ಬೆಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು. ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಯದ್ವಾತದ್ವ ಏರಿಸಿದೆ. ಅದಕ್ಕೆ ಕಾಂಗ್ರೆಸ್ ದೇಶಾದ್ಯಂತ ಹೋರಾಟ ಮಾಡುತ್ತಿದೆ. ಕೆಪಿಸಿಸಿ ಇವತ್ತು ಬೆಲೆ ಏರಿಕೆ ವಿರುದ್ಧ ಹೋರಾಟವನ್ನು ಸಾಂಕೇತಿಕವಾಗಿ ಮಾಡಿದೆ. ಗುಜರಾತ್ ರಾಜ್ಯದಲ್ಲಿ ಮೋದಿ ಸಿಎಂ ಆಗಿದ್ದಾಗ, ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ.. ಇದೇ ಮೋದಿ ನೇತೃತ್ವದಲ್ಲಿ ಸ್ವಲ್ಪ ಬೆಲೆ ಹೆಚ್ಚಾದರೂ ಸಹ ಹೋರಾಟ ಮಾಡಿದ್ದರು.
ರಾಜ್ಯದ ವಿವಿದೆಡೆ ಕಳೆದೆರಡು ದಿನಗಳು ಪ್ರತಿಭಟನೆಗಳು ನಡೆದಿದ್ದು, ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿಗಳು ಒಳಗೊಂಡು ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.
ಮುಂದುವರೆದು ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿ ಸರ್ಕಾರಯೆಂದರೆನೇ, ಸುಳ್ಳಿನ ಕಾರ್ಖಾನೆ. ಅಧಿಕಾರಕ್ಕೆ ಬಂದಾಗಿನಿಂದ ಬರೀ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ. ಸ್ವಾತಂತ್ರ್ಯ ಭಾರತದ ನಂತರ ಹಲವಾರು ಪ್ರಧಾನಮಂತ್ರಿಗಳು ಆಳ್ವಿಕೆ ನಡೆಸಿದ್ದಾರೆ, ಮೋದಿಯಷ್ಟು ಸುಳ್ಳು ಹೇಳುವವರು ಯಾರೂ ಇರಲಿಲ್ಲ. ಮೋದಿ ಅವರೆ ಒಳ್ಳೆ ದಿನ ಬಂತ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮಹಿಳೆಯರಿಗೆ, ಯುವಕರಿಗೆ ಒಳ್ಳೆ ದಿನ ಬಂತಾ ಎಂದು ಕೇಳಿದರು. ಎಂಟು ವರ್ಷದಲ್ಲಿ ನೀವು ಯಾವುದನ್ನು ಈಡೆಸಿದ್ದೀರಿ ತೋರಿಸಿ ಎಂದು ಆಕ್ರೋಶ ಹೊರ ಹಾಕಿದರು.
ಸಂವಿಧಾನ ಬದಲಾಯಿಸುವ ಕೂಗಿ ಅವರಲ್ಲೆದ್ದಿದೆ. ಅವರು ಎಸ್ ಸಿ ಎಸ್ ಟಿ ಗೆ ಮೀಸಲಾತಿ ರದ್ದು ಮಾಡುವ ಕಾಲ ದೂರ ಇಲ್ಲ. ಜನ ಎಚ್ಚೆತ್ತುಕೊಳ್ಳಬೇಕು. ಬೆಲೆ ಹೆಚ್ಚಿಗೆ ಆಗಿದೆ.. ಆದರೆ ಆದಾಯ ಹೆಚ್ಚಾಗಿಲ್ಲ. ಮೋದಿ ಆದರು ಆದರೆ ಹೆಂಡತಿ ಬಿಟ್ ಬಿಟ್ರು.. ಅವರು ಸಂಸಾರನೇ ಮಾಡಿಲ್ಲ… ಅವರಿಗೆ ಬೆಲೆ ಏರಿಕೆ ಹೇಗೆ ಗೊತ್ತಗುತ್ತೆ. ಇವರು ಎಲ್ಲದರಲ್ಲೂ ಜಾಸ್ತಿನೇ… 40% ಸರ್ಕಾರ ಅಂತಾ ಗುತ್ತಿಗೆದಾರರು ಹೇಳ್ತಾ ಇದಾರೆ. ಅಂದು ನಮಗೆ 10% ಅಂತಾ ಎಂದಿದ್ರು.. ಈಗ ಅವರ ವಿರುದ್ದ 40% ಆರೊಪ ಕೇಳಿ ಬಂದಿದೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ಬಿಜೆಪಿ ಸರ್ಕಾರ ಬಂದ ಮೇಲೆ ಬೆಲೆ ಏರಿಕೆ ಲಂಗುಲಗಾಮು ಇಲ್ಲದೇ ಜಾಸ್ತಿ ಆಗಿದೆ. ಈ ದೇಶದಲ್ಲಿ 75 ವರ್ಷದಲ್ಲಿ 52 ಲಕ್ಷ ಕೋಟಿ ಸಾಲ ಮಾಡಿದರು. ಆದರೆ, ಮೋದಿ ಬಂದು 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮೋದಿ ಎಲ್ಲದರಲ್ಲೂ ಮೊದಲು. ಅದಾನಿ ಅಂಬಾನಿ ಆಸ್ತಿ ಮೌಲ್ಯ ಜಾಸ್ತಿ ಆಗ್ತಾ ಇದೆ. ಜನರಿಗೆ ಯಾವ ಪ್ರಯೋಜನ ಇಲ್ಲ. ಆದರೆ ಮೋದಿ ಸರ್ಕಾರ ಅಂಬಾನಿ ಅದಾನಿಯ 10 ಲಕ್ಷ ಕೋಟಿ ಸಾಲಮನ್ನ ಮಾಡ್ತಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರಗಳು ಬೆಲೆ ಏರಿಕೆ ಮೂಲಕ ಜನರನ್ನು ಲೂಟಿ ಮಾಡುತ್ತಿವೆ. ಜನರ ಆದಾಯ ಪಾತಾಳಕ್ಕೆ ಹೋಗುತ್ತಿದೆ, ಖರ್ಚುದುಪ್ಪಟ್ಟಾಗುತ್ತಿದೆ. ದೇಶದಲ್ಲಿ 17 ಸಾವಿರ ಮಂದಿ ಕೈಗಾರಿಕೋದ್ಯಮಿಗಳು ಸರ್ಕಾರದ ಕಿರುಕೂಳ ತಾಳಲಾರದೆ ಭಾರತ ಬಿಟ್ಟು ಕೆನಡಾ, ಸೌದಿ ಅರೆಬಿಯಾ, ಬ್ರಿಟನ್, ಅಮೆರಿಕಾ, ಸೌಥ್ ಆಫ್ರಿಕಾ ಸೇರಿ ಹಲವು ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ.
ಯುಪಿಎ ಸರ್ಕಾರ ಇದ್ದಾಗ ಅಡುಗೆ ಅನಿಲ 410 ರೂಪಾಯಿ ಇತ್ತು. ಈಗ ಒಂದು ಸಾವಿರ ರೂಪಾಯಿ ಹೆಚ್ಚಾಗಿದೆ. ಪೆಟ್ರೋಲ್ 60 ರೂ.ನಿಂದ 111, ಡಿಸೇಲ್ 50 ರಿಂದ 97, ಅಡುಗೆ ಎಣ್ಣೆ 90ರಿಂದ 210ರೂ. ಹೆಚ್ಚಾಗಿದೆ. ಹಾಲು ಶೇ.20, ವಿದ್ಯುತ್ 35 ಪೈಸೆ ಹೆಚ್ಚಳವಾಗಿದೆ. ಪ್ರತಿಯೊಂದರ ಬೆಲೆಯೂ ಶೇ.20 ಹೆಚ್ಚಾದರೆ, ಸಕ್ಕರೆ ಶೇ.50ರಷ್ಟು ದರ ಏರಿಕೆಯಾಗಿದೆ. ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಎಲ್ಲವೂ ದುಬಾರಿಯಾಗಿದೆ. ಕಬ್ಬಿಣ, ಸಿಮೆಂಟ್, ಎಲೆಕ್ಟ್ರಿಕಲ್, ಪ್ಲಂಬಿಂಗ್ ಸಲಕರಣೆಗಳ ಬೆಲೆಯೂ ಹೆಚ್ಚಾಗಿದೆ. ರೈತರ ಮೇಲೆ ಈ ಸರ್ಕಾರ 67 ಸಾವಿರ ಕೋಟಿ ಹೊರೆಯನ್ನು ಹೊರೆಸಿದೆ.
ದಿನ ಬೆಳಗಾದರೆ ಸರ್ಕಾರ ಒಂದಲ್ಲ ಒಂದು ಬೆಲೆ ಹೆಚ್ಚಳ ಎಂಬ ಕೊಡುಗೆಗಳನ್ನು ನೀಡುತ್ತಿದೆ. ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದರು.
ಬೆಲೆ ಏರಿಕೆ ವಿರುದ್ಧ ಸಂಗೋಳ್ಳಿ ರಾಯಣ್ಣ ಪ್ರತಿಮೆಯಿಂದ ಫ್ರೀಡಂ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಪ್ರತಿಭಟನಾ ಮೆರವಣಿಗೆ ನಡೆಸದಂತೆ ಹೈಕೋರ್ಟ್ ಆದೇಶವಿದೆ. ಹಾಗಾಗಿ ರ್ಯಾಲಿಯನ್ನು ಕೈ ಬಿಟ್ಟಿದ್ದೇವೆ ಎಂದರು,
ಈಶ್ವರ ಖಂಡ್ರೆ ಮಾತನಾಡಿ, ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನದಲ್ಲಿ ನಾವು ಸೇರಿದ್ದೇವೆ. ಎಂಟು ವರ್ಷಗಳ ಕೆಳಗಡೆ ಸುಳ್ಳು ಭರವಸೆ ಕೊಟ್ಟ ಅಧಿಕಾರ ಬಂದ ಬಿಜೆಪಿ ಒಂದೇ ಒಂದು ಭರವಸೆ ಈಡೇರಿಸಿಲ್ಲ. ದಿನೆದಿನೇ ಜನರ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ಮೋದಿ ಹೇಳಿದ್ರು, ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು.. ಇವತ್ತು ಅವರ ಮಾತು ಬದಲಿಸಿ ಕೊಳ್ಳಬೇಕು. ನಾನು ತಿನ್ನುತ್ತೇನೆ, ತಿನ್ನಲು ಬಿಡುತ್ತೇನೆ ಎಂದು ಮಾಡಿಕೊಳ್ಳಬೇಕು ಎಂದು ಖಂಡ್ರೆ ಕೇಂದ್ರ ಸರಕಾರವನ್ನು ಚುಚ್ಚಿದರು. ಇವರದ್ದು ಹುಸಿ ರಾಷ್ಟ್ರ ಪ್ರೇಮ. ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಒಡೆದಾಳುವ ನೀತಿ ಅನುಸರಿಸುತ್ತಿದೆ. ಜಾತಿ ಜಾತಿ ಗಳ ನಡುವೆ, ಧರ್ಮ ಧರ್ಮಗಳ ನಡುವೆ ಒಡೆದಾಳುವ ನೀತಿ ಅನುಸರಿಸುತ್ತಿದೆ. ದೇಶಕ್ಕಾಗಿ ಬಿಜೆಪಿ ಮುಕ್ತ ಭಾರತ ಮಾಡಬೇಕು. ಅದು ಕರ್ನಾಟಕದಿಂದ ಶುರು ಮಾಡಬೇಕು. ಚುನಾವಣೆ ಇದ್ದಾಗ ಬೆಲೆ ಏರಿಕೆ ಆಗಲ್ಲ. ಮುಗಿದ ಬಳಿಕ ಬೆಲೆ ಏರಿಕೆ ಮಾಡಿದ್ದಾರೆ ಎಂದು ಖಂಡ್ರೆ ಹೇಳಿದರು.
ವಿಧಾನ ಪರಿಷತ್ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಹುಬ್ಬಳ್ಳಿಯಲ್ಲಿ ಕಲ್ಲಂಗಡಿ ಹಣ್ಣು ಮಾರುವ ಬಡ ಮುಸ್ಲಿಂ ವ್ಯಾಪಾರಿ ಮೇಲೆ ರಣಹೇಡಿಗಳು ದೌರ್ಜನ್ಯವೆಸಗಿದ್ದಾರೆ. ಯುವ ಕಾಂಗ್ರೆಸ್ ಪದಾಧಿಕಾರಿಗಳು ಅವರಿಗೆ ಬೆಂಬಲ ನೀಡಿದ್ದಾರೆ ಎಂದರು. ಈ ಮೊದಲು ಸಣ್ಣ ಪ್ರಮಾಣದ ಬೆಲೆ ಏರಿಕೆಯಾಗಿದ್ದಾಗ ಸ್ಮೃತಿ ಇರಾನಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಕೊರಳಿಗೆ ತರಕಾರಿ ಹಾರ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದರು. ಅದೇ ಸ್ಮೃತಿ ಇರಾನಿಯನ್ನು ನಿನ್ನೆ ಮಹಿಳೆಯೊಬ್ಬರು ವಿಮಾನದಲ್ಲಿ ಪ್ರಸ್ತುತ ಬೆಲೆ ಏರಿಕೆ ವಿರುದ್ಧ ಪ್ರಶ್ನಿಸಿದಾಗ ಉತ್ತರ ಹೇಳಲಾಗದೆ ಪಲಾಯನಗೈದಿದ್ದಾರೆ. ಗಡಿಪಾರು ಶಿಕ್ಷೆಗೆ ಒಳಗಾಗಿದ್ದ ಅಮಿತಾ ಶಾ ಹಿಂದಿಯನ್ನು ಬಲವಂತವಾಗಿ ಹೇರಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.