ಮಳೆ ಅವಾಂತರ : ರಸ್ತೆ ಕುಸಿತ, ಜಲಾವೃತವಾದ ಮನೆಗಳು – ಬೆಂಗಳೂರಿಗರ ಕಣ್ಣೀರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು ಭಾರಿ ಅವಾಂತರಗಳು ಸೃಷ್ಟಿಯಾಗಿವೆ. ಸದ್ಯ ಈಗ ಬೆಂಗಳೂರಲ್ಲಿ ಮತ್ತೊಂದು ರಸ್ತೆ ಕುಸಿದಿದೆ ವಾಹನ ಸವಾರರನ್ನು ಬೆಚ್ಚಿ ಬೀಳಿಸಿದೆ.

ನಿನ್ನೆ ಸಂಜೆ ಪಟ್ಟಗಾರ ಪಾಳ್ಯ ಮುಖ್ಯರಸ್ತೆಯ ನಡು ರಸ್ತೆಯಲ್ಲಿ ಆಳುದ್ದ ರಸ್ತೆ ಕುಸಿದಿದೆ. ಕಳೆದ 15 ದಿನದಲ್ಲಿ ಇದು 5ನೇ ಪ್ರಕರಣ. ಸದ್ಯ ರಸ್ತೆ ಕುಸಿದಿರುವ ಜಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು ರಾತ್ರಿ ಮಳೆ ನೀರು ಬಿದ್ದು ಸುರಂಗ ಸೃಷ್ಟಿಯಾಗಿದೆ. ಜೊತೆಗೆ ಶೇಷಾದ್ರಿಪುರಂ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಆನಂದ್ ರಾವ್ ಸರ್ಕಲ್​ಗೆ ಸಂಪರ್ಕ‌ ಕಲ್ಪಿಸುವ ರಸ್ತೆ ಧಾರಾಕಾರ ಮಳೆಗೆ ಕಿತ್ತುಕೊಂಡು ಬಂದಿದೆ.

ಇದನ್ನೂ ಓದಿಸ್ಯಾಂಕಿ ರಸ್ತೆ ಕುಸಿತ; ಮಲ್ಲೇಶ್ವರ 18ನೇ ಕ್ರಾಸ್ ಮಾರ್ಗ ಬಂದ್

ಮಳೆ ಸೃಷ್ಟಿಸಿದ ಅವಾಂತರಗಳು

ಶಿವಾನಂದ ರೈಲ್ವೆ ಅಂಡರ್ ಪಾಸ್ ಬಳಿ ಕೊಚ್ಚಿ ಹೋದ ರಸ್ತೆ : ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಶಿವಾನಂದ ರೈಲ್ವೆ ಅಂಡರ್ ಪಾಸ್ ಬಳಿ 100 ಮೀಟರ್​ನಷ್ಟು ರಸ್ತೆ ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ತೀವ್ರ ಪರದಾಡುತ್ತಿದ್ದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೆ ರಸ್ತೆ ಕಿತ್ತುಹೋಗಿದ್ದರಿಂದ ಬೈಕ್​ನಿಂದ ಬಿದ್ದು ಸವಾರನಿಗೆ ಗಾಯಗಳಾದ ಘಟನೆಯೂ ನಡೆದಿದೆ. ಶಾಲೆಗೆ ಮಗಳನ್ನು ಕರೆದುಕೊಂಡು ಹೋಗುತ್ತಿದ್ದ ತಂದೆಗೆ ಹಿಡಿತ ತಪ್ಪಿ ಬೈಕ್ ಸ್ಕಿಡ್ ಆಗಿದೆ. ಇದರಿಂದ ತಂದೆ-ಮಗಳಿಗೆ ಗಾಯಗಳಾಗಿವೆ.

ಮೆಟ್ರೋ ತಡೆಗೋಡೆ ಕುಸಿತ : ಬುಧವಾರ ರಾತ್ರಿ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿದೆ. ನಮ್ಮ ಮೆಟ್ರೋ ತಡೆಗೋಡೆ ಕುಸಿತಗೊಂಡಿದೆ. ನಗರದ ಶೇಷಾದ್ರಿಪುರಂ ಸಮೀಪ ಜೆಡಿಎಸ್ ಪಕ್ಷದ ಮುಂಭಾಗದಲ್ಲಿರುವ ನಮ್ಮ ಮೆಟ್ರೋ ತಡೆ ಗೋಡೆ ಭಾರೀ ಮಳೆಗೆ ಕುಸಿದಿದೆ. ಇದರಿಂದಾಗಿ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು, ಬೈಕುಗಳು ಜಖಂಗೊಂಡಿವೆ. ತಡೆಗೋಡೆ ಪಕ್ಕದಲ್ಲಿದ್ದ 6 ಕಾರುಗಳು, 2 ಬೈಕ್‌ಗಳಿಗೆ ಹಾನಿಯಾಗಿದೆ. ಆದರೆ ಗೋಡೆ ಕುಸಿತದ ಕುರಿತು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ರಾತ್ರಿಯೇ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು 10 ಗಂಟೆ ಕಳೆದರೂ ಸ್ಥಳಕ್ಕೆ ಆಗಮಿಸಿಲ್ಲ.

ಭಾರಿ ಮಳೆಯಿಂದಾಗಿ ಅನುಗ್ರಹ ಲೇಔಟ್ ಜಲಾವೃತ : ಬಿಳೇಕಹಳ್ಳಿಯಿಂದ ಅನುಗ್ರಹ ಲೇಔಟ್​ಗೆ ಮಳೆ ನೀರು ನುಗ್ಗಿದ್ದು ಮನೆಯಿಂದ ಹೊರ ಬರಲಾಗದೆ ನಿವಾಸಿಗಳು ಪರದಾಡುತ್ತಿದ್ದಾರೆ. ಹಾಗೂ ಮನೆಯಿಂದ ನೀರು ಹೊರಹಾಕಲು ಹರಸಾಹಸ ಪಡುತ್ತಿರುವ ಘಟನೆ ಸಿಲಿಕಾನ್ ಸಿಟಿಯ ಅನುಗ್ರಹ ಲೇಔಟ್ ಮಂದಿಗೆ ಎದುರಾಗಿದೆ. ಇನ್ನು ಹೆಚ್​ಎಸ್​ಆರ್ ಲೇಔಟ್​ನಲ್ಲೂ ಇದೇ ಪರಿಸ್ಥಿತಿ ಇದ್ದು, ಮನೆಯ ಲಿಫ್ಟ್ ನಲ್ಲೆಲ್ಲ ಮಳೆ ನೀರು ಸುರಿಯುತ್ತಿದೆ. ಹೆಚ್ಎಸ್ಆರ್ ಲೇಔಟ್ ಆರು ಮತ್ತು ಏಳನೇ ಸೆಕ್ಟರ್​ನಲ್ಲಿನ ಮನೆಗಳ ಬೆಸ್ಮೆಂಟ್ ನಲ್ಲಿ ಐದಾರು ಅಡಿಗಳಷ್ಟು ನೀರು ನಿಲ್ಲುತ್ತಿದ್ದು ನಿವಾಸಿಗಳಿಗೆ ನರಕ ದರ್ಶನವಾಗುತ್ತಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಬೈಕ್​ಗಳು : ಬುಧವಾರ ರಾತ್ರಿ ಮತ್ತು ಗುರುವಾರ ನಸುಕಿನಲ್ಲಿ ವಿವಿಧೆಡೆ ಭಾರಿ ಮಳೆಯಾಗಿದ್ದು ರಸ್ತೆಗಳ ಮೇಲೆ ನೀರು ಹರಿಯಿತು. ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್​ಗಳನ್ನು ಹಿಡಿಯಲು ಮಾಲೀಕರು ಹರಸಾಹಸಪಟ್ಟರು. ಶಿವಾಜಿನಗರದ ಓಲ್ಡ್ ಮಾರ್ಕೆಟ್ ರಸ್ತೆಯ ಪ್ಯಾಲೇಸ್​ ಮಹಲ್ ಬಳಿ ಹಲವು ಬೈಕ್​ಗಳು ನೀರುಪಾಲಾಗಿವೆ.

Donate Janashakthi Media

Leave a Reply

Your email address will not be published. Required fields are marked *