಂಚರ್ ಮಾಫಿಯಾದ್ದೇ ಕೈಚಳಕ ಇದ್ದಂತೆ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಅಪಾಯಕ್ಕೆ ಆಹ್ವಾನ ನೀಡುತ್ತಿವೆ ರಸ್ತೆಗುಂಡಿಗಳು!, ಬಿಬಿಎಂಪಿ ಕಚೇರಿ ಮುಂದಿದೆ ದೊಡ್ಡದಾದ ರಸ್ತೆಗುಂಡಿ
ನಗರದ ಪ್ರಮುಖ ರಸ್ತೆ, ಒಳ ರಸ್ತೆ, ಹೊರವರ್ತುಲ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಸಾರ್ವಜನಿಕರು ವೈಯಕ್ತಿಕವಾಗಿ ಕಾರು ಹಾಗೂ ದ್ವಿಚಕ್ರ ವಾಹನ ಬಳಸುತ್ತಿದ್ದಾರೆ. ಸರಕು ಸಾಗಣೆಗೂ ಭಾರಿ ವಾಹನಗಳು ಓಡಾಡುತ್ತಿವೆ. ಇದನ್ನೇ ಗುರಿಯಾಗಿಸಿಕೊಂಡು ಎಲ್ಲೆಂದರಲ್ಲಿ ಮೊಳೆಗಳನ್ನು ಎಸೆಯಲಾಗುತ್ತಿದ್ದು,ಇಂಥ ರಸ್ತೆಗಳಲ್ಲಿ ಓಡಾಡುವ ವಾಹನಗಳ ಚಕ್ರಗಳು, ಮೊಳೆ ಸಿಲುಕಿ ಪಂಕ್ಚರ್ ಆಗುತ್ತಿವೆ. ಜೊತೆಗೆ, ಸಾರ್ವಜನಿಕರ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ. ಇದರ ಹಿಂದೆ ‘ಪಂಕ್ಚರ್ ಮಾಫಿಯಾ’ ಇದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ನಗರದ ಕೆಲ ಪಂಕ್ಚರ್ ಅಂಗಡಿಯವರು ಮೊಳೆ ಎಸೆಯುತ್ತಿರುವ ಅನುಮಾನವಿದೆ. ಈ ನಡುವೆ ಸ್ವತಃ ಅಶೋಕನಗರ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಹಮ್ಮದ್ ಅಲಿ ಇಮ್ರಾನ್ ರಾಶಿಗಟ್ಟಲೇ ಕಬ್ಬಿಣದ ತುಂಡು ಸಂಗ್ರಹಿಸಿದ್ದು, ಇದರ ಹಿಂದಿನ ನಿಜವಾದ ಕಾರಣ ಹೊರಬೀಳಬೇಕಿದೆ.