ಬೆಲೆ ಸೂಚ್ಯಂಕದ ಆಧಾರ ವರ್ಷ ಬದಲಾವಣೆಯಲ್ಲೂ  ಕಾರ್ಮಿಕ-ವಿರೋಧಿ ನಿಲುವು

ನಿಜ ಬೆಲೆಯೇರಿಕೆಗಳನ್ನು ಮರೆ ಮಾಚುವ ಹುನ್ನಾರಸಿಐಟಿಯು ಖಂಡನೆ

ಬಿಜೆಪಿ ಸರಕಾರದ ಕಾರ್ಮಿಕ ಮಂತ್ರಿಗಳು ಮತ್ತೊಂದು ಕಾರ್ಮಿಕ-ವಿರೋಧಿ ಕ್ರಮವನ್ನು ಪ್ರಕಟಿಸಿದ್ದಾರೆ.ಕೈಗಾರಿಕಾ ಕಾರ್ಮಿಕರ ಬಳಕೆದಾರ ಬೆಲೆ ಸೂಚ್ಯಂಕ’(Consumer Price Iindex-Industrial Workers)ದ ಆಧಾರ ವರ್ಷವನ್ನು 2001ರಿಂದ 2016ಕ್ಕೆ ಬದಲಾಯಿಸುವ ವಿಷಯದಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳು ಆಗಸ್ಟ್ 25, 2020ರಂದು ಸಲ್ಲಿಸಿದ ಜಂಟಿ ಪತ್ರದಲ್ಲಿ ಎತ್ತಿದ ಪ್ರಶ‍್ನೆಗಳು ಮತ್ತು ನೀಡಿದ ಸಲಹೆಗಳನ್ನು ಸಂಪೂರ್ಣವಾಗಿ ಉಪೇಕ್ಷಿಸಿ ಈ ಪ್ರಕಟಣೆ ಹೊರಡಿಸಲಾಗಿದೆ.ಇದನ್ನು ಸಿಐಟಿಯು ಬಲವಾಗಿ ಖಂಡಿಸಿದೆ.

ಕಾರ್ಮಿಕ ಇಲಾಖೆಯ ಅಡಿಯಲ್ಲಿ ಲೇಬರ್ ಬ್ಯುರೊ ಕೈಗೊಂಡಿರುವ ಕ್ರಮಗಳೆಲ್ಲವೂ ಸಂಪೂರ್ಣವಾಗಿ ಸ್ವೇಚ್ಛಾಚಾರದಿಂದ ಕೂಡಿದೆ ಅವಶ್ಯಕ ವಸ್ತುಗಳ ಬೆಲೆಯೇರಿಕೆಯ ನಿಜವಾದ ಪ್ರಭಾವ ಬಿಂಬಿತವಾಗದಂತೆ ಅದನ್ನು ಇಳಿಸುವ ಮತ್ತು ಕಾರ್ಮಿಕರನ್ನು ಅವರಿಗೆ ನ್ಯಾಯಬದ್ಧವಾಗಿ ಬೆಲೆಯೇರಿಕೆಗಳಿಗೆ ಅನುಗುಣವಾಗಿ ತುಟ್ಟಿಭತ್ಯೆಯ ಮೂಲಕ ಸಿಗಬೇಕಾದ ಪರಿಹಾರವನ್ನು ಕಡಿತಗೊಳಿಸುವ ದುರುದ್ದೇಶದಿಂದ ಕೂಡಿದವುಗಳು.

ಬಳಕೆ ಸಾಮಗ್ರಿಗಳಲ್ಲಿ ಆಹಾರ ಸಾಮಗ್ರಿಗಳ ಭಾಗ ಇದುವರೆಗೆ 46.2ಶೇ.ಇತ್ತು.ಅದನ್ನು 39ಶೇ.ಕ್ಕೆ ತೀವ್ರವಾಗಿ ಇಳಿಸಲಾಗಿದೆ.ಕಾರ್ಮಿಕರ ಬಳಕೆ ಮಾದರಿ ಬದಲಾಗಿದೆ,ಆದ್ದರಿಂದ ಇದನ್ನು ಇಳಿಸಲಾಗಿದೆ ಎಂಬ ಕಾರ್ಮಿಕ ಮಂತ್ರಿಗಳ ಸಮರ್ಥನೆ,ಆರ್ಥಿಕ ನಿಧಾನಗತಿಯ ಸಮಯದಲ್ಲೂ ನಿರ್ಧಿಷ್ಟವಾಗಿ ಆಹಾರ ಸಾಮಗ್ರಿಗಳ ಬೆಲೆ ಏರುತ್ತಲೇ ಇರುವ ಸಮಯದಲ್ಲಿ,ಹಾಸ್ಯಾಸ್ಪದ ಮಾತ್ರವೇ ಅಲ್ಲ; ಮೋದಿ ಸರಕಾರದ ಅಡಗಿಸಿಟ್ಟ ಸಿಎಸ್‍ಒ ಅಂದಾಜು ಪ್ರಕಾರ,ದುಡಿಯುವ ಜನಗಳ ಸರಾಸರಿ ಬಳಕೆ ಖರ್ಚಿನ ಪ್ರಮಾಣ ತೀವ್ರವಾಗಿ ಇಳಿಮುಖಗೊಂಡಿದೆ ಎಂದಿರುವಾಗ, ಇತ್ತೀಚೆಗೆ ಪ್ರಕಟವಾದ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 107 ದೇಶಗಳಲ್ಲಿ 94ನೆಯ ದಾಗಿದ್ದು ನಮ್ಮ ನೆರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕಿಂತಲೂ ಕೆಳಗಿರುವಾಗ ದೇಶದ ಕಾರ್ಮಿಕ ಮೇಲೆ ಮಾಡಿರುವ ಒಂದು ಕ್ರೂರ ಜೋಕ್‍ ಕೂಡ ಆಗಿದೆ ಎಂದು ಸಿಐಟಿಯು ಆಕ್ರೋಶ ವ್ಯಕ್ತಪಡಿಸಿದೆ.

ಇನ್ನೊಂದು ವಂಚನೆ ಮಾಡಿರುವುದು,2016 ಆಧಾರವರ್ಷದ ಸೂಚ್ಯಂಕಗಳನ್ನು 2001ರ ಸೂಚ್ಯಂಕಗಳಿಗೆ ಪರಿವರ್ತಿಸುವ ಗುಣಕದಲ್ಲಿ.ಈ ಹಿಂದೆ ಆಧಾರ ವರ್ಷವನ್ನು 1960ರಿಂದ 1982ಕ್ಕೆ ಬದಲಾಯಿಸುವಾಗ 22 ವರ್ಷಗಳ ಅಂತರಕ್ಕೆ 4.93 ಗುಣಕವನ್ನು ನಿಗದಿ ಮಾಡಲಾಗಿತ್ತು; 1982ರಿಂದ 2001ಕ್ಕೆ ಬದಲಿಸುವಾಗ 19 ವರ್ಷಗಳ ಅಂತರಕ್ಕೆ ಗುಣಕ 4.63 ಎಂದು ನಿಗದಿ ಪಡಿಸಲಾಯಿತು.ಆದರೆ ಈ ಬಾರಿ ಅಂತರ 16 ವರ್ಷಗಳಾಗಿದ್ದು ಕೇವಲ 3 ವರ್ಷ ಕಡಿಮೆಯಾಗಿದ್ದರೂ, ಗುಣಕದಲ್ಲಿ ಭಾರೀ ಇಳಿಕೆ ಮಾಡಲಾಗಿದೆ, 2.88 ಕ್ಕೆ ಇಳಿಸಲಾಗಿದೆ, ಅಂದರೆ 62ಶೇ. ಇಳಿಕೆ.ಇದಕ್ಕಿಂತ ದೊಡ್ಡ ಮೋಸ ಸಾಧ್ಯವೇ ಎಂದು ಸಿಐಟಿಯು ಪ್ರಶ್ನಿಸಿದೆ.

ಯಾವುದೇ ಸೂಚ್ಯಂಕದಲ್ಲಿ ಆಧಾರವರ್ಷ ಆ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಸಾಮಾನ್ಯ (normal) ವರ್ಷವಾಗಿರಬೇಕು.ಆದ್ದರಿಂದ 2016ನ್ನು ಆಧಾರವರ್ಷವಾಗಿ ಆಯ್ಕೆ ಮಾಡಿರುವಲ್ಲಿಯೂ ಮೋಸವಿದೆ.ಇದನ್ನು ಕೂಡ ಬೆಲೆಯೇರಿಕೆಗಳ ಪ್ರಭಾವವನ್ನು ಸೂಚ್ಯಂಕದಲ್ಲಿ ಕುಗ್ಗಿಸಲಿಕ್ಕಾಗಿಯೇ ಮಾಡಲಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ.ಜುಲೈ 2020ರ ವರೆಗೂ 2013-14ನ್ನು ಆಧಾರ ವರ್ಷವಾಗಿ ಮಾಡಬೇಕು ಎಂದು ಲೆಕ್ಕಾಚಾರ ನಡೆಯುತ್ತಿತ್ತು.ಅದನ್ನು 2016ಕ್ಕೆ ಬದಲಾಯಿಸಬೇಕು ಎಂದು ಮೋದಿ ಸರಕಾರಕ್ಕೆ ಆಮೇಲೆ ಹೊಳೆದಿರುವಂತೆ ಕಾಣುತ್ತದೆ. ಏಕೆಂದರೆ,ಅದು ಕುಖ್ಯಾತ ನೋಟುರದ್ಧತಿಯ ವರ್ಷ-ಅದರಿಂದಾಗಿ 2016 ಕೊನೆಯ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ನಿಂತುಹೋಗಿದ್ದು, ಅದು ಕೈಗಾರಿಕಾ ಕಾರ್ಮಿಕರ ಬಳಕೆ ವಸ್ತುಗಳ ಬೆಲೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿದ್ದ ಅವಧಿ.

ಬಹಳ ಸಮಯದಿಂದ ಮಾಲಕರ ಸಂಘಟನೆಗಳು ಆರ್ಥಿಕ ನಿಧಾನಗತಿಯ ಸಮಯದಲ್ಲಿ ಚರ ತುಟ್ಟಿಭತ್ಯೆಗಳನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿಕೊಂಡು ಬಂದಿವೆ.ತನ್ನ  ಬಂಡವಾಳಶಾಹಿ ಬಾಸ್‍ಗಳ ಆಗ್ರಹಕ್ಕೆ ಮೋದಿ ಸರಕಾರ ಹಿಂಭಾಗಿಲಿನಿಂದ ಸ್ಪಂದಿಸಿದೆ ಎಂದು ಸಿಐಟಿಯು ಹೇಳಿದೆ.

ಇದು ಬಿಜೆಪಿ ಸರಕಾರದ ಇನ್ನೊಂದು ಕಾರ್ಪೊರೇಟ್‍-ಪರ, ಕಾರ್ಮಿಕ-ವಿರೋಧಿ ಕ್ರಮ ಎಂದು ಖಂಡಿಸಿರುವ ಸಿಐಟಿಯು,ಕಾರ್ಮಿಕರನ್ನು ಲೂಟಿ ಮಾಡಿ,ಕಾರ್ಪೊರೇಟ್‍ ವರ್ಗಕ್ಕೆ ಪ್ರಯೋಜನ ಕಲ್ಪಿಸುವ ಈ ಕ್ರಮವನ್ನು ಪ್ರತಿಭಟಿಸಬೇಕು,ನವಂಬರ್‍ 26 ರ ಸಾರ್ವತ್ರಿಕ ಮುಷ್ಕರವನ್ನು ಬೃಹತ್‍ ಪ್ರಮಾಣದಲ್ಲಿ ಯಶಸ್ವಿಗೊಳಿಸಬೇಕು ಎಂದು ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳಿಗೆ ಕರೆ ನೀಡಿದೆ.

 

 

Donate Janashakthi Media

Leave a Reply

Your email address will not be published. Required fields are marked *