ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು ಬೆಂಗಳೂರು ಬಂದ್ ಗೆ ಕರೆ ನೀಡಿವೆ.
ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ ಕಾಣುತ್ತಿಲ್ಲ. ವಾಹನಗಳ ದಟ್ಟಣೆಯಿಂದ ತುಂಬಿರುತ್ತಿದ್ದ ರಸ್ತೆಗಳು ಬಣಗುಡುತ್ತಿವೆ, ಸದಾ ಗಿಜಿಗುಡುತ್ತಿದ್ದ ಏರಿಯಾಗಳು ಖಾಲಿ, ಖಾಲಿ ಹೊಡೆಯುತ್ತಿವೆ. ಕೆಲ ಹೋಟೆಲ್ ಮುಚ್ಚಿದ್ದರು, ಒಂದಿಷ್ಟು ಹೊಟೆಲ್ ತೆರೆದೆವೆ. ಆಯ್ದ ಪ್ರದೇಶದಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬಹಳಷ್ಟು ಕಡೆ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್, ಮೆಟ್ರೋ ಸಂಚಾರವಿದ್ದರೂ ಪ್ರಯಾಣಿಕರಿಲ್ಲದೆ ಜನದಟ್ಟಣೆ ಪ್ರದೇಶಗಳಾದ ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್ ಮತ್ತಿತರ ಕಡೆಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ತೀರಾ ವಿರಳವಾಗಿದೆ. ದೂರದ ಪ್ರದೇಶಗಳಿಗೆ ಬಸ್ ಸಂಚಾರ ನಿಲ್ಲಿಸಲಾಗಿದೆ. ಬಹಳಷ್ಟು ಜನ ಮೆಜೆಸ್ಟಿಕ್ ನಿಲ್ದಾಣದ ಬಳಿ ಕಾಯುತ್ತಾ ಕುಳಿತಿದ್ದಾರೆ ಎಂದು ವರದಿಯಾಗಿದೆ.
ಕಾವೇರಿ ವಿಚಾರ ಬಂದಾಗ ನಮ್ಮ ನಿಲುವು ಸ್ಪಷ್ಪವಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಬಾರದು ಎಂಬುದು ನಮ್ಮ ಬೇಡಿಕೆ ಹಾಗಾಗಿ ಆಟೋಗಳು ಇಂದು ಕಾರ್ಯ ನಿರ್ವಹಿಸಲ್ಲ, ನಾವು ಬಂದ್ ಗೆ ಬೆಂಬಲ ನೀಡುತ್ತಿದ್ದೇವೆ ಎಂದು ಅಟೋ ಚಾಲಕರು ಬೆಂಬಲ ಸೂಚಿಸಿದ್ದಾರೆ. ನಿನ್ನೆ ಬಂದ್ ಗೆ ಬೆಂಬಲ ಘೋಷಿಸಿದ್ದ ಹೊಟೆಲ್ ಮಾಲಿಕರ ಸಂಘ, ಹೊಟೆಲ್ ಗಳು ತೆರೆದಿರುತ್ತವೆ, ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟ ಪಡಿಸಿವೆ.
ಪೊಲೀಸ್ ಅಲರ್ಟ್ : ಬೆಂಗಳೂರು ಬಂದ್ಗೆ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಗಲ್ಲಿ ಗಲ್ಲಿಯಲ್ಲೂ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ಧಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಟೈಟ್ ಸೆಕ್ಯೂರಿಟಿ ನೀಡಲಾಗುತ್ತಿದ್ದು, 60 KSRP, 40 CRPF ಪಡೆ ನಿಯೋಜನೆ ಮಾಡಲಾಗಿದೆ. ಮಧ್ಯರಾತ್ರಿ 12 ಗಂಟೆಯಿಂದ್ಲೇ 144 ಸೆಕ್ಷನ್ ಜಾರಿಯಾಗಿದ್ದು, ಬೃಹತ್ ಮೆರವಣಿಗೆ ನಡೆಸದಂತೆ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ. ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಸೂಚನೆ ನೀಡಿದ್ದಾರೆ. ಟೌನ್ ಹಾಲ್ ಬಳಿ 250ಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ನಗರದಲ್ಲಿ ಸೆಕ್ಷನ್ 144 : ನಗರದ ಪ್ರಮುಖ ಜಂಕ್ಷನ್ ಗಳು ಹಾಗೂ ಪ್ರಸಿದ್ದ ಕಟ್ಟಡಗಳು, ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿಯಿಂದಲೇ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಟೌನ್ ಹಾಲ್ ಬಳಿ ಹೊಯ್ಸಳ ಬೀಟ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇತ್ತ ರಾಜಧಾನಿಯಲ್ಲಿ ಸೆಕ್ಷನ್ 144 ಹಾಕಲಾಗಿದೆ.