ಬೆಳ್ತಂಗಡಿ: ಪರೀಕ್ಷೆ, ಕೊರೊನಾ, ಪಾಠ, ಮನೆಗೆಲಸ ಎಂಬಿತ್ಯಾದಿ ಕೆಲಸಗಳಿಂದ ಬೇಸತ್ತ ಮಕ್ಕಳ ಮನಸ್ಸಿಗೆ ಮುದನೀಡಿ ಒಂದಷ್ಟು ಜೀವನ ಪಾಠ ಕಲಿಸುವ ಸಲುವಾಗಿ ಶ್ರಮಶಕ್ತಿ ಸ್ವಸಹಾಯ ಸಂಘ ಹಾಗೂ ಬಾಲಸಂಘ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಚಿನ್ನರ ಮೇಳ ಎಂಬ ಒಂದು ದಿನದ ಕಾರ್ಯಾಗಾರವನ್ನು ಕೋರ್ಟ್ ರಸ್ತೆಯಲ್ಲಿರುವ ಅನನ್ಯ ಮನೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ರಾಜ್ಯಪ್ರಶಸ್ತಿ ವಿಜೇತ ಜಾನಪದ ಹಾಗೂ ಆಕಾಶವಾಣಿ ಕಲಾವಿದ ಕೃಷ್ಣಯ್ಯ ಲಾಯಿಲಾ, ಶಿಕ್ಷಕಿ ಆಶಾ ಕುಮಾರಿ ನಡೆಸಿಕೊಟ್ಟರು.
ಕಾರ್ಯಾಗಾರವು ಮಕ್ಕಳ ದೈಹಿಕ ಚಟುವಟಿಕೆಯಿಂದ ಆರಂಭಗೊಂಡು ಜಾನಪದ, ಭಾವಗೀತೆ ಹಾಗೂ ಪರಿಸರಗೀತೆಯ ಕಲಿಯುವಿಕೆಯಿಂದ ಮುಂದುವರಿಯಿತು. ನಂತರ ಕೋಳಿ, ಮೊಲ ಸಾಕಾಣೆಯ ಕಿರು ಪರಿಚಯ ಹಾಗೂ ಅಣಬೆ ಬೆಳೆಯುವ ರೀತಿಯನ್ನು ತೋರಿಸಿಕೊಡಲಾಯಿತು. ವಿವಿಧ ಆಟಗಳು ಹಾಗೂ ಜೀವನಾವಶ್ಯಕ ವಿಚಾರಗಳ ಮಾತಿನ ವಿನಿಮಯ ಮಾಡಿಕೊಳ್ಳಲಾಯಿತು.
ಮಕ್ಕಳಲ್ಲಿ ಪ್ರಶ್ನಿಸುವ ಕೌಶಲ್ಯವನ್ನು ಬೆಳೆಸಲು ಅನೇಕ ಚೇತೋಹಾರಿ ಚಟುವಟಿಕೆಗಳನ್ನು ಕೊಡಲಾಯಿತು. ಒಟ್ಟಿನಲ್ಲಿ ಮಕ್ಕಳಿಗೆ ಇದೊಂದು ಉತ್ತಮ ಕಾರ್ಯಾಗಾರವಾಗಿತ್ತು.
ಈ ಕಾರ್ಯಕ್ರಮವು ಸುಜಿತ್ ಅವರ ಮಾರ್ಗದರ್ಶನದಲ್ಲಿ, ಹರಿದಾಸ್, ಶಿವಕುಮಾರ್, ದಿನೇಶ್ , ಯುವರಾಜ್ ಹಾಗೂ ಸುಕನ್ಯಾ, ಪರಿಮಳ ಅವರ ಸಹಕಾರದೊಂದಿಗೆ ಉತ್ತಮವಾಗಿ ಮೂಡಿಬಂತು.