ಫೋಟೋ-ಚಿತ್ರೀಕರಣಕ್ಕೆ ನಿಷೇಧ: ಬೆಳಿಗ್ಗೆ ಆದೇಶ-ರಾತ್ರಿ ವಾಪಸ್ಸು ಯುಟರ್ನ್ ಹೊಡೆದ ಸರ್ಕಾರ

ಬೆಂಗಳೂರು: ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಖಾಸಗಿ ವ್ಯಕ್ತಿಗಳು ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ನಿನ್ನೆ(ಜುಲೈ 15) ಮಧ್ಯಾಹ್ನ ಆದೇಶ ಹೊರಡಿಸಿತ್ತು. ಆದರೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರ ತನ್ನ ಆದೇಶವನ್ನು ಮಧ್ಯರಾತ್ರಿ ವಾಪಸ್ಸು ಪಡೆದುಕೊಂಡಿದೆ.

ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧಕ್ಕೆ ಆದೇಶಿಸಿದ್ದ ಸರ್ಕಾರದ ನೀತಿಗೆ ಭ್ರಷ್ಟಾಚಾರಿ ವಿರೋಧಿ ಹೋರಾಟಗಾರರಿಂದ‌ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಸರ್ಕಾರದ ಈ ನಡೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಮೂಲಕ ಲಂಚ ಪಡೆಯುವುದು, ಲಂಚಕ್ಕೆ ಬೇಡಿಕೆ ಇಡುವುದು, ಸೇವೆ ನೀಡದೆ ಸಾರ್ವಜನಿಕರೊಂದಿಗೆ ಉಡಾಫೆ ವರ್ತನೆ ತೋರುವುದು ಸೇರಿದಂತೆ ಸರ್ಕಾರಿ ನೌಕರರು ಮಾಡುತ್ತಿದ್ದರು ಎನ್ನಲಾದ ತಪ್ಪುಗಳನ್ನು ಫೋಟೋ ಅಥವಾ ವಿಡಿಯೋ ಮಾಡಿಕೊಳ್ಳಲು ತಡೆ ಬಿದ್ದಿತ್ತು. ಸರ್ಕಾರದ ಈ ಆದೇಶಕ್ಕೆ ಸಾರ್ವಜನಿಕ ವಲಯದಿಂದ ತೀವ್ರತರ ಆಕ್ರೋಶ ವ್ಯಕ್ತವಾಯಿತು.

ಸರ್ಕಾರಿ ಕಚೇರಿಗಳಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು, ನೌಕರರು ಲಂಚಕ್ಕೆ ಬೇಡಿಕೆ ಇಡುವುದು, ನಿಗದಿಯಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸದೇ ಇರುವುದು. ಇದರಿಂದ ಸಾರ್ವಜನಿಕರನ್ನು ಸತಾಯಿಸುತ್ತಿರುವ ಪ್ರಕರಣಗಳನ್ನು ನೊಂದ ಜನರು ಅಥವಾ ಸಂಘ-ಸಂಸ್ಥೆಗೆ ಸೇರಿದ ಕಾರ್ಯಕರ್ತರು ಚಿತ್ರೀಕರಣ ಮಾಡಿ ಜನರ ಮುಂದೆ ಇಟ್ಟ ಹಲವು ನಿದರ್ಶನಗಳು ಇವೆ.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಈ ಬಗ್ಗೆ ವಿವರಣೆ ನೀಡಿದ್ದು, ‘ಸರ್ಕಾರಿ ಕಚೇರಿಗಳು ಪಾರದರ್ಶಕವಾಗಿರಬೇಕು. ಆದರೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಎಲ್ಲೆಮೀರಿದೆ. ಕಚೇರಿಗಳಲ್ಲಿನ ಭ್ರಷ್ಟಾಚಾರ ಹಾಗೂ ಅಧಿಕಾರಿ/ ಸಿಬ್ಬಂದಿಗಳ ನಡವಳಿಕೆಗಳ ಕುರಿತಾಗಿ ಜನಸಾಮಾನ್ಯರಲ್ಲಿ ಆಕ್ರೋಶ ಇದೆ. ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಕಂಡಾಗ ಅದನ್ನು ಚಿತ್ರೀಕರಣ ಮಾಡಲು ಜನರಿಗೆ ಅವಕಾಶ ಇರಬೇಕು. ಅದರ ಅಗತ್ಯವೂ ಇದೆ. ಹೀಗಿದ್ದಾಗ ಭ್ರಷ್ಟರನ್ನು ಪೀಡಿಸುವ ಸರ್ಕಾರಿ ನೌಕರರಿಗೆ ಭಯ ಕಾಡುತ್ತದೆ. ಅಷ್ಟೇ ಅಲ್ಲದೆ ಜನರ ಪರವಾದ ವಾತಾವರಣವೂ ಸರ್ಕಾರಿ ಕಚೇರಿಗಳಲ್ಲಿ ನಿರ್ಮಾನವಾಗುತ್ತದೆ. ಜೊತೆಗೆ ಜನರ ಜೊತೆಗಿನ ಸಿಬ್ಬಂದಿ/ ಅಧಿಕಾರಿಗಳ ನಡವಳಿಗೆಯೂ ಉತ್ತಮಗೊಳ್ಳುತ್ತದೆ ಹಾಗೂ ಭ್ರಷ್ಟಾಚಾರ ಒಂದಿಷ್ಟಾದರೂ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ’ ಎನ್ನುತ್ತಾರೆ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ‘ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ನಂಬಿಕೆ ಜನರಲ್ಲಿ ಇಲ್ಲವಾಗಿದೆ.  ಅದಕ್ಕೆ ಕಾರಣ ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪ. ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ಬರಬೇಕು. ಇದರಿಂದ ಸರ್ಕಾರಿ ಅಧಿಕಾರಿಗಳ ಕೆಲಸದ ಅವಧಿಯ ನಡವಳಿಕೆಯನ್ನು ಚಿತ್ರೀಕರಣ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಜನರಿಗೆ ಆಗುವ ಮೋಸ ನಿಲ್ಲುತ್ತದೆ. ಸರ್ಕಾರ ಹೊರಡಿಸಿದ ನಿಷೇಧ ಹೇರುವ ಆದೇಶ ಹಿಂಪಡೆಯಬೇಕು’ ಎನ್ನುತ್ತಾರೆ.

ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಕಾಲಹರಣ ಸೇರಿದಂತೆ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳು ಸಂಭವಿಸುತ್ತಲೇ ಇರುತ್ತದೆ. ಇಂತಹದರ ವಿರುದ್ಧ ಧ್ವನಿ ಎತ್ತುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಆಡಳಿತದಲ್ಲಿರುವ ಸರ್ಕಾರಗಳು ಇದಕ್ಕೆ ವಿರೋಧ ವ್ಯಕ್ತಪಡಿಸಬಾರದು. ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ಅವರು ತಪ್ಪು ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರದ್ದು. ಯಾಕೆಂದರೆ ಸರ್ಕಾರಿ ನೌಕರರು ಪಡೆದುಕೊಳ್ಳುತ್ತಿರುವ ಹಣ ಜನರ ತೆರಿಗೆಯ ಹಣವಾಗಿದೆ ಎಂಬುವುದನ್ನು ಅರ್ಥಮಾಡಿಕೊಳ್ಳಬೇಕಿದೆ.

Donate Janashakthi Media

Leave a Reply

Your email address will not be published. Required fields are marked *