ಬೆಂಗಳೂರು: ಕೆಲವೇ ದಿನಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮತ ಕೀಳುವ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಲಾಯಿತು ಎನ್ನಲಾದ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣವು ನೆನ್ನೆ ಸುರಿದ ಮಳೆಗೆ ನೀರು ನಿಲ್ದಾಣವಾಗಿ ಮಾರ್ಪಟ್ಟು ಪ್ರಯಾಣಿಕರು ಹರಸಾಹಸ ಪಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ.
ಏಪ್ರಿಲ್ 04 ರಂದು ರಾತ್ರಿ ಸುರಿದ ಮಳೆಯಿಂದಾಗಿ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ಹೊಚ್ಚ ಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಸದ್ಯ, ಮೆಟ್ರೋ ನಿಲ್ದಾಣದಲ್ಲಿ ನೀರು ತುಂಬಿಕೊಂಡಿರುವ ವೀಡಿಯೋಗಳನ್ನು ಜನಪ್ರಿಯ ನಾಗರಿಕರ ಆಂದೋಲನ ವೈಟ್‌ಫೀಲ್ಡ್ ರೈಸಿಂಗ್ ಟ್ವಿಟರ್‌ನಲ್ಲಿ ಶೇರ್ ಮಾಡಿದೆ. ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಒಳಗೆ ಪ್ಲಾಟ್‌ಫಾರ್ಮ್‌ನಲ್ಲಿ ಹಾಗೂ ಟಿಕೆಟಿಂಗ್ ಕೌಂಟರ್ ಬಳಿ ನೀರು ತುಂಬಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಮಳೆಯಿಂದಾಗಿ ಬೆಂ-ಮೈ ಎಕ್ಸ್‌ಪ್ರೆಸ್ ಹೈವೆ ಜಲಾವೃತ; ಕೆಟ್ಟುನಿಂತ ಕಾರಿಗೆ ಹಲವು ವಾಹನಗಳ ಡಿಕ್ಕಿ!
ನಿಲ್ದಾಣದ ಹೌಸ್ ಕೀಪಿಂಗ್ ಸಿಬ್ಬಂದಿ ಸಲಿಕೆಗಳು ಮತ್ತು ಬಕೆಟ್‌ಗಳನ್ನು ಬಳಸಿ ನೀರನ್ನು ತೆಗೆಯುವುದು ಮತ್ತು ನೆಲವನ್ನು ಒಣಗಿಸಲು ಮಾಪ್ ನ್ನು ಬಳಸುತ್ತಿರುವುದು, ಸಾರ್ವಜನಿಕರು ನೀರಿನ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದನ್ನು ವಿಡಿಯೋನಲ್ಲಿ ಕಾಣಬಹುದಾಗಿದೆ. ಈ ಟ್ವೀಟ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದು, ಚುನಾವಣೆಗೆ ಮುನ್ನ ತರಾತುರಿಯಲ್ಲಿ ಮೆಟ್ರೋ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ ಅಂತೆಲ್ಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ನೀವು ಚುನಾವಣೆಗಾಗಿ ಅರೆಬೆಂದ ಕಾಮಗಾರಿಗಳನ್ನು ಉದ್ಘಾಟಿಸಿದಾಗ ಹೀಗಾಗುತ್ತದೆ. ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಉತ್ತಮ ಪಕ್ಷವನ್ನು ಈಗಲಾದರೂ ಜನರು ಅರಿತು ಮತ ಚಲಾಯಿಸಬೇಕೆಂದು ನಾನು ಬಯಸುತ್ತೇನೆ ಹಲವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಅಪೂರ್ಣ ಕಾಮಗಾರಿಗಳ ಉದ್ಘಾಟನೆ : ಮತ ಕೀಳುವ ಯತ್ನದತ್ತ ಬಿಜೆಪಿ
ಇನ್ನು ಇದಕ್ಕೆ ಕಾಂಗ್ರೆಸ್ ಸಹ ಟ್ವೀಟ್ ಮಾಡಿದ್ದು, ಮೋದಿ ಉದ್ಘಾಟಿಸಿದ ಬೆಂಗಳೂರು-ಮೈಸೂರು ಹೆದ್ದಾರಿ ಒಂದು ಸಾಧಾರಣ ಮಳೆಗೆ ಮುಳುಗಿತ್ತು. ಈಗ ಮೋದಿ ಉದ್ಘಾಟಿಸಿದ ಮೆಟ್ರೋ ನಿಲ್ದಾಣ ಒಂದು ಸಣ್ಣ ಮಳೆಗೆ ಮುಳುಗಿದೆ. ಕಾಮಗಾರಿ ಮುಗಿಯುವ ಮುನ್ನವೇ ಉದ್ಘಾಟನೆಗೆ ಹಾತೊರೆಯುವ ಪ್ರಚಾರ ಜೀವಿಗೆ ಜನರ ಹಿತ ಮುಖ್ಯವಲ್ಲ, ಪ್ರಚಾರವೇ ಮುಖ್ಯ. ಮೆಟ್ರೋ ನಿಲ್ದಾಣಕ್ಕೆ ಮಳೆ ನೀರು ನುಗ್ಗಿದ್ದು 40% ಕಮಿಷನ್‌ಗೆ ಸಾಕ್ಷಿ ಎಂದು ಚಾಟಿ ಬೀಸಿದೆ.