ಬೆಳಗಾವಿ: ಜಿಲ್ಲೆಯ ಟಿಳಕವಾಡಿಯ ಮಂಗಳವಾರಪೇಟೆ ನಿವಾಸಿ ವಿನಾಯಕ ಸುರೇಶ್ ಕುರಡೆಕರ್ ನೀಡಿದ ಹನಿಟ್ರ್ಯಾಪ್ ದೂರಿನ ಪ್ರಕರಣವನ್ನು ಬೇಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ತನಿಖೆ ಕೈಗೊಂಡಿದ್ದ ಶಾಹಪುರ ಠಾಣೆ ಪೊಲೀಸರು ಬುಧವಾರ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಬೆಳಗಾವಿಯ ಶಾಹಪುರದ ಬಸವಣಗಲ್ಲಿಯ ದಿವ್ಯಾ ಪ್ರದೀಪ್ ಸಪಕಾಳೆ, ಶಾಹಪುರ ಗಾಡೆ ಮಾರ್ಗದ ಪ್ರಶಾಂತ್ ಕಲ್ಲಪ್ಪ ಕೋಲಕಾರ್, ಕಣಬರಗಿಯ ಜ್ಯೋತಿರ್ಲಿಂಗ ಗಲ್ಲಿಯ ಕುಮಾರ್ ಅರ್ಜುನ್ ಗೋಕರಕ್ಕನವರ್, ವಾಲ್ಮೀಕಿ ಗಲ್ಲಿಯ ರಾಜು ಸಿದ್ರಾಯ ಜಡಗಿ ಬಂಧಿತರು.
ದೂರುದಾರ ವಿನಾಯಕ ಅವರಿಗೆ ಪರಿಚಯವಿದ್ದ ಆರೋಪಿ ದಿವ್ಯಾ ಜೊತೆಗಿನ ವಿಡಿಯೋವನ್ನೇ ಇಟ್ಟುಕೊಂಡು 25 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ಈಗಾಗಲೇ 15 ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಅಲ್ಲದೇ, ನನ್ನ ಅಪಹರಣ ಕೂಡ ಮಾಡಿದ್ದರು. ಇನ್ನುಳಿದ 10 ಲಕ್ಷ ರೂಪಾಯಿ ನೀಡುವಂತೆ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ವಿನಾಯಕ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಗೈರು ಹಾಜರಿ | ಪರೀಕ್ಷೆಗೆ ಅವಕಾಶ ನೀಡಲು ಹಣದ ಬೇಡಿಕೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ 3 ಬೈಕ್ ಹಾಗೂ ಒಂದು ಮೊಬೈಲ್ ಫೋನ್ ಸೇರಿದಂತೆ ಒಟ್ಟು 13 ಲಕ್ಷದ 40 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾಧ್ಯಮಗಳೊಂದಿಗೆ ಮಾತನಾಡಿ, ಹನಿಟ್ರ್ಯಾಪ್ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಮುಂದಿನ ತನಿಖೆ ಕೈಗೊಂಡಿದ್ದೇವೆ. ದೂರು ದಾಖಲಾದ 24 ಗಂಟೆಯೊಳಗೆ ಪ್ರಕರಣ ಬೇಧಿಸಿರುವ ಶಾಹಪುರ ಠಾಣೆ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದನ್ನೂ ನೋಡಿ: ಸುಸ್ಥಿರ ಕನಸಿನ ಸಮಾಜದಲ್ಲಿನ ಅಸ್ಥಿರ ಬದುಕು – ವಲಸಿಗರ ಒಡಲಾಳದ ನೋವಿನ ಕಥನ Janashakthi Media