ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂಥ್ ಅವರ ಜಾಗಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಿದೆ.
ಇಂದು(ಮೇ 17) ನಗರದ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಪದಗ್ರಹಣ ಮಾಡಿದರು. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕರಿಸಿದ್ದು, ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್ ಪಂಥ್ ಬ್ಯಾಟನ್ ಹಸ್ತಾಂತರ ಮಾಡಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿದ್ದ ಪ್ರತಾಪ್ ರೆಡ್ಡಿ ಇನ್ಮುಂದೆ ಬೆಂಗಳೂರು ಪೊಲೀಸ್ ಆಯುಕ್ತರು. ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್ ಪಂತ್ ನೇಮಕಾತಿ ವಿಭಾಗದ ಹುದ್ದೆಗೆ ಡಿಜಿಪಿಯನ್ನಾಗಿ ನೇಮಿಸಲಾಗಿದೆ.
ಆಂಧ್ರಪ್ರದೇಶದ ಗುಂಟೂರು ಮೂಲದವರಾದ ಪ್ರತಾಪ್ ರೆಡ್ಡಿ, ಹಾಸನದ ಎಎಸ್ಪಿಯಾಗಿ ಕರ್ನಾಟಕ ಕ್ಯಾಡರ್‌ನಲ್ಲಿ ಸೇವೆ ಆರಂಭಿಸಿದ್ದರು. 1991ರ ತಂಡದ ಐಪಿಎಸ್ ಅಧಿಕಾರಿಯಾಗಿದ್ದ ಅವರು, ಹಾಸನದ ಎಎಸ್ಪಿಯಾಗಿ ಕರ್ನಾಟಕ ಕ್ಯಾಡರ್‌ನಲ್ಲಿ ಸೇವೆ ಆರಂಭಿಸಿದ್ದರು. ಈ ಹಿಂದೆ ಬೆಂಗಳೂರಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿಯೂ ಕಾರ್ಯನಿರ್ವಹಿಸದ್ದಾರೆ.
1994ರಲಿ ಮುಖ್ಯಮಂತ್ರಿಗಳ ಪದಕ್ಕೆ ಭಾಜನರಾಗಿರುವ ಪ್ರತಾಪ್ ರೆಡ್ಡಿ, ಸೈಬರ್ ಭದ್ರತಾ ಉಪಕ್ರಮದ ನಿರ್ದೇಶಕರಾಗಿ ಕಲಬುರಗಿ, ಬಿಜಾಪುರ, ಮುಂಬೈ, ಬೆಂಗಳೂರು ಸಿಬಿಐ ಘಟಕಗಳಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಪ್ರತಾಪ್ ರೆಡ್ಡಿ ಅವರಿಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕವಾಗುತ್ತಾರೆ ಎಂಬ ವದಂತಿಗಳಿದ್ದ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಪ್ರತಾಪ್ ರೆಡ್ಡಿ ನಿರ್ವಹಿಸುತ್ತಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿ ನೇಮಕ ಮಾಡಲಾಗಿದೆ. ಅವರ ಜಾಗಕ್ಕೆ ನೇಮಕಾತಿ ವಿಭಾಗದ ಡಿಜಿಪಿಯಾಗಿ ಕಾರ್ಯನಿರ್ವಹಿಸ್ತಿದ್ದ ಆರ್. ಹಿತೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಸಿಐಡಿ ಎಸ್‌ಪಿಯಾಗಿ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಇನ್ನೂ ಮತ್ತೊಬ್ಬರನ್ನು ನೇಮಕ ಮಾಡಲಾಗಿಲ್ಲ. ಸಿಐಡಿ ಎಸ್‌ಪಿಯಾಗಿದ್ದ ಟಿ.ವೆಂಕಟೇಶ್ ಅವರನ್ನೂ ವರ್ಗಾವಣೆ ಮಾಡಿದ್ದು ಅವರಿಗೆ ಯಾವುದೇ ಸ್ಥಾನವನ್ನು ನಿಗದಿಪಡಿಸಿಲ್ಲ.